
ಪ್ರಗತಿವಾಹಿನಿ ಸುದ್ದಿ: ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳಿಗೆ ರಾಜಾತಿಥ್ಯ ವಿಡಿಯೋ, ಫೋಟೋ ವೈರಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಆಪ್ತ, ನಟ ಧನ್ವೀರ್ ನನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಕೈದಿಗಳು ಮೊಬೈಲ್ ಫೋನ್, ಟಿವಿ ಬಳಸುತ್ತಿರುವ ಬಗ್ಗೆ, ಉಗ್ರರ ಕೈಯಲ್ಲಿಯೂ ಮೊಬೈಲ್ ಫೋನ್ ಇರುವ ಬಗ್ಗೆ, ಅಪರಾಧಿಗಳು ಜೈಲಿನ ಸೆಲ್ ನಲ್ಲಿಯೇ ಎಣ್ಣೆ ಪಾರ್ಟಿ ಮಾಡಿ ಡಾನ್ಸ್ ಮಾಡಿ ಕುಣಿದು ಕುಪ್ಪಳಿಸುತ್ತಿರುವ ಹಲವು ವಿಡಿಯೋಗಳು ವೈರಲ್ ಆಗಿದ್ದವು.
ರೇಣುಕಾಸ್ವಾಮಿ ಹತ್ಯೆ ಕೇಸ್ ನಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ನಟ ದರ್ಶನ್ ಅವರನ್ನು ನೋಡಲೆಂದು ಆಗಾಗ ಧ್ವನ್ವಿರ್ ಜೈಲಿಗೆ ಭೇಟಿ ನೀಡುತ್ತಿದ್ದರು. ಇತ್ತೀಚೆಗೆ ದರ್ಶನ್ ಜೈಲಿನಲ್ಲಿ ಹಾಸಿಗೆ, ದಿಂಬು ಹಾಗೂ ಇತರ ಸೌಲಭ್ಯ ಕಲ್ಪಿಸಲು ಮನವಿ ಮಾಡಿದ್ದರು. ಆದರೆ ಕೋರ್ಟ್ ದರ್ಶನ್ ಮನವಿ ನಿರಾಕರಿಸಿತ್ತು. ಈ ಬೆಳವಣಿಗೆ ಬೆನ್ನಲ್ಲೇ ಜೈಲಿನಲ್ಲಿ ಇತರ ಕೈದಿಗಳಿಗೆ ಸಿಗುತ್ತಿರುವ ರಾಜಾತಿಥ್ಯದ ವಿಡಿಯೋ ವೈರಲ್ ಆಗಿತ್ತು. ಇದೀಗ ಈ ಪ್ರಕರಣ ಸಬಂಧ ತನಿಖೆ ಆರಂಭಿಸಿರುವ ಸಿಸಿಬಿ ಪೊಲೀಸರು ನಿನ್ನೆ ನಟ ಧನ್ವೀರ್ ನನ್ನು ಕರೆದು ವಿಚಾರಣೆ ನಡೆಸಿದ್ದರು. ಅವರ ಮೊಬೈಲ್ ವಶಕ್ಕೆ ಪಡೆದಿದ್ದು ಪರಿಶೀಲಿಸಿದ್ದರು. ಇಂದು ಧನ್ವೀರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.



