
ಪ್ರಗತಿವಾಹಿನಿ ಸುದ್ದಿ: ಇಡೀ ದೇಶಾದ್ಯಂತ ಚರ್ಚೆಗೆ ಕಾರಣವಾಗಿರುವ ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಗೂ ಎಸ್ ಐಟಿ ರಚನೆ ವಿಚಾರವಾಗಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ವಿಧಾನಸಭೆಯಲ್ಲಿ ಉತ್ತರ ನೀಡಿದ್ದಾರೆ.
ಜುಲೈ 3, 2025ರಂದು ಅನಾಮಿಕ ವ್ಯಕ್ತಿ ಧರ್ಮಸ್ಥಳ ಠಾಣೆಗೆ ಬಂದು ತಾನು ಧರ್ಮಸ್ಥಳದ ವಿವಿಧೆಡೆ ನೂರಾರು ಶವಗಳನ್ನು ಹೂತುಹಾಕಿದ್ದೇನೆ. ನನಗೆ ನಿರಂತರ ಜೀವಬೆದರಿಕೆಯೊಡ್ಡಿ ನನ ಕೈಯಿಂದ ಶವಗಳನ್ನು ಹೂತು ಹಾಕಿಸಿದ್ದಾರೆ. ಪಾಪ ಪ್ರಜ್ಞೆಯಿಂದ ಬಂದು ದೂರು ನೀಡುತ್ತಿರುವುದಾಗಿ ಹೇಳಿದ್ದ. ಅತ್ಯಾಚಾರ, ಕೊಲೆ ಮಾಡಿದ್ದ ಶವಗಳನ್ನು ನನಗೆ ಕೊಟ್ಟು ಹೂತುಹಾಕುವಂತೆ ಹೇಳಿದ್ದರು. ಆ ಸ್ಥಳಗಳನ್ನು ತೋರಿಸುವುದಾಗಿ ದೂರು ನೀಡಿದ್ದ. ನನಗೆ ಹಾಗೂ ನನ್ನ ಕುಟುಂಬಕ್ಕೆ ರಕ್ಷಣೆ ನೀಡುವಂತೆಯೂ ಕೋರಿದ್ದ.
ಬಳಿಕ ಈ ಪ್ರಕರಣದ ಬಗ್ಗೆ ನ್ಯಾಯಾಧೀಶರು ತನಿಖೆ ನಡೆಸುವಂತೆ ಸೂಚಿಸಿದ್ದರು. ನ್ಯಾಯಾಧೀಶರ ಸೂಚನೆಯಂತೆ ಪೊಲೀಸರು ತನಿಖೆಗೆ ಮುಂದಾಗಿದ್ದರು. ಈ ವೇಳೆ ಮಹಿಳಾ ಆಯೋಗ ಎಸ್ ಐಟಿ ರಚಿಸುವಂತೆ ಪತ್ರ ಬರೆದಿತ್ತು. ಎಸ್ ಐಟಿ ರಚನೆಗೆ ಕಾರಣವನ್ನೂ ಆಯೋಗ ತಿಳಿಸಿತ್ತು. ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಹಿನ್ನೆಲೆಯಲ್ಲಿ ತನಿಖೆಗೆ ಎಸ್ ಐಟಿ ರಚಿಸುವಂತೆ ಹೇಳಿತ್ತು. ಇದಾದ ಬಳಿಕ ನಾನು ಹಾಗೂ ಸಿಎಂ ಸಿದ್ದರಾಮಯ್ಯ ಎಸ್ ಐಟಿ ರಚಿಸಿ ತನಿಖೆಗೆ ಆದೇಶ ನೀಡಿದೆವು ಎಂದು ತಿಳಿಸಿದ್ದಾರೆ.