ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿ ಘಟಕದ ವಿಶ್ವಜಾಗ್ರತಿ ಪತ್ರಿಕೆಯ ಸಂಚಾಲಕರೂ, ಶ್ರೀ ಶ್ರೀ 1008 ಶ್ರೀ ಸತ್ಯಾತ್ಮ ತೀರ್ಥ ಶ್ರೀಗಳವರ ಭಕ್ತರೂ ಆಗಿದ್ದ ರಘುರಾಜ ಜಕಾತಿ ಇಂದು ಬೆಳಿಗ್ಗೆ ದೈವಾಧೀನರಾದರು. ಅವರಿಗೆ 58 ವರ್ಷ ವಯಸ್ಸಾಗಿತ್ತು.
ಅವರ ಆಕಸ್ಮಿಕ ಮರಣವು ಸಮಾಜಕ್ಕೂ ಉತ್ತರಾದಿ ಮಠಕ್ಕೂ, ವಿಶ್ವ ಮಧ್ವ ಮಹಾಪರಿಷತ್ (VMMP) ಘಟಕಕ್ಕೂ ಬಹಳ ಆಘಾತಕರವಾಗಿದೆ. ಅವರ ಆತ್ಮಕ್ಕೆ ಶಾಂತಿ ಲಭಿಸಲಿ ಎಂದು ಎಲ್ಲ ಶಾಖೆಗಳ ಸದಸ್ಯರು ಪ್ರಾರ್ಥಿಸಿದ್ದಾರೆ.
ಜಕಾತಿ ಅವರು ಶ್ರೀಮಠದ ಹಾಗೂ ಶ್ರೀಪಾದಂಗಳವರ ಅಚ್ಛಿನ್ನಭಕ್ತರಾಗಿದ್ದರು, ಶ್ರೀ ಶ್ರೀಪಾದಂಗಳವರ ಅತ್ಯಂತ ಪ್ರೀತಿಪಾತ್ರರಾಗಿದ್ದರು. ನಿರಂತರವಾಗಿ ಶ್ರೀಮಠದ ಸೇವೆಯನ್ನು ಮಾಡಿದವರು. ಅವರು ಮಾಡಿದ ವಿವಿಧ ರೀತಿಯ ಸೇವೆಗಳನ್ನು ಲೆಕ್ಕ ಹಾಕಲು ಸಾಧ್ಯವಿಲ್ಲ. ಕಳೆದ ವರ್ಷ ಬೆಳಗಾವಿಯಲ್ಲಿ ನಡೆದ ಸುಧಾಮಂಗಳ ಕಾರ್ಯಕ್ರಮಕ್ಕೆ ಇವರು ಮಾಡಿದ ಸೇವೆ ಅವಿಸ್ಮರಣೀಯ. ಹೆಸರಿಲ್ಲದೇ ತೆರೆಯ ಮರೆಯಲ್ಲಿದ್ದೇ ಎಲ್ಲ ಮಾಡುತ್ತಿದ್ದರು. ಶ್ರೀಪಾದಂಗಳವರ ಮಾತು ಎಂದರೆ ವೇದವಾಕ್ಯ ಎಂದು ಪಾಲಿಸುವವರು. ಪ್ರಾತಃಸ್ಮರಣೀಯ ಶ್ರೀ ಶ್ರೀಸತ್ಯಪ್ರಮೋದತೀರ್ಥರು ಇವರ ಮೇಲೆ ತೋರುತ್ತಿದ್ದ ವಾತ್ಸಲ್ಯ ಅಪಾರವಾದದ್ದು ಎಂದು ವಿದ್ಯಾಧೀಶಾಚಾರ್ಯ ಗುತ್ತಲ ಸ್ಮರಿಸಿದ್ದಾರೆ.
ಮಠದ ಪರಿವಾರದವರಿಗೆ, ವಿದ್ವಾಂಸರಿಗೆ ಎಲ್ಲರಿಗೂ ತೀರ ಆತ್ಮೀಯರಾಗಿದ್ದರು. ಇವರ ನಿಧನದಿಂದ ಎಲ್ಲರಿಗೂ ಆಘಾತವಾಗಿದೆ. ಶ್ರೀಮಠಕ್ಕೆ ತುಂಬಲಾರದ ಹಾನಿಯಾಗಿದೆ. ಅವರು ಮಾಡಿದ ಹರಿ-ಗುರು-ವಿಪ್ರ-ಮಠ-ಸಮಾಜ ಸೇವೆಗಳು ಅವರಿಗೆ ಸದ್ಗತಿ ನೀಡುವುದರಲ್ಲಿ ಸಂದೇಹವಿಲ್ಲ.ಅವರ ಪರಿವಾರಕ್ಕೆ ದುಃಖ ಭರಿಸುವ ಶಕ್ತಿಯನ್ನು ನೀಡಲಿ. ಅವರಿಗೆ ಸದ್ಗತಿಯನ್ನು ನೀಡಲಿ ಎಂದು ಪ್ರಾರ್ಥಿಸುತ್ತೇನೆ.
ಅವರು ಮರೆಯಾದರೂ ಅವರ ಹೆಸರು ಸದಾ ಹಸಿರಾಗಿಯೇ ಎಲ್ಲರ ಮನದಲ್ಲಿ ಉಳಿಯುವುದರಲ್ಲಿ ಸಂದೇಹವಿಲ್ಲ ಎಂದು ಅವರು ಹೇಳಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