*ಆನೆಗಳ ಸಾವು: ಜಮೀನು ಮಾಲೀಕನ ವಿರುದ್ಧ ಎಫ್ಐಆರ್*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ :ಭಾನುವಾರ ಮಧ್ಯಾಹ್ನ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಸುಳೆಗಾಳಿ ಗ್ರಾಮದಲ್ಲಿ ವಿದ್ಯುತ್ ತಂತಿ ಸ್ಪರ್ಶಿಸಿ ಸಾವನ್ನಪ್ಪಿದ್ದ ಎರಡು ಆನೆಗಳ ಸಾವಿನ ಪ್ರಕರಣದಲ್ಲಿ ಜಮೀನು ಮಾಲೀಕ ಗಣಪತಿ ಎಂಬುವರ ವಿರುದ್ಧ ದೂರು ದಾಖಲಾಗಿದೆ.
ಎರಡು ಕಾಡಾನೆಗಳು ಗಣಪತಿ ಅವರ ಜಮೀನಿನಲ್ಲಿ ಹಾದು ಹೋಗುತ್ತಿದ್ದ ವೇಳೆ ಬೇಕಾಬಿಟ್ಟಿಯಾಗಿ ವಿದ್ಯುತ್ ತಂತಿ ಕಟ್ ಮಾಡಿದ್ದ ಪರಿಣಾಮ ತಂತಿ ಸ್ಪರ್ಶಿಸಿ ಆನೆಗಳು ಮೃತಪಟ್ಟಿವೆ.
ಜಮೀನು ಮಾಲೀಕ ಗಣಪತಿ ಸಾತೇರಿ ಮೇಲೆ ಎಫ್‌ಐಆರ್ ದಾಖಲಾಗಿದ್ದು ಆನೆಗಳ ಸಾವಿನ ಬಗ್ಗೆ ಅರಣ್ಯಾಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
ಸದ್ಯ ಮೃತ ಆನೆಗಳನ್ನು ಮರಣೋತ್ತರ ಪರೀಕ್ಷೆಗೆ ಇಂದು ರವಾನಿಸಲಾಗಿದ್ದು, ಬಳಿಕ ಅಂತ್ಯಸಂಸ್ಕಾರ ನೆರವೇರಿಸಲು ಅರಣ್ಯ ಇಲಾಖೆ ಸಿದ್ಧತೆ ಮಾಡಿಕೊಂಡಿದೆ.
ಇನ್ನು ಆನೆಗಳ ಸಾವಿನ ವಿಚಾರ ಗೊತ್ತಾಗುತ್ತಿದ್ದಂತೆ ಗಣಪತಿ ಪರಾರಿಯಾಗಿದ್ದು, ಸದ್ಯ ಸ್ಥಳಕ್ಕೆ ಆರ್‌ಎಫ್‌ಓ ಶಿವಾನಂದ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ, ಜೊತೆಗೆ ಹೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯ ಹಿನ್ನೆಲೆ ಅವರಿಗೂ ನೋಟೀಸ್ ನೀಡಲಾಗಿದೆ. ಅಲ್ಲದೇ ಆರೋಪಿ ಗಣಪತಿಗಾಗಿ ಅಧಿಕಾರಿಗಳು ಶೋಧ ಕಾರ್ಯ ನಡೆಸುತ್ತಿದ್ದಾರೆ.