ಪ್ರಗತಿವಾಹಿನಿ ಸುದ್ದಿ; ಶಿರಸಿ: ಕೃಷಿ ಕೂಲಿ ಅಭಾವ, ಹೆಚ್ಚುತ್ತಿರುವ ಕೊಟ್ಟಿಗೆ ಗೊಬ್ಬರದ ದರ ಮತ್ತು ಮಣ್ಣಿನ ಪೋಷಕಾಂಶಗಳ ಸಂರಕ್ಷಣೆಯ ಅಗತ್ಯ ಈ ಹಿನ್ನೆಲೆಯಲ್ಲಿ ಬಯೋಚಾರ್ ಕುರಿತ ಹೆಚ್ಚಿನ ಮಾಹಿತಿ ರೈತರಿಗೆ ತಲುಪಿಸುವ ಅಗತ್ಯವಿದೆ. ಸಂಘಟಿತ ಪ್ರಯತ್ನದ ಮೂಲಕ ಜೈವಿಕ ಇದ್ದಿಲಿನ ಪ್ರಯೋಜನವನ್ನು ಹೆಚ್ಚಿನ ರೈತರು ಪಡೆಯುವಂತಾಗಲಿ ಎಂದು ಜಿ ಎನ್ ಹೆಗಡೆ ಮುರೇಗಾರ್ ತಿಳಿಸಿದರು. ಅವರು ವಾನಳ್ಳಿಯಲ್ಲಿ ರಿಯಾಕ್ಟರ್ ಬಳಸಿ ಬಯೋಚಾರ್ ಉತ್ಪಾದಿಸುವ ಪ್ರಾತ್ಯಕ್ಷಿಕೆ ಮತ್ತು ನಂತರ ನಡೆದ ಕಾರ್ಯಾಗಾರದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ಪರಮೇಶ್ವರ ಹೆಗಡೆ ಕಾಗೇರಿಯವರು ಮಾತನಾಡಿ ಕೃಷಿ ತ್ಯಾಜ್ಯ ಮತ್ತಿತರ ಕಚ್ಚಾ ವಸ್ತುಗಳಿಂದ ಬಯೋಚಾರ್‌ನ ಉತ್ಪಾದನ ವೆಚ್ಚವನ್ನು ಕಡಿತಮಾಡುವುದರ ಜೊತೆಗೆ ಇನ್ನಷ್ಟು ಆಧುನಿಕ ತಂತ್ರಜ್ಞಾನದಿಂದ ರೈತಸ್ನೇಹಿಯಾಗಿಸಿದರೆ ಪ್ರಯೋಜನಕಾರಿಯೆಂದು ಅಭಿಪ್ರಾಯಪಟ್ಟರು.
ನರಸಿಂಹ ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿ ಕರ್ನಾಟಕದಲ್ಲಿ 58 ಲಕ್ಷ ಟನ್ ಗಳಷ್ಟು ಕೃಷಿ ತ್ಯಾಜ್ವನ್ನು ಪ್ರತಿ ವರ್ಷ ಸುಡಲಾಗುತ್ತದೆ. ಅದನ್ನೇ ಮಣ್ಣಿನಲ್ಲಿ ಸಾವಯವ ಇಂಗಾಲದ ಪ್ರಮಾಣವನ್ನು ಹೆಚ್ಚಿಸುವ ಆಮ್ಲಜನಕ ರಹಿತ ಸ್ಥಿತಿಯಲಿ ದಹಿಸುವ ಕ್ರಿಯೆಯಿಂದ (ಪೈರೋಲಿಸಿಸ್) ಬಯೋಚಾರ್ ರೂಪಕ್ಕೆ ಪರಿವರ್ತಿಸಿದಲ್ಲಿ ದ್ವಿಗುಣ ಲಾಭ ಪಡೆಯಲು ಸಾಧ್ಯ ಎಂದು ತಿಳಿಸಿದರು. ಆಮ್ಲೀಯ ಮಣ್ಣಿನ ಸಮಸ್ಯೆ ನಿವಾರಿಸುವ ಗುಣ, ಗೊಬ್ಬರ ಬಳಕೆಯಲ್ಲಿ ದಕ್ಷತೆ, ಮಣ್ಣಿನ ತೇವಾಂಶ ಉಳಿಸಿಕೊಳ್ಳುವಿಕೆ, ಸಾರಜನಕವನ್ನು ನೆಲೆಗೊಳಿಸುವ ವಿಧಾನಗಳಿಂದ ಹೆಚ್ಚಿನ ಇಳುವರಿ ಸಾಧ್ಯ ಎಂದರು. ಇದಲ್ಲದೇ ಜಾಗತಿಕ ಹವಾಮಾನ ವೈಪರೀತ್ಯ ತಡೆಗೂ ಸಹ ಕೊಡುಗೆ ನೀಡಿದಂತಾಗುವು ಎಂದರು.
