*ಅಭಿವೃದ್ಧಿ ಹಿತ ದೃಷ್ಟಿಯಿಂದ ಜಿಲ್ಲೆ ವಿಭಜನೆ ಅನಿವಾರ್ಯ*; *ಜಿಲ್ಲೆಯ ಶಾಸಕರು ಒಮ್ಮತ ತೀರ್ಮಾನಕೈಗೊಳ್ಳಬೇಕು* : *ಚನ್ನರಾಜ ಹಟ್ಟಿಹೊಳಿ ಹೇಳಿಕೆ*
ಪ್ರಗತಿವಾಹಿನಿ ಸುದ್ದಿ, *ಬೆಳಗಾವಿ* : ಬೌಗೋಳಿಕವಾಗಿ ಬೆಳಗಾವಿ ಜಿಲ್ಲೆ ಅತಿದೊಡ್ಡ ಜಿಲ್ಲೆ, ಅಭಿವೃದ್ಧಿ ಹಿತ ದೃಷ್ಟಿಯಿಂದ ಜಿಲ್ಲೆಯ ವಿಭಜನೆ ಅನಿವಾರ್ಯ ಎಂದು ವಿಧಾನಪರಿಷತ್ ಸದಸ್ಯರಾದ ಚನ್ನರಾಜ ಹಟ್ಟಿಹೊಳಿ ಹೇಳಿದ್ದಾರೆ.
ಬೆಳಗಾವಿಯಲ್ಲಿ 1924ರಲ್ಲಿ ನಡೆದ ಎಐಸಿಸಿ ಅಧಿವೇಶನದ ಶತಮಾನೋತ್ಸವದ ನಿಮಿತ್ತ ರಾಜ್ಯ ಸರ್ಕಾರ ಮತ್ತು ಕಾಂಗ್ರೆಸ್ ಪಕ್ಷದ ವತಿಯಿಂದ ನಡೆದ ರಾಜ್ಯವ್ಯಾಪಿ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಹಿರೇ ಬಾಗೇವಾಡಿಯಲ್ಲಿ ಚಾವಡಿಕೂಟದಿಂದ ಪಡಿ ಬಸವೇಶ್ವರ ದೇವಸ್ಥಾನದವರೆಗೆ ‘ಗಾಂಧಿ ನಡಿಗೆ’ ಕಾರ್ಯಕ್ರಮದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದರು.
ಅಥಣಿ ತಾಲೂಕಿನ ಗಡಿ ಗ್ರಾಮ ಬೆಳಗಾವಿ ಕೇಂದ್ರ ಸ್ಥಾನದಿಂದ 200 ಕಿಲೋ ಮೀಟರ್ ದೂರವಿದ್ದರೆ, ರಾಮದುರ್ಗ ತಾಲೂಕಿನ ಗಡಿ ಗ್ರಾಮ ಬೆಳಗಾವಿ ಕೇಂದ್ರದಿಂದ 150 ಕಿಲೋಮೀಟರ್ ದೂರವಿದೆ. ಗಡಿ ಗ್ರಾಮಗಳ ಜನರಿಗೆ ಜಿಲ್ಲಾ ಕೇಂದ್ರ ಸಂಪರ್ಕ ಕಷ್ಟಕರವಾಗಿದೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ, ಬೆಳಗಾವಿ ಜಿಲ್ಲೆಯ ವಿಭಜನೆ ಬಗ್ಗೆ ಚರ್ಚೆ ನಡೆಸಬೇಕು. ಬೆಳಗಾವಿ ಜಿಲ್ಲೆಯನ್ನು ವಿಭಜಿಸಿ ಎರಡು ಅಥವಾ ಮೂರು ಜಿಲ್ಲೆ ಮಾಡಬೇಕೋ ಎಂದು ನಿರ್ಧರಿಸಬೇಕು. ಜಿಲ್ಲೆಯ 18 ಶಾಸಕರ ಜೊತೆಗೆ ಜಿಲ್ಲೆಯಲ್ಲಿ ಹೆಸರು ಮಾಡಿರುವಂಥ ಹೋರಾಟಗಾರರನ್ನು ಸಭೆಗೆ ಆಹ್ವಾನಿಸಿ, ಚರ್ಚೆ ನಡೆಸಬೇಕು. ಸಭೆಯಲ್ಲಿ ಒಂದು ನಿರ್ಧಾರ ಕೈಗೊಂಡು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು ಎಂದು ಚನ್ನರಾಜ ಹಟ್ಟಿಹೊಳಿ ಹೇಳಿದರು.
*ವಿಜೃಂಭಣೆಯಿಂದ 100ನೇ ಕಾಂಗ್ರೆಸ್ ಅಧಿವೇಶನ*
ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ನೇತೃತ್ವದಲ್ಲಿ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನಕ್ಕೆ 100 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ವಿಜೃಂಭಣೆಯಾಗಿ ವರ್ಷಪೂರ್ತಿ ಕಾರ್ಯಕ್ರಮಗಳನ್ನು ನಡೆಸಲಾಗುವುದು ಎಂದು ಚನ್ನರಾಜ್ ಹಟ್ಟಿಹೊಳಿ ಹೇಳಿದರು.
ಮುಂದಿನ ಡಿಸೆಂಬರ್ ತಿಂಗಳಲ್ಲಿ ಬೆಳಗಾವಿಯಲ್ಲಿ ಜಂಟಿ ಅಧಿವೇಶನ ನಡೆಯಲಿದ್ದು, ಕಾಂಗ್ರೆಸ್ ಪಕ್ಷದ ವತಿಯಿಂದ ಅಗತ್ಯ ಸಿದ್ಧತೆಯನ್ನು ಕೈಗೊಳ್ಳಲಾಗುತ್ತಿದೆ. ಇಂದಿನ ಗಾಂಧಿ ನಡಿಗೆ ಕಾರ್ಯಕ್ರಮದಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರದ ನೂರಾರು ಕಾರ್ಯಕರ್ತರು, ಯುವಕರು ಪಾಲ್ಗೊಳ್ಳುವ ಮೂಲಕ ಕಾರ್ಯಕ್ರಮಕ್ಕೆ ಮೆರಗು ತಂದಿದ್ದಾರೆ ಎಂದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