Kannada NewsLatest

ಭಾರತವನ್ನು ‘ಹಿಂದೂ ರಾಷ್ಟ್ರ’ವೆಂದು ಘೋಷಿಸಿ -ಹಿಂದೂ ರಾಷ್ಟ್ರ ಅಧಿವೇಶನ ಆಗ್ರಹ

‘ಅಷ್ಟಮ ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ’

ಪಣಜಿ (ಗೋವಾ):

‘ಮೇ ೨೭ ರಿಂದ ಜೂನ್ ೪ ರ ಕಾಲಾವಧಿಯಲ್ಲಿ ‘ಅಷ್ಟಮ ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ’ಕ್ಕೆ ಭಾರತದ ೨೫ ರಾಜ್ಯ ಹಾಗೂ ಬಾಂಗ್ಲಾದೇಶದಿಂದ ಒಟ್ಟು ೧೭೪ ಹಿಂದುತ್ವನಿಷ್ಠ ಸಂಘಟನೆಗಳ ೫೨೦ ಕ್ಕೂ ಹೆಚ್ಚು ಪ್ರತಿನಿಧಿಗಳು ಉಪಸ್ಥಿತರಿದ್ದರು.

ಈ ಅಧಿವೇಶನದಲ್ಲಿ ಹಿಂದೂಗಳ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಸಮಸ್ಯೆಗಳೊಂದಿಗೆ ದೇವಸ್ಥಾನಗಳ ಸರಕಾರಿಕರಣದ ಬಗ್ಗೆ ವ್ಯಾಪಕ ಚರ್ಚೆ ಮಾಡಲಾಯಿತು.

ಭಾರತದ ಸಂವಿಧಾನವು ‘ಜಾತ್ಯತೀತ’ವಾಗಿದ್ದರೂ ಸರಕಾರ ಹಿಂದೂಗಳ ವ್ಯವಸ್ಥಾಪನೆಯನ್ನು ಹೇಗೆ ನೋಡಿಕೊಳ್ಳಲು ಸಾಧ್ಯ ?’, ಎಂದು ಸರ್ವೋಚ್ಚ ನ್ಯಾಯಾಲಯವು ೨ ಸಲ ವಿಚಾರಿಸಿದೆ. ಭಾರತದಲ್ಲಿ ಕೇವಲ ಹಿಂದೂಗಳ ದೇವಸ್ಥಾನವನ್ನು ಸರಕಾರಿಕರಣ ಮಾಡುವ ಸರಕಾರ ಮಸೀದಿ, ಚರ್ಚ್ ಇತ್ಯಾದಿ ಸರಕಾರಿಕರಣ ಮಾಡಲು ಏಕೆ ಹಿಂಜರಿಯುತ್ತದೆ ? ಸರಕಾರಿಕರಣ ಮಾಡಿದ ದೇವಸ್ಥಾನಗಳ ಸ್ಥಿತಿ ಭಯಾನಕವಾಗಿದೆ.

ಅನೇಕ ದೇವಸ್ಥಾನಗಳ ಸಮಿತಿಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. ವಶಪಡಿಸಿಕೊಂಡಿರುವ ದೇವಸ್ಥಾನಗಳ ಪರಂಪರೆ, ವ್ಯವಸ್ಥೆ ಇತ್ಯಾದಿಗಳಲ್ಲಿ ಹಸ್ತಕ್ಷೇಪ ಮಾಡಿ ಅದರಲ್ಲಿ ಬದಲಾವಣೆಯನ್ನು ಮಾಡಲಾಗುತ್ತಿದೆ. ಈ ಪ್ರಯತ್ನವನ್ನು ಭಕ್ತರು ಎಂದೂ ಸಹಿಸುವುದಿಲ್ಲ.

ದೇವಸ್ಥಾನಕ್ಕಾಗಿ ಹಿಂದೂಗಳ ಒಂದು ವ್ಯವಸ್ಥಾಪನಾ ಸಮಿತಿಯನ್ನು ಸ್ಥಾಪಿಸಿರಿ. ಈ ಸಮಿತಿಯಲ್ಲಿ ಶಂಕರಾಚಾರ್ಯರು, ಧರ್ಮಾಚಾರ್ಯರು, ಧರ್ಮನಿಷ್ಠ ನ್ಯಾಯವಾದಿಗಳು, ಧಾರ್ಮಿಕ ಸಂಘಟನೆಗಳ ಪ್ರತಿನಿಧಿಗಳನ್ನು ನೇಮಿಸಿ.

