ನೀತಾ ರಾವ್
ಭಾರತೀಯರಾದ ನಮಗೆಲ್ಲ ಹಬ್ಬಗಳೆಂದರೆ ಪಂಚಪ್ರಾಣ. ನಮ್ಮ ನೋವು-ನಿರಾಸೆ, ದುಗುಡ-ದುಮ್ಮಾನ ಮರೆತು ಹೊಸ ಹುರುಪನ್ನು ಮೈ-ಮನದೊಳಗೆಲ್ಲ ಹರಿದಾಡಿಸಿ ಜೀವನಕ್ಕೆ ಹೊಸ-ಹೊಳಪು ನೀಡಲು ಈ ಹಬ್ಬಗಳೇ ಸಹಕಾರಿ. ಮೂಲತಃ ಸಂಘಜೀವಿಯಾದ ಮನುಷ್ಯ, ಬಂಧು-ಬಾಂಧವರೊಡನೆ, ಸ್ನೇಹಿತರೊಡನೆ ನಕ್ಕು ನಲಿಯಲು ಹಬ್ಬಗಳೆಂಬ ಸುಂದರ ನೆಪಗಳು ಬೇಕೇ ಬೇಕು.
ಶ್ರಾವಣದ ಸೋನೆ ಮಳೆಯೊಂದಿಗೆ ಶುರುವಾಗುವ ಹಬ್ಬಗಳ ಸಾಲು-ಮೆರವಣಿಗೆಯಲ್ಲಿ ಕೊನೆಯ ಸರತಿಯಲ್ಲಿರುವುದೇ ದೀಪಾವಳಿ. ಉಳಿದೆಲ್ಲ ಹಬ್ಬಗಳಲ್ಲಿ ದೇವರನ್ನು ಪೂಜಿಸಿ, ಆರಾಧಿಸಿ ಸಂತಸ ಪಡುವ ನಾವು ದೀಪಾವಳಿಯಲ್ಲಿ ಮಾತ್ರ ನಮ್ಮನ್ನೇ ಅಲಂಕರಿಸಿಕೊಂಡು, ನಮ್ಮನ್ನೇ ಮೆರೆದಾಡಿಸಿ ಸಂಭ್ರಮ ಪಡುತ್ತೇವೆ.
ದೀಪಾವಳಿ ಅಮಾವಾಸ್ಯೆ ದಿನ ಲಕ್ಷ್ಮಿ ಪೂಜೆಯ ಸಡಗರ ಮನೆಗಳಲ್ಲಿ ಮತ್ತು ಅಂಗಡಿಗಳಲ್ಲಿ ಇರುತ್ತದೆಯಾದರೂ ಉಳಿದಂತೆ ಇದು ಮನುಷ್ಯರು ಮತ್ತು ಗೋಪೂಜೆ ಮುಖ್ಯವಾಗಿರುವ ಹಬ್ಬ. ನಮ್ಮ ಹಬ್ಬಗಳೂ ಹಾಗೆಲ್ಲ ಒಂದೇ ದಿನದಲ್ಲಿ ಮುಗಿಯುವ ಬಾಬತ್ತಿನವಲ್ಲ. ಏನಿದ್ದರೂ ಜೋಡಿಸಿ ಜೋಡಿಸಿ ನಾಲ್ಕು, ಆರು, ಹತ್ತು ದಿನಗಳು ಇರುವಂಥವು.
ಅಂದಮೇಲೆ ದೀಪಾವಳಿಯಾದರೂ ಒಂದೆರೆಡು ದಿನಕ್ಕೆ ತೃಪ್ತಿಗೊಂಡೀತೇ? ಅದೂ ನಾಲ್ಕೈದು ದಿನ ಮುಂದುವರೆಯತ್ತದೆ.
ಧನತ್ರಯೋದಶಿ ಇನ್ನೂ ನಾಲ್ಕು ದಿನ ಇದೆ ಎನ್ನುವಾಗಲೇ ಆಜೂ -ಬಾಜೂ ಮನೆಗಳಿಂದ ಹೊರಹೊಮ್ಮಲು ಆರಂಭಿಸುವ ಬೇಸನ್ ಲಾಡುವಿನ ಘಂ ಎನ್ನುವ ಪರಿಮಳ, ಚಕ್ಕುಲಿ ಕರಿದ ಎಣ್ಣೆಯ ವಾಸನೆಯನ್ನು ಮೂಗಿನ ಗ್ರಂಥಿಗಳು ಗ್ರಹಿಸಿ, ಇನ್ನು ನಮ್ಮ ಮನೆಯಲ್ಲೂ ಶುರು ಮಾಡಲು ಅಮ್ಮನಿಗೆ ಹೇಳಬೇಕೆಂದು ಮೆದುಳು, ಮನಸ್ಸಿಗೆ ಆರ್ಡರ್ ಮಾಡಿ ಮನೆಗೆ ಬಂದು ನೋಡಿದರೆ ಆಗಷ್ಟೇ ಗಿರಣಿಯಿಂದ ಬೀಸಿ ತಂದ ವಾಸನೆ ಪಸರಿಸುತ್ತಿರುವ ಘಂ ಎನ್ನುವ ಬಿಸಿ-ಬಿಸಿ ಚಕ್ಕುಲಿ ಹಿಟ್ಟು ನೋಡಿಯೇ ದೀಪಾವಳಿಯ ಗುಂಗು ಹತ್ತಿಬಿಡುವುದು.
