ಬೆಳಕಿನ ಹಬ್ಬದ ಸಂಭ್ರಮದಲ್ಲಿ ಆತ್ಮಜ್ಯೋತಿ ಬೆಳಗಲಿ

ಪ್ರಗತಿವಾಹಿನಿ ವಿಶೇಷ: ದೀಪಾವಳಿ ವಿಶ್ವದಾದ್ಯಂತ ಅತಿ ದೊಡ್ಡ ಹಬ್ಬವಾಗಿದ್ದು, ಹಿಂದೂ, ಜೈನ, ಬುದ್ಧ ಮತ್ತು ಸಿಖ್ ಧರ್ಮಗಳಲ್ಲಿ ಈ ಹಬ್ಬಕ್ಕೆ ಮಹತ್ವವಿದೆ. ಭಾರತ, ನೇಪಾಳ, ಶ್ರೀಲಂಕಾ, ಬರ್ಮಾ, ಮಾರಿಶಿಯಸ್, ಗಯಾನಾ, ಟ್ರಿನಿಡಾಡ್, ಸೂರಿನಾಮ್, ಮಲೇಶಿಯಾ, ಸಿಂಗಾಪುರ್ ಮತ್ತು ಫಿಜಿ ದೇಶಗಳಲ್ಲಿ ರಾಷ್ಡ್ರೀಯ ರಜೆ ಘೋಷಿಸಲಾಗಿದ್ದು, ಜನರು ದೀಪಾವಳಿಯನ್ನು ಸಡಗರ ಸಂಭ್ರಮದಿಂದ ಆಚರಿಸುತ್ತಾರೆ. ನೇಪಾಳದಲ್ಲಿ ಹೊಸ ವರ್ಷವು ದೀಪಾವಳಿಯಂದು ಪ್ರಾರಂಭವಾಗುತ್ತದೆ.

ದೀಪಾವಳಿ ದೀಪಗಳ ಹಬ್ಬ. ಇದನ್ನು ವಿಕ್ರಮಶಕೆಯ ವರ್ಷದ ಕೊನೆಯಲ್ಲಿ ಆಚರಿಸಲಾಗುತ್ತದೆ. ವಿಕ್ರಮಶಕೆಯನ್ನು ಉತ್ತರ ಭಾರತದಲ್ಲಿ ಆಚರಿಸಲ್ಪಡುವುದರಿಂದ ಅಲ್ಲಿ ಆಶ್ವೀಜ ಮಾಸದ ಕೃಷ್ಣಪಕ್ಷದ ಚತುರ್ದಶಿ, ಅಮಾವಾಸ್ಯೆ ಹಾಗೂ ಕಾರ್ತಿಕ ಮಾಸ ಶುಕ್ಲಪಕ್ಷದ ಪಾಡ್ಯದಂದು ದೀಪಾವಳಿಯನ್ನು ಆಚರಿಸುತ್ತಾರೆ. ಅಮಾವಾಸ್ಯೆಯ ನಿಖರ ದಿನಾಂಕ ಬೇರೆ ಬೇರೆ ಆಗುವುದರಿಂದ ದೀಪಾವಳಿಯ ದಿನಾಂಕವೂ ಬೇರೆಯಾಗುತ್ತದೆ.

