
ಪ್ರಗತಿವಾಹಿನಿ ಸುದ್ದಿ, ಖಾನಾಪುರ: ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಸೇರಿದಂತೆ ಹದಿಹರೆಯದವರಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಖಾನಾಪುರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಭಾನುವಾರ ಪಟ್ಟಣದ ಶಾಹುನಗರ ಬಡಾವಣೆಯ ಮನೆಯೊಂದರ ಮೇಲೆ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಮಾರಾಟಕ್ಕಾಗಿ ೪.೫ ಕೆಜಿಯಷ್ಟು ಗಾಂಜಾ ಶೇಖರಿಸಿಟ್ಟಿದ್ದ ತಾಲೂಕಿನ ಲೋಂಡಾ ನಿವಾಸಿ ಪರಶುರಾಮ ಉತ್ತಮ ಮೋಹಿತೆ ಮತ್ತು ಸವದತ್ತಿ ತಾಲೂಕು ಉಗರಗೋಳ ಗ್ರಾಮದ ನಿವಾಸಿ ರಾಜು ಫಕ್ಕೀರಪ್ಪ ಚಿಕ್ಕಗಿಗಾರ ಅವರನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.
ಸಿಪಿಐ ಮೋತಿಲಾಲ ಪವಾರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಖಾನಾಪುರ ಠಾಣೆಯ ಪಿಎಸ್ಐ ಬಸನಗೌಡ ಪಾಟೀಲ ಹಾಗೂ ಸ್ಥಳೀಯ ಠಾಣೆಯ ಪೊಲೀಸ್ ಸಿಬ್ಬಂದಿ ಭಾಗವಹಿಸಿದ್ದರು. ವಶಕ್ಕೆ ಪಡೆದ ಗಾಂಜಾ ಮೌಲ್ಯ ೨ ಲಕ್ಷ ರೂ.ಗಳಾಗಿದ್ದು, ಖಾನಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