ಹೊಸ ಬಟ್ಟೆ, ಮನೆಗೆ ಹೊಸ ಸಾಮಾನುಗಳು ಹಬ್ಬಕ್ಕಿಂತ ಮೊದಲೇ ಬಂದು ಕೂತು ಒಂಥರಾ ಹಬ್ಬದ ವಾತಾವರಣ ಸೃಷ್ಟಿ ಮಾಡಲು ಎಲ್ಲ ರೀತಿಯ ಸೇವೆಯನ್ನೊದಗಿಸುತ್ತವೆ.
ಧನ ತ್ರಯೋದಶಿಯ ರಾತ್ರಿಯಿಂದಲೇ ಪ್ರಾರಂಭವಾಗುವ ಹಬ್ಬದ ಮೊದಲ ದಿನಕ್ಕೆ ನೀರು ತುಂಬುವ ಹಬ್ಬವೆಂತಲೂ ಕರೆಯುತ್ತೇವೆ. ತಿಕ್ಕಿ ತೊಳೆದು ಲಕಲಕವೆನೆಸಿದ ತಾಮ್ರದ ಬಾಯ್ಲರಿಗೆ ಸುಣ್ಣ ಮತ್ತು ಕೆಮ್ಮಣ್ಣಿನ ಅಥವಾ ಕುಂಕುಮದ ಪಟ್ಟಿಗಳನ್ನು ಬಳಿದು ಮಾನಿಂಗನ ಬಳ್ಳಿಯನ್ನು ಸುತ್ತಲೂ ಹಾಕಿ, ನೀರು ತುಂಬಿಸಿ ಇಡುವುದು.
ಮರುದಿನ ಅಂದರೆ ನರಕ ಚತುರ್ದಶಿಯ ದಿನ ಇನ್ನೂ ಚುಮು ಚುಮು ಕತ್ತಲೆ ಇರುವಾಗಲೇ ಎದ್ದು, ಮನೆಯ ಮುಂದೆ ಮಣ್ಣಿನ ಪ್ರಣತಿಗಳಲ್ಲಿ ದೀಪ ಹಚ್ಚಿಟ್ಟು ಹೊಸ ಬಟ್ಟೆಗಳನ್ನು ತೊಟ್ಟು ಹೆಣ್ಣುಮಕ್ಕಳು ಮನೆಯ ಗಂಡಸರಿಗೆ ಆರತಿ ಮಾಡುವುದು. ಆರತಿ ಮಾಡಿಸಿಕೊಂಡ ಗಂಡಸರು ಆರತಿ ತಟ್ಟೆಗೆ ದುಡ್ಡು ಹಾಕಬೇಕು. ನಾವು ಚಿಕ್ಕವರಿದ್ದಾಗ ಅಪ್ಪ ಎಷ್ಟು ದುಡ್ಡು ಹಾಕುತ್ತಾನೆಂದು ಸಂಭ್ರಮ, ಕಾತರದಿಂದ ಕಾಯುತ್ತಿದ್ದೆವು.
ಬಹಳ ಹಿಂದೆ ನಾವಿನ್ನೂ ಸ್ಕೂಲಿಗೆ ಹೋಗುವಷ್ಟು ಚಿಕ್ಕವರಿದ್ದಾಗ ಒಂದೆರಡು ವರ್ಷ ಮನೆತನದ ಎಲ್ಲ ಅಣ್ಣತಮ್ಮಂದಿರು ತಮ್ಮ ಪರಿವಾರದೊಂದಿಗೆ ನಮ್ಮ ಊರಾದ ಹಾನಗಲ್ಲಿನ ಹೇರೂರು ಮತ್ತು ಚಿಕ್ಕಪ್ಪ ಆಗ ಇದ್ದ ತಿಳವಳ್ಳಿಯಲ್ಲಿ ಹಬ್ಬ ಆಚರಿಸಿದ ನೆನಪು ಇನ್ನೂ ಹಸಿರಾಗಿದೆ. ಅಪ್ಪ ಮತ್ತು ಅವನ ಅಣ್ಣ-ತಮ್ಮಂದಿರು, ಒಟ್ಟು ಏಳು ಜನ.