ಜೈನ ಧರ್ಮದಲ್ಲಿ ದೀಪಾವಳಿಗೆ ದೇವ-ದಿವಾಳಿ ಎಂದು ಹೇಳುತ್ತಾರೆ. ಈ ದಿನ ಕೊನೆಯ ತೀರ್ಥಂಕರನಾದ ಮಹಾವೀರನು ಬಿಹಾರ ರಾಜ್ಯದ ಪಾವಪುರಿ ಎಂಬ ಸ್ಥಳದಲ್ಲಿ (ಅಕ್ಟೋಬರ್ 15, ಕ್ರಿ.ಪೂ.527) ನಿರ್ವಾಣ ಹೊಂದಿದನು. ಕ್ರಿ.ಪೂ. 3ನೇ ಶತಮಾನದಲ್ಲಿ ಆಚಾರ್ಯ ಭದ್ರಬಾಹುವಿನಿಂದ ರಚಿತವಾದ ಕಲ್ಪಶ್ರುತ ಗ್ರಂಥದಲ್ಲಿರುವಂತೆ ಮಹಾವೀರನ ನಿರ್ವಾಣ ಕಾಲದಲ್ಲಿದ್ದ ದೇವತೆಗಳಿಂದ ಅಂಧಕಾರವು ಮರೆಯಾಗಿತ್ತು, ಆದರೆ ಮುಂದಿನ ರಾತ್ರಿ ಗಾಡಾಂಧಕಾರವು ಆವರಿಸಿತು. ತಮ್ಮ ಗುರುವಿನ ಜ್ಞಾನಜ್ಯೋತಿಯ ಸಂಕೇತವಾಗಿ 16 ಗಣ-ಚಕ್ರವರ್ತಿ, 9 ಮಲ್ಲ ಮತ್ತು 9 ಲಿಚ್ಚಾವಿ ಅವರು ತಮ್ಮ ಗಣರಾಜ್ಯದಲ್ಲಿ ದೀಪ ಬೆಳಗಿಸಿ ದ್ವಾರವನ್ನು ಬೆಳಗಿದರು. ಜೈನರಿಗೆ ಇದು ವರ್ಷದ ಪ್ರಾರಂಭದ ದಿನ. ಆಚಾರ್ಯ ಬೆನ್ಸೆನ್ ಬರೆದಿರುವ ‘ಹರಿವಂಶ ಪುರಾಣ’ದಲ್ಲಿ ದೀಪಾಲಿಕಯಾ (ದೀಪಾವಳಿ) ಬಗ್ಗೆ ಉಲ್ಲೇಖವಿದೆ. ದೀಪಾಲಿಕಯಾ ಎಂದರೆ ಪ್ರಕಾಶವು ದೇಹವನ್ನು ತ್ಯಜಿಸುವುದು.

ಸಿಖ್ ಧರ್ಮದಲ್ಲಿಯೂ ದೀಪಾವಳಿ ಪ್ರಮುಖ ಹಬ್ಬವಾಗಿದೆ. ಕ್ರಿ.ಶ 1620 ರಲ್ಲಿ ಸಿಖ್ಖರ ಆರನೆಯ ಗುರು ಹರಗೋಬಿಂದ್ ಸಿಂಗ್ ಗ್ವಾಲಿಯರ್ ಕೋಟೆಯಲ್ಲಿ ಬಂಧಿತರಾಗಿದ್ದ 52 ರಾಜರನ್ನು ಬಿಡಿಸಿ ತಂದ ದಿನವೆಂದು ಆಚರಿಸಲಾಗುತ್ತದೆ.
ಕಾರ್ತಿಕ ಅಮಾವಾಸ್ಯೆಯಂದು ಭಾರತದ ಪ್ರತಿಯೊಂದು ಮನೆಯಲ್ಲಿ ದೀಪಗಳನ್ನು ಬೆಳಗಿಸಿ ಅಬಾಲ-ವೃದ್ಧರೂ ಸಂತೋಷ ಪಡುತ್ತಾರೆ. ಎಲ್ಲರೂ ತಮ್ಮ ತಮ್ಮ ಮನೆ, ಗುಡಿ-ಗುಂಡಾರಗಳನ್ನು ಶುಚಿ ಗೊಳಿಸಿ ಬಣ್ಣಗಳಿಂದ ಶೃಂಗರಿಸುತ್ತಾರೆ. ದೀಪಾವಳಿ ಭಾರತೀಯರ ದೊಡ್ಡ ಹಬ್ಬ. `ಆವಳಿ’ ಎಂದರೆ ಮಾಲೆ, ಸಾಲು ಎಂದರ್ಥ. ಹಬ್ಬದ ದೃಷ್ಟಿಯಿಂದ ನೋಡಿದರೆ ದೀಪಾವಳಿ, ದೀಪಗಳ ಸಾಲಿನಂತೆ ಹಬ್ಬಗಳ ಸಾಲೂ ಹೌದು. ನೀರು ತುಂಬುವ ಹಬ್ಬದಿಂದ ಆರಂಭವಾಗಿ ನರಕ ಚತುರ್ದಶಿ, ಧನತೇರಸ್, ಬಲಿಪಾಡ್ಯಮಿ, ಭಾವನ ಬಿದಿಗೆ, ಅಕ್ಕನ ತದಿಗೆ, ಪಂಚಮಿಯವರೆಗೆ ಪ್ರತಿದಿನವೂ ಹಬ್ಬ. ವ್ಯಾಪಾರಸ್ಥರು ತಮ್ಮ ಹಳೆ ಖಾತೆಗಳನ್ನು ಮುಕ್ತಾಯ ಮಾಡಿ ಹೊಸ ಖಾತೆಯನ್ನು ಪ್ರಾರಂಭ ಮಾಡುತ್ತಾರೆ. ಧನ ದೇವತೆ `ಲಕ್ಷ್ಮೀ’ ಯನ್ನು ಇದೇ ಸಮಯದಲ್ಲಿ ಆಹ್ವಾನಿಸಿ ಪೂಜಿಸಲಾಗುತ್ತದೆ.

