Kannada NewsKarnataka NewsLatest

ಕಬ್ಬಿನ ಬಾಕಿ ಬಿಲ್ ಪಾವತಿಗೆ ನ.5 ವರೆಗೆ ಗಡುವು- ಸಕ್ಕರೆ ಸಚಿವ ಸಿ.ಟಿ.ರವಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ- ನವೆಂಬರ್ 5 ರೊಳಗೆ ರೈತರಿಗೆ ಬಾಕಿ ಹಣವನ್ನು ಪಾವತಿಸುವಂತೆ ಸಕ್ಕರೆ ಕಾರ್ಖಾನೆಗಳಿಗೆ ನೋಟಿಸ್ ನೀಡಬೇಕು. ನೂರಕ್ಕೆ ನೂರರಷ್ಟು ಬಾಕಿ ಹಣ ಪಾವತಿಸಲು ಕ್ರಮ ಕೈಗೊಳ್ಳಬೇಕು ಎಂದು ಸಕ್ಕರೆ ಖಾತೆ ಸಚಿವ ಸಿ.ಟಿ.ರವಿ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಶನಿವಾರ (ಅ.19) ನಡೆದ ಸಕ್ಕರೆ, ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಲೈಸೆನ್ಸ್ ನವೀಕರಣ ಮಾಡಿಕೊಳ್ಳದ ಕಾರ್ಖಾನೆಗಳ ವಿರುದ್ಧ ಮುಂದಿನ ಕ್ರಮ ಕೈಗೊಳ್ಳಬೇಕು. ನಿಜಲಿಂಗಪ್ಪ ಸಕ್ಕರೆ ಸಂಶೋಧನಾ ಸಂಸ್ಥೆ ವತಿಯಿಂದ ಸಂಶೋಧನೆ, ತರಬೇತಿ ಮತ್ತಿತರ ಚಟುವಟಿಕೆಗಳನ್ನು ಆರಂಭಿಸುವಂತೆ ತಿಳಿಸಿದರು.
ಕಬ್ಬಿನ ಬೆಳೆಹಾನಿಯಿಂದ ಈ ಬಾರಿ ಕಾರ್ಖಾನೆಗಳಿಗೂ ತೊಂದರೆಯಾಗುವ ಸಾಧ್ಯತೆಯಿದೆ.

ವಿಮಾ ಯೋಜನೆಗೆ ಕಬ್ಬು ಸೇರ್ಪಡೆಗೆ ಪ್ರಸ್ತಾವ:

ಫಸಲ್ ಭಿಮಾ ಯೋಜನೆ ವ್ಯಾಪ್ತಿಗೆ ಕಬ್ಬು ಬೆಳೆಯನ್ನು ಸೇರ್ಪಡೆಗೊಳಿಸುವಂತೆ ಕೋರಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ ಕಳಿಸಲು ಕ್ರಮ ಕೈಗೊಳ್ಳಬೇಕು ಎಂದು ಸಚಿವ ಸಿ.ಟಿ.ರವಿ ಅಧಿಕಾರಿಗಳಿಗೆ ತಿಳಿಸಿದರು.
ರಾಜ್ಯದ ಕಬ್ಬು ಮಹಾರಾಷ್ಟ್ರಕ್ಕೆ ಕಳಿಸುವುದನ್ನು ಬಂದ್ ಮಾಡಬೇಕು ಎಂದು ಶಾಸಕ ಉಮೇಶ್ ಕತ್ತಿ ಮನವಿ ಮಾಡಿಕೊಂಡರು.
ನೆರೆಯ ರಾಜ್ಯಕ್ಕೆ ಕಬ್ಬು ಸಾಗಾಣಿಕೆ ಬಂದ್ ಮಾಡುವ ಬಗ್ಗೆ ನವೆಂಬರ್ 10 ರೊಳಗೆ ತುರ್ತು ಸಭೆ ಕರೆಯಲಾಗುವುದು ಎಂದು ಸಚಿವ ರವಿ ತಿಳಿಸಿದರು.
ಎಂದರು.
ಸಕ್ಕರೆ ಸ್ಥಿರನಿಧಿ ಸ್ಥಾಪನೆ ಬಗ್ಗೆ ಕೂಡ ಚರ್ಚಿಸಲಾಗುವುದು ಎಂದರು.

