Film & EntertainmentKannada NewsKarnataka NewsLatest

*’ಇಡೀ ದೇಶ ಹುಡುಕಿದ್ರೂ ಅವಳಂತಹ ಮತ್ತೊಬ್ಬ ಸೀತೆ ಸಿಗಲ್ಲ’*: *ಸಾಯಿ ಪಲ್ಲವಿ ಪರ ಧನುಷ್ ಬ್ಯಾಟಿಂಗ್*

ಪ್ರಗತಿವಾಹಿನಿ ಸುದ್ದಿ: ರಾಮಾಯಣ ಸಿನಿಮಾಗೆ ಸಾಯಿ ಪಲ್ಲವಿ ಆಯ್ಕೆಗೆ ಸಂಬಂಧಿಸಿದಂತೆ ಸೋಷಿಯಲ್ ಮೀಡಿಯಾದಲ್ಲಿ ಪರ-ವಿರೋಧದ ಚರ್ಚೆ ನಡೆಯುತ್ತಿದೆ. ಈ ನಡುವೆ ಖ್ಯಾತ ನಟ ಧನುಷ್‌ ನಟಿಯ ಬೆಂಬಲಕ್ಕೆ ನಿಂತಿದ್ದಾರೆ. ಸಾಯಿ ಪಲ್ಲವಿ ಬಗ್ಗೆ ಮೆಚ್ಚುಗೆಯ ಮಾತು ಗಳನ್ನಾಡಿರುವ ಧನುಷ್‌ ಮಾತು ಇದೀಗ ಗಮನ ಸೆಳೆಯುತ್ತಿದೆ.

ನಿತೇಶ್ ತಿವಾರಿ ನಿರ್ದೇಶನದ ‘ರಾಮಾಯಣ: ರೈಸ್ ಆಫ್ ಎ ಲೆಜೆಂಡ್’ ಸಿನಿಮಾದಲ್ಲಿ ಸೀತೆ ಪಾತ್ರಕ್ಕೆ ಸಾಯಿ ಪಲ್ಲವಿಯನ್ನು ಆಯ್ಕೆ ಮಾಡಿರುವುದಕ್ಕೆ ಟೀಕೆಗಳು ವ್ಯಕ್ತವಾಗುತ್ತಿವೆ. ಈ ಚರ್ಚೆಗೆ ಪ್ರತಿಕ್ರಿಯಿಸಿರುವ ತಮಿಳು ನಟ ಧನುಷ್, ಸಾಯಿ ಪಲ್ಲವಿ ಪರವಾಗಿ ಮಾತನಾಡಿದ್ದಾರೆ.

ತಮ್ಮ ಮುಂಬರುವ ‘ಓಎಂ’ ಚಿತ್ರದ ಬಿಡುಗಡೆ ಪೂರ್ವ ಕಾರ್ಯಕ್ರಮದಲ್ಲಿ ಮಾತನಾಡಿದ ಧನುಷ್, ಸೀತೆ ಪಾತ್ರಕ್ಕೆ ಸಾಯಿ ಪಲ್ಲವಿ ಸೂಕ್ತ ಆಯ್ಕೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. “ಇಡೀ ಭಾರತದಲ್ಲಿ ಹುಡುಕಿದರೂ ಅವರಂತಹ ಮತ್ತೊಬ್ಬ ಸೀತೆಯನ್ನು ಕಾಣಲು ಸಾಧ್ಯವಿಲ್ಲ. ಅವರಿಗೆ ದೇವರ ಮೇಲೆ ಅಪಾರ ಭಕ್ತಿ ಇದೆ. ಅವರು ಶುದ್ಧ ಹೃದಯದ ವ್ಯಕ್ತಿ, ಸುಂದರ ಹಾಗೂ ಅದ್ಭುತ ಕಲಾವಿದೆ” ಎಂದು ಹೇಳಿದ್ದಾರೆ.

ಚಿತ್ರೀಕರಣದ ವಿರಾಮದ ಸಮಯದಲ್ಲೂ ಸಾಯಿ ಪಲ್ಲವಿ ಪ್ರಾರ್ಥನೆಯಲ್ಲಿ ನಿರತರಾಗಿರುತ್ತಿದ್ದರು ಎಂದು ಧನುಷ್ ತಿಳಿಸಿದ್ದಾರೆ. ಅವರ ಬಗ್ಗೆ ನಡೆಯುತ್ತಿರುವ ಟೀಕೆಗಳು ಅರ್ಥವಾಗುತ್ತಿಲ್ಲ ಎಂದೂ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

‘ಮಾರಿ 2’ ಚಿತ್ರದಲ್ಲಿ ಮೊದಲ ಬಾರಿಗೆ ಸಾಯಿ ಪಲ್ಲವಿ ಜೊತೆ ಕೆಲಸ ಮಾಡಿದ್ದನ್ನು ನೆನಪಿಸಿಕೊಂಡ ಧನುಷ್, ಒಂಬತ್ತು ವರ್ಷಗಳ ಬಳಿಕ ‘ಓಎಂ’ ಚಿತ್ರದ ಸೆಟ್‌ನಲ್ಲಿ ಅವರನ್ನು ನೋಡಿದಾಗ ಅವರಲ್ಲಿನ ಬದಲಾವಣೆ ಕಂಡು ಅಚ್ಚರಿಯಾಯಿತು ಎಂದಿದ್ದಾರೆ. ಆರಂಭದಲ್ಲಿ ಕಡಿಮೆ ಮಾತನಾಡುತ್ತಿದ್ದ ಸಾಯಿ ಪಲ್ಲವಿ, ಈಗ ಸಿನಿಮಾ ಕಲೆಯ ಮೇಲೆ ಹಿಡಿತ ಸಾಧಿಸಿರುವ ಆತ್ಮವಿಶ್ವಾಸದ ಕಲಾವಿದೆಯಾಗಿ ಬೆಳೆದಿದ್ದಾರೆ ಎಂದು ಶ್ಲಾಘಿಸಿದ್ದಾರೆ.

‘ಓಎಂ’ ಚಿತ್ರದಲ್ಲಿ ಸಾಯಿ ಪಲ್ಲವಿ ಸಿಬಿಐ ಅಧಿಕಾರಿ ನಿತ್ಯಾ ರೆಡ್ಡಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಶ್ರೀಗಂಧದ ಮರದ ಅಕ್ರಮ ವ್ಯಾಪಾರದ ತನಿಖೆಯ ಜವಾಬ್ದಾರಿ ಅವರ ಪಾತ್ರಕ್ಕಿದೆ ಎನ್ನಲಾಗಿದೆ.

Related Articles

Back to top button