ದೀಪಾವಳಿ ಬೆಳಕಿನ ಹಬ್ಬವಾಗಿದ್ದು, ದೀಪಗಳಿಗೆ ಈ ಹಬ್ಬದಲ್ಲಿ ವಿಶೇಷ ಮಹತ್ವವಿದೆ. ದೀಪದಾನವನ್ನು ಮಾಡುವ ವಾಡಿಕೆ ಈ ಹಬ್ಬದಲ್ಲಿದೆ. ಸ್ಥೂಲ ದೀಪದ ಜೊತೆಗೆ ಆತ್ಮಜೋತಿಯನ್ನು ಬೆಳಗಿಸಿದರೆ ನಮ್ಮ ಜೀವನ ಪರಿಪೂರ್ಣ ವಾಗುತ್ತದೆ. ಪ್ರತಿಯೊಂದು ಹಬ್ಬಕ್ಕೆ ತನ್ನದೇ ಆದ ಹಿನ್ನೆಲೆ ಇದ್ದು, ಆಧ್ಯಾತ್ಮಿಕ ರಹಸ್ಯವನ್ನು ತಿಳಿಸಿಕೊಡುವುದರ ಜೊತೆಗೆ ಅದನ್ನು ತಮ್ಮ ನಿತ್ಯ ಜೀವನದಲ್ಲಿ ಸಹಜವಾಗಿ ಹೇಗೆ ಅಳವಡಿಕೊಳ್ಳಬೇಕು? ಎನ್ನುವುದನ್ನು ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಹೇಳಲಾಗುತ್ತದೆ. ಅಜ್ಞಾನದ ಕತ್ತಲೆಯಿಂದ ಸತ್ಯ ಜ್ಞಾನದ ಬೆಳಕನ್ನು ನಾವು ಪಡೆದರೆ ನಮ್ಮ ಈ ಮಾನವ ಜನ್ಮ ಸಾರ್ಥಕ.

