ಲೇಖನ – ರವಿ ಕರಣಂ.
ಹಳಿಯಾಳ.(ಉಕ)
ಇದು ಯುವ ಅವಸ್ಥೆಯಲ್ಲಿರುವವರ ಪಡಿಪಾಟಲು. ಆ ಮನಗಳ ಮಿಡಿತವನ್ನೇ ಹೆಕ್ಕಿ, ಇಡುವ ಪ್ರಯತ್ನವಿದು. ಅದೇನೆಂದರೆ, ಶಿಸ್ತು ಕೆಲವರಿಗೆ ಖುಷಿ ಕೊಟ್ಟರೆ ಮತ್ತು ಕೆಲವರಿಗೆ ಕಿರಿಕಿರಿಯೇ ಆಗಿರುತ್ತದೆ. ಕಾರಣ ‘ಶಿಸ್ತು’ ಅಥವಾ ‘ಅಶಿಸ್ತು’ ಎಂಬುದು ಮೊದಲಿನಿಂದಲೂ ಬಂದ ದೈನಂದಿನ ಬದುಕಿನಲ್ಲಿ ಅಭ್ಯಾಸವಾಗಿರುವ ನಡೆವಳಿಕೆ. ಆದರೆ ನಮ್ಮ ಹಿರಿಯರು ಯಾವತ್ತೂ ಶಿಸ್ತಿನ ಬಗ್ಗೆ ಅತಿರೇಕವೆನಿಸುವಷ್ಟು ಬೋಧನೆ ಮಾಡಿ ಬಿಡುತ್ತಾರೆ. ಅದು ಅವರ ಮಟ್ಟಿಗೆ ಮಾತ್ರ ಸರಿಯೇ ಹೊರತು, ಎದುರಿಗಿರುವ ವ್ಯಕ್ತಿಗೆ ಸರಿಯೆನಿಸದು.
ರಣ, ಅವರವರ ಜೀವನದ ದೃಷ್ಟಿಕೋನ ಅವರವರಿಗೆ ಮಾತ್ರ ಸರಿಯೇ ಹೊರತು, ಅದನ್ನೆಂದೂ ಸಾರ್ವತ್ರಿಕಗೊಳಿಸಲಾಗದು. ಇದು ಯಾರ ಗಮನಕ್ಕೆ ಬರುವುದೇ ಇಲ್ಲ. ಎಲ್ಲರದ್ದು ಒಂದೇ ತೆರೆನಾದ ಯೋಚನೆಗಳು,ಯೋಜನೆಗಳು. ತಮ್ಮ ಮೂಗಿನ ನೇರಕ್ಕೆ ಕುಟುಂಬದ ಎಲ್ಲ ಸದಸ್ಯರುಗಳು ಇರಬೇಕೆಂಬ ಅಲಿಖಿತ ನಿಯಮಗಳು ಭಾರತೀಯ ಕುಟುಂಬಗಳಲ್ಲಿ ಹೆಚ್ಚಾಗಿ ಕಂಡು ಬರುತ್ತದೆಂಬುದು ಸತ್ಯ. ಹಾಗೆಂದ ಮಾತ್ರಕ್ಕೆ ಬೇರೆ ದೇಶಗಳಲ್ಲಿ ಇಲ್ಲವೆಂದಲ್ಲ. ಅಲ್ಲಿಯೂ ಇಂಥದೇ ಉಪದೇಶ, ಉಪನ್ಯಾಸ ಮತ್ತು ಉಪದ್ರವವೇ! ಕೆಲವರಿಂದ ಕೆಲವರಿಗೆ ಮಾತ್ರ. ಗೊತ್ತಿರಲಿ. ಶಿಸ್ತಿನ ಜೀವನ ಬಹುತೇಕ ಕಟ್ಟುನಿಟ್ಟಾಗಿ ಪಾಲಿಸಿಕೊಂಡೇ ಹೋಗಬೇಕು.
