ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ರಾಜ್ಯದಲ್ಲಿ ಕೊರೋನಾ ನಿಯಂತ್ರಣಕ್ಕೆ ಇನ್ನೂ ಹಲವು ದಿನಗಳ ಕಾಲ ಲಾಕ್ ಡೌನ್ ಅನಿವಾರ್ಯ ಎನ್ನುವ ಚರ್ಚೆ ನಡೆಯುತ್ತಿದ್ದು, 2 ತಿಂಗಳು ಕಂಪ್ಲೀಟ್ ಲಾಕ್ ಡೌನ್ ಮಾಡುವ ಮೂಲಕ ಕೊರೋನಾವನ್ನು ಸಂಪೂರ್ಣ ಕಟ್ಟಿ ಹಾಕಬೇಕೆನ್ನುವ ಒತ್ತಡ ಬರುತ್ತಿದೆ.
ರಾಜ್ಯದಲ್ಲಿ ಕೊರೋನಾ ನಿಯಂತ್ರಣಕ್ಕೆ ಬಂದಿದೆ ಎನ್ನುವುದಕ್ಕೆ ಸಧ್ಯಕ್ಕೆ ಯಾವುದೇ ಬಲವಾದ ಸಾಕ್ಷ್ಯ ಇಲ್ಲ. ಸಾವಿನ ಸಂಖ್ಯೆಯೂ ಕಡಿಮೆಯಾಗಿಲ್ಲ. ಕೆಲವು ಜಿಲ್ಲೆಗಳಲ್ಲಿ ಸೋಂಕಿನ ಮತ್ತು ಸಾವಿನ ಸಂಖ್ಯೆಯನ್ನು ಕಡಿಮೆ ತೋರಿಸಲಾಗುತ್ತಿದೆ. ಅನೇಕ ಜಿಲ್ಲೆಗಳಲ್ಲಿ ಶೇ.50ರ ಹತ್ತಿರ ಹತ್ತಿರ ಪಾಸಿಟಿವಿಟಿ ರೇಟ್ ಇದೆ. ಇದು ಶೇ.10ಕ್ಕಿಂತ ಕಡಿಮೆ ಬಂದರೆ ಮಾತ್ರ ಕೊರೋನಾ ನಿಯಂತ್ರಣಕ್ಕೆ ಬಂದಿದೆ ಎಂದು ಪರಿಗಣಿಸಬಹುದು. ಆದರೆ ಸಧ್ಯ ಕರ್ನಾಟಕದಲ್ಲಿ ಅಂತಹ ಸ್ಥಿತಿ ಇಲ್ಲ.
ದೆಹಲಿ ಮತ್ತು ಮಹಾರಾಷ್ಟ್ರದಲ್ಲಿ ದೀರ್ಘ ಕಾಲದ ಲಾಕ್ ಡೌನ್ ನಿಂದಾಗಿ ಕೊರೋನಾ ನಿಯಂತ್ರಣಕ್ಕೆ ಬಂದಿದೆ. ಆದರೆ ಕರ್ನಾಟಕ ಈಗ ದೇಶದಲ್ಲೇ ನಂಬರ್ 1 ಸ್ಥಾನದಲ್ಲಿದೆ. ಹಾಗಾಗಿ ಇನ್ನಷ್ಟು ದಿನಗಳ ಕಾಲ ಲಾಕ್ ಡೌನ್ ಜಾರಿಗೊಳಿಸಬೇಕು ಎನ್ನುವ ಅಭಿಪ್ರಾಯವನ್ನು ಅನೇಕ ಸಚಿವರು ಅಭಿಪ್ರಾಯಪಟ್ಟಿದ್ದಾರೆ. ಐಸಿಎಂಆರ್ ಕೂಡ ಲಾಕ್ ಡೌನ್ ವಿಸ್ತರಣೆ ಕರ್ನಾಟಕದಲ್ಲಿ ಅಗತ್ಯ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದೆ.
2 ತಿಂಗಳು ಲಾಕ್ ಡೌನ್ ವಿಸ್ತರಿಸಬಹುದು. ಆದರೆ ಎಲ್ಲರಿಗೂ ಸೂಕ್ತ ಪ್ಯಾಕೇಜ್ ಘೋಷಿಸಲಿ ಎಂದು ಕಾಂಗ್ರೆಸ್ ಹೇಳಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ಸಧ್ಯ ಮೇ 24ರ ವರೆಗೆ ಲಾಕ್ ಡೌನ್ ಇದೆ. ಮೇ 18 -20ರ ಹೊತ್ತಿಗೆ ಸಚಿವಸಂಪುಟ ಸಭೆ ನಡೆಸಿ ರಾಜ್ಯ ಸರಕಾರ ಲಾಕ್ ಡೌನ್ ಕುರಿತು ಚರ್ಚಿಸಿ ನಿರ್ಧರಿಸುವ ಸಾಧ್ಯತೆ ಇದೆ. ಸಚಿವ ಆರ್.ಅಶೋಕ ಕೂಡ ಇದೇ ಮಾತನ್ನು ಹೇಳಿದ್ದಾರೆ. ಇನ್ನೂ ಒಂದು ವಾರದ ಪರಿಸ್ಥಿತಿ ನೋಡಿ ಮೇ ಅಂತ್ಯದವರೆಗೆ ಲಾಕ್ ಡೌನ್ ನ್ನು ವಿಸ್ತರಿಸಿ ನಂತರ ಮುಂದಿನ ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆ ಇದೆ.
ಆದರೆ ಒಮ್ಮೆಲೆ 2 ತಿಂಗಳ ಲಾಕ್ ಡೌನ್ ಹಾಕುವ ಸಾಧ್ಯತೆ ತೀರಾ ತೀರಾ ಕಡಿಮೆ.
ಬೆಳಗಾವಿ ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ ಸಧ್ಯ ಲಭ್ಯವಿರುವ ಬೆಡ್ ಮಾಹಿತಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