Kannada NewsKarnataka NewsLatest

ವಿಮಾನ ನಿಲ್ದಾಣದೊಳಗೆ ಪ್ರವೇಶ ಸಿಗಲಿಲ್ಲ ಎಂದು ರೇಗಾಡಿದ ದೀಪಾ ಕುಡಚಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ವಿಮಾನ ನಿಲ್ದಾಣದೊಳಗೆ ಪ್ರವೇಶ ಸಿಗಲಿಲ್ಲ ಎನ್ನುವ ಕಾರಣಕ್ಕೆ ಸಾರ್ವಜನಿಕ ಸ್ಥಳದಲ್ಲೇ ಬಿಜೆಪಿಯ ಜವಾಬ್ದಾರಿಯುತ ಸ್ಥಾನದಲ್ಲಿರುವ ಮಹಿಳೆ ರೇಗಾಡಿದ ವಿಚಿತ್ರ ಘಟನೆ ಬೆಳಗಾವಿಯಲ್ಲಿ ಭಾನುವಾರ ನಡೆಯಿತು.

ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾನುವಾರ ಬೆಳಗಾವಿಗೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಅವರನ್ನು ಸ್ವಾಗತಿಸಲು ನೂರಾರು ಬಿಜೆಪಿ ಕಾರ್ಯಕರ್ತರು ವಿಮಾನ ನಿಲ್ದಾಣಕ್ಕೆ ಹೋಗಿದ್ದಾರೆ. ಈ ವೇಳೆ ಪೊಲೀಸರು ತಮ್ಮ ಬಳಿ ಇರುವ ಲೀಸ್ಟ್ ಪ್ರಕಾರ ಒಳಗೆ ಹೋಗಲು ಅವಕಾಶ ಕಲ್ಪಿಸಿದ್ದಾರೆ.

ಆದರೆ ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿಯ ನಿರ್ದೇಶಕಿ ದೀಪಾ ಕುಡಚಿಯವರನ್ನು ಒಳಗೆ ಬಿಡಲು ಪೊಲೀಸರು ಒಪ್ಪಲಿಲ್ಲ. ಈ ಮಧ್ಯೆ ಕರ್ನಾಟಕ ಪ್ರಾಣಿ ಕಲ್ಯಾಣ ಮಂಡಳಿ ಸದಸ್ಯೆ, ಕೇಂದ್ರ ಲಲಿತಕಲಾ ಅಕಾಡೆಮಿ ನಿರ್ದೇಶಕಿ ಡಾ.ಸೋನಾಲಿ ಸರ್ನೋಬತ್ ಅವರು ನೇರವಾಗಿ ವಿಮಾನ ನಿಲ್ದಾಣದ ಒಳಗೆ ಪ್ರವೇಶ ಪಡೆದಿದ್ದಾರೆ.

ಇದರಿಂದ ಕೆರಳಿದ ದೀಪಾ ಕುಡಚಿ ಅಲ್ಲೇ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ. ನಿನ್ನೆ ರಾತ್ರಿಯವರೆಗೂ ಲೀಸ್ಟ್ ನಲ್ಲಿ ನನ್ನ ಹೆಸರಿತ್ತು. ಆದರೆ ರಾತ್ರೋರಾತ್ರಿ ಬಿಜೆಪಿ ಗ್ರಾಮೀಣ ಅಧ್ಯಕ್ಷ ಸಂಜಯ ಪಾಟೀಲ ಬದಲಿಸಿ ಡಾ.ಸೋನಾಲಿ ಸರ್ನೋಬತ್ ಹೆಸರು ಸೇರಿಸಿದ್ದಾರೆ ಎಂದು ಅವರು ಮಾಧ್ಯಮಗಳ ಮುಂದೆ ರೇಗಾಡಿದ್ದಾರೆ.

ನಾನು 20 ವರ್ಷದಿಂದ ಬಿಜೆಪಿಯಲ್ಲಿದ್ದೇನೆ. ಈಚೆಗೆ ಬಂದಿರುವ ಸೋನಾಲಿ ಸರ್ನೋಬತ್ ಹಲವು ಹುದ್ದೆ ಪಡೆದಿದ್ದಾರೆ. ಅವರಿಗೆ ಅಮಿತ್ ಶಾ ಸ್ವಾಗತಕ್ಕೆ ಅವಕಾಶ ನೀಡಲಾಗಿದೆ. ಈ ಕುರಿತು ಅಮಿತ್ ಶಾ ಹಾಗೂ ಬಿಜೆಪಿಯ ಹಿರಿಯ ನಾಯಕರಿಗೆ ದೂರು ನೀಡುತ್ತೇನೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಕೆಲವೇ ಕ್ಷಣದಲ್ಲಿ ಇದು ಎಲ್ಲೆಡೆ ವೈರಲ್ ಆಗಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಡಾ.ಸೋನಾಲಿ ಸರ್ನೋಬತ್, ನನಗೆ ಪಕ್ಷ ವಹಿಸಿರುವ ಕೆಲಸವನ್ನು ನಾನು ನಿರ್ವಹಿಸುತ್ತಿದ್ದೇನೆ. ದೀಪಾ ಕುಡಚಿ ಆರೋಪ ಮಾಡಿರುವುದು ನನಗೆ ಗೊತ್ತಿಲ್ಲ ಎಂದು ತಿಳಿಸಿದರು.

ದೀಪಾ ಕುಡಚಿ ಬೆಳಗಾವಿ ಲೋಕಸಭೆ ಉಪಚುನಾವಣೆಯ ಟಿಕೆಟ್ ಆಕಾಂಕ್ಷಿ. ಆದರೆ ಸೋನಾಲಿ ಸರ್ನೋಬತ್,  ನನ್ನ ಹೆಸರು ಆಕಾಂಕ್ಷಿಗಳ ಪಟ್ಟಿಯಲ್ಲಿದೆ ಎಂದು ತಿಳಿದುಬಂದಿದೆ. ನಾನೇನು ಟಿಕೆಟ್ ಕೇಳಿಲ್ಲ ಎಂದಿದ್ದಾರೆ.

ಒಟ್ಟಾರೆ, ದೊಡ್ಡ ಸ್ಥಾನದಲ್ಲಿರುವವರ ಸಣ್ಣತನ ವಿಮಾನ ನಿಲ್ದಾಣದಂತಹ ದೊಡ್ಡ ಸ್ಥಳದಲ್ಲಿ ಬಹಿರಂಗವಾಯಿತು.

ನೇಹಾ ಮಲ್ಲಿಕ್ ಬಿಕಿನಿ ವೀಡಿಯೋ, ಫೋಟೋ ವೈರಲ್

ಕೇಂದ್ರದಲ್ಲಿ ಮೋದಿ, ಕರ್ನಾಟಕದಲ್ಲಿ ಯಡಿಯೂರಪ್ಪ – ಹಾಡಿ ಹೊಗಳಿದ ಅಮಿತ್ ಶಾ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button