ಎಲ್ಲರೂ ಅವರ ಗಂಡುಮಕ್ಕಳೂ, ಸಾಲಾಗಿ ಕುಳಿತು ಮನೆಯ ಹೆಣ್ಣುಮಕ್ಕಳಿಂದ ಆರತಿ ಮಾಡಿಸಿಕೊಂಡು ಬೆಳ್ಳಿಯ ನಾಣ್ಯಗಳ ಜೊತೆಗೆ ತಾವೂ ಒಂದಿಷ್ಟು ಸೇರಿಸಿ ದುಡ್ಡು ಹಾಕುತ್ತಿದ್ದರು. ಎಲ್ಲ ಹೆಣ್ಣುಮಕ್ಕಳು ಅವನ್ನು ಸರಿಯಾಗಿ ಪಾಲು ಮಾಡಿಕೊಂಡಾಗ ನಾಲ್ಕೋ ಐದೋ ರೂಪಾಯಿ ಒಬ್ಬೊಬ್ಬರಿಗೆ ಬರುತ್ತಿತ್ತು.
ಅದರಲ್ಲೂ ಅಪ್ಪ ಮಧ್ಯೆ ಬಂದು, “ನನ್ನ ಇಬ್ಬರೂ ಹೆಣ್ಣುಮಕ್ಕಳು ಛಂದಾಗಿ ಆರತಿ ಹಾಡು ಅಂದಾರ, ಅವರಿಗೆ ಸ್ವಲ್ಪ ಜಾಸ್ತಿ ರೊಕ್ಕ ಕೊಡಬೇಕು” ಎಂದು ಹೇಳಿ ಚಾಷ್ಟಿ ಮಾಡುತ್ತಿದ್ದ. ಆ ಹಾಸ್ಯದಲ್ಲಿ ತನ್ನ ಮಕ್ಕಳ ಬಗೆಗಿನ ಹೆಮ್ಮೆ ಮತ್ತು ಪ್ರೀತಿಯೂ ಅಡಗಿರುತ್ತಿತ್ತು. ನಂತರ ಹೆಣ್ಣುಮಕ್ಕಳಿಗೂ ಆರತಿ. ಆಮೇಲೆ ಎಲ್ಲರಿಗೂ ಬಂಗಾರದ ಉಂಗುರದಿಂದ ಸುವಾಸನೆಯ ಎಣ್ಣೆಯನ್ನು ತಲೆಗೆ ಹಚ್ಚಿ ಅಭ್ಯಂಗ ಸ್ನಾನ.
ಬೆಳಕಾಗುತ್ತಿದ್ದಂತೆಯೇ ಮನೆಯ ಅಂಗಳದಲ್ಲಿ ದೊಡ್ಡ ರಂಗೋಲಿ ಬಿಡಿಸಿ ಅದಕ್ಕೆ ಬಣ್ಣ ತುಂಬುವುದೆಂದರೆ ನನಗೆ ಬಲು ಪ್ರೀತಿ. ತಾಸುಗಟ್ಟಲೇ ತುಂಬ ಸಹನೆ ಮತ್ತು ಏಕಾಗ್ರತೆಯಿಂದ ರಂಗೋಲಿ ಹಾಕುತ್ತಿದ್ದ ನನ್ನ ಹವ್ಯಾಸವನ್ನು ಮರೆಸಿದ ಪಾಪ ಬಂದಿರುವುದು ಬದಲಾದ ಕಾಲಕ್ಕೋ, ನನ್ನ ವಯಸ್ಸಿಗೋ, ಇಲ್ಲಾ ಅಂಗಳವಿಲ್ಲದ ಅಪಾರ್ಟಮೆಂಟಿನ ಈಗಿನ ಮನೆಗೋ!