ಆದರೆ ಅದು ಬಲವಂತವಾಗಿ ಪಾಲನೆಗಿಳಿಸಿದ ವ್ಯಕ್ತಿಗಳ ಸಂತೋಷದ ಕ್ಷಣಗಳನ್ನು ಚಿವುಟಿ ಹಾಕಿ ಬಿಟ್ಟಿರುತ್ತದೆ. ಮಾತು ಮಾತಿಗೂ ಶಿಸ್ತಿನ ಬಗೆಗೆ ಮಾರುದ್ದದ ಭಾಷಣದಿಂದ ಎಲ್ಲರೂ ಪಾಲನೆಗಿಳಿಯಬೇಕು ಮತ್ತು ತಮ್ಮ ವಿಚಾರವನ್ನು ಒಪ್ಪಿಕೊಳ್ಳಬೇಕು ಎಂಬ ನಿರೀಕ್ಷೆಯಲ್ಲಿರುತ್ತಾರಲ್ಲ, ಅವರದ್ದು ಮನುಷ್ಯನ ಮನಸ್ಸುಗಳನ್ನು ಅರ್ಥ ಮಾಡಿಕೊಳ್ಳದ ವ್ಯಕ್ತಿತ್ವವೆಂದೇ ಹೇಳುತ್ತೇನೆ. ಬೆಳಗ್ಗೆ 5.00 ಗಂಟೆಗೆ ಏಳಬೇಕು ಎಂಬ ನಿಯಮಕ್ಕೆ ಅನೇಕ ಹಿರಿಯ ವ್ಯಕ್ತಿಗಳ ಆಗ್ರಹ. ಹಾಗೆಂದು ಎಲ್ಲ ವಯೋಮಾನದವರಿಗೆ ಸಾಧ್ಯವಾಗಲಿಕ್ಕಿಲ್ಲ. ವಯಸ್ಸಾಗುತ್ತಲೇ ನಿದ್ದೆಯಂತೂ ಬರುವುದಿಲ್ಲ. ಅಥವಾ ಮೊದಲಿನಿಂದಲೂ ನಮಗೆ ರೂಢಿ ಎನ್ನುತ್ತಾರೆ. ಹಾಗೆಂದು ಎಲ್ಲರೂ ಹಾಗೇ ರೂಢಿ ಮಾಡಿಕೊಳ್ಳಬೇಕೆ? ಕಾರಣ ಕೇಳಿ ನೋಡಿ. ಜೀವನದಲ್ಲಿ ಸಾಧನೆಗೆ ಬೇಕಾದಷ್ಟು ಸಮಯ ದೊರೆಯುತ್ತದೆ ಎಂದು ತಮ್ಮ ಸಾಧನೆಯ ‘ಮಹಾದಾರಿ’ಯನ್ನು ತೆರೆದು ಬಿಡುತ್ತಾರೆ. ಅಂದರೆ ಅವರು ಕಡೆದು ಕಟ್ಟೆ ಹಾಕಿ, ಏನು ಜಗತ್ತಿನ ದಿಶೆಯನ್ನು ಬದಲಿಸಿದ ಬಗ್ಗೆ ತೋರಿಸಿಕೊಳ್ಳುತ್ತಾರೆ!
ನನ್ನ ಅಭಿಪ್ರಾಯವಿಷ್ಟೆ. ಜೀವನ ಪರ್ಯಂತ ಒಬ್ಬ ವ್ಯಕ್ತಿ ಕೈಗೊಳ್ಳುವ ಸಾಧನೆಯು, ಕೆಲವರಿಂದ ಕೆಲವೇ ತಿಂಗಳುಗಳಲ್ಲಾಗುತ್ತದೆ. ಬೆಳಗ್ಗೆ ಏಳದೇನೇ ಇಡೀ ರಾತ್ರಿ ನಿದ್ದೆಗೆ ಜಾರದೇ ನಿಶ್ಯಬ್ಧ, ಏಕಾಂಗಿಯಾಗಿ ಮಾಡಿದ್ದುಂಟಲ್ಲ. ಅದಕ್ಕೆ ಸಾವಿರಾರು ಉದಾಹರಣೆಗಳಿವೆ. ಅದಕ್ಕಾಗಿ “ನೀನು ಹೀಗೆ ಇರಬೇಕು” ಎಂಬ ನಿಯಮಗಳು ಅಷ್ಟೇನೂ ಸರಿಯಾದ ಕ್ರಮವಲ್ಲ.