ದೇವಸ್ಥಾನಗಳ ಬಗ್ಗೆ ನಿರ್ಣಯವನ್ನು ‘ಸೆಕ್ಯುಲರ್’ ಸರಕಾರ ತೆಗೆದುಕೊಳ್ಳದೇ, ಆ ಅಧಿಕಾರವನ್ನು ಸಮಿತಿಯವರಿಗೆ ನೀಡಬೇಕು”, ಎಂದೂ ಈ ಸಂದರ್ಭದಲ್ಲಿ ಹಿಂದೂ ಜನಜಾಗೃತಿ ಸುತಿಯ ರಾಷ್ಟ್ರೀಯ ಮಾರ್ಗದರ್ಶಕರಾದ ಸದ್ಗುರು (ಡಾ.) ಚಾರುದತ್ತ ಪಿಂಗಳೆಯವರು ಆಗ್ರಹಿಸಿದರು.

ಅವರು ಜೂನ್ ೩ ರಂದು ಇಲ್ಲಿಯ ಹೋಟೆಲ್ ಮನೋಶಾಂತಿಯಲ್ಲಿ ‘ಅಷ್ಟಮ ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ’ದ ಪತ್ರಿಕಾಗೋಷ್ಟಿಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.

ಈ ಸಮಯದಲ್ಲಿ ‘ಭಾರತ ರಕ್ಷಾ ಮಂಚ್’ನ ರಾಷ್ಟ್ರೀಯ ಕಾರ್ಯದರ್ಶಿಗಳಾದ ಒಡಿಶಾದ ಅನೀಲ ಧೀರ, ‘ಹಿಂದೂ ಚಾರ್ಟರ್’ನ ದೆಹಲಿಯಲ್ಲಿನ   ರಿತು ರಾಠೊಡ, ಸನಾತನ ಸಂಸ್ಥೆಯ ರಾಷ್ಟ್ರೀಯ ವಕ್ತಾರ  ಚೇತನ ರಾಜಹಂಸ್ ಮತ್ತು ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರ  ರಮೇಶ ಶಿಂದೆ ಇವರು ಉಪಸ್ಥಿತರಿದ್ದರು.


 ಸದ್ಗುರು (ಡಾ.) ಪಿಂಗಳೆಯವರು, “ಕಾನೂನಿನ ಮೂಲಕ ದೇವಸ್ಥಾನವನ್ನು ವಶಪಡಿಸಿಕೊಳ್ಳುವ ಅಧಿಕಾರವು ಸರಕಾರಕ್ಕೆ ಸಿಕ್ಕಿಲ್ಲ. ಸರ್ವೋಚ್ಚ ನ್ಯಾಯಾಲಯವು ತಮಿಳುನಾಡಿನ ನಟರಾಜ ದೇವಸ್ಥಾನ ಸಂದರ್ಭದಲ್ಲಿ ತೀರ್ಪನ್ನು ನೀಡುವಾಗ ಸ್ಪಷ್ಟ ಪಡಿಸಿತೇನೆಂದರೆ, ಯಾವುದೇ ಸೆಕ್ಯುಲರ್ ಸರಕಾರಕ್ಕೆ ದೇವಸ್ಥಾನವನ್ನು ಸರಕಾರಿಕರಣ ಮಾಡಿ ಅದನ್ನು ಶಾಶ್ವತವಾಗಿ ತಮ್ಮ ವಶದಲ್ಲಿಟ್ಟುಕೊಳ್ಳುವ ಅಧಿಕಾರವಿಲ್ಲ.

