ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೈಕ್ ಕಳ್ಳನೊಬ್ಬನನ್ನು ಬಂಧಿಸಿರುವ ಹಿರೇಬಾಗೇವಾಡಿ ಠಾಣೆ ಪೊಲೀಸರು 1.90 ಲಕ್ಷ ರೂ. ಮೌಲ್ಯದ 5 ಬೈಕ್ ವಶಪಡಿಸಿಕೊಂಡಿದ್ದಾರೆ.
ಹಿರೇಬಾಗೆವಾಡಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಅಪರಾಧ ವಿಭಾಗದ ಸಿಬ್ಬಂದಿ ಇಂದು ಬೆಳಿಗ್ಗೆ ಹಿರೇಬಾಗೇವಾಡಿ ಗ್ರಾಮದ ರೇಷ್ಮೆ ಫಾರ್ಮ್ ಹತ್ತಿರ ಪೆಟ್ರೋಲಿಂಗ್ ಮಾಡುತ್ತಿರುವಾಗ ಬೈಕ್ ಕಳ್ಳ ಸಿಕ್ಕಿ ಬಿದ್ದಿದ್ದಾನೆ.
ಬೈಲಹೊಂಗಲ ಕಡೆಯಿಂದ ನಂಬರ್ ಪ್ಲೇಟ್ ಇಲ್ಲದ ಕೆಂಪು ಮತ್ತು ಕಪ್ಪು ಬಣ್ಣದ ಹಿರೋ ಹೊಂಡಾ ಡಿಲೆಕ್ಸ್ ಮೋಟಾರ್ ಸೈಕಲ್ ನೇದ್ದರ ಮೇಲಿಂದ ಒಬ್ಬ ವ್ಯಕ್ತಿ ಬಂದಿದ್ದು, ಅವನು ಪೊಲೀಸ್‌ರನ್ನು ನೋಡಿ ಸಂಶಯಾತ್ಮಕವಾಗಿ ನಡೆದುಕೊಂಡ. ಅವನನ್ನು ನಿಲ್ಲಿಸಿ ವಿಚಾರಣೆಗೊಳಪಡಿಸಿದ ಪೊಲೀಸರಿಗೆ ಆತ ತಾನು ಆಜಾದ ಮೆಹಬೂಬಸುಭಾನಿ ಕಿಲ್ಲೇದಾರ ಸಾ|| ತಿಗಡಿ ತಾ|| ಬೈಲಹೊಂಗಲ ಎಂದು ತನ್ನ ಪರಿಚಯ ಹೇಳಿದ.
ವಾಹನದ ದಾಖಲಾತಿಗಳನ್ನು ವಿಚಾರಿಸಿದಾಗ ಸರಿಯಾಗಿ ಉತ್ತರ ನೀಡದೇ ತಪ್ಪ ಮಾಹಿತಿಯನ್ನು ನೀಡಲು ಆರಂಭಿಸಿದಾಗ ಆತನನ್ನು ಠಾಣೆಗೆ ಕರೆದುಕೊಂಡು ಬಂದು ತೀವ್ರ ವಿಚಾರಣೆಗೊಳಪಡಿಸಲಾಯಿತು. ಸುಮಾರು ೧೫ ದಿವಸಗಳ ಹಿಂದೆ ಬೆಳಗಾವಿಯ ಎ.ಪಿ.ಎಮ್.ಸಿ.ಯಾರ್ಡನಲ್ಲಿ ಈ ಮೋಟಾರ ಸೈಕಲನ್ನು ಕಳ್ಳತನ ಮಾಡಿಕೊಂಡು ಈಗ ಬೆಳಗಾವಿ ನಗರಕ್ಕೆ ಮಾರಾಟ ಮಾಡಲು ಹೋಗುತ್ತಿರುವುದಾಗಿ ಒಪ್ಪಿಕೊಂಡ.
ಕೂಡಲೇ ಆತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು, ಅವನಿಂದ ಇಲ್ಲಿಯವರೆಗೆ ೨-ಹಿರೋ ಹೊಂಡಾ, ೦೨-ಯಮಹಾ ಹಾಗೂ ೦೧- ಅಪ್ಪಾಚಿ ಮೊಟರ್ ಸೈಕಲ್ ಹೀಗೆ ಒಟ್ಟು ರೂ.೧.೯೦ ಲಕ್ಷ ರೂ. ಮೌಲ್ಯದ ೫ ಮೋಟರ್ ಸೈಕಲ್‌ಗಳನ್ನು ಜಪ್ತಪಡಿಸಿಕೊಳ್ಳಲಾಗಿದೆ.
ಈತ ಇನ್ನೂ ಹಲವಾರು ಕಡೆಗಳಲ್ಲಿ ಕಳ್ಳತನ ಮಾಡಿದ ಬಗ್ಗೆ ಮಾಹಿತಿ ಇದ್ದುಈ ಬಗ್ಗೆ ತನಿಖೆ ಮುಂದುವರೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