
ಪ್ರಗತಿವಾಹಿನಿ ಸುದ್ದಿ: ನ. 10 ರಂದು ನಡೆದ ದೆಹಲಿ ಕೆಂಪು ಕೋಟೆ ಬಾಂಬ್ ಸ್ಫೋಟ ಪ್ರಕರಣದಲ್ಲಿ ಇಲ್ಲಿಯವರೆಗೆ ಸುಮಾರು 14 ಜನ ಸಾವನ್ನಪ್ಪಿದ್ದು, ಆತ್ಮಹತ್ಯಾ ದಾಳಿಕೋರನಿಗೆ ಸಹಾಯ ಮಾಡಿದರೆನ್ನಲಾದ ವ್ಯಕ್ತಿಯೊಬ್ಬನನ್ನು ಎನ್ಐಎ ಅಧಿಕಾರಿಗಳು ಬಂಧಿಸಿದ್ದಾರೆ.
ದೆಹಲಿ ಪೊಲೀಸರಿಂದ ಪ್ರಕರಣದ ತನಿಖೆಯನ್ನು ಎನ್ಐಎಗೆ ವಹಿಸಿ ಪಡೆದ ಬಳಿಕ ಅಮೀರ್ ರಷೀದ್ ಅಲಿಯನ್ನು ದೆಹಲಿಯಲ್ಲಿ ಬಂಧಿಸಲಾಗಿದೆ. ಜನರನ್ನು ಬಲಿತೆಗೆದುಕೊಂಡು ಇನ್ನೂ ಹಲವರನ್ನು ಗಾಯಗಳಿಸಿದ ಸೂಸೈಡ್ ಬಾಂಬರ್ ಡಾ. ಉಮರ್ ಉನ್ ನಬಿಗೆ ಸಹಾಯ ಮಾಡಿದ್ದು ಇದೇ ಆಮಿರ್ ರಷೀದ್ ಅಲಿ ಎನ್ನಲಾಗಿದೆ.
ನವೆಂಬರ್ 10ರಂದು ರೆಡ್ ಫೋರ್ಟ್ ಬಳಿ ಆತ್ಮಹತ್ಯಾ ದಾಳಿಗೆ ಬಳಸಲಾಗಿದ್ದ ಹ್ಯುಂಡೈ ಐ20 ಕಾರು ಇದೇ ಆಮಿರ್ ರಷೀದ್ ಅಲಿ ಹೆಸರಿನಲ್ಲಿ ನೊಂದಾವಣಿ ಆಗಿದೆ. ಬಂಧಿತ ಆರೋಪಿ ಆಮೀರ್ ರಷೀದ್, ಜಮ್ಮು ಮತ್ತು ಕಾಶ್ಮೀರದ ಪಾಂಪೋರೆಯ ಸಂಬೂರ ಎಂಬಲ್ಲಿನ ನಿವಾಸಿ. ಭಯೋತ್ಪಾದನಾ ಕೃತ್ಯಕ್ಕೆ ಡಾ. ಉಮರ್ಗೆ ಈತ ಸಹಾಯ ಮಾಡಿದ್ದಾನೆ. ದೆಹಲಿಗೆ ಬಂದು ಆ ಕಾರನ್ನು ಖರೀದಿಸಿ ಕೊಟ್ಟಿದ್ದಾನೆ.
ಡಾ. ಉಮರ್ ಉನ್ ನಬಿ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮ ಜಿಲ್ಲೆಯ ನಿವಾಸಿಯಾಗಿದ್ದು, ಫರೀದಾಬಾದ್ನ ಅಲ್ ಫಲಾಹ್ ಯೂನಿವರ್ಸಿಟಿಯಲ್ಲಿ ಜನರಲ್ ಮೆಡಿಸಿನ್ ವಿಭಾಗದಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಕೂಡ ಆಗಿದ್ದಾ ಎನ್ನಲಾಗಿದೆ.
ಇದೇ ಡಾ. ನಬಿಗೆ ಸೇರಿದ ಮತ್ತೊಂದು ವಾಹನವನ್ನು ಎನ್ಐಎ ವಶಪಡಿಸಿಕೊಂಡಿದೆ. ಈ ಪ್ರಕರಣದ ತನಿಖೆ ವಹಿಸಿಕೊಂಡಾಗಿನಿಂದ ರಾಷ್ಟ್ರೀಯ ತನಿಖಾ ಏಜೆನ್ಸಿಯು 73 ಸಾಕ್ಷ್ಯಗಳನ್ನು ಪರಿಶೀಲಿಸಿದೆ.
ದೆಹಲಿ, ಜಮ್ಮು ಕಾಶ್ಮೀರ, ಹರ್ಯಾಣ ಮತ್ತು ಉತ್ತರಪ್ರದೇಶ ರಾಜ್ಯಗಳ ಪೊಲೀಸ್ ಇಲಾಖೆಗಳೊಂದಿಗೆ ಸಮನ್ವಯತೆಯಿಂದ ಕೆಲಸ ಮಾಡುತ್ತಾ ಎನ್ಐಎ ಈ ಪ್ರಕರಣದ ತನಿಖೆ ನಡೆಸುತ್ತಿದೆ.
ವಿವಿಧ ಸಾಕ್ಷ್ಯಗಳ ಸುಳಿವನ್ನು ಹಿಡಿದು ಈ ದಾಳಿಯ ಹಿಂದಿನ ದೊಡ್ಡ ಪಿತೂರಿಯನ್ನು ಬೆಳಕಿಗೆ ತರಲು ಪ್ರಯತ್ನಿಸುತ್ತಿದೆ. ನವೆಂಬರ್ 10ರಂದು ಕೆಂಪು ಕೋಟೆಯ ಬಳಿ ಸಂಭವಿಸಿದ ಬಾಂಬ್ ಸ್ಫೋಟವೂ ಇನ್ನೂ ದೊಡ್ಡ ಸಂಚಿನ ಒಂದು ಭಾಗವಾಗಿರುವ ಶಂಕೆ ಇದೆ.