ಅದೇ ರೀತಿ ದೇವಸ್ಥಾನದ ಜಮೀನನ್ನು ‘ಸರಕಾರದ ಭೂಮಿ’ ಎಂದು ಸರಕಾರ ಅದನ್ನು ಉಪಯೋಗಿಸುವಂತಿಲ್ಲ. ಒಂದು ವೇಳೆ ದೇವಸ್ಥಾನದಲ್ಲಿ ಅವ್ಯವಹಾರ ನಡೆಯುತ್ತಿದ್ದಲ್ಲಿ, ಅಲ್ಲಿ ಸರ್ಕಾರಿ ಅಧಿಕಾರಿಯನ್ನು ನೇಮಿಸಿ ಅಲ್ಲಿಯ ಹಗರಣವನ್ನು ದೂರಮಾಡಲು ಉಪಾಯೋಜನೆಯನ್ನು ಮಾಡಿ ಅದನ್ನು ಪುನಃ ಸಮಾಜಕ್ಕೆ ಕೊಡಬೇಕು.

ಪ್ರತ್ಯಕ್ಷದಲ್ಲಿ ಮಾತ್ರ ಸರ್ಕಾರವು ಈ ದೇವಸ್ಥಾನಗಳನ್ನು ಹಾಲು ಕೊಡುವ ಹಸು ಎಂದು ತಿಳಿದು ದೇವಸ್ಥಾನ ಗಳನ್ನು ಕಬಳಿಸಿ ಕುಳಿತಿದೆ, ಸೆಕ್ಯುಲರ್‌ನ ತೆರೆಮರೆಯಲ್ಲಿ ಆಧುನಿಕ ಗಝನಿಯಾಗಿರುವ ಈ ಸರಕಾರಿ ಪ್ರತಿನಿಧಿಗಳನ್ನು ದೇವಸ್ಥಾನದಿಂದ ಹೊರಹಾಕಿ ದೇವಸ್ಥಾನಗಳನ್ನು ಹಿಂದೂ ಸಮಾಜಕ್ಕೆ ಕೊಡುವುದು ಅವಶ್ಯಕವಿದೆ. ಅದಕ್ಕಾಗಿ ಮುಂಬರುವ ವರ್ಷದಲ್ಲಿ ಭಾರತದಾದ್ಯಂತ ಹಿಂದುತ್ವನಿಷ್ಠ ಸಂಘಟನೆಗಳು ಸಂಘಟಿತರಾಗಿ ‘ದೇವಸ್ಥಾನ-ಸಂಸ್ಕೃತಿ ರಕ್ಷಣ ಅಭಿಯಾನ’ ಹೆಸರಿನ ರಾಷ್ಟ್ರವ್ಯಾಪಿ ಚಳುವಳಿಯನ್ನು ಹಮ್ಮಿಕೊಳ್ಳಲಾಗುವುದು” ಎಂದು ಹೇಳಿದರು.
ಈ ಸಮಯದಲ್ಲಿ ಒಡಿಶಾದ  ಅನೀಲ ಧೀರ ಅವರು ಮಾತನಾಡುತ್ತಾ, “ಸರಕಾರಿ ಪುರಾತತ್ವ ಇಲಾಖೆಗೆ ದೇವಸ್ಥಾನದ್ದಲ್ಲ, ಬದಲಾಗಿ ತಾಜಮಹಲಿನ ಕಾಳಜಿ ಇದೆ. ಒಡಿಶಾದ ಪುರಿ ಜಗನ್ನಾಥ ದೇವಸ್ಥಾನ ಮತ್ತು ಕೋನಾರ್ಕನ ಸೂರ್ಯಮಂದಿರ ಸರಕಾರದ ವಶದಲ್ಲಿದೆ. ಯೋಗ್ಯ ಪದ್ದತಿಯಲ್ಲಿ ಅದನ್ನು ನೋಡಿಕೊಳ್ಳುತ್ತಿಲ್ಲ. ಈ ದೇವಸ್ಥಾನಕ್ಕೆ ೫೦೦ ವರ್ಷಗಳಾಗಿರದೇ ಇರುವಂತಹ ದುರ್ದೆಶೆ ಕಳೆದ ೫೦ ವರ್ಷಗಳಲ್ಲಿ ಆಗಿದೆ.