ಸ್ನಾನ ಮಾಡಿ ಹತ್ತಿರವೇ ಇದ್ದ ದೇವರ ಗುಡಿಗೆ ಹೋಗಿ ಢಣ್ ಎಂದು ಗಂಟೆ ಬಾರಿಸಿ ನಾವು ಬಂದಿರುವುದನ್ನು ದೇವರಿಗೆ ತಿಳಿಸಿ, ನಮಿಸಿ ಮನೆಗೆ ಬರುವಷ್ಟರಲ್ಲಿ ಅಮ್ಮ ಮಾಡಿದ ಉಪ್ಪಿಟ್ಟೋ, ಅವಲಕ್ಕಿಯೋ ಘಂ ಎಂದು ಸ್ವಾಗತಿಸುತ್ತಿತ್ತು. ಅದರ ಜೊತೆಗೆ ಉಂಡೆ, ಚಕ್ಕುಲಿ, ಶಂಕರಪೋಳೆ ಮುಂತಾದ ಕುರುಕಲುಗಳನ್ನು ಮೇಯುತ್ತ ಆನಂದವಾಗಿ ಅನುಭವಿಸುತ್ತಿದ್ದ ನರಕ ಚತುರ್ದಶಿಯ ಹಬ್ಬದ ನೆನಪು ನಿನ್ನೆ ಮೊನ್ನೆ ನಡೆದಂತೆ ನವೀನವಾಗಿದೆ.
ಹೊಸದಾಗಿ ಮದುವೆಯಾದ ಹುಡುಗಿಯರ ಮನೆಗಳ ಸಂಭ್ರಮವಂತೂ ಹೇಳತೀರದು. ಹೊಸ ಮದುಮಕ್ಕಳ ಜೊತೆ ಬೀಗರನ್ನೂ ಕರೆದು ಅಳ್ಯಾತನ (ಅಳಿಯತನ) ಮಾಡಿ, ಆರತಿ, ಉಡುಗೊರೆ ಎಂದೆಲ್ಲ ಸಂಭ್ರಮವೋ ಸಂಭ್ರಮ.
ಇನ್ನು ಅಮಾವಾಸ್ಯೆಯಂದು ಲಕ್ಷ್ಮೀ ಪೂಜೆಯನ್ನು ಎಲ್ಲ ಸಣ್ಣ- ಪುಟ್ಟ ಮತ್ತು ದೊಡ್ಡ ಅಂಗಡಿಗಳಲ್ಲೂ ಮಾಡುವುದರಿಂದ ಅಂದು ಸಂಜೆಯೆಲ್ಲ ನಮ್ಮ ಗೆಳತಿಯರ ದಂಡು ಕರೆದವರ ಅಂಗಡಿಗಳಿಗಷ್ಟೇ ಅಲ್ಲದೇ ಗುರುತು ಪರಿಚಯವಿರದ ಅನೇಕ ಅಂಗಡಿಗಳಿಗೆ ಲಗ್ಗೆ ಇಟ್ಟು ಅವರು ಕೊಡುವ ಚುರುಮುರಿ, ಖೊಬ್ಬರಿ, ಪೇಢೆಗಳನ್ನು ಸ್ವೀಕರಿಸಿ ಧನ್ಯರಾದದ್ದೂ ಇದೆ.
ರಾತ್ರಿಯಾಗುತ್ತಲೂ ಮನೆಯ ಮುಂದೆ ದೀಪಗಳ ಸಾಲು ಪಣತಿಗಳು. ಎಲ್ಲರ ಮನೆಯ ಮುಂದೆ ಆಕಾಶಬುಟ್ಟಿಗಳು. ನಮ್ಮ ಮನೆಯಲ್ಲೇಕೋ ಅಪ್ಪ ಆಕಾಶಬುಟ್ಟಿ ತರುತ್ತಿರಲಿಲ್ಲ.
ಮತ್ತೆ ಭಾವ ಬಿದಗಿಯಂದು ಅಣ್ಣ, ತಮ್ಮಂದಿರಿಗೆ ಆರತಿ, ಅಕ್ಕನ ತದಿಗೆಯಂದು ಅಕ್ಕ-ತಂಗಿಯರಿಗೆ ಆರತಿ, ಒಟ್ಟು ದಿನಾಲೂ ಮನುಷ್ಯರೇ ಮನುಷ್ಯರಿಗೆ ಮಾಡುವ ಆರತಿಗಳು, ತಿಂದು ತೇಗುವ ಫರಾಳಗಳು, ಹಾಕಿ ನಲಿಯಲು ಹೊಸ ಬಟ್ಟೆಗಳು, ಎಲ್ಲ ಸೇರಿ ಇದನ್ನು ಮನುಷ್ಯರ ಹಬ್ಬವನ್ನಾಗಿಸಿವೆ.