ಮತ್ತೊಂದು ವಾದ ಮಂಡಿಸುವವರಿದ್ದಾರೆ. ಶಿಸ್ತಿನ ಪಾಲನೆಯಿಂದ ಆರೋಗ್ಯ ಚೆನ್ನಾಗಿರುತ್ತದೆ. ವ್ಯಕ್ತಿತ್ವಕ್ಕೆ ಮೆರುಗು ಇರುತ್ತದೆ ಎಂದು. ವ್ಯಾಯಾಮ ಮಾಡಿ, ದೇಹವನ್ನು ಗಟ್ಟಿಮುಟ್ಟಾಗಿಟ್ಟುಕೊಳ್ಳಬೇಕು ಎಂಬುದೊಂದು ಪುಕ್ಕಟೆ ಸಲಹೆ. ಅಂಥವರೇ ಎಷ್ಟೋ ಜನ ಹಲವು ಕಾರಣಗಳಿಂದಾಗಿ ಸ್ವರ್ಗವಾಸಿಗಳಾದುದಕ್ಕೆ ದುಃಖವಿದೆ. ಅದು ನಲವತ್ತು ದಾಟದೇನೆ. ಇದಕ್ಕೇನು ಹೇಳುವುದು? ದೈಹಿಕ ಸಾಮರ್ಥ್ಯ ವ್ಯಕ್ತಿಯ ಸೇವನೆಯ ಆಕರಗಳಲ್ಲಿರುತ್ತದೆ. ಕಾರ್ಬೋಹೈಡ್ರೇಟ್, ಪ್ರೋಟೀನ್, ವಿಟಮಿನ್, ಕೊಬ್ಬು ಮತ್ತು ಖನಿಜಾಂಶಗಳ ಸಮತೋಲಿತ ಆಹಾರದ ಮೇಲೆ ಶರೀರದ ಶಕ್ತಿ ಹೊಯ್ದಾಡುತಿರುತ್ತದೆ. “ಕಸ ತಿನ್ನುವುದಕ್ಕಿಂತ ತುಸು ತಿನ್ನುವುದು ಲೇಸು” ಎಂದದ್ದು ಸರಿಯೇ.
ಇನ್ನು ತಿನ್ನುವ ವಿಚಾರದಲ್ಲೂ ಕೊಂಕುಗಳಿವೆ. ಬೆಳಗ್ಗೆ ಉಪಾಹಾರ, ಮಧ್ಯಾಹ್ನದ ಊಟ, ಸಂಜೆ ಲಘು ಉಪಾಹಾರ, ರಾತ್ರಿ ಊಟ ಹೀಗೆ ಸಮಯಕ್ಕೆ ಸರಿಯಾಗಿ ಆಗಬೇಕು ಎಂದು. ನನಗೆ ವಿಚಿತ್ರವೆನಿಸಿಬಿಡುತ್ತದೆ. ವೈದ್ಯಕೀಯ ಲೋಕದ ಹೇಳಿಕೆ ಸತ್ಯವೋ? ಈ ಶಿಸ್ತಿನ ಸಿಪಾಯಿಗಳ ನಂಬಿಕೆ ಸತ್ಯವೋ? ಹೀಗೆನಿಸಲು ಅನೇಕ ಕಾರಣಗಳಿವೆ. ಆಯಾ ಶರೀರಕ್ಕೆ ತಕ್ಕಂತೆ ಆಹಾರದ ಲಭ್ಯತೆ ಭಿನ್ನವಾಗಿರುತ್ತದೆ. ಎಲ್ಲರಲ್ಲೂ ಒಂದೇ ತೆರನಾದ ಪಚನ ಕ್ರಿಯೆ ಇರುವುದಿಲ್ಲ. ಮೂರು ನಾಲ್ಕು ಹೊತ್ತು ಆಹಾರ ತೆಗೆದುಕೊಳ್ಳುವ ಅವಶ್ಯಕತೆಯೂ ಇರುವುದಿಲ್ಲ. ಯಾರಿಗೆ ಯಾವ ಸಂದರ್ಭದಲ್ಲಿ ಅವಶ್ಯಕತೆ ಇದೆ ಎನಿಸುತ್ತದೆಯೋ, ಹಸಿವೆಯಾಗಿ ಆಹಾರ ಬೇಕು ಎನಿಸುತ್ತದೆಯೋ ಆಗ ಮಾತ್ರ ಸೇವನೆ ಮಾಡುವುದೇ ಸೂಕ್ತ. ಸಮಯಕ್ಕೆ ಸರಿಯಾಗಿ ಸ್ವೀಕಾರ ಮಾಡುವುದೇನೋ ಸರಿ. ಹಾಗೆಂದು ತಿನ್ನುತ್ತಾ ಹೋದರೆ ಮೈ ಬೆಳೆಯುವುದೇ ಹೊರತು, ಮತ್ತೇನೂ ಇಲ್ಲ. ಅದು ಒಬ್ಬರ ದೇಹದ ಅವಶ್ಯಕತೆಗಳಿಗೆ ತಕ್ಕಂತೆ ಜೀವನ ಶೈಲಿ ಇರುತ್ತದೆ.