 ಸರ್ಕಾರವು ದೇವಸ್ಥಾನಗಳ ಜೀರ್ಣೋದ್ಧಾರ ಮಾಡಬೇಕು 

ಸರಕಾರ ದೇವಸ್ಥಾನದ ಅರ್ಪಣೆಯ ಮೇಲೆ ತೆರಿಗೆಯನ್ನು ವಿಧಿಸುತ್ತದೆ;  ಆದರೆ ಮಸೀದಿ ಮತ್ತು ಚರ್ಚ್‌ಗಳಿಗೆ ತೆರಿಗೆಯಲ್ಲಿ ವಿನಾಯತಿ ನೀಡುತ್ತದೆ. ಹಿಂದೂಗಳಿಗೆ ಧರ್ಮಶಿಕ್ಷಣದ ವ್ಯವಸ್ಥೆಯು ಎಲ್ಲಿಯೂ ಇಲ್ಲ. ಮಕ್ಕಳಿಗೆ ವೇದ-ಶಾಸ್ತ್ರ್ರವನ್ನು ಕಲಿಸಲಿಕ್ಕಿದ್ದರೆ ಎಲ್ಲಿ ಹೋಗಬೇಕು ? ಇದು ಅನ್ಯಾಯವೇ ಆಗಿದೆ.

ಧರ್ಮದ ಪ್ರಚಾರ ಪ್ರಸಾರವನ್ನು ಮಾಡಲು ದೇವಸ್ಥಾನಗಳನ್ನು ಸರಕಾರದ ವಶದಿಂದ ಮುಕ್ತ ಮಾಡಬೇಕಾಗಿದೆ.  ಹೊಸದಾಗಿ ನೇಮಕಗೊಂಡ ಭಾಜಪ ಸರಕಾರವು  ‘ಹಿಂದೂ ಸಂಸ್ಕೃತಿ ಜೀರ್ಣೋದ್ಧಾರ ನಿಗಮ’ದ ಸ್ಥಾಪನೆಯನ್ನು ಮಾಡಿ ಅದಕ್ಕೆ ಕಡಿಮೆ ಪಕ್ಷ ೧೦ ಸಾವಿರ ಕೋಟಿ ನಿಧಿಯನ್ನು ನೀಡಬೇಕು. ಈ ನಿಧಿಯು ಹಿಂದೂಗಳ ಪ್ರಾಚೀನ ದೇವಸ್ಥಾನಗಳನ್ನು ಉಳಿಸಲು ಹಾಗೂ ಜೀರ್ಣೋದ್ಧಾರ ಮಾಡುವುದು, ಅದೇರೀತಿ ಭಾರತೀಯ ಕಲೆ, ನೃತ್ಯ, ಸಾಹಿತ್ಯ, ಸಂಸ್ಕೃತಿ ಇವುಗಳ ಅಭಿವೃದ್ಧಿ ಮಾಡಲು ಉಪಯೋಗಿಸಬೇಕು’, ಎಂದು ರಿತು ರಾಠೋಡ್ ಹೇಳಿದರು. 

ಈ ಸಮಯದಲ್ಲಿ  ಚೇತನ ರಾಜಹಂಸ್ ಅವರು ಮಾತನಾಡುತ್ತ, ‘ದೇವಸ್ಥಾನ-ಸಂಸ್ಕೃತಿ ರಕ್ಷಣೆ ಅಭಿಯಾನದ ಅಂತರ್ಗತದಲ್ಲಿ ಹಿಂದೂ ಧರ್ಮದ ಮೇಲಿನ ವಿವಿಧ ಆಘಾತಗಳ ವಿರುದ್ಧ ಕಾನೂನಿನ ಮೂಲಕ ಹೋರಾಡಲು ಮಾಹಿತಿ ಹಕ್ಕಿನ ಉಪಯೋಗವನ್ನು ಪ್ರಭಾವಶಾಲಿಯಾಗಿ ಮಾಡುವುದು, ದೇವಸ್ಥಾನಗಳ ರಕ್ಷಣೆಗಾಗಿ ಅಲ್ಲಲ್ಲಿ ಸಭೆ ಮತ್ತು ಆಂದೋಲನಗಳನ್ನು ಆಯೋಜಿಸುವುದು, ದೇವಸ್ಥಾನ ವ್ಯವಸ್ಥಾಪನೆ ಮತ್ತು ಅರ್ಚಕರೊಂದಿಗೆ ಸಭೆ ನಡೆಸುವುದು, ದೇವಸ್ಥಾನದ ಮಾಧ್ಯಮದಿಂದ ಹಿಂದೂಗಳಿಗೆ ಧರ್ಮಶಿಕ್ಷಣವನ್ನು ನೀಡುವುದು, ಅದಕ್ಕಾಗಿ ವ್ಯಾಪಕ ಸ್ತರದಲ್ಲಿ ನಾವು ಪ್ರಯತ್ನ ಮಾಡಲಿಕ್ಕಿದ್ದೇವೆ’ ಎಂದರು.