ಬಯೋಚಾರ್‌ಅನ್ನು ಉತ್ಪಾದಿಸಿ ತಮ್ಮ ತೋಟಕ್ಕೆ ಒದಗಿಸುತ್ತಿರುವ ಅನಂತ ಹೆಗಡೆ ನೆಲ್ಲಳ್ಳೀಮಠ ಈ ಕುರಿತು ಹೆಚ್ಚಿನ ಮಾಹಿತಿ ನೀಡಿ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು.
ಬೆಳಗಾವಿಯ ಕೃಷಿ ವಿಜ್ಞಾನಿ ಡಾ. ಮಲ್ಲಿಕಾರ್ಜುನ ವಿವಿಧ ರೈತೋತ್ಪಾದಕ ಕಂಪನಿಗಳು ಜೊತೆ ಸೇರಿ ಬಯೋಚಾರ್ ಮತ್ತು ಸಕ್ರಿಯ ಇದ್ದಿಲನ್ನು ರೈತರು ಬಳಸುವಂತೆ ಮತ್ತು ಮಾರಾಟ ಮಾಡಿ ಲಾಭ ಪಡೆಯುವ ಅಗತ್ಯತೆಯನ್ನು ಪ್ರತಿಪಾದಿಸಿದರು.
ಮಂಜುನಾಥ್ ಆರೇಕಟ್ಟಾ ಸ್ವಾಗತಿಸಿ ವಂದನಾರ್ಪಣೆ ನಡೆಸಿಕೊಟ್ಟರು. ಗಣಪತಿ ಬೆಳ್ಳೆಕೇರಿ, ಪದ್ಮನಾಭ, ವಿನಾಯಕ, ಆನಂದ, ಪರ್ಣ ಪಶ್ಚಿಮ ಘಟ್ಟ ರೈತೋತ್ಪಾದಕ ಕಂಪನಿ ಹಾಗೂ ಬೆಳಗಾವಿಯ ರೈತೋತ್ಪಾದಕ ಕಂಪನಿಯ ನಿರ್ದೇಶಕರುಗಳು, ಮೆಣಸಿ ಸಹಕಾರಿ ಸಂಘದ ನಿರ್ದೇಶಕರು, ಗ್ರಾಮ ಅರಣ್ಯ ಸಮಿತಿಯ ಸದಸ್ಯರು ಮತ್ತು ರೈತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕಾರ್ಯಕ್ರಮವನ್ನು ಸ್ನೇಹಕುಂಜ ಕಾಸರಕೋಡ, ಮೆಣಸಿ ಸೇವಾ ಸಹಕಾರಿ ಸಂಘ ಮತ್ತು ಪರ್ಣ ಪಶ್ಚಿಮ ಘಟ್ಟ ರೈತೋತ್ಪಾದಕ ಕಂಪನಿಗಳು ಸಂಯುಕ್ತವಾಗಿ ಆಯೋಜಿಸಿದ್ದವು.
ಮಠಾಧೀಶರ ಸಂಗದಿಂದ ಮನಸ್ಸಿಗೆ ನೆಮ್ಮದಿ, ಜೀವನ ಪಾವನ – ಚನ್ನರಾಜ ಹಟ್ಟಿಹೊಳಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