ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ದೆಹಲಿಯ ನಿಜಾಮುದ್ದೀನ್ ಜಮಾತ್ ಮಸೀದಿಯಲ್ಲಿ ನಡೆದಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ ಕರ್ನಾಟಕದ ಸುಮಾರು 45 ಜನರು ಭಾಗವಹಿಸಿದ್ದರು ಎಂದು ಆರೋಗ್ಯ ಸಚಿವ ಶ್ರೀರಾಮುಲು ತಿಳಿಸಿದ್ದಾರೆ.
ನಿಜಾಮುದ್ದೀನ್ ಪ್ರದೇಶದಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ 2000ಕ್ಕೂ ಹೆಚ್ಚು ಜನರು ಪಾಲ್ಗೊಂಡಿದ್ದರು ಅವರಲ್ಲಿ ತೆಲಂಗಾಣದ 6 ಮಂದಿ ಸೇರಿದಂತೆ ಒಟ್ಟು 10 ಜನ ಕೊರೊನಾ ಸೋಂಕಿಗೆ ಸಾವನ್ನಪ್ಪಿದ್ದಾರೆ. ಈಗಾಗಲೇ ಈ ಸಭೆಯಲ್ಲಿ ಭಾಗವಹಿಸಿದ್ದ 1,034 ಜನರನ್ನು ಕ್ವಾರಂಟೈನ್ನಲ್ಲಿ ಇರಿಸಲಾಗಿದ್ದು, ಅವರಲ್ಲಿ 24 ಜನರಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ದೇಶದಲ್ಲಿ ಸೋಂಕಿನ ಪ್ರಮಾಣ ಹೆಚ್ಚಾಗುವ ಆತಂಕ ಎದುರಾಗಿದೆ.
ಈ ಹಿನ್ನಲೆಯಲ್ಲಿ ಮಾಹಿತಿ ನೀಡಿರುವ ಸಚಿವ ಶ್ರೀರಾಮುಲು ದೆಹಲಿಯ ನಿಜಾಮುದ್ದೀನ್ ಜಮಾತ್ ಮಸೀದಿಯಲ್ಲಿ ಮಾರ್ಚ್ 10 ರಂದು ಧಾರ್ಮಿಕ ಕಾರ್ಯಕ್ರಮ ನಡೆದಿದ್ದು, ಅದರಲ್ಲಿ ಕರ್ನಾಟಕದಿಂದ ಸುಮಾರು 45 ಮಂದಿ ಭಾಗವಹಿಸಿದ್ದರು ಎಂಬ ಮಾಹಿತಿಯಿದೆ. ಶಿರಾದಲ್ಲಿ ಮೃತಪಟ್ಟ ವ್ಯಕ್ತಿಯು ಇವರಲ್ಲೊಬ್ಬರಾಗಿದ್ದರು ಎಂದು ತಿಳಿಸಿದ್ದಾರೆ.
ಪ್ರಾರ್ಥನೆಯಲ್ಲಿ ಭಾಗವಹಿಸಿದವರಿಗೆಲ್ಲಾ ಸೋಂಕು ಹರಡಿರುವ ಸಾಧ್ಯತೆಗಳನ್ನು ತಳ್ಳಿಹಾಕಲಾಗುವುದಿಲ್ಲ. ಹಾಗಾಗಿ ಇವರನ್ನು ಪತ್ತೆ ಮಾಡಿ, ಕ್ವಾರಂಟೈನ್ ಮಾಡುವ ಕಾರ್ಯದಲ್ಲಿ ತೊಡಗಿಸಿಕೊಳ್ಳಲಾಗಿದೆ. ಇವರಲ್ಲಿ ಈಗಾಗಲೇ 13 ವ್ಯಕ್ತಿಗಳನ್ನು ಪತ್ತೆಹಚ್ಚಿ ಪ್ರತ್ಯೇಕಿಸಲ್ಪಟ್ಟ ಕೇಂದ್ರದಲ್ಲಿ ನಿಗಾವಹಿಸಲಾಗಿದೆ.
ನಿಜಾಮುದ್ದೀನ್ ಗೆ ಆಸ್ಟ್ರೇಲಿಯಾ, ಸಿಂಗಪೂರ್, ದುಬೈ, ಸೌದಿ ಅರೇಬಿಯಾ, ಇಂಡೋನೇಷಿಯಾ ಸೇರಿದಂತೆ ಹಲವು ದೇಶಗಳಿಂದ ಪ್ರವಾಸಿಗರು ಆಗಮಿಸಿದ್ದರು ಎಂಬ ಮಾಹಿತಿ ದೊರೆತಿದೆ. ಉಳಿದ ವ್ಯಕ್ತಿಗಳನ್ನು ಆದಷ್ಟು ಬೇಗ ಗುರುತಿಸಿ, ಅವರನ್ನು ಕ್ವಾರಂಟೈನ್ ಮಾಡಲು ಬೇಕಾದ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡಿದ್ದ 10 ಜನರು ಕೊರೊನಾಗೆ ಸಾವು
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