Kannada News

ಬೆಳಗಾವಿಗೆ ಆಗಮಿಸಿದ ಧರ್ಮೇಂದ್ರ ಪ್ರಧಾನ್: ಭಾನುವಾರ ಗುಪ್ತ ಸಭೆ?

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬಿಜೆಪಿಯ ಕರ್ನಾಟಕ ರಾಜ್ಯ ಚುನಾವಣೆ ಉಸ್ತುವಾರಿ, ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಶನಿವಾರ ರಾತ್ರಿ ಬೆಳಗಾವಿಗೆ ಆಗಮಿಸಿದ್ದಾರೆ. ಭಾನುವಾರ ಬೆಳಗಾವಿ ಜಿಲ್ಲೆಯ ಪ್ರಮುಖ ಮುಖಂಡರ ಜೊತೆ ಧರ್ಮೇಂದ್ರ ಪ್ರಧಾನ್ ಗುಪ್ತ ಸಭೆ ನಡೆಸಲಿದ್ದಾರೆ.

ಬೆಳಗಾವಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ಧರ್ಮೇಂದ್ರ ಪ್ರಧಾನ್ ಅವರನ್ನು ಮಹಾನಗರ ಅಧ್ಯಕ್ಷರೂ ಆಗಿರುವ ಶಾಸಕ ಅನಿಲ ಬೆನಕೆ ಸ್ವಾಗತಿಸಿದರು. ನಂತರ ಅವರು ಯುಕೆ 27 ಹೊಟೆಲ್ ನಲ್ಲಿ ವಾಸ್ತವ್ಯ ಹೂಡಿದ್ದಾರೆ.

ಇದಕ್ಕೂ ಮೊದಲು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ ಬೆಳಗಾವಿಯ ಬಸವೇಶ್ವರ ಖಾನಾವಳಿಯಲ್ಲಿ ರೊಟ್ಟಿ ಊಟ ಸವಿದರು. ಬಿಜೆಪಿ ಗ್ರಾಮೀಣ ಜಿಲ್ಲಾ ಅಧ್ಯಕ್ಷ ಸಂಜಯ ಪಾಟೀಲ, ಕಾರ್ಯದರ್ಶಿ ಮಹಂತೇಶ ವಕ್ಕುಂದ ಮೊದಲಾದವರು ಇದ್ದರು.

ಕರ್ನಾಟಕದ ಚುನಾವಣೆ ಉಸ್ತುವಾರಿಯಾಗಿ ನೇಮಕಗೊಂಡ ನಂತರ ಇದೇ ಮೊದಲ ಬಾರಿಗೆ ಬೆಳಗಾವಿಗೆ ಆಗಮಿಸಿದ ಧರ್ಮೇಂದ್ರ ಪ್ರಧಾನ್, ಭಾನುವಾರ ಬೆಳಗ್ಗೆ ಬೆಳಗಾವಿ ಜಿಲ್ಲೆಯ ಪ್ರಮುಖ ನಾಯಕರೊಂದಿಗೆ ಗುಪ್ತ ಸಭೆ ನಡೆಸಲಿದ್ದಾರೆ ಎಂದು ಗೊತ್ತಾಗಿದೆ. ನಂತರ ಇಲ್ಲಿಂದ ಹುಬ್ಬಳ್ಳಿಗೆ ತೆರಳುವರು.

Home add -Advt

ಧರ್ಮೇಂದ್ರ ಪ್ರಧಾನ ಅವರ ಭಾನುವಾರದ ಕಾರ್ಯಕ್ರಮಗಳ ಕುರಿತು ಯಾವುದೇ ಮಾಹಿತಿ ಇಲ್ಲ ಎಂದು ಶಾಸಕರೂ, ಮಹಾನಗರ ಜಿಲ್ಲಾ ಅಧ್ಯಕ್ಷರೂ ಆಗಿರುವ ಅನಿಲ ಬೆನಕೆ ತಿಳಿಸಿದ್ದಾರೆ. ಅವರು ಬಹುಶಃ ಹುಬ್ಬಳ್ಳಿಗೆ ತೆರಳಬಹುದು ಎಂದು ಅವರು ಹೇಳಿದರು.

ಬೆಳಗಾವಿ ಜಿಲ್ಲೆಯ ರಾಜಕೀಯ ಸ್ಥಿತಿ ಗತಿ, ಬಣ ರಾಜಕೀಯಗಳ ಕುರಿತು ಮಾಹಿತಿ ಪಡೆದು, ತೇಪೆ ಹಚ್ಚುವ ಪ್ರಯತ್ನವನ್ನು ಧರ್ಮೇಂದ್ರ ಪ್ರಧಾನ್ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಸಭೆಗೆ ಯಾರ್ಯಾರನ್ನು ಆಹ್ವಾನಿಸಲಾಗಿದೆ ಎನ್ನುವ ಮಾಹಿತಿಯನ್ನು ಗುಪ್ತವಾಗಿಡಲಾಗಿದೆ.

Related Articles

Back to top button