ಅಷ್ಟಮ ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನದ ಠರಾವು

೧. ಭಾರತವನ್ನು ‘ಹಿಂದೂ ರಾಷ್ಟ್ರ’ವೆಂದು ಘೋಷಿಸಲು ಅಧಿವೇಶನದಲ್ಲಿನ ಎಲ್ಲ ಹಿಂದೂ ಸಂಘಟನೆಗಳು ಕಾನೂನುಮಾರ್ಗದಿಂದ ಪ್ರಯತ್ನಿಸುವವು. ಸಂವಿಧಾನದಲ್ಲಿ ಸಂವಿಧಾನಬಾಹಿರವಾಗಿ ಸೇರಿಸಿದ ‘ಸೆಕ್ಯುಲರ್’ ಎಂಬ ಶಬ್ದವನ್ನು ಬದಿಗಿರಿಸಿ ‘ಸ್ಪಿರಿಚ್ಯುವಲ್’ ಈ ಶಬ್ದವನ್ನು ಹಾಕಬೇಕು ಮತ್ತು ಭಾರತವನ್ನು ‘ಹಿಂದೂ ರಾಷ್ಟ್ರ’ವೆಂದು ಘೋಷಿಸಬೇಕು.
೨. ‘ನೇಪಾಳ ಹಿಂದೂ ರಾಷ್ಟ್ರವೆಂದು ಘೋಷಿತವಾಗಬೇಕು’, ಎಂಬ ನೇಪಾಳದಲ್ಲಿನ ಹಿಂದೂಗಳ ಆಗ್ರಹವನ್ನು ಈ ಅಧಿವೇಶನವು ಸಂಪೂರ್ಣ ಬೆಂಬಲಿಸುತ್ತದೆ.
೩. ಕೇಂದ್ರಸರಕಾರವು ಹಿಂದೂ ಸಮಾಜದ ತೀವ್ರ ಭಾವನೆಯನ್ನು ಗಮನದಲ್ಲಿಸಿರಿ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ನಿರ್ಮಿತಿ ಮಾಡಬೇಕು ಹಾಗೂ ‘ಇಡೀ ದೇಶದಲ್ಲಿ ಗೋವಂಶ ಹತ್ಯೆ ನಿಷೇಧ’ ಮತ್ತು ‘ಮತಾಂತರ ನಿಷೇಧ’ ಇವುಗಳ ಬಗ್ಗೆ ನಿರ್ಣಾಯಕ ಕಾನೂನನ್ನು ಅಂಗೀಕರಿಸಬೇಕು.
೪. ಪಾಕಿಸ್ತಾನ, ಬಂಗ್ಲಾದೇಶ ಮತ್ತು ಶ್ರೀಲಂಕಾಗಳಲ್ಲಿನ ಹಿಂದೂಗಳ ಮೇಲಾಗುವ ದೌರ್ಜನ್ಯಗಳ ಬಗ್ಗೆ ಅಂತರರಾಷ್ಟ್ರೀಯ ಮಾನವಾಧಿಕಾರ ಸಂಘಟನೆ ಹಾಗೂ ಭಾರತ ಸರಕಾರವು ವಿಚಾರಣೆ ಮಾಡಬೇಕು. ಬಂಗ್ಲಾದೇಶ – ಪಾಕಿಸ್ತಾನ ಮುಂತಾದ ದೇಶಗಳಿಂದ ಭಾರತದಲ್ಲಿ ಆಶ್ರಯ ಪಡೆದ ಪೀಡಿತ ಹಿಂದೂ ನಿರಾಶ್ರಿತರಿಗೆ ಭಾರತದ ಪೌರತ್ವ ನೀಡಬೇಕು.