ಶೇ.99.09 ಬಾಕಿ ಪಾವತಿ-ಜಿಲ್ಲಾಧಿಕಾರಿ:

ಮಲಪ್ರಭಾ 4.14 ಕೋಟಿ ರೂಪಾಯಿ ಹಾಗೂ ಹಳೆಯದು 5.55 ಕೋಟಿ ರೂಪಾಯಿ ಬಾಕಿ ಇದ್ದು, ಆ ಹಣವನ್ನು ಪಾವತಿಸಿದ್ದಾರೆ.
ಸೋಮೇಶ್ವರ 2.54 ಕೋಟಿ ರೂಪಾಯಿ ಬಾಕಿ ಉಳಿದಿದೆ. ಇದೇ ಮೊದಲ ಬಾರಿ ಬೆಳಗಾವಿ ಜಿಲ್ಲೆಯಲ್ಲಿ ಶೇ.99.09 ರಷ್ಟು ಬಾಕಿ ವಸೂಲಿ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ತಿಳಿಸಿದರು.
ಜಿಲ್ಲೆಯಲ್ಲಿ 2.55 ಲಕ್ಷ ಹೆಕ್ಟೇರ್ ಬೆಳೆ, 1.05 ಲಕ್ಷ ಹೆಕ್ಟೇರ್ ಬೆಳೆಹಾನಿ ಅಂದರೆ ಶೇ.40 ಬೆಳೆಹಾನಿಯಾಗಿರುತ್ತದೆ ಎಂದು ಜಿಲ್ಲಾಧಿಕಾರಿ ವಿವರಿಸಿದರು.

ಜಯಂತಿ ಸ್ವರೂಪ ಬದಲಾವಣೆ; ವರದಿ ನೀಡಲು ಸೂಚನೆ:

ಜನಪ್ರತಿನಿಧಿಗಳು, ಸಾಹಿತಿಗಳು ಹಾಗೂ ಸಮಾಜದ ಜನರನ್ನು ಕರೆದು ಜಯಂತಿ ಆಚರಣೆಯ ಸ್ವರೂಪದ ಬಗ್ಗೆ ಚರ್ಚಿಸಿ, ಸಭೆಯ ವರದಿಯನ್ನು ಕಳಿಸಿ.
ರಾಜ್ಯಮಟ್ಟದಲ್ಲಿ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಸಭೆ ನಡೆಸಿ ಜಯಂತಿ ಸ್ವರೂಪದ ಬಗ್ಗೆ ಸರ್ಕಾರದ ಮಟ್ಟದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಚಿವ ಸಿ.ಟಿ.ರವಿ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲೆಯಲ್ಲಿ ಸುಸಜ್ಜಿತವಾದ ರಂಗಮಂದಿರದ ಅಗತ್ಯವಿದೆ ಹಾಗೂ ಗಡಿ ಜಿಲ್ಲೆಯಾಗಿರುವುದರಿಂದ ರಾಜ್ಯಮಟ್ಟದ ಕನ್ನಡ ಕಲಾ ಉತ್ಸವ ಹಮ್ಮಿಕೊಳ್ಳಬೇಕು ಎಂದು ರಾಜ್ಯಸಭಾ ಸದಸ್ಯ ಡಾ.ಪ್ರಭಾಕರ್ ಕೋರೆ ಹೇಳಿದರು.
ಸುಸಜ್ಜಿತ ರಂಗಮಂದಿರ ನಿರ್ಮಾಣಕ್ಕೆ ಕೂಡಲೇ ಪ್ರಸ್ತಾವ ಕಳಿಸುವಂತೆ ಸಚಿವರು ಸೂಚನೆ ನೀಡಿದರು. ಹುಕ್ಕೇರಿಯಲ್ಲಿ ರಂಗಮಂದಿರ ನಿರ್ಮಾಣ ಕಾರ್ಯ. 2015ರಿಂದ ನಡೆದಿದ್ದು, ಇನ್ನೂ ಪೂರ್ಣಗೊಂಡಿಲ್ಲ ಎಂದು ಶಾಸಕ ಉಮೇಶ್ ಕತ್ತಿ ವಿವರಿಸಿದರು.
ಇದಕ್ಕೆ ಸ್ಪಂದಿಸಿದ ಸಚಿವರು, ರಾಜ್ಯಮಟ್ಟದ ಕಲಾ ಉತ್ಸವಕ್ಕೆ ಯೋಜನೆ ರೂಪಿಸಬೇಕು ಮತ್ತು ನೆನೆಗುದಿಗೆ ಬಿದ್ದಿರುವ ಕಲಾಮಂದಿರ ಕಾಮಗಾರಿಯ ಬಗ್ಗೆ ಪರಿಶೀಲಿಸಿ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳಿಗೆ ತಿಳಿಸಿದರು.
ಬಾಕಿ ಇರುವ 28 ಸಾಂಸ್ಕೃತಿಕ ಭವನಗಳ ನಿರ್ಮಾಣಕ್ಕೆ ಮೂರು ತಿಂಗಳು ಗಡುವು ನೀಡಬೇಕು ಎಂದು ಹೇಳಿದರು.
ಬೆಳಗಾವಿ ಜಿಲ್ಲೆಯಲ್ಲಿ 1234 ಕಂದಾಯ ಗ್ರಾಮಗಳಿವೆ. ಪ್ರತಿ ಗ್ರಾಮದ ಇತಿಹಾಸ, ಸ್ಮಾರಕಗಳು, ಸಮುದಾಯಗಳು ಮತ್ತು ಸಮುದಾಯದ ಇತಿಹಾಸದ ಬಗ್ಗೆ ಕಾಲೇಜು ವಿದ್ಯಾರ್ಥಿಗಳನ್ನು ಬಳಸಿಕೊಂಡು ನಿಗದಿತ ಮಾದರಿಯಲ್ಲಿ ಡಿಸೆಂಬರ್ ಮಾಹೆಯಲ್ಲಿ ವರದಿ ಸಿದ್ಧಪಡಿಸಿದ ಬಳಿಕ ಸಮಗ್ರ ಮಾಹಿತಿ ಪರಿಷ್ಕರಿಸಿ ವಿಕೀಪಿಡಿಯಾ ಮಾದರಿಯಲ್ಲಿ ಅಪ್ ಲೋಡ್ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ತಿಳಿಸಿದರು.
ಕಲಾತಂಡಗಳು, ಕಲಾವಿದರ ಮಾಸಾಶನ ಮತ್ತಿತರ ವಿಷಯಗಳ ಕುರಿತು ಮಾಹಿತಿ ಪಡೆದುಕೊಂಡರು.