ದೀಪಾವಳಿಯಂದು `ಬಲಿ’ ಚಕ್ರವರ್ತಿ ಮತ್ತು ನರಕಾಸುರನ ಎರಡು ಕಥೆಗಳನ್ನು ಲಾಕ್ಷಣಿಕವಾಗಿ ವರ್ಣನೆ ಮಾಡಲಾಗಿದೆ. ಈಶ್ವರೀಯ ಜ್ಞಾನದ ಪ್ರಕಾರ `ನರಕಾಸುರ’ ಮಾಯೆ ಅಥವಾ ಮನೋವಿಕಾರಗಳ ಪ್ರತೀಕವಾಗಿದ್ದಾನೆ. ಕಾಮ, ಕ್ರೋಧ, ಲೋಭ, ಮೋಹ, ಹಾಗೂ ಅಹಂಕಾರಗಳೆಂಬ ಅಸುರಿ ಗುಣಗಳು ನರಕದ ಬಾಗಿಲುಗಳಾಗಿವೆ. ಈ ವಿಕಾರಗಳನ್ನು ಜಯಿಸುವುದೆಂದರೆ `ಬಲಿ’ ಕೊಡುವುದು ಎಂದು ಹೇಳಲಾಗುತ್ತದೆ. ವಿಶ್ವದ ಇತಿಹಾಸದಲ್ಲಿ ನಾಲ್ಕು ಯುಗಗಳು ಇವೆ. ಸತ್ಯಯುಗ, ತ್ರೇತಾಯುಗ, ದ್ವಾಪರಯುಗ, ಮತ್ತು ಕಲಿಯುಗ. ಈ ಕಲಿಯುಗದ ಅಂತಿಮ ಸಮಯವು ಪಂಚವಿಕಾರ ಮತ್ತು ಅಸುರಿಗುಣಗಳ ಸಾಮ್ರಾಜ್ಯದ ಸಮಯವಾಗಿದೆ. ಪ್ರತಿಯೊಬ್ಬ ನರ-ನಾರಿಯರ ಮನಸ್ಸಿನಲ್ಲಿ ವಿಕಾರಗಳ ರಾಜ್ಯವಿದೆ. ಇದಕ್ಕೆ `ನರಕಾಸುರ” ಅಥವಾ `ಬಲಿಚಕ್ರವರ್ತಿ”ಯ ಅಧಿಪತ್ಯ ಎಂದು ಹೇಳಲಾಗುತ್ತದೆ. ಭಾರತವು ಸತ್ಯಯುಗದಲ್ಲಿ ಸ್ವರ್ಗವಾಗಿತ್ತು. ಅಲ್ಲಿನ ಮನುಷ್ಯರೆಲ್ಲರೂ ದೇವಿ-ದೇವತೆಗಳಾಗಿದ್ದರು. ಅವರೇ ಜನ್ಮ-ಮರಣದ ಚಕ್ರದಲ್ಲಿ ಬರುತ್ತಾ ಈಗ ನರಕದಲ್ಲಿ `ನರಕಾಸುರ’ ಅಥವಾ `ಬಲಿ’ಯ ಅಧೀನರಾಗಿದ್ದಾರೆ. ಆತ್ಮ ಜ್ಞಾನ ಮತ್ತು ನಿರಾಕಾರ ಶಿವನ ಧ್ಯಾನದಿಂದ ನಾವು ಪುನಃ ಬಂಧನ ಮುಕ್ತರಾಗಲು ಸಾಧ್ಯವಿದೆ.

