
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಪತ್ರಕರ್ತ ತನ್ನ ವೃತ್ತಿಪರತೆ ಹಾಗೂ ನಿಷ್ಪಕ್ಷಪಾತ ಧೋರಣೆಯಿಂದ ಎತ್ತರಕ್ಕೆ ಬೆಳೆಯಲು ಪ್ರಯತ್ನಿಸುವ ಮೂಲಕ ವೃತ್ತಿ ಗೌರವ ಘನತೆ ಎತ್ತಿ ಹಿಡಿಯುವ ಸ್ವಾಭಿಮಾನಿಯಾಗಬೇಕು ಎಂದು ಹಿರಿಯ ಪತ್ರಕರ್ತರು ಹಾಗೂ ಮಾಜಿ ವಿಧಾನ ಪರಿಷತ್ ಸದಸ್ಯರಾದ ಪಿ.ರಾಮಯ್ಯ ಅಭಿಪ್ರಾಯ ವ್ಯಕ್ತಪಡಿಸಿದರು.
ಸೋಮವಾರ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಅವರ ನೇತೃತ್ವದಲ್ಲಿ 75ನೇ ಸ್ವಾತಂತ್ರದ ಅಮೃತ ಮಹೋತ್ಸವದ ಅಂಗವಾಗಿ ಹಿರಿಯ ಪತ್ರಕರ್ತರು ಹಾಗೂ ಮಾಜಿ ವಿಧಾನ ಪರಿಷತ್ ಸದಸ್ಯರಾದ ಪಿ. ರಾಮಯ್ಯ ಅವರು, ತಮ್ಮ ಮನೆಯಲ್ಲಿ ನಡೆದ ಮನೆಯಂಗಳದಲ್ಲಿ ಮನದುಂಬಿ ನಮನ ಕಾರ್ಯಕ್ರಮದಲ್ಲಿ ಕೆಯುಡಬ್ಲ್ಯೂಜೆ ಗೌರವ ಸ್ವೀಕರಿಸಿ ಮಾತನಾಡಿದರು.
ಪತ್ರಕರ್ತರು ವಸ್ತುನಿಷ್ಠರಾಗಬೇಕು, ಜನಪರ ಆಗಬೇಕು ನೇರ ಹಾಗೂ ನಿಷ್ಠುರವಾದಿ ಆದಲ್ಲಿ ಪತ್ರಕರ್ತರಿಗೆ ಸಮಾಜ ಗೌರವಯುತವಾಗಿ ನಡೆಸಿಕೊಳ್ಳುತ್ತದೆ ಎಂದರು.
ಪತ್ರಕರ್ತ ಎಂದಾಕ್ಷಣ ಜನರಲ್ಲಿ ಮೂಡುತ್ತಿದ್ದ ವಿಶ್ವಾಸ ಕುಂದುತ್ತದೆ ಎಂಬ ಆತಂಕ ಪತ್ರಿಕಾ ವಲಯದಲ್ಲಿ ಆರಂಭವಾಗಿದ್ದು ಅದನ್ನು ಸವಾಲಾಗಿ ಸ್ವೀಕರಿಸಿ ಯುವ ಪತ್ರಕರ್ತರು ಯಾರದ್ದೇ ಮುಂದೆ ಕೈ ಚಾಚದೆ, ಪತ್ರಿಕಾ ಧರ್ಮದ ಮೌಲ್ಯಗಳನ್ನು ಎತ್ತಿ ಹಿಡಿದು, ಜನ ಕಾಳಜಿಯೊಂದಿಗೆ ಮುಂದುವರೆಯುವ ಮೂಲಕ ನಮ್ಮ ವೃತ್ತಿ ಧರ್ಮದ ಮಾರ್ಗವನ್ನು ಮಾದರಿ ಆಗಿಸಬೇಕು ಎಂದು ರಾಮಯ್ಯ ಕರೆ ನೀಡಿದರು.
