Latest

ಬಿಜೆಪಿ ಹೈಕಮಾಂಡ್ ಗೆ ಮಠಾಧೀಶರ ಎಚ್ಚರಿಕೆ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಸಿಎಂ ಯಡಿಯೂರಪ್ಪ ಅವರನ್ನು ಬದಲಾವಣೆ ಮಾಡಿದರೆ ರಾಜ್ಯದಲ್ಲಿ ಬಿಜೆಪಿ ಕೆಟ್ಟ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಮುಖ್ಯಮಂತ್ರಿ ಬದಲಿಸಿದರೆ ಬಿಜೆಪಿಗೆ ಉಳಿಗಾಲವಿಲ್ಲ ಎಂದು ಮಠಾಧೀಶರು ವರಿಷ್ಠರಿಗೆ ಎಚ್ಚರಿಕೆ ನೀಡಿದ್ದಾರೆ.

ರಾಜ್ಯದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬದಲಾವಣೆ ಚರ್ಚೆ ಬೆನ್ನಲ್ಲೇ ಬಾಲೇಹೊಸೂರು ಮಠದ ದಿಂಗಾಲೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ಯಡಿಯೂರಪ್ಪನವರನ್ನು ಭೇಟಿಯಾದ ಸ್ವಾಮೀಜಿಗಳ ನಿಯೋಗ ಬಿಜೆಪಿ ಹೈಕಮಾಂಡ್ ಗೆ ಎಚ್ಚರಿಕೆ ಸಂದೇಶ ರವಾನಿಸಿದೆ. ಸಿಎಂ ಯಡಿಯೂರಪ್ಪ ಭೇಟಿ ಬಳಿಕ ಮಾತನಾಡಿದ ದಿಂಗಾಲೇಶ್ವರ ಶ್ರೀಗಳು, ಯಡಿಯೂರಪ್ಪನವರನ್ನು ಬದಲಾವಣೆ ಮಾಡಿದರೆ ಕರ್ನಾಟಕದಲ್ಲಿ ಬಿಜೆಪಿ ಕೆಟ್ಟ ಪರಿಸ್ಥಿತಿಗಳನ್ನು ಎದುರಿಸಬೇಕಾಗುತ್ತದೆ. ಸಿಎಂ ಯಡಿಯೂರಪ್ಪ ಬದಲಾವಣೆ ಕೆಟ್ಟ ಉದ್ದೇಶ. ಅವರು ಕೇವಲ ಲಿಂಗಾಯಿತ ಸಮುದಾಯದ ನಾಯಕ ಮಾತ್ರವಲ್ಲ ರಾಜ್ಯದ ಎಲ್ಲಾ ವರ್ಗದ ಜನರ ಸಮರ್ಥ ನಾಯಕ ಎಂದರು.

ರಾಜ್ಯದಲ್ಲಿ ಬಿಜೆಪಿ ಪಕ್ಷ ಅಧಿಕಾರಕ್ಕೆ ಬರಲು ಯಡಿಯೂರಪ್ಪನವರು ಕಾರಣ. ಅವರ ನಾಯಕತ್ವವನ್ನು ಜನರು ಒಪ್ಪಿ ಆಶಿರ್ವದಿಸಿದ್ದಾರೆ. ಪಕ್ಷವನ್ನು ತಳಮಟ್ಟದಿಂದ ಸಂಘಟಿಸಿ ರಾಜ್ಯದಲ್ಲಿ ಬಿಜೆಪಿ ಅಭಿವೃದ್ಧಿಗೆ ಶ್ರಮಿಸಿ ಅಧಿಕರಕ್ಕೆ ತಂದ ಯಡಿಯೂರಪ್ಪನವರನ್ನು ಯಾವುದೇ ಕಾರಣಕ್ಕೂ ಬದಲಿಸಬಾರದು. ಒಂದೊಮ್ಮೆ ಸಿಎಂ ಯಡಿಯೂರಪ್ಪನವರನ್ನು ಬದಲಿಸಿದರೆ ರಾಜ್ಯದಲ್ಲಿ ಬಿಜೆಪಿ ಪಕ್ಷ ಸರ್ವನಾಶವಾಗಲಿದೆ. ಇದು ನಮ್ಮ ಹೇಳಿಕೆಯಲ್ಲ ಇಡೀ ರಾಜ್ಯದ ಬಹುಸಂಖ್ಯಾತ ಜನರ ಹೇಳಿಕೆಯಾಗಿದೆ ಎಂದು ಹೈಕಮಾಂಡ್ ಗೆ ಎಚ್ಚರಿಕೆ ನೀಡಿದರು.

ಯಡಿಯೂರಪ್ಪನವರಿಗೆ ಪೂರ್ಣಾವಧಿ ಆಡಳಿತ ನಡೆಸಲು ಅವಕಾಶ ನೀಡಬೇಕು. ಈ ಸಂದರ್ಭದಲ್ಲಿ ಸಿಎಂ ಬದಲಾವಣೆ ಬೇಡ. ಎಲ್ಲಾ ಸ್ವಾಮೀಜಿಗಳು ಒಟ್ಟಾಗಿ ನಮ್ಮ ಅಭಿಪ್ರಾಯಗಳ ಮೂಲಕ ಸೂಚನೆಗಳನ್ನು ಕೊಟ್ಟು ಹೋಗುತ್ತಿದ್ದೇವೆ. ಈ ನಿಟ್ಟಿನಲ್ಲಿ ಹೈಕಮಾಂಡ್ ಗಮನಹರಿಸದಿದ್ದರೆ ಇನ್ನು 2-3 ದಿನಗಳಲ್ಲಿ 500ಕ್ಕೂ ಹೆಚ್ಚು ಮಠಾಧೀಶರು ಬೆಂಗಳೂರಿನಲ್ಲಿ ಸಭೆ ನಡೆಸಿ ಮುಂದಿನ ನಿರ್ಧಾರಗಳನ್ನು ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.
ಸಿಎಂ ಯಡಿಯೂರಪ್ಪ ಪರ ಮಠಾಧೀಶರ ಬ್ಯಾಟಿಂಗ್; 25ಕ್ಕೂ ಹೆಚ್ಚು ಸ್ವಾಮಿಜಿಗಳು ಭೇಟಿ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button