ಪ್ರವಾಸಿತಾಣ-ಸಮಗ್ರ ವರದಿ ಸಲ್ಲಿಸಲು ನಿರ್ದೇಶನ:

ಇಡೀ ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ಖಾಸಗಿ ಸಂಸ್ಥೆಗಳಿಗೆ ದತ್ತು ನೀಡಲು ಪ್ರವಾಸಿತಾಣಗಳನ್ನು ಒಳಗೊಂಡಿರುವ ಸಮಗ್ರ ವರದಿಯನ್ನು ರೂಪಿಸುವಂತೆ ನಿರ್ದೇಶನ ನೀಡಿದರು.
ಈ ವರದಿ ಆಧರಿಸಿ ಪ್ರವಾಸಿತಾಣಗಳ ಅಭಿವೃದ್ಧಿಗೆ ಸರ್ಕಾರ ಯೋಜನೆ ರೂಪಿಸಲಿದೆ ಎಂದು ಸಚಿವ ಸಿ.ಟಿ.ರವಿ ತಿಳಿಸಿದರು.
ಪ್ರವಾಸಿಗಳನ್ನು ಆಕರ್ಷಿಸುವ ಉದ್ದೇಶವನ್ನು ಮಾತ್ರ ಗಮನದಲ್ಲಿರಿಸಿಕೊಂಡು ರೂಪಿಸಿರುವ ಯೋಜನೆಗಳನ್ನು ಹಾಗೂ ಪ್ರಸ್ತಾವಗಳಿಗೆ  ಮಾತ್ರ ಇನ್ನು ಮುಂದೆ ಅನುಮೋದನೆ ನೀಡಲಾಗುವುದು ಎಂದು ಹೇಳಿದರು.

ಶುದ್ಧ ಕುಂಕುಮ ಪೂರೈಸಿ:

