ತುಳು ಬೆನ್ನಲ್ಲೇ ಉರ್ದುವಿಗೂ ಅಧಿಕೃತ ಭಾಷಾ ಸ್ಥಾನಮಾನಕ್ಕೆ ಬೇಡಿಕೆ
Demand for official language status for Urdu follows Tulu

ಪ್ರಗತಿವಾಹಿನಿ ಸುದ್ದಿ: ಕರ್ನಾಟಕದಲ್ಲಿ ತುಳು ಭಾಷೆಗೆ ಅಧಿಕೃತ ಭಾಷಾ ಸ್ಥಾನಮಾನ ನೀಡಿರುವ ಬೆನ್ನಲ್ಲೇ ಉರ್ದು ಭಾಷೆಗೂ ಅಧಿಕೃತ ಭಾಷಾ ಸ್ಥಾನಮಾನ ನೀಡಬೇಕು ಎಂಬ ಬೇಡಿಕೆ ಕೇಳಿಬಂದಿದೆ. ಎಸ್‌ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಅವರು ಈ ಸಂಬಂಧ ಮುಖ್ಯಮಂತ್ರಿ ಅವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.
ಕರ್ನಾಟಕದಲ್ಲಿ ಉರ್ದು ಭಾಷೆಗೂ ಅಧಿಕೃತ ಭಾಷಾ ಸ್ಥಾನಮಾನ ನೀಡುವಂತೆ ಅಬ್ದುಲ್ ಮಜೀದ್ ಅವರು ಮನವಿ ಮಾಡಿದ್ದಾರೆ. ರಾಜ್ಯದಲ್ಲಿ 4,236 ಉರ್ದು ಮಾಧ್ಯಮ ಶಾಲೆಗಳಿದ್ದು, ಉರ್ದು ಭಾಷೆಯನ್ನು ಬಳಸುವ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರ ಅಗತ್ಯಗಳನ್ನು ಪರಿಗಣಿಸಿ ತೆಲಂಗಾಣ ಮಾದರಿಯಲ್ಲಿ ಉರ್ದುವಿಗೆ ಅಧಿಕೃತ ಸ್ಥಾನಮಾನ ನೀಡಬೇಕು ಎಂದು ಅವರು ಪತ್ರದಲ್ಲಿ ಒತ್ತಾಯಿಸಿದ್ದಾರೆ.
ಉರ್ದುವಿಗೆ ಅಧಿಕೃತ ಸ್ಥಾನಮಾನ ನೀಡುವುದರಿಂದ ಕನ್ನಡ ಭಾಷೆಯ ಸ್ಥಾನಮಾನಕ್ಕೆ ಯಾವುದೇ ಧಕ್ಕೆಯಾಗುವುದಿಲ್ಲ ಎಂದಿರುವ ಅಬ್ದುಲ್ ಮಜೀದ್, ಸರ್ಕಾರಿ ಕಚೇರಿಗಳಲ್ಲಿ ಉರ್ದು ಭಾಷೆಯಲ್ಲೂ ಅರ್ಜಿ ಸಲ್ಲಿಸಲು ಹಾಗೂ ಅಗತ್ಯ ಮಾಹಿತಿಯನ್ನು ಪಡೆಯಲು ಅವಕಾಶ ಕಲ್ಪಿಸಬೇಕು ಎಂದು ಅವರು ಬೇಡಿಕೆ ಇಟ್ಟಿದ್ದಾರೆ.
ರಾಜ್ಯದ ಉರ್ದು ಮಾಧ್ಯಮ ಶಾಲೆಗಳಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ಶೀಘ್ರ ಭರ್ತಿ ಮಾಡಬೇಕು ಎಂದು ಪತ್ರದಲ್ಲಿ ಆಗ್ರಹಿಸಲಾಗಿದೆ. ಇದರಿಂದ ಉರ್ದು ಮಾಧ್ಯಮದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಶಿಕ್ಷಣದ ಗುಣಮಟ್ಟ ಸುಧಾರಿಸಲು ಸಹಕಾರಿಯಾಗಲಿದೆ ಎಂದು ಅವರು ಹೇಳಿದ್ದಾರೆ.
ಸರ್ಕಾರಿ ನೇಮಕಾತಿ ಹಾಗೂ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಿಸಿದ ಅಧಿಸೂಚನೆಗಳು ಮತ್ತು ಮಾಹಿತಿಯನ್ನು ಉರ್ದು ಭಾಷೆಯಲ್ಲೂ ಲಭ್ಯವಾಗುವಂತೆ ಮಾಡಬೇಕು ಎಂದು ಅಬ್ದುಲ್ ಮಜೀದ್ ಒತ್ತಾಯಿಸಿದ್ದಾರೆ. ಉರ್ದು ಭಾಷಿಕರಿಗೆ ಆಡಳಿತಾತ್ಮಕ ಸೇವೆಗಳು ಹಾಗೂ ಸರ್ಕಾರಿ ಮಾಹಿತಿಯನ್ನು ಸುಲಭವಾಗಿ ತಲುಪಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಬೇಕು ಎಂದು ಅವರು ಮುಖ್ಯಮಂತ್ರಿ ಅವರಿಗೆ ಮನವಿ ಮಾಡಿದ್ದಾರೆ.