ಮಲಗುವ ವಿಚಾರದಲ್ಲಂತೂ ಮನೆಗಳಲ್ಲಿ ವಾಗ್ಯುದ್ಧಗಳು ಸರ್ವೇಸಾಮಾನ್ಯ. ಮೊಬೈಲ್ ಒಬ್ಬರ ಕೈಯಲ್ಲಿದ್ದರಂತೂ ತಂದೆ ತಾಯಿಗಳ ಪಿತ್ತ ನೆತ್ತಿಗೇರಿ ಬಿಡುತ್ತದೆ. ಅದನ್ನು ಕೊಡಿಸಿದ ಮಹಾಶಯರು ಇವರಲ್ಲದೇ ಮತ್ತ್ಯಾರು ಅಲ್ಲ. ನಿದ್ದೆ ಸರಿಯಾಗಿ ಮಾಡಲಾಗದೇ ಹೋದುದು. ಎಲ್ಲ ಅವಾಂತರಗಳಿಗೆ ಮೂಲ ಕಾರಣ ಎಂದು ಬಗೆದು ಬಿಡುತ್ತಾರೆ. ಇದೇ ಮೊಬೈಲ್ ಸಾಧನೆಗೂ, ಅವನತಿಗೂ ದಾರಿಯಾದ್ದದ್ದಿದೆ. ಬಳಸಿಕೊಳ್ಳುವ ವಿಧಾನ ಸರಿಯಾಗಿದ್ದರಷ್ಟೇ ಸಾಕು ಎಂಬುದು ಲೋಕದ ಅಭಿಮತ.
ಈ ಶಿಸ್ತಿನ ಕುರಿತು ಕೆಲವು ಬರೆಹಗಳಲ್ಲೂ ಕೂಡಾ, ಎಲ್ಲರನ್ನೂ ಒಂದೇ ಮಾರ್ಗಕ್ಕೆ ಕೊಂಡೊಯ್ಯುವ ಪ್ರಯತ್ನವಿರುತ್ತವೆ. ಅದಕ್ಕೆ ಸಾರ್ವತ್ರಿಕ ಮನ್ನಣೆ ಇಲ್ಲ. ಪಾಲನೆಯೂ ಅಸಾಧ್ಯ. ಜಗತ್ತು ಎಲ್ಲ ವಿಧದಲ್ಲೂ ವೈವಿಧ್ಯತೆಯನ್ನು ಹೊಂದಿದೆ. ಹಾಗೇನೆ ಇದೂ ಸಹ. ಬಲವಂತದ ಪ್ರಯತ್ನಗಳು ಯಾವತ್ತೂ ವಿಫಲವಾಗುತ್ತದೆ.
ಹಾಗೆಂದು ಜೀವನದಲ್ಲಿ ಶಿಸ್ತು ಇರಬೇಡವೇ? ಎಂಬ ಪ್ರಶ್ನೆಗಳು ಎದ್ದೇಳದೇ ಇರುವುದಿಲ್ಲ. ಇರಬೇಕು. ಆದರದು ಹಿಂಸೆಯಂತಾಗಬಾರದು.
ಅದು ಅವರವರ ಆಯ್ಕೆಯ ವಿಚಾರವಷ್ಟೇ. ಕೆಲವರು ಹೊತ್ತು ಗೊತ್ತು ನೋಡದೇ ಕಾರ್ಯ ಕೈಗೊಂಡು, ಸಾಫಲ್ಯತೆಯನ್ನು ಪಡೆದರೆ, ಮತ್ತೆ ಕೆಲವರು ನಿಯಮ ಬದ್ದವಾಗಿ ಕಾರ್ಯ ಕೈಗೊಂಡು ಸಾಫಲ್ಯ ಪಡೆಯುತ್ತಾರೆ. ಮಾರ್ಗಗಳು ಬೇರೆ ಬೇರೆಯಾದರೂ ಫಲಿತಾಂಶದಲ್ಲಿ ವ್ಯತ್ಯಾಸವಿಲ್ಲ. ಇದೇ ಸಂದರ್ಭದಲ್ಲಿ ಸಮಯ ಪಾಲನೆ ಮಾಡಿದ್ದರೆ ಇನ್ನೂ ಹೆಚ್ಚಿನ ಸಾಧನೆಯಾಗುತ್ತಿತ್ತು ಎಂದು ಹೇಳುವವರಿಗೆ ಉತ್ತರವಿಷ್ಟು. ಎಷ್ಟೇ ಹೋರಾಟ ಮಾಡಿದರೂ ಆ ವ್ಯಕ್ತಿಯ ಸಾಮರ್ಥ್ಯಕ್ಕೆ ತಕ್ಕಷ್ಟೇ ಆಗುತ್ತದೆ. ಅಲ್ಲವೇ ?
