
ಪ್ರಗತಿವಾಹಿನಿ ಸುದ್ದಿ, ಕಾರವಾರ -: ಕೊರೋನಾ (ಕೋವಿಡ-19) ವೈರಸ್ ವ್ಯಾಪಕ ಹರಡುವಿಕೆ ತಡೆಗಟ್ಟುವ ನಿಟ್ಟಿನಲ್ಲಿ ಭಟ್ಕಳ ತಾಲೂಕಿನಲ್ಲಿ ಆರೋಗ್ಯ ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಹರೀಶ ಕುಮಾರ ಕೆ. ಅವರು ಹೇಳಿದರು.
ಅವರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾ ಗೊಷ್ಠಿಯಲ್ಲಿ ಮಾತನಾಡಿ, ದುಬೈನಿಂದ ಆಗಮಿಸಿದ್ದ ಭಟ್ಕಳ್ ತಾಲೂಕಿನ ಇಬ್ಬರು ವ್ಯಕ್ತಿಗಳಲ್ಲಿ ಕೋವಿಡ್-19 ವೈರಾಣು ಇರುವುದು ದೃಡಪಟ್ಟಿದ್ದಲ್ಲದೇ ಹೆಚ್ಚಿನ ಸಂಖ್ಯೆಯಲ್ಲಿ ವಿದೇಶದಿಂದ ಅದರಲ್ಲೂ ಒಂದೇ ದೇಶದಿಂದ ಆಗಮಿಸಿದವರ ಸಂಖ್ಯೆ ಭಟ್ಕಳ ತಾಲೂಕಿನಲ್ಲಿಯೇ ಹೆಚ್ಚಾಗಿ ಇರುವುದು ಕಂಡು ಬಂದಿರುವದರಿಂದ ಮುಂಜಾಗೃತ ಕ್ರಮವಾಗಿ ಭಟ್ಕಳ ಪುರಸಭೆ, ಜಾಲಿ ಪಟ್ಟಣ ಪಂಚಾಯತ್ ಹಾಗೂ ಶಿರಾಲಿ, ಹೆಬಳೆ, ಮಾವಿನಕುರ್ವಾ, ಮುಂಡಳ್ಳಿ, ಯಲ್ವಡಿಕವೂರ ಮತ್ತು ಮುಟ್ಟಳ್ಳಿ ಗ್ರಾಮ ಪಂಚಾಯತ್‍ಗಳಲ್ಲಿ ತಕ್ಷಣ ಜಾರಿಗೆ ಬರುವಂತೆ ಆರೋಗ್ಯ ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಗಿದೆ ಎಂದು ತಿಳಿಸಿದರು.
ಜಿಲ್ಲೆಯ ಭಟ್ಕಳದಲ್ಲಿ ವಿದೇಶದಿಂದ ಬಂದಂತಹ 40 ಜನರ ಗಂಟಲು ದ್ರವವನ್ನು ಪರೀಕ್ಷೆಗೆ ಕಳುಹಿಸಿದ್ದು, ಅವರ ವರದಿ ಬರುವರೆಗೂ ಅವರನ್ನು ಮುರುಡೇಶ್ವರದ ಆರ್.ಎನ್.ಎಸ್. ಆಸ್ಪತ್ರೆಯಲ್ಲಿ ಇಡಲಾಗುವುದು. ವರದಿಯು ನೆಗೆಟಿವ್ ಬಂದಲ್ಲಿ ಅಂತವರನ್ನು ಮನೆಗೆ ಕಳುಹಿಸಲಾಗುವುದು, ಪೊಸಿಟಿವ್ ಬಂದವರನ್ನು ಕಾರವಾರ ನೌಕಾನೆಲೆಯ ಪತಂಜಲಿ ಆಸ್ಪತ್ರೆಗೆ ದಾಖಲಿಸಲಾಗುವುದು. ಭಟ್ಕಳ ತಾಲೂಕಿನ ಆರೋಗ್ಯ ಮೂಲಭೂತ ಸೌಕರ್ಯಗಳಿಗಾಗಿ ಆರ್ಥಿಕ ನಿರ್ಭಂದವನ್ನು ವಿಧಿಸದೇ ಆರ್ಥಿಕ ಸಹಾಯ ನೀಡಲಾಗುವುದು. ಜನರು ಆತಂಕ ಪಡಬೇಕಾಗಿಲ್ಲ. ಭಟ್ಕಳ ಹೊರತು ಪಡಿಸಿ ಜಿಲ್ಲೆಯ ಉಳಿದೆಲ್ಲ ಕಡೆ ಸುರಕ್ಷಿತವಾಗಿದ್ದು ಕಾನೂನು ಸುವ್ಯವಸ್ಥೆ ಕಾಪಾಡುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿರುತ್ತದೆ ಎಂದರು.
ಜಿಲ್ಲಾ ಪೂಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು ಅವರು ಮಾತನಾಡಿ ಸಾಮಾಜಿಕ ಜಾಲ ತಾಣಗಳಲ್ಲಿ ಸುಳ್ಳು ಸುದ್ದಿ ಹರಿದಾಡಿದಲ್ಲಿ ಅಂತವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕರಿಗೆ ಆರೋಗ್ಯ ತುರ್ತು ಸಂದರ್ಭ ಬಂದಲ್ಲಿ ಅಂತವರು ಆ ದಿನದ ಮಟ್ಟಿಗೆ ಸ್ಥಳಿಯ ಪೊಲೀಸ್ ಠಾಣೆಗಳಲ್ಲಿ ಕರ್ಫ್ಯೂ ಪಾಸ್ ಪಡೆಯಬಹುದಾಗಿದೆ. ಭಟ್ಕಳ ಜನತೆ ಸಹಕಾರ ನೀಡಿದಲ್ಲಿ ಆರೋಗ್ಯ ತುರ್ತು ಪರಿಸ್ಥಿತಿಯನ್ನು ಸಡಿಸಲಾಗುವುದು ಎಂದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