Kannada NewsKarnataka NewsPolitics

*ಗದಗ ಬರಪಟ್ಟಿಗೆ ಸೇರಿಸದಿದ್ದಕ್ಕೆ ಹೆಚ್.ಕೆ. ಪಾಟೀಲ್ ಅಸಮಾಧಾನ: ರಾಜಿನಾಮೆ ಬೆದರಿಕೆ*

H.K. Patil expresses displeasure over Gadag's exclusion from the drought list: Writes to CM, levels serious allegations against officials!

ಪ್ರಗತಿವಾಹಿನಿ ಸುದ್ದಿ : ಬರಪೀಡಿತ ತಾಲೂಕುಗಳ ಘೋಷಣೆ ವಿಚಾರದಲ್ಲಿ ಕಾಂಗ್ರೆಸ್ ಶಾಸಕರ ಅಸಮಾಧಾನ ಮುಂದುವರಿದಿದ್ದು, ಇದೀಗ ಹಿರಿಯ ಶಾಸಕ ಹೆಚ್.ಕೆ. ಪಾಟೀಲ್ ಅವರು ಗದಗ ತಾಲೂಕನ್ನು ಬರಪಟ್ಟಿಗೆ ಸೇರಿಸದಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಪತ್ರ ಬರೆದಿರುವ ಅವರು, ಬರ ಘೋಷಣೆಯ ಮಾರ್ಗಸೂಚಿಗಳನ್ನು ಮರುಪರಿಶೀಲಿಸಿ ರೈತರಿಗೆ ನ್ಯಾಯ ಒದಗಿಸುವಂತೆ ಮನವಿ ಮಾಡಿದ್ದಾರೆ.

Home add -Advt

ಈ ಮಧ್ಯೆ ನಿನ್ನೆ ಗದಗದಲ್ಲಿ ರೈತರನ್ನು ಉದ್ಧೇಶಿಸಿ ಮಾತನಾಡಿ, ಅಕ್ಟೋಬರ್ 10ರೊಳಗೆ ಬರ ಘೋಷಿಸದಿದ್ದರೆ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡುವುದಾಗಿ ತಿಳಿಸಿದ್ದಾರೆ.

ಸಿಎಂ ಗೆ ಬರೆದ ತಮ್ಮ ಪತ್ರದಲ್ಲಿ ಉತ್ತರ ಕರ್ನಾಟಕದ ಕಿತ್ತೂರು ಕರ್ನಾಟಕ ಪ್ರದೇಶವು ಈ ವರ್ಷ ತೀವ್ರ ಬರ ಪರಿಸ್ಥಿತಿ ಎದುರಿಸುತ್ತಿದೆ. ಈ ಭಾಗದಲ್ಲಿ ಶೇ.40ರಿಂದ 60ರವರೆಗೆ ಮಳೆ ಕೊರತೆಯಾಗಿದ್ದು, ಇದರಿಂದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಉತ್ತರ ಕರ್ನಾಟಕದ ಬಹುತೇಕ ಪ್ರದೇಶಗಳಲ್ಲಿ ಕರಿಮಣ್ಣು ಅಥವಾ ಎರೆಭೂಮಿ ಇರುವುದರಿಂದ ಒಂದೇ ದಿನ ಅತಿಯಾದ ಮಳೆಯಾದರೂ ಮಣ್ಣಿನ ನೀರು ಹೀರಿಕೊಳ್ಳುವ ಸಾಮರ್ಥ್ಯ ಕಡಿಮೆಯಾಗುತ್ತದೆ. ಪರಿಣಾಮ ಮಳೆನೀರು ಮೇಲ್ಮೈಯಲ್ಲಿ ಹರಿದುಹೋಗಿ, ಮಣ್ಣಿನಲ್ಲಿ ಅಗತ್ಯ ತೇವಾಂಶ ಸಂಗ್ರಹವಾಗುವುದಿಲ್ಲ. ಹೀಗಾಗಿ ಈ ಭಾಗದ ವಾಸ್ತವ ಪರಿಸ್ಥಿತಿಯನ್ನು ಪರಿಗಣಿಸಿ ಬರ ಘೋಷಣೆಯ ಮಾರ್ಗಸೂಚಿಗಳನ್ನು ಮರುಪರಿಶೀಲಿಸುವ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ.

ಅಸಮರ್ಪಕ ಮಳೆಮಾಪನ ಕೇಂದ್ರಗಳ ಮಾಹಿತಿಯ ಆಧಾರದ ಮೇಲೆ ಬೆಂಗಳೂರಿನ ಅಧಿಕಾರಿಗಳು ಲೆಕ್ಕಾಚಾರ ನಡೆಸುತ್ತಿರುವ ಬಗ್ಗೆ ಹೆಚ್.ಕೆ. ಪಾಟೀಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬೆಳೆ ವಿಮೆಗೆ ಸಂಬಂಧಿಸಿದಂತೆ ಸಾಂಖ್ಯಿಕ ಇಲಾಖೆಯ ಅಧಿಕಾರಿಗಳು ನೀಡಿರುವ ನಿರ್ದೇಶನಗಳನ್ನು ಗೌರವಿಸುತ್ತಿಲ್ಲ ಎಂದು ಅವರು ಆರೋಪಿಸಿದ್ದಾರೆ.