ಆತ್ಮ ಜ್ಞಾನ ಎಂದರೆ ಆತ್ಮದೀಪವನ್ನು ಬೆಳಗಿಸುವುದು. `ನಾನು ಒಂದು ಜ್ಯೋತಿ, ಜಾತಿ ಇಲ್ಲದ ಅತಿಸೂಕ್ಷ್ಮ ಆತ್ಮಜ್ಯೋತಿ. ಶರೀರದ ಹಣೆಯ ಮಧ್ಯದಲ್ಲಿ ಹೊಳೆಯುವ ಚ್ಯೆತನ್ಯ ಜ್ಯೋತಿ, ದೇಹ ಎಂಬ ರಥದ ಸಾರಥಿ ನಾನು ಆತ್ಮ. ದೇಹದ ಮೂಲಕ ಈ ಸೃಷ್ಟಿ ನಾಟಕದಲ್ಲಿ ಪಾತ್ರ ಅಭಿನಯಿಸುವ ಪಾತ್ರಧಾರಿ ನಾನು. ಈ ರೀತಿ ನಿತ್ಯಚಿಂತನೆ ಮಾಡಬೇಕು. ಇದನ್ನೇ ಆತ್ಮಾನುಭೂತಿ ಎಂದು ಕರೆಯಲಾಗುತ್ತದೆ. ಆತ್ಮಜ್ಯೋತಿಯನ್ನು ಬೆಳಗಿಸಲು ಜ್ಞಾನಘೃತ ಬೇಕು. ಎರಡನೆಯದಾಗಿ, ಸರ್ವ ಆತ್ಮರ ತಂದೆಯಾದ ಪರಂಜ್ಯೋತಿಯ ಪರಿಚಯ ಅತಿ ಅವಶ್ಯಕ. ಪರಮಾತ್ಮನು ನಿರಾಕಾರ, ಅಯೋನಿಜ, ಅಭೋಕ್ತ, ಅಜನ್ಮ, ಅವ್ಯಕ್ತ ಅಶರೀರಿ, ಅವಿಭಾಜ್ಯ, ಅಮರ, ಅವಿನಾಶಿ. ಸರ್ವಶ್ರೇಷ್ಠನಾದ ಪರಮಾತ್ಮನೇ ಶಿವ, ಅವನೇ ಅಲ್ಲಾಹ, ಅವನೇ ಈಶ್ವರ, ಅವನೇ ಗಾಡ್, ಅವನೇ ಓಂಕಾರನು. ದೇವನೊಬ್ಬ, ನಾಮ ಹಲವು; ಭಾವವೊಂದೇ, ಭಾಷೆ ಹಲವು; ನಮ್ಮಲ್ಲೇಕೆ ಭೇದವೂ. ನಾನು ಹಿಂದೂ, ನಾನು ಮುಸಲ್ಮಾನ, ನಾನು ಕ್ರೈಸ್ತರೆಂಬ ಭೇದವೇಕೆ? ನಾಳೆ ನಾಡನಾಳುವಂತ ಮಕ್ಕಳಲ್ಲಿ ಜಗಳವೇಕೆ? ಬ್ರಹ್ಮ, ವಿಷ್ಣು, ಬಸವ, ಏಸು, ನಾನಕ ಪೈಗಂಬರೆಲ್ಲ ಒಬ್ಬ ದೇವನ ಮಕ್ಕಳು. ಸರ್ವಧರ್ಮವನ್ನು ತ್ಯಜಿಸಿ, ದೇಹ ಧರ್ಮವನ್ನು ಸುಟ್ಟು, ನಿರಾಕಾರ ಜ್ಯೋತಿರ್ಬಿಂದು ತಂದೆ ಶಿವನ ನೆನೆದಾಗ ಮುಕ್ತಿ ಮತ್ತು ಜೀವನ್ಮುಕ್ತಿಯು ದೊರೆಯುತ್ತದೆ. ಹೀಗೆ ಆತ್ಮಜ್ಯೋತಿಯಾಗಿ ಪರಂಜ್ಯೋತಿಯನ್ನು ನೆನಪು ಮಾಡುವುದೇ ಸಹಜ ರಾಜಯೋಗ.