ಪ್ರಸಿದ್ಧ ಸವದತ್ತಿ ಎಲ್ಲಮ್ಮ ದೇವಸ್ಥಾನದ ಆವರಣದಲ್ಲಿ ಕೆಮಿಕಲ್ ಮಿಶ್ರಿತ ಬಣ್ಣವನ್ನೇ ಕುಂಕುಮ ಎಂದು ಮಾರಾಟ ಮಾಡಲಾಗುತ್ತಿದ್ದು, ತಕ್ಷಣ ಅದಕ್ಕೆ ಕಡಿವಾಣ ಹಾಕಿ ಶುದ್ಧ ಕುಂಕುಮ ಪೂರೈಸಲು ಕ್ರಮ ಕೈಗೊಳ್ಳುವಂತೆ ಸಚಿವ ಸಿ.ಟಿ.ರವಿ ಕೋರಿದರು.
ಕದಂಬರ ಎರಡನೇ ರಾಜಧಾನಿಯಾಗಿದ್ದ ಖಾನಾಪುರ ತಾಲ್ಲೂಕಿನಲ್ಲಿ ಹಲಸಿ ಕದಂಬೋತ್ಸವಕ್ಕೆ ಅನುದಾನ ಬಿಡುಗಡೆ ಮಾಡುವಂತೆ ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಮನವಿ ಮಾಡಿಕೊಂಡರು.
ವಿಧಾನಪರಿತ್ತಿನ ಮುಖ್ಯ ಸಚೇತಕರಾದ ಮಹಾಂತೇಶ ಕವಟಗಿಮಠ, ರಾಜ್ಯಸಭಾ ಸದಸ್ಯ ಡಾ.ಪ್ರಭಾಕರ್ ಕೋರೆ, ಶಾಸಕರಾದ ಅಭಯ್ ಪಾಟೀಲ, ಅನಿಲ್ ಬೆನಕೆ, ಮಹಾಂತೇಶ ದೊಡ್ಡಗೌಡರ ಉಪಸ್ಥಿತರಿದ್ದರು.
ಸಕ್ಕರೆ ಆಯುಕ್ತರಾದ ಕೆ.ದಯಾನಂದ ಪ್ರವಾಸೋದ್ಯಮ ಇಲಾಖೆ ನಿರ್ದೇಶಕ ರಮೇಶ್ ಸೇರಿದಂತೆ ಸಕ್ಕರೆ, ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.
 
ಸಕ್ಕರೆ, ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾದ ಸಿ.ಟಿ.ರವಿ ಅವರ ಪತ್ರಿಕಾಗೋಷ್ಠಿಯ-ಪ್ರಮುಖ ಅಂಶಗಳು..
* ಫಸಲ್ ಭಿಮಾ ಯೋಜನೆ ವ್ಯಾಪ್ತಿಗೆ ಕಬ್ಬು ಬೆಳೆ- ರಾಜ್ಯದ ಮೂಲಕ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು.
* ಮಹಾರಾಷ್ಟ್ರಕ್ಕೆ ಕಬ್ಬು ಸಾಗಾಣಿಕೆ ನಿರ್ಬಂಧ- ಬೆಳೆಗಾರರು ಮತ್ತು ಕಾರ್ಖಾನೆ ಮಾಲೀಕರ ಸಭೆಯ ಬಳಿಕ ನಿರ್ಧಾರ
* ಕಬ್ಬಿನ ಬೆಲೆ ನಿಗದಿಗೆ ಸ್ಥಿರನಿಧಿ ಸ್ಥಾಪನೆ
* ಸಂಸ್ಕೃತಿ-ಪ್ರವಾಸೋದ್ಯಮ ಒಟ್ಟಾಗಿ ಸಮನ್ವಯದ ಕಾರ್ಯನಿರ್ವಹಣೆಯಿಂದ ಪ್ರವಾಸಿಗರ ಆಕರ್ಷಣೆ ಸಾಧ್ಯ..
* ಜಯಂತಿ ಆಚರಣೆ ಸ್ವರೂಪ- ಜಿಲ್ಲಾಮಟ್ಟದ ಸಭೆಗಳ ಮೂಲಕ ವರದಿ ಪಡೆದು ರಾಜ್ಯಮಟ್ಟದಲ್ಲಿ ಸೂಕ್ತ ನಿರ್ಧಾರ.
* ಬೆಳಗಾವಿವಪ್ರವಾಸಿ ವರ್ತುಲ ರೂಪಿಸಲು ಸೂಕ್ತ ಪ್ರಸ್ತಾವ ಕಳಿಸಲು ಜಿಲ್ಲಾಧಿಕಾರಿಗಳಿಗೆ ಸೂಚನೆ.
* ಸವದತ್ತಿ ಎಲ್ಲಮ್ಮ ಅಭಿವೃದ್ಧಿ ಪ್ರಾಧಿಕಾರ ರಚನೆ ಕುರಿತು ಮುಖ್ಯಮಂತ್ರಿಗಳ ಜತೆ ಚರ್ಚೆ
* ಪ್ರವಾಸೋದ್ಯಮ ಉತ್ತೇಜಿಸಿ, ಉದ್ಯೋಗ ಸೃಷ್ಟಿಸಲು ಕ್ರಮ
* 30 ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡು ಕರ್ನಾಟಕದ ಭವಿಷ್ಯದ ಪ್ರವಾಸಿ ಯೋಜನೆ ರೂಪಿಸಲಾಗುವುದು.
* ಸರ್ಕಾರಿ-ಖಾಸಗಿ ಸಹಭಾಗಿತ್ವದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button