ಸಭೆಗಳಲ್ಲಿ ಕೈಗೊಂಡ ನಿರ್ಣಯಗಳು ಹಾಗೂ ವಾಸ್ತವ ಪರಿಸ್ಥಿತಿಗೆ ಬದಲಾಗಿ ಅಧಿಕಾರಿಗಳು ತಮಗೆ ಅನುಕೂಲವಾದ ಮಾನದಂಡಗಳನ್ನು ಬಳಸುತ್ತಿದ್ದಾರೆ. ರೈತರ ಪರಿಸ್ಥಿತಿಯ ಬಗ್ಗೆ ನೈಜ ಕಾಳಜಿ ಇಲ್ಲದ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಸಭೆಗಳಲ್ಲಿ ತೆಗೆದುಕೊಂಡ ನಿರ್ಣಯಗಳನ್ನು ಧಿಕ್ಕರಿಸಲಾಗುತ್ತಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯ ನಿರ್ಣಯಗಳನ್ನು ಅಧಿಕಾರಿಗಳು ಅಲಕ್ಷಿಸಿದ್ದಾರೆ ಎಂದು ಹೆಚ್.ಕೆ. ಪಾಟೀಲ್ ಆರೋಪಿಸಿದ್ದಾರೆ. ಮುಖ್ಯಮಂತ್ರಿಗಳ ನೇತೃತ್ವದಲ್ಲಿ ನಡೆದ ಸಭೆಯ ಚರ್ಚೆ ಹಾಗೂ ನಿರ್ಣಯಗಳನ್ನೂ ಪರಿಗಣಿಸದೆ ಅಧಿಕಾರಿಗಳು ತಮ್ಮದೇ ಆದ ರೀತಿಯಲ್ಲಿ ಆದೇಶಗಳನ್ನು ನೀಡಿದ್ದಾರೆ ಎಂದು ಹೇಳಿದ್ದಾರೆ.

ಜಿಲ್ಲೆಯಿಂದ ಕಳುಹಿಸಲಾದ ಪತ್ರಗಳು ಹಾಗೂ ಮಾಹಿತಿಗಳನ್ನು ಹಿರಿಯ ಅಧಿಕಾರಿಗಳು ಹತ್ತಾರು ದಿನಗಳವರೆಗೆ ಗಮನಿಸಿಲ್ಲ. ಸಾಂಖ್ಯಿಕ ಇಲಾಖೆಯವರು ಅಂಚೆ ಮೂಲಕ ಬೆಂಗಳೂರಿನ ಕಚೇರಿಗಳಿಗೆ ಮಾಹಿತಿ ಕಳುಹಿಸುತ್ತಿದ್ದು, ಅದು ಸುಮಾರು 10 ದಿನಗಳ ಬಳಿಕ ಸಂಬಂಧಪಟ್ಟ ಸ್ಥಳೀಯ ಕಚೇರಿಗಳಿಗೆ ತಲುಪುತ್ತಿದೆ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.

ಕಿತ್ತೂರು ಕರ್ನಾಟಕ ಭಾಗದ 73 ತಾಲೂಕುಗಳ ಪೈಕಿ 27 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸದಿರುವುದು ವಿಷಾದನೀಯ ಎಂದು ಹೆಚ್.ಕೆ. ಪಾಟೀಲ್ ಹೇಳಿದ್ದಾರೆ. ಉತ್ತರ ಕರ್ನಾಟಕದ ಈ ತಾಲೂಕುಗಳಲ್ಲೂ ಮಳೆಯ ಕೊರತೆ ಹೆಚ್ಚಾಗಿದ್ದು, ವಾಸ್ತವ ಪರಿಸ್ಥಿತಿಯನ್ನು ಪರಿಗಣಿಸಿ ಅವುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಿಸಬೇಕು ಎಂದು ಆಗ್ರಹಿಸಿದ್ದಾರೆ.

ಪ್ರಾಥಮಿಕ ವರದಿಯ ಪ್ರಕಾರ ಗದಗ ತಾಲೂಕಿನಲ್ಲಿ ಅಂದಾಜು 68,912 ಹೆಕ್ಟೇರ್ ಪ್ರದೇಶದಲ್ಲಿ ಶೇ.75ಕ್ಕಿಂತ ಹೆಚ್ಚಿನ ಬೆಳೆನಷ್ಟ ಉಂಟಾಗಿದೆ ಎಂದು ಹೆಚ್.ಕೆ. ಪಾಟೀಲ್ ಪತ್ರದಲ್ಲಿ ತಿಳಿಸಿದ್ದಾರೆ.

