
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ನಾವು ಎಲ್ಲರೂ ಪಣತೊಟ್ಟು ನಮ್ಮಲ್ಲಿ ಇರುವ ಆದಾಯ ಸೋರಿಕೆಯನ್ನು ತಡೆದು ಸಾರಿಗೆ ಇಲಾಖೆಯನ್ನು ಲಾಭದಾಯಕವಾಗಿ ಮುನ್ನೆಡೆಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಉಪಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವರಾದ ಲಕ್ಷ್ಮಣ ಸವದಿ ಅವರು ಹೇಳಿದರು.

ದೇಶದ ಬಹುತೇಕ ಕಡೆಗಳಲ್ಲಿ ಅಪಘಾತವಾಗಿ ಸಾಕಷ್ಟು ಜನ ಪ್ರಾಣಹಾನಿ ಆಗಿರುವದನ್ನು ಕಾಣುತ್ತೇವೆ. ಖಾಸಗಿ ಚಾಲಕರು ಮತ್ತು ನಮ್ಮ ಸಾರಿಗೆ ಚಾಲಕರಿಗೆ ಹೋಲಿಸಿದರೆ ಸಾಕಷ್ಟು ವ್ಯತ್ಯಾಸಗಳಿವೆ.
ಮನುಷ್ಯರಾಗಿ ನಾವು ಮೂರು ಸಂಗತಿಗಳನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು, ಅವುಗಳು ಹುಟ್ಟು, ಬದಕು, ಸಾವಿನ ಕಲ್ಪನೆಯನ್ನು ತಿಳಿದುಕೊಳ್ಳಬೇಕು. ಚಾಲಕರು ಪ್ರಯಾಣಿಕರಿಗೆ ಉತ್ತಮ ಸೇವೆ ನೀಡಬೇಕು. ಯಾರಿಂದ ಯಾವ ಕೆಲಸ ಮಾಡಲು ಸಾಧ್ಯವಾಗುತ್ತದೆಯೋ ಅವರಿಂದ ಅದೇ ಕೆಲಸ ಮಾಡಿಸಬೇಕು ಎಂದು ಅಭಿಪ್ರಾಯಪಟ್ಟರು.

ಇಲಾಖೆಯಲ್ಲಿ ಸುಮಾರು ೩ ಸಾವಿರ ಕೋಟಿ ಹಾನಿಯಾಗಿದೆ ಹಾಗಾಗಿ ಆ ಹಾನಿಯನ್ನು ಭರಿಸುವ ನಿಟ್ಟಿನಲ್ಲಿ ಕೆಲಸ ಮಾಡೋಣ. ಇಲಾಖೆಯಲ್ಲಿ ಆಗುತ್ತಿರುವ ಸೋರಿಕೆಯನ್ನು ತಡೆಯಲು ಅಧಿಕಾರಿಗಳು ಜಾಗೃತರಾಗಿ ಕೆಲಸ ಮಾಡಬೇಕು ಎಂದು ತಿಳಿಸಿದರು
ಮೇಲಾಧಿಕಾರಿಗಳು ಚಾಲಕರಿಗೆ ಮತ್ತು ನಿರ್ವಾಹಕರಿಗೆ ತೊಂದರೆ ಕೊಟ್ಟರೆ ನೇರವಾಗಿ ನಮ್ಮನ್ನು ಸಂಪರ್ಕ ಮಾಡಿ ನಾವು ನಿಮ್ಮ ಜತೆ ಇದ್ದೇವೆ. ಶಾಸಕರು ಇಟ್ಟಿರುವ ಬೇಡಿಕೆಗಳನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ.
ದೇಶದಲ್ಲಿ ಕಾರ್ನಾಟಕ ಸಾರಿಗೆಗೆ ದೊಡ್ಡ ಹಿರಿಮೆ ಇದೆ. ಆ ಹಿರಿಮೆಯನ್ನು ಹಾಗೆ ಉಳಿಸಿಕೊಂಡು ಹೊಗಬೇಕು ಎಂದರು.
ವರ್ಗಾವಣೆ ಬಯಸುವರಿಗೆ ಕೌನ್ಸೆಲಿಂಗ್ ಮೂಲಕ ಸಮಸ್ಯೆ ಪರಿಹರಿಸಲು ಹೊಸ ಕಾನೂನು ತರಲು ಪ್ರಯತ್ನ ಮಾಡುತ್ತೇವೆ ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದರು.