ಪ್ರಾಸ್ತಾವಿಕ ವಾಗಿ ಮಾತನಾಡಿದ ಕೆಯುಡಬ್ಲ್ಯೂಜೆ ಶಿವಾನಂದ ತಗಡೂರು, ಇಡೀ ಪತ್ರಿಕೋದ್ಯಮಕ್ಕೆ ಹಿರಿಯ ಪತ್ರಕರ್ತ ಪಿ. ರಾಮಯ್ಯ ಅವರು ಮಾದರಿ ಆಗಿದ್ದಾರೆ, 50 ವರ್ಷಗಳ ಕಾಲ ದಿ ಹಿಂದೂ ಪತ್ರಿಕೆಯಲ್ಲಿ ಸಲ್ಲಿಸಿದ ಸೇವೆ ಅನನ್ಯ. ಅವರ ಆದರ್ಶಗಳು ಇಂದಿನ ಪೀಳಿಗೆಗೆ ಮಾದರಿ ಆಗಿವೆ ಎಂದರು.
ನಾಗಮಂಗಲ ತಾಲ್ಲೂಕಿನ ಬ್ಯಾಡರಹಳ್ಳಿ ಎಂಬ ಕುಗ್ರಾಮದ ರೈತ ಕುಟುಂಬದಿಂದ ಬಂದ ರಾಮಯ್ಯ ಐವತ್ತರ ದಶಕದಲ್ಲಿಯೇ ಆಂಗ್ಲ ಪತ್ರಕರ್ತರಾಗಿ ರೂಪುಗೊಂಡಿದ್ದಲ್ಲದೆ, ಕನ್ನಡದ ಬಗ್ಗೆ ಅಪಾರ ಬದ್ಧತೆಯನ್ನು ಇಟ್ಟುಕೊಂಡು ನೂರಾರು ಪತ್ರಕರ್ತರ ಬೆಳವಣಿಗೆಗೆ ಕಾರಣರಾಗಿರುವುದು ಹೆಮ್ಮೆಯ ಸಂಗತಿ ಎಂದು ಶ್ಲಾಘಿಸಿದರು.
ಯುವ ಪತ್ರಕರ್ತರನ್ನು ಬೆಳಸುವದರೊಂದಿಗೆ, ನಮ್ಮ ಅತ್ಯಂತ ಹಿರಿಯ ಪತ್ರಕರ್ತರನ್ನು ನೆನಪಿಸಿ ಅವರಿಗೆ ಗೌರವಿಸುವ ಕಾರ್ಯವನ್ನು ಸ್ವಾತಂತ್ರದ ಅಮೃತ ಮಹೋತ್ಸವ ನಿಮಿತ್ತ ಸಂಘ ಹಮ್ಮಿಕೊಂಡಿದೆ ಎಂದು ತಿಳಿಸಿದರು.
ವಾರ್ತಾ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ ಎಚ್.ಬಿ.ದಿನೇಶ್ ಅವರು ಮಾತನಾಡಿ, ರಾಮಯ್ಯ ಅವರು ಪತ್ರಕರ್ತರಾಗಿ ಸವೆಸಿದ ಹಾದಿ, ಸಲ್ಲಿಸಿದ ಸೇವೆ ಸ್ಮರಣೀಯ. ಸಣ್ಣ ಪತ್ರಿಕೆಗಳ ಅಧ್ಯಯನ ಸಮಿತಿ ಅಧ್ಯಕ್ಷರಾಗಿ ಜಿಲ್ಲಾ ಮಟ್ಟದ ಪತ್ರಿಕೆಗಳ ಬಲವರ್ಧನೆ ಮಾಡಲು ಸರ್ಕಾರಕ್ಕೆ ವರದಿ ನೀಡುವ ಮೂಲಕ ಸಣ್ಣ ಪತ್ರಿಕೆಗಳ ಬಗ್ಗೆ ಅಪಾರ ಕಾಳಜಿ ಹೊಂದಿದ್ದರು ಎಂದರು.
ಮೂರು ಕಿ.ಮೀ ಓಡಿ ಆಸ್ಪತ್ರೆ ತಲುಪಿ ಶಸ್ತ್ರ ಚಿಕಿತ್ಸೆ ಮಾಡಿದ ವೈದ್ಯ
https://pragati.taskdun.com/latest/doctorrunning-to-hospitalcar-struck-in-traffic/