*ಬೆಳಗಾವಿಯ ಅಲಕನೂರ ಕರಿಸಿದ್ದೇಶ್ವರ ದೇವಸ್ಥಾನದ ಆನೆ ಧ್ರುವ ಇನ್ನಿಲ್ಲ*

ಪ್ರಗತಿವಾಹಿನಿ ಸುದ್ದಿ ಬೆಳಗಾವಿ: ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಅಲಕನೂರ ಗ್ರಾಮದ ಕರಿಸಿದ್ದೇಶ್ವರ ದೇವಸ್ಥಾನದ ಪ್ರೀತಿಯ ಆನೆ ಧ್ರುವ (ರಾಜಾ) ಇನ್ನಿಲ್ಲ. ಕಳೆದ 20 ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ 32 ವರ್ಷದ ಗಂಡಾನೆ, ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಬೆಳಗಿನ ಜಾವ ಕೊನೆಯುಸಿರೆಳೆದಿದೆ.
ಸುಮಾರು 25 ವರ್ಷಗಳ ಹಿಂದೆ ದೇವಸ್ಥಾನಕ್ಕೆ ಕರೆತರಲಾಗಿದ್ದ ಧ್ರುವ, ಅಂದಿನಿಂದಲೇ ಗ್ರಾಮಸ್ಥರು ಹಾಗೂ ಭಕ್ತರ ಪ್ರೀತಿಗೆ ಪಾತ್ರವಾಗಿತ್ತು. ದೇವಸ್ಥಾನದ ಧಾರ್ಮಿಕ ಕಾರ್ಯಕ್ರಮಗಳು ಸೇರಿದಂತೆ ಗ್ರಾಮದ ಹಲವು ಆಚರಣೆಗಳಲ್ಲಿ ಪ್ರಮುಖ ಆಕರ್ಷಣೆಯಾಗಿದ್ದ ಆನೆಯ ಅಗಲಿಕೆ ಎಲ್ಲರನ್ನೂ ದುಃಖದ ಮಡುವಿಗೆ ತಳ್ಳಿದೆ.
ಧ್ರುವ ಮೃತಪಟ್ಟ ಸುದ್ದಿ ಹರಡುತ್ತಿದ್ದಂತೆ ಅಲಕನೂರ ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ. ನೆಚ್ಚಿನ ಆನೆಯನ್ನು ಕೊನೆಯ ಬಾರಿ ನೋಡಲು ಬೆಳಗ್ಗಿನಿಂದಲೇ ನೂರಾರು ಭಕ್ತರು ಹಾಗೂ ಗ್ರಾಮಸ್ಥರು ದೇವಸ್ಥಾನದತ್ತ ಧಾವಿಸಿ ಅಂತಿಮ ದರ್ಶನ ಪಡೆಯುತ್ತಿದ್ದಾರೆ.
ವಿಷಯ ತಿಳಿದು ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆನೆಯ ಅಂತಿಮ ಸಂಸ್ಕಾರಕ್ಕೆ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ.
25 ವರ್ಷಗಳ ಕಾಲ ಗ್ರಾಮದ ಜನರೊಂದಿಗೆ ಅವಿನಾಭಾವ ಸಂಬಂಧ ಬೆಳೆಸಿಕೊಂಡಿದ್ದ ಧ್ರುವನ ಅಗಲಿಕೆಯಿಂದ ಕರಿಸಿದ್ದೇಶ್ವರ ದೇವಸ್ಥಾನದ ಆವರಣ ಬಿಕೋ ಎನ್ನುತ್ತಿದೆ. ಮೂಕಪ್ರಾಣಿಯ ಸಾವಿಗೆ ಗ್ರಾಮಸ್ಥರು ಕಣ್ಣೀರಿನ ವಿದಾಯ ಹೇಳುತ್ತಿದ್ದು, ಅಲಕನೂರ ಗ್ರಾಮದಲ್ಲಿ ನೀರವ ಮೌನ ಆವರಿಸಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