ಯಾರು ಸುರಕ್ಷಿತವಾಗಿ ಸೇವೆ ಸಲ್ಲಿಸುತ್ತಾರೆ ಅವರಿಗೆ ಬಹುಮಾನ ನೀಡುವ ಕೆಲಸ ಮಾಡುತ್ತಿದ್ದೇವೆ. ಎಲ್ಲರು ಸರಿಯಾದ ಸಮಯಕ್ಕೆ ಬಸ್ ಸೌಲಭ್ಯ ನೀಡಲು ಪ್ರಯತ್ನ ಮಾಡಿ. ದೇಶದ ಯಾವದೇ ರಾಜ್ಯಕ್ಕೆ ಹೋದರೂ ಕರ್ನಾಟಕದಂದಹ ಸಾರಿಗೆ ವ್ಯವಸ್ಥೆ ಎಲ್ಲಿಯೂ ಸಿಗಲ್ಲ. ಆ ನಿಟ್ಟಿನಲ್ಲಿ ಕೇಂದ್ರ ಸರ್ಕಾರದಿಂದ ಅನೇಕ ಪ್ರಶಸ್ತಿಗಳನ್ನು ಕರ್ನಾಟಕ ಸಾರಿಗೆ ವ್ಯವಸ್ಥೆ ಪಡೆದುಕೊಂಡಿದೆ ಎಂದು ಕೇಂದ್ರ ಸಚಿವ ಸುರೇಶ್ ಅಂಗಡಿ ತಿಳಿಸಿದರು.

ಸವದತ್ತಿ ಶಾಸಕ ಆನಂದ ಮಾಮನಿ ಅವರು ಮಾತನಾಡಿ, ಎಲ್ಲಾ ವರ್ಗದ ಜನರಿಗೆ ಸಾರಿಗೆ ಸೌಲಭ್ಯ ಮುಖ್ಯವಾಗಿದೆ. ಬಹುತೇಕ ಕಡೆಗಳಲ್ಲಿ ಸಾರಿಗೆಗೆ ಸಂಬಂಧಿಸಿದ ಕಾಮಗಾರಿಗಳು ಪ್ರಗತಿಯಲ್ಲಿದೆ. ಸವದತ್ತಿಯಲ್ಲಿ ಕೂಡ ಹೊಸ ಬಸ್ ನಿಲ್ದಾಣ ಕಾಮಾಗಾರಿಗೆ ಶಂಕುಸ್ಥಾಪನೆ ಮಾಡಲಾಗಿದೆ ಎಂದರು.
ಕಿತ್ತೂರ ಶಾಸಕ ಮಹಾಂತೇಶ ದೊಡಗೌಡ್ರ ಮಾತನಾಡಿ, ಮುಂಬರುವ ಬಜೆಟ್ಟಿನಲ್ಲಿ ದಕ್ಷಿಣ ಭಾರತಕ್ಕೆ ಹೆಚ್ಚಿನ ರೈಲ್ವೆ ಸೇವೆ ವಿಸ್ತರಣೆ ಮಾಡಬೇಕು ಎಂದು ಕೇಂದ್ರ ರೇಲ್ವೆ ಸಚಿವ ಸುರೇಶ್ ಅಂಗಡಿ ಅವರಿಗೆ ಕೇಳಿಕೊಂಡರು.
ಹಳ್ಳಿಗಳಲ್ಲಿ ಬಸ್ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತದೆ. ಬೈಲಹೊಂಗಲ ಹಾಗೂ ಕಿತ್ತೂರು ತಾಲೂಕಿಗೆ ಒಂದೇ ಬಸ್ ಡಿಪೋ ಇರುವುದರಿಂದ ಹೆಚ್ಚಿನ ಬಸ್ ಗಳ ಸೌಲಭ್ಯ ಒದಗಿಸಬೇಕು ಹಾಗೂ ಕಿತ್ತೂರ ಡಿಪೋಗೆ ೧೦ ಕೋಟಿ ಅನುದಾನ ನೀಡಬೇಕು ಎಂದು ಸಚಿವ ಲಕ್ಷ್ಮಣ ಸವದಿ ಅವರಿಗೆ ಶಾಸಕ ದೊಡಗೌಡ್ರ ಅವರು ಕೇಳಿಕೊಂಡರು.
ಅಪಘಾತ ರಹಿತ ಚಾಲಕರಿಗೆ ಬಳ್ಳಿ ಪದಕ ವಿತರಣೆ

