
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ವೈವಿದ್ಯತೆಯೇ ಬೆಳಗಾವಿ ಗ್ರಾಮೀಣ ಕ್ಷೇತ್ರದ ಸೊಬಗು ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದಾರೆ.
ಬೆಳಗುಂದಿ ಗ್ರಾಮದ ಶ್ರೀ ಬ್ರಹ್ಮಲಿಂಗ ಯುವಕ ಮಂಡಳದವರು ಆಯೋಜಿಸಿದ್ದ ಭವ್ಯ ಚಕ್ಕಡಿ ಶರ್ಯತ್ ನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು. ಕ್ಷೇತ್ರದ ಯಾವುದೇ ಭಾಗಕ್ಕೆ ಹೋದರೂ ಒಂದೊಂದು ವಿಶೇಷತೆ, ವಿಭಿನ್ನತೆ ಇದೆ. ನಡೆ, ನುಡಿ, ಆಹಾರ ಪದ್ಧತಿ, ಸಂಸ್ಕೃತಿ, ವಸ್ತ್ರ ವಿನ್ಯಾಸ, ಆಟೋಟಗಳು ಸೇರಿದಂತೆ ಎಲ್ಲವೂ ಪ್ರತಿ ಭಾಗದಲ್ಲಿ ವಿಶೇಷವಾಗಿವೆ. ಎಲ್ಲವೂ ನಮ್ಮ ಮನಸ್ಸನ್ನು ಸೂರೆಗೊಳ್ಳುತ್ತವೆ, ಸೆಳೆಯುತ್ತವೆ. ಹಾಗಾಗಿಯೆ ನನಗೆ ಕ್ಷೇತ್ರದಲ್ಲಿ ಎಷ್ಟೇ ಓಡಾಡಿದರೂ ಆಯಾಸವೆನ್ನುವುದೇ ಇಲ್ಲ. ಇಲ್ಲಿನ ಜನರ ಮನಸ್ಸು ಕೂಡ ಅಷ್ಟೇ ಮೃದುವಾದದ್ದು. ಒಂದು ಮಾತಿನಿಂದ ಎದುರಿಗಿದ್ದವರ ಮನಸ್ಸು ಗೆಲ್ಲುವ ನಿಪುಣತೆ ಇಲ್ಲಿಯ ಜನರಲ್ಲಿದೆ. ಹಾಗಾಗಿ ಕ್ಷೇತ್ರ ಸದಾ ನನ್ನನ್ನು ಸೂಜಿಗಲ್ಲಿನಂತೆ ಸೆಳೆಯುತ್ತದೆ ಎಂದು ಕೊಂಡಾಡಿದರು.
ಕ್ಷೇತ್ರದಲ್ಲಿ ಅಭಿವೃದ್ದಿ ಕೆಲಸಗಳನ್ನು ಮಾಡುವುದರಲ್ಲಿ ನನಗೆ ಎಲ್ಲಿಲ್ಲದ ಉತ್ಸಾಹ. ಇದಕ್ಕೆ ಜನರ ಪ್ರೀತಿ, ಪ್ರೋತ್ಸಾಹ, ಮನೆ ಮಗಳಂತೆ ಕಾಣುವ ಪರಿ ಕಾರಣ. ಬೇರೆ ಯಾವ ಶಾಸಕರಿಗೆ ಇಂತಹ ಸಜ್ಜನರು ಸಿಗುತ್ತಾರೋ ಇಲ್ಲವೋ ಗೊತ್ತಿಲ್ಲ, ಆದರೆ ನಾನಂತೂ ಈ ವಿಷಯದಲ್ಲಿ ಧನ್ಯ ಎಂದು ಹೆಬ್ಬಾಳಕರ್ ಹೇಳಿದರು.
ಈ ಸಮಯದಲ್ಲಿ ಗ್ರಾಮದ ಹಿರಿಯರು, ಯಲ್ಲಪ್ಪ ಡೇಕೋಳ್ಕರ, ಯುವ ಕಾಂಗ್ರೆಸ್ ಮುಖಂಡ ಮೃಣಾಲ ಹೆಬ್ಬಾಳಕರ್, ಶಿವಾಜಿ ಬೋಕಡೆ, ಬಾಳು ದೇಸೂರಕರ್, ಸುರೇಶ ಕೀಣೆಕರ್, ಮನೋಹರ್ ಬೆಳಗಾಂವ್ಕರ್, ಗುರವ್ ಸೋಮನಗೌಡ, ದತ್ತಾ ಪಾಟೀಲ, ಪ್ರಹ್ಲಾದ ಚಿರಮುರ್ಕರ್, ಪಸಾದ ಬೋಕಡೆ ಮುಂತಾದವರು ಉಪಸ್ಥಿತರಿದ್ದರು.
https://pragati.taskdun.com/lakshmi-hebbalkara-channaraja-darshan-of-devi-banashankari/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