ಶಿಸ್ತು ಎಂಬುದು ಸ್ವಯಂ ರೂಢಿಯಾಗುವಂಥದೇ ವಿನಃ ಯಾರ ಪ್ರಭಾವದಿಂದಲೂ ರಕ್ತಗತವಾಗುವುದಿಲ್ಲ. ಸಮಯ, ಸಂದರ್ಭ ಮತ್ತು ಪ್ರಯತ್ನಗಳು ಜೀವನದ ಸಾಧನೆಗೆ ದಾರಿಯಾಗುತ್ತವೆಯೇ ವಿನಃ ಶಿಸ್ತಿನಿಂದಲೇ ಎಲ್ಲ ಆಗುತ್ತದೆ ಎಂಬುದು ಶುದ್ಧ ಸುಳ್ಳು. ಕೆಲವು ವ್ಯಕ್ತಿಗಳನ್ನು ಅತಿಯಾಗಿ ಬಣ್ಣಿಸುವ, ಚಿತ್ರಿಸುವವರಿಂದಾಗಿ ಶಿಸ್ತು ಮೊದಲ ಸ್ಥಾನದಲ್ಲಿ ಬಂದು ನಿಲ್ಲುತ್ತದೆ. ನಿಜ ಹೇಳಬೇಕೆಂದರೆ ಬೇಸರಿಕೆ, ಅಲಸ್ಯತನ,ಶೂನ್ಯ ಮನಸ್ಥಿತಿ, ತಾತ್ಸಾರ, ನಿರಾಸೆ ಇವು ಪ್ರಾಣಿ ಸಹಜ ಗುಣಗಳು. ಎಲ್ಲರಿಗೂ ಬಂದು ಹೋಗದೇ ಇರಲಾರವು. ಸದಾ ಕ್ರಿಯಾಶೀಲರಾಗಿರಲೂ ಸಾಧ್ಯವಿಲ್ಲ. ಸುಖಾಸುಮ್ಮನೆ ನುಗ್ಗೆ ಮರಕ್ಕೇರಿಸುವುದು ಕೆಲ ಜನರ ಸ್ವಾಭಾವವೇನೋ ಗೊತ್ತಿಲ್ಲ.
ನದಿಗೆ ಎಲ್ಲೆಲ್ಲಿ ಇಳಿಜಾರುಗಳು ಸಿಗುತ್ತವೆಯೋ ಅಲ್ಲೆಲ್ಲ ರಭಸವಾಗಿ ನುಗ್ಗುವುದಷ್ಟೇ. ಹಿಂದಕ್ಕೆ ಚಲಿಸುವ ಮಾತೇ ಇಲ್ಲ. ಹಾಗೇನೆ ಇದೂ ಸಹ.