೨೦೧೫ ರಿಂದ ೨೦೧೭ ಸಾಲಿನಲ್ಲಿ ಅಪಘಾತ ರಹಿತ ಬಸ್ ಚಾಲನೆ ಮಾಡಿದ ಸುಮಾರು ೧೫೭ ಚಾಲಕರು ಹಾಗೂ ಚಾಲಕ ಕಂ ನಿರ್ವಾಹಕರಿಗೆ ಗಣ್ಯರಿಂದ ಬೆಳ್ಳಿ ಪದಕ ವಿತರಣೆ ಮಾಡಲಾಯಿತು.
ಬಳಿಕ ಮಾತನಾಡಿದ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆಯ ಅಧ್ಯಕ್ಷ ವಿ.ಎಸ್ ಪಾಟೀಲ್ ಅವರು, ಬರುವ ಬಜೆಟ್ಟಿನಲ್ಲಿ ೧ ಸಾವಿರ ಹೊಸ ಬಸ್ ನೀಡಿದರೆ ಪ್ರತಿಯೊಂದು ಗ್ರಾಮಕ್ಕೆ ಬಸ್ ಸೌಲಭ್ಯ ಒದಗಿಸಬಹುದು ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಬೈಲಹೊಂಗಲ ಶಾಸಕ ಮಹಾಂತೇಶ ಕೌಜಲಗಿ ಅವರು, ಬೈಲಹೊಂಗಲ ಸಾರಿಗೆ ಘಟಕದಲ್ಲಿ ಅನೇಕ ಸಮಸ್ಯೆಗಳಿವೆ. ನಮ್ಮಲ್ಲಿ ೧೫೦ ಕ್ಕೂ ಹೆಚ್ಚು ಬಸ್ ಗಳಿವೆ ಅದರಲ್ಲಿ ಬಹುತೇಕ ಬಸ್ ಗಳು ಸರಿಯಾಗಿ ಕಾರ್ಯನಿರ್ವಹಣೆ ಮಾಡುತ್ತಿಲ್ಲ; ಅದಕ್ಕಾಗಿ ಹೊಸ ಬಸ್ ಗಳನ್ನು ಒದಗಿಸಬೇಕು ಎಂದು ಮನವಿ ಮಾಡಿಕೊಂಡರು.
ಈ ವೇಳೆ ರಾಮದುರ್ಗ ಶಾಸಕ ಮಹಾದೇವಪ್ಪ ಯಾದವಾಡ, ಮಾಜಿ ಶಾಸಕ ವಿ.ಐ.ಪಾಟೀಲ್, ಮಾಜಿ ಶಾಸಕ ಜಗದೀಶ ಮೆಟಗುಡ್ಡ, ತಾಲೂಕಾ ಪಂಚಾಯತ, ಜಿಲ್ಲಾ ಪಂಚಾಯತ ಸದಸ್ಯರು ಉಪಸ್ಥಿತರಿದ್ದರು.
ಬೈಲಹೊಂಗಲ ಮೊರಾರ್ಜಿ ವಸತಿ ಶಾಲೆಯ ಹೆಣ್ಣು ಮಕ್ಕಳು ನಾಡಗೀತೆ ಹಾಗೂ ರಾಷ್ಟ್ರಗೀತೆ ಹಾಡಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