ಪ್ರಗತಿವಾಹಿನಿ ಸುದ್ದಿ; ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಣೆಯಾಗಿದ್ದು, ಫೆ.8ಕ್ಕೆ ಮತದಾನ ನಡೆಯಲಿದೆ ಎಂದು ಕೇಂದ್ರ ಚುನಾವಣಾ ಆಯುಕ್ತ ಸುನೀಲ್ ಅರೋರಾ ಮಾಹಿತಿ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದಾ ಅವರು, ದೆಹಲಿಯಲ್ಲಿ ಒಟ್ಟು 70 ವಿಧಾನಸಭಾ ಸ್ಥಾನಗಳಿದ್ದು, ಫೆಬ್ರವರಿ 8 ರಂದು ಮತದಾನ ನಡೆಯಲಿದ್ದರೆ, ಫೆಬ್ರವರಿ 11 ರಂದು ಫಲಿತಾಂಶ ಹೊರಬೀಳಲಿದೆ. ಇಂದಿನಿಂದಲೇ ನೀತಿ ಸಂವಿತೆ ಜಾರಿಯಾಗಿದೆ ಎಂದರು.
ಒಟ್ಟು 1,46,92,136 ಜನರು ಮತದಾನದ ಹಕ್ಕು ಹೊಂದಿದ್ದಾರೆ. 13,750 ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ. ಇದೇ ಮೊದಲ ಬಾರಿಗೆ ದೆಹಲಿ ಚುನಾವಣೆಯಲ್ಲಿ 80 ವರ್ಷ ಮೀರಿದ ಹಿರಿಯ ಮತದಾರರಿಗೆ ಪೋಸ್ಟಲ್ ಬ್ಯಾಲೆಟ್ ಮುಖಾಂತರ ಮತದಾನ ಮಾಡುವ ಅವಕಾಶವನ್ನು ಕಲ್ಪಿಸಲಾಗಿದೆ.
2015ರಲ್ಲಿ ನಡೆದ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಅರವಿಂದ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ (ಎಎಪಿ) ಭರ್ಜರಿ ಜಯ ದಾಖಲಿಸಿತ್ತು. 70 ಕ್ಷೇತ್ರಗಳಲ್ಲಿ ಏಕಸ್ವಾಮ್ಯತೆ ಮೆರೆದಿದ್ದ ಪಕ್ಷ 67 ಸ್ಥಾನಗಳಲ್ಲಿ ಜಯ ಸಾಧಿಸಿತ್ತು. ಬಿಜೆಪಿ ಕೇವಲ ಮೂರು ಸ್ಥಾನಗಳಿಗೆ ತೃಪ್ತಿ ಪಟ್ಟುಕೊಂಡಿತ್ತು. ಎರಡನೆ ಬಾರಿ ದೆಹಲಿ ಗದ್ದುಗೆ ಏರುವ ಉತ್ಸಾಹದಲ್ಲಿ ಕೇಜ್ರಿವಾಲ್ ನೇತೃತ್ವದ ಎಎಪಿ ಇದ್ದರೆ, ಬಿಜೆಪಿ ಈ ಬಾರಿ ಗೆಲ್ಲಲೇಬೇಕೆಂಬ ಪಣಕ್ಕೆ ಬಿದ್ದಿದೆ. ಇನ್ನೊಂದೆಡೆ ಕಾಂಗ್ರೆಸ್ ಕೂಡ ತೀವ್ರ ಪೈಪೋಟಿಗೆ ಸಜ್ಜಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