ದೀಪಾವಳಿಯಂದು ಪ್ರತಿಯೊಬ್ಬರು ತಮ್ಮ ಮನೆಗಳನ್ನು ಸುಣ್ಣ ಬಣ್ಣಗಳಿಂದ ಶುಚಿಗೊಳಿಸಿ, ದೀಪಾಲಂಕಾರವನ್ನು ಮಾಡುತ್ತಾರೆ. ಅದರ ಜೊತೆಗೆ ಮನಸ್ಸಿನಲ್ಲಿ ಇರುವ ಅಮಾವಾಸ್ಯೆಯ ಪ್ರತೀಕವಾದ ಅಜ್ಞಾನ ಅಂಧಕಾರವನ್ನು ದೂರ ಮಾಡಲು ಅಂತರ್‍ಮನದಲ್ಲಿ ಜ್ಞಾನದ ಜ್ಯೋತಿಯನ್ನು ಬೆಳಗಿಸಬೇಕಾಗಿದೆ. ನಿರಾಕಾರನಾಗಿರುವ ಶಿವನ ಸಂಬಂಧದಿಂದ ಅಂದರೆ ರಾಜಯೋಗದಿಂದ ಅನೇಕ ಶಕ್ತಿಗಳು ಮತ್ತು ಗುಣಗಳು ದೊರೆಯುತ್ತವೆ. ಆದ್ದರಿಂದಲೇ ಭಕ್ತರು ಭಗವಂತನ ಮುಂದೆ `ಅಸತೋಮಾ ಸದ್ಗಮಯ ತಮಸೋಮಾ ಜ್ಯೋತಿರ್ಗಮಯ’ ಎಂದು ಹಾಡುತ್ತಾರೆ. ದೀಪ ದಾನದ ಅರ್ಥವು ಜ್ಞಾನದಾನವೇ ಆಗಿದೆ. ದೀಪಾವಳಿಯ ದಿನದಂದು ಹೊಸ ಬಟ್ಟೆಗಳನ್ನು ಧರಿಸುತ್ತಾರೆ, ಸಿಹಿಯನ್ನು ಹಂಚುತ್ತಾರೆ, ಹಳೆ ಖಾತೆಯನ್ನು ಸಮಾಪ್ತಿ ಮಾಡಿ ಹೊಸ ಖಾತೆಯನ್ನು ಪ್ರಾರಂಭಿಸುತ್ತಾರೆ. ಇದರ ಜೊತೆ ಜೊತೆಗೆ ಹೊಸ ಭಾವನೆ, ಮಧುರ ನುಡಿ, ಸ್ನೇಹ, ಪ್ರೀತಿಯ ಅವಶ್ಯಕತೆ ಇದೆ. ಹಳೆ ಕರ್ಮದ ಖಾತೆಯನ್ನು ರಾಜಯೋಗದ ತಪಸ್ಸಿನ ಬಲದಿಂದ ಸಮಾಪ್ತಿ ಮಾಡಬೇಕಾಗಿದೆ. ನಿರಾಕಾರ ಪರಂಜ್ಯೋತಿ ಪರಮಾತ್ಮನು ಪುನಃ ಪವಿತ್ರತೆ, ಸುಖ, ಶಾಂತಿ, ಸಮೃದ್ಧಿಯ `ರಾಮರಾಜ್ಯ’ ಸ್ಥಾಪನೆ ಮಾಡುತ್ತಿರುವ ಸಂಕೇತವೇ ದೀಪಾವಳಿ.
ಶುಭಂ ಕರೋತಿ ಕಲ್ಯಾಣಂ ಆರೋಗ್ಯಂ ಧನ ಸಂಪದ:
ಶತ್ರು ಬುದ್ಧಿ ವಿನಾಶಾಯ ದೀಪಜ್ಯೋತಿರ್ನಮೋಸ್ತುತೆ
ದೀಪ ಜ್ಯೋತಿ: ಪರಬ್ರಹ್ಮ ದೀಪ ಜ್ಯೋತಿರ್ಜನರ್ಧನ:
ದೀಪೋ ಹರತಿ ಪಾಪಾನಿ ಸಂಧ್ಯಾದೀಪ ನಮೋಸ್ತುತೆ

ನಾವು ಹಚ್ಚುವ ದೀಪದ ಬೆಳಕಿನಿಂದ ನಮ್ಮೊಳಗಿನ ಅಜ್ಞಾನ, ಅವಿವೇಕ, ದುಷ್ಟ ಗುಣಗಳು ನಾಶವಾಗಿ ಸದ್ಗುಣಗಳು ಹೆಚ್ಚಲಿ, ಎಲ್ಲೆಡೆ ಶಾಂತಿ, ಸಮೃದ್ಧಿ ನೆಲೆಸಲಿ, ಎಲ್ಲರಿಗೂ ಮಂಗಳವಾಗಲಿ, ದೀಪದಲ್ಲಿ ನಮಗೆ ದೇವರ ರೂಪ ಕಾಣಿಸಲಿ ಎಂದು ಆಶಿಸುತ್ತಾ ದೀಪಾವಳಿಯ ದೀಪವನ್ನು ಹಚ್ಚೋಣ.

ಹಾಗಾದರೆ ಬನ್ನಿ, ನಾವು ಈ ವರ್ಷದ ದೀಪಾವಳಿಯನ್ನು ಆತ್ಮದೀಪವನ್ನು ಬೆಳಗಿಸಿ, ಈಶ್ವರಾನುಭೂತಿಯನ್ನು ಮಾಡುತ್ತಾ ಅನ್ಯರಿಗೂ ಜ್ಷಾನದೀಪವನ್ನು ದಾನ ಮಾಡಿ ಆಚರಿಸೋಣ.

–ವಿಶ್ವಾಸ. ಸೋಹೋನಿ,  ಬ್ರಹ್ಮಾಕುಮಾರಿಸ್, ಮೀಡಿಯಾ ವಿಂಗ್, 9483937106

ಅ.28 ರಂದು ಕೋಟಿ ಕಂಠ ಗಾಯನ ಕಾರ್ಯಕ್ರಮ; ಪೂರ್ವ ಸಿದ್ಧತೆಗೆ ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ ಸೂಚನೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button