ಮೇ ತಿಂಗಳಲ್ಲಿ ಉತ್ತಮ ಮಳೆಯಾಗಿದ್ದರಿಂದ ಮಣ್ಣಿನಲ್ಲಿ ತೇವಾಂಶವಿತ್ತು. ಹೀಗಾಗಿ ಅಲ್ಪಾವಧಿ ಬೆಳೆಯಾದ ಹೆಸರು ಬೆಳೆಯನ್ನು ಹೆಚ್ಚಿನ ಪ್ರದೇಶದಲ್ಲಿ ವಾಡಿಕೆಯಂತೆ ಬಿತ್ತನೆ ಮಾಡಲಾಗಿತ್ತು. ಆದರೆ ಜೂನ್ ತಿಂಗಳ 2, 3 ಮತ್ತು 4ನೇ ವಾರಗಳಲ್ಲಿ ವಾಡಿಕೆಯಂತೆ ಮಳೆಯಾಗದ ಪರಿಣಾಮ ಹೆಸರು ಬೆಳೆಯ ಮೊಳಕೆ ಪ್ರಮಾಣ ಕಡಿಮೆಯಾಯಿತು.

ಹೂ ಬಿಡುವ ಹಾಗೂ ಕಾಯಿ ಕಟ್ಟುವ ಹಂತದಲ್ಲಿ ತೇವಾಂಶದ ಕೊರತೆಯಿಂದ ಬೆಳೆ ಬಲವಂತವಾಗಿ ಮಾಗಿ ಸಣ್ಣ ಕಾಳುಗಳಾಗಿ ಪರಿಣಮಿಸಿದೆ. ಇದರಿಂದ ಹೆಸರು ಬೆಳೆಯ ಇಳುವರಿ ಅಂದಾಜು ಶೇ.90ರಷ್ಟು ಕಡಿಮೆಯಾಗಿದೆ ಎಂದು ಅವರು ವಿವರಿಸಿದ್ದಾರೆ.

ಜೂನ್ 2ನೇ ವಾರದ ಬಳಿಕ ಬಿತ್ತನೆಯಾದ ಶೇಂಗಾ, ಗೋವಿನಜೋಳ, ಹತ್ತಿ, ಮೆಣಸಿನಕಾಯಿ ಹಾಗೂ ಈರುಳ್ಳಿ ಬೆಳೆಗಳ ಮೇಲೂ ಜುಲೈ ಮತ್ತು ಆಗಸ್ಟ್ ತಿಂಗಳ ಮಳೆ ಕೊರತೆ ಪರಿಣಾಮ ಬೀರಿದೆ. ಬೆಳೆ ಸಾಂದ್ರತೆ ಗಣನೀಯವಾಗಿ ಕಡಿಮೆಯಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಶೇಂಗಾದ ಹೂ ಬಿಡುವ ಮತ್ತು ಕಾಯಿ ಬಿಡುವ ಹಂತ, ಗೋವಿನಜೋಳದ ತೆನೆ ಹೊರಹೊಮ್ಮುವ ಹಾಗೂ ಕಾಳು ಕಟ್ಟುವ ಹಂತ, ಹತ್ತಿ, ಈರುಳ್ಳಿ ಮತ್ತು ಮೆಣಸಿನಕಾಯಿ ಬೆಳವಣಿಗೆ ಹಂತಗಳಲ್ಲಿ ತೀವ್ರ ತೇವಾಂಶ ಕೊರತೆ ಉಂಟಾಗಿದೆ. ಇದರಿಂದ ಈ ಬೆಳೆಗಳಲ್ಲೂ ಶೇ.85ಕ್ಕಿಂತ ಹೆಚ್ಚಿನ ಇಳುವರಿ ನಷ್ಟವಾಗುವ ಸಾಧ್ಯತೆ ಇದೆ ಎಂದು ಹೆಚ್.ಕೆ. ಪಾಟೀಲ್ ತಿಳಿಸಿದ್ದಾರೆ.

ರೈತರ ವಾಸ್ತವ ಪರಿಸ್ಥಿತಿಯನ್ನು ಪರಿಗಣಿಸಿ ಗದಗ ಸೇರಿದಂತೆ ಮಳೆ ಕೊರತೆ ಎದುರಿಸುತ್ತಿರುವ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿ, ರೈತರಿಗೆ ಅಗತ್ಯ ಪರಿಹಾರ ಒದಗಿಸಬೇಕು ಎಂದು ಅವರು ಮುಖ್ಯಮಂತ್ರಿಗಳನ್ನು ಒತ್ತಾಯಿಸಿದ್ದಾರೆ.

Related Articles

Back to top button