ಹಿಂದೊಮ್ಮೆ ಪುಸ್ತಕ ಮೇಳವೊಂದಕ್ಕೆ ಭೇಟಿ ಕೊಟ್ಟಿದ್ದೆ. ಅಲ್ಲಿ ಪುಸ್ತಕವೊಂದನ್ನು ನೋಡಿದ್ದೆ. ಅದು ಯಾರು ಬರೆದದ್ದು ಅದರ ಉದ್ದೇಶವೇನೆಂದು ಓದಿಲ್ಲ. ಅದರ ಅಳಿದುಳಿದ ಶೀರ್ಷಿಕೆ ನೆನಪಿದೆ. “ಅಶಿಸ್ತಿನಿಂದಿರಿ ಆರಾಮಾಗಿರಿ” ಎಂದೇನೋ ಇದ್ದಂತೆ ಕಾಣುತ್ತದೆ. ಅದನ್ನು ತಾವೇ ಸರಿ ಮಾಡಿಕೊಂಡು ಓದಲು ವಿನಂತಿಸಿಕೊಳ್ಳುತ್ತೇನೆ. ಮನಸಿಗೆ ಸಂತೋಷವೆನಿಸುವ ಬದುಕಬೇಕೆಂಬ ಸಂದೇಶವಿರಬಹುದು. ಅದೊಂದೆಡೆಗೆ ಇಡೋಣ. ಇತರರಿಗೆ ಅಡಚಣೆಯಾಗದಂತೆ, ಸಾರ್ಥಕ ಬದುಕಾದರೆ ಸಾಕು. ಏಕೆ ಇಷ್ಟೆಲ್ಲ ತಾಪತ್ರಯಗಳು ಎಂದು ಕೆಲವರಿಗೆ ಅನಿಸಿದ್ದನ್ನೇ ಪುನರುಚ್ಛರಿಸಿದ್ದೇನೆ ಅಷ್ಟೇ. ಇದು ವೈಯಕ್ತಿಕ ಅಭಿಪ್ರಾಯವೆಂದು ಪರಿಗಣಿಸಬಾರದು.
ಹೀಗೆಲ್ಲ ಯೋಚಿಸುತ್ತಾ ಕುಳಿತಾಗ, ಶಿಸ್ತು ಎಂದರೇನು? ಎಂಬುದಕ್ಕೆ ವ್ಯಾಖ್ಯಾನ ಹುಡುಕಲು ಹೋದರೆ, ತಳಬುಡವೇ ಸಿಗಲಿಲ್ಲ. ಕಡೆಗೆ ” ಶಿಸ್ತು ಎಂದರೆ, ತಾನು ಸಂತೋಷದಿಂದ ಇರಲು, ಸುತ್ತ ಮುತ್ತಲ ಜನರಿಗೆ ತೊಂದರೆಯಾಗದಂತೆ, ಇಷ್ಟವಾದ ಕ್ಷೇತ್ರದಲ್ಲಿ ಕಾರ್ಯ ಪ್ರವೃತ್ತವಾಗುವುದು” ಇಲ್ಲಿ ಸ್ವಚ್ಛತೆ, ಹಿತ ಮಿತ ಮಾತು, ಜೀವನದ ಗುರಿ, ಸಾಮಾಜಿಕ ಹೊಂದಾಣಿಕೆ, ಸಂಸ್ಕೃತಿ, ಸಂಸ್ಕಾರ ಮತ್ತೇನೇನಲ್ಲ ಇವೆಯೋ ಅವುಗಳು ಇರುತ್ತವೆ ಎಂದರಿಯುವುದು. ಜೀವನ ಕ್ರಮ ನಮ್ಮ ಇಷ್ಟ ದಂತಿರಬೇಕೇ ಹೊರತು, ಇನ್ನೊಬ್ಬರಂತೆ ನಾವಾಗಲು ಹೋದರೆ ವಿಫಲತೆಯೇ. ಕಾರಣ ನಮ್ಮಮನೋ ಭೂಮಿಕೆಯು ಅವರಂತಲ್ಲ. ಹಾಗಾಗೀ ಆದರ್ಶಗಳು ಸ್ವಂತ ಇರಲೇಬೇಕು. ಆದರ್ಶ ವ್ಯಕ್ತಿ ನಮಗೆ ನಾವೇ ಆಗಬೇಕೇ ಹೊರತು, ಇನ್ನೊಬ್ಬರ ನೆರಳು ನಮ್ಮ ಮೇಲಿರಲೇ ಬಾರದು. ಹಾಗಾಗಿ ಕನ್ನಡಿಯ ಮುಂದೆ ಕಾಣುವ ನಮ್ಮ ಪ್ರತಿಬಿಂಬವೇ ಆದರ್ಶ ವ್ಯಕ್ತಿಯೆಂದು ಕಾಣಿಸಲಿ. ಆಗ ಶಿಸ್ತಿನ ರೂಪವೇ ಬದಲಾಗಿರುತ್ತದೆ. ಶಿಸ್ತು ಎಂದರೆ ಕಾದ ಹೆಂಚು ಆಗಬಾರದು. ಹೂವಿನ ಪಲ್ಲಕ್ಕಿಯಾಗಲಿ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