೫. ಕಾಶ್ಮೀರ ಕಣಿವೆಯಲ್ಲಿ ಸ್ವತಂತ್ರ ‘ಪನೂನ ಕಶ್ಮೀರ’ ಈ ಕೇಂದ್ರಾಡಳಿತ ಪ್ರದೇಶವನ್ನು ನಿರ್ಮಿಸಿ ನಿರಾಶ್ರಿತ ಕಾಶ್ಮೀರಿ ಹಿಂದೂಗಳಿಗೆ ಪುನಃ ಪುನರ್ವಸತಿ ಕಲ್ಪಿಸಬೇಕು. ಸಂವಿಧಾನದಲ್ಲಿನ ‘ಪರಿಚ್ಛೇದ ೩೭೦’ ಮತ್ತು ‘ಪರಿಚ್ಚೇದ ೩೫-ಅ’ಗಳನ್ನು ತಕ್ಷಣ ರದ್ದುಪಡಿಸಬೇಕು.
೬. ಕೇಂದ್ರಸರಕಾರವು ದೇಶದಾದ್ಯಂತದ ದೇವಸ್ಥಾನಗಳ ಸರಕಾರಿಕರಣ ರದ್ದುಪಡಿಸಿ ದೇವಸ್ಥಾನಗಳ ಆಡಳಿತವನ್ನು ಭಕ್ತರ ವಶಕ್ಕೆ ಒಪ್ಪಿಸಬೇಕು. ದೇವಸ್ಥಾನಗಳಲ್ಲಿನ ಪರಂಪರೆ ಮತ್ತು ಧಾರ್ಮಿಕ ವಿಧಿ ಇವುಗಳ ವಿಷಯದಲ್ಲಿ ನಿರ್ಣಯ ತೆಗೆದುಕೊಳ್ಳಲು ರಾಷ್ಟ್ರೀಯ ಸ್ತರದಲ್ಲಿ ಒಂದು ವ್ಯವಸ್ಥಾಪಕೀಯ ಸಮಿತಿಯನ್ನು ನಿಶ್ಚಯಿಸಬೇಕು.
೭. ಕೇಂದ್ರ ಸರಕಾರವು ದೇಶಾದ್ಯಂತದ ನಗರಗಳು, ವಾಸ್ತು, ರಸ್ತೆಗಳು ಮುಂತಾದವುಗಳಿಗಿರುವ ಪರಕೀಯ ಆಕ್ರಮಣಕಾರರ ಹೆಸರುಗಳನ್ನು ಬದಲಾಯಿಸುವ ನಿರ್ಣಯ ತೆಗೆದುಕೊಳ್ಳಬೇಕು. ಭಾರತೀಯ ಸಾಂಸ್ಕೃತಿಕ ಸೊತ್ತಿಗೆ ಸುಲಭವಾದಂತಹ ನಾಮಕರಣ ಮಾಡಲು ತಕ್ಷಣ ‘ಕೇಂದ್ರೀಯ ನಾಮಕರಣ ಆಯೋಗ’ವನ್ನು ಸ್ಥಾಪಿಸಿರಿ.
೮. ನಾಸ್ತಿಕವಾದಿಗಳ ಹತ್ಯೆ ಪ್ರಕರಣಗಳಲ್ಲಿ ತನಿಖಾ ದಳಗಳಿಂದ ಸನಾತನ ಸಂಸ್ಥೆಯ ಅಮಾಯಕ ಸಾಧಕರಿಗೆ ತೊಂದರೆಯಾಗಬಾರದೆಂದು, ಕೇಂದ್ರ ಸರಕಾರವು ಕೃತಿ ಮಾಡಬೇಕು. ಅಸ್ತಿತ್ವದಲ್ಲಿಲ್ಲದ ತಥಾಕಥಿತ ‘ಹಿಂದೂ ಭಯೋತ್ಪಾದನೆ’ ಈ ಶಬ್ದದ ಬಳಕೆಯನ್ನು ಮಾಡುವ ವಿಷಯದಲ್ಲಿ ತಕ್ಷಣ ನಿರ್ಬಂಧ ತರಬೇಕು.
೯. ಶ್ರೀರಾಮ ಸೇನೆಯ ಸಂಸ್ಥಾಪಕರಾದ  ಪ್ರಮೋದ ಮುತಾಲಿಕ ಇವರ ಮೇಲೆ ಗೋವಾ ರಾಜ್ಯದಲ್ಲಿ ಕಾನೂನಿನ ದುರ್ಬಳಕೆ ಮಾಡಿ ಸಂವಿಧಾನಬಾಹಿರವಾಗಿ ಪ್ರವೇಶ ನಿಷೇಧ ಹೇರಿದ ಕೃತಿಯನ್ನು ‘ಅಷ್ಟಮ ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ’ವು ಖಂಡಿಸುತ್ತದೆ.
