ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ರಾಜ್ಯ ಸರಕಾರದ ಅಧೀನದಲ್ಲಿರುವ 15 ವರ್ಷ ಹಳೆಯ ವಾಹನಗಳನ್ನು ಗುಜರಿಗೆ ಹಾಕಲು ತೀರ್ಮಾನಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಸಂಪುಟ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿರುವ ಅವರು, ಕೇಂದ್ರ ಸರಕಾರದ 2022ರ ನೋಂದಾಯಿತ ವಾಹನಗಳ ಸ್ಕ್ರಾಪಿಂಗ್ ನೀತಿಯನ್ನು ರಾಜ್ಯದಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ರಾಜ್ಯ ಸರಕಾರದ ಅಧೀನದಲ್ಲಿ ಪ್ರಸ್ತುತ 15 ವರ್ಷಕ್ಕಿಂತ ಹಳೆಯ 15,295 ವಾಹನಗಳಿವೆ. ಇವುಗಳನ್ನು ಗುಜರಿಗೆ ಹಾಕಿ ಹೊಸ ವಾಹನಗಳನ್ನು ಖರೀದಿಸಲಾಗುತ್ತಿದೆ. ಇದರಿಂದ ಸರ್ಕಾರಕ್ಕೆ 500 ಕೋಟಿ ರೂ.ಯಷ್ಟು ವೆಚ್ಚವಾಗಲಿದ್ದು, ಮೊದಲ ಹಂತದಲ್ಲಿ 5 ಸಾವಿರ ವಾಹನಗಳನ್ನು ಗುಜರಿಗೆ ಹಾಕಲು ನಿರ್ಧರಿಸಲಾಗಿದೆ. ಇನ್ನುಳಿದ ವಾಹನಗಳನ್ನು ಹಂತ ಹಂತವಾಗಿ ಗುಜರಿಗೆ ಹಾಕಲಾಗುವುದು. ಇದಕ್ಕೆ ಕೇಂದ್ರ ಸರ್ಕಾರದಿಂದ 100 ಕೋಟಿ ರೂ.ಯಷ್ಟು ಪ್ರೋತ್ಸಾಹ ಧನ ಸಿಗಲಿದೆ ಎಂದು ಅವರು ತಿಳಿಸಿದರು.
15 ವರ್ಷ ಹಳೆಯದಾದ ಖಾಸಗಿ ವಾಹನಗಳನ್ನು ಸಹ ಗುಜರಿಗೆ ಹಾಕುವ ಈ ನೀತಿ ಜಾರಿಗೊಳಿಸಲು ಕೇಂದ್ರ ಸರಕಾರದ ಒತ್ತಡವಿದೆ. ಆದರೆ ರಾಜ್ಯದಲ್ಲಿ ಸದ್ಯಕ್ಕೆ ಇದನ್ನು ಸರಕಾರಿ ವಾಹನಗಳಿಗೆ ಮಾತ್ರ ಅನ್ವಯಿಸಲಾಗುತ್ತಿದೆ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