೧೦. ಹಿಂದೂ ವಿಧಿಜ್ಞ ಪರಷತ್ತಿನ ರಾಷ್ಟ್ರೀಯ ಕಾರ್ಯದರ್ಶಿ ನ್ಯಾಯವಾದಿ ಸಂಜೀವ ಪುನಾಳೇಕರ ಮತ್ತು ಪರಿಷತ್ತಿನ ಮಾಹಿತಿ ಹಕ್ಕು ಕಾರ್ಯಕರ್ತ  ವಿಕ್ರಮ ಭಾವೆ ಇವರನ್ನು ಸಿಬಿಐವು ಮಾಡಿದ ಬಂಧನವನ್ನು ಈ ಅಧಿವೇಶನವು ಖಂಡಿಸುತ್ತದೆ. ಅವರನ್ನು ಗೌರವದಿಂದ ಬಿಡುಗಡೆ ಮಾಡಬೇಕೆಂದು ನಮ್ಮ ಬೇಡಿಕೆಯಿದೆ.
ಹಿಂದುತ್ವನಿಷ್ಠ ಸಂಘಟನೆಗಳು ಅಧಿವೇಶನದಲ್ಲಿ ನಿಶ್ಚಯಿಸಿದ ಸಮಾನ ಕೃತಿ ಕಾರ್ಯಕ್ರಮ !
* ೫೧ ಸ್ಥಳಗಳಲ್ಲಿ ಹಿಂದೂ ರಾಷ್ಟ್ರ ಜಾಗೃತಿ ಸಭೆಗಳನ್ನು ನಡೆಸುವ ನಿರ್ಧಾರ !
* ೧೬ ಹೊಸ ಸ್ಥಳಗಳಲ್ಲಿ ಪ್ರತಿ ತಿಂಗಳು ರಾಷ್ಟ್ರೀಯ ಹಿಂದೂ ಆಂದೋಲನಗಳು ಪ್ರಾರಂಭವಾಗುವವು !
* ಒಟ್ಟು ೨೬ ಸ್ಥಳಗಳಲ್ಲಿ ಹಿಂದೂ ರಾಷ್ಟ್ರ ಸಂಘಟಕ ತರಬೇತಿ ಕಾರ್ಯಾಗಾರ ನಡೆಸಲು ನಿರ್ಧಾರ !
* ೩೮ ಸ್ಥಳಗಳಲ್ಲಿ ವಕ್ತಾ – ಪ್ರವಕ್ತಾ ಕಾರ್ಯಗಾರಗಳ ಆಯೋಜನೆಯಾಗುವುದು !
* ೨೩೬ ಸ್ಥಳಗಳಲ್ಲಿ ಹಿಂದೂ ರಾಷ್ಟ್ರ ಜಾಗೃತಿ ಸಭೆಗಳ ಆಯೋಜನೆಯಾಗುವುದು !
* ದೇಶದಾದ್ಯಂತ ೨೭ ಸ್ಥಳಗಳಲ್ಲಿ ಸಾಧನಾ ಶಿಬಿರಗಳು, ೨೩ ಸ್ಥಳಗಳಲ್ಲಿ ಮಾಹಿತಿ ಹಕ್ಕು ಕಾರ್ಯಾಗಾರ, ೨೩ ಸ್ಥಳಗಳಲ್ಲಿ ಸೊಶಿಯಲ್ ಮಿಡಿಯಾ ಶಿಬಿರಗಳು ಮತ್ತು ೧೮ ಸ್ಥಳಗಳಲ್ಲಿ ಶೌರ್ಯ ಜಾಗರಣ ಶಿಬಿರಗಳನ್ನು ನಡೆಸುವ ನಿರ್ಧಾರ !

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button