ಇನ್ನು ಬೆಳಗಾವಿಯ ವಿಶೇಷವೆಂದರೆ ಇಲ್ಲಿ ಮಕ್ಕಳು ಕಿಲ್ಲಾ (ಕೋಟೆ) ಮಾಡಿ ಅದರಲ್ಲಿ ಎತ್ತರದ ದಿಬ್ಬದ ಮೇಲೆ ಶಿವಾಜಿ ಮಹಾರಾಜನ ಮೂರ್ತಿಯನ್ನಿಟ್ಟು ಕೋಟೆಯ ಸುತ್ತಲೂ ಮೌಳೆಗಳ (ಸೈನಿಕರ ) ಮೂರ್ತಿಗಳನ್ನಿಡುತ್ತಾರೆ. ಮಧ್ಯೆ ಉಸುಕಿನಿಂದ ಪುಟ್ಟ ರಸ್ತೆಗಳು, ಅವುಗಳ ಮೇಲೆ ಆಟದ ಕಾರುಗಳು, ಬಸ್ಸುಗಳು, ಒಂದುಕಡೆ ಸಣ್ಣ ಕೆರೆ ಮಾಡಿ ಅದರಲ್ಲಿ ಪುಟ್ಟ ಬೋಟುಗಳನ್ನು ತೇಲಿ ಬಿಟ್ಟಿರುತ್ತಾರೆ.
ಕೆಲವರು ಮೊದಲೇ ಸಾಸಿವೆ ಕಾಳುಗಳನ್ನು ಹಾಕಿ ಬೆಳೆಸಿ ಹೊಲ ಅಥವಾ ಅರಣ್ಯದ ಪ್ರತಿಕೃತಿಯನ್ನು ಮೈದಳೆಸುತ್ತಾರೆ. ಅವುಗಳ ಮಧ್ಯೆ ಕಟ್ಟಿಗೆಯ ಇಲ್ಲವೇ ಪ್ಲಾಸ್ಟಿಕ್ಕಿನ ಮರಗಳು, ಪ್ರಾಣಿಗಳನ್ನೂ ಇಡುತ್ತಾರೆ. ಅವುಗಳನ್ನು ನೋಡಲು ಜನರೂ ಅಷ್ಟೇ ಉತ್ಸಾಹದಿಂದ ಬರುತ್ತಾರೆ ಮತ್ತು ಶಹಬ್ಬಾಸ ಎಂದು ಮಕ್ಕಳ ಪರಿಶ್ರಮಕ್ಕೆ ಮೆಚ್ಚುಗೆ ಸೂಚಿಸಿ ಬೆನ್ನು ತಟ್ಟುತ್ತಾರೆ.
ಇದೀಗ ಅವುಗಳಿಗೆ ಬಹುಮಾನ ನೀಡುವ ಸಂಪ್ರದಾಯವೂ ಶುರುವಾಗಿದೆ. ಶಿವಾಜಿಯು ಚಿಕ್ಕವನಿದ್ದಾಗ ಗುಡ್ಡಬೆಟ್ಟಗಳಲ್ಲಿ ತನ್ನ ಗೆಳೆಯರೊಂದಿಗೆ ಕೋಟೆ ಕಟ್ಟುವ ಆಟವಾಡುತ್ತಿದ್ದನಂತೆ. ಹಾಗಾಗಿ ಇಲ್ಲಿನ ಮಕ್ಕಳೂ ಕೋಟೆ ಕಟ್ಟಿ ಆಟವಾಡುತ್ತಾರೆ. ಅವರಿಗೆ ಶಿವಾಜಿ, ಸೈನಿಕರು, ತೋಪುಗಳು, ಕೋಟೆಯ ಗೋಡೆ ಮತ್ತು ದ್ವಾರಗಳ ಆಟದ ಸಾಮಾನುಗಳು ಮತ್ತು ಬೊಂಬೆಗಳನ್ನೊದಗಿಸುವ ದೊಡ್ಡ ಉದ್ಯಮವೇ ಬೆಳೆದು ನಿಂತಿದೆ ಈಗ.
ನಾವು ಶಾಲೆ-ಕಾಲೇಜಿನಲ್ಲಿ ಕಲಿಯುತ್ತಿದ್ದಾಗ ದೀಪಾವಳಿ ಫರಾಳಕ್ಕೆ ಒಬ್ಬರ ಮನೆಗೊಬ್ಬರು ಹೋಗುವ ಪದ್ಧತಿ ಇತ್ತು. ಏಳೆಂಟು ಜನ ಗೆಳತಿಯರು ಸೇರಿ ಒಂದೊಂದು ದಿನ ಒಬ್ಬರ ಮನೆಗೆ ಹೋಗುವುದು, ಶಿಸ್ತಾಗಿ ಹರಟೆ ಹೊಡೆದು ಗಡದ್ದಾಗಿ ತಿಂದು ಬರುವುದು. ಈಗ ಅವೆಲ್ಲ ಕಡಿಮೆಯಾಗಿವೆ.
ಈ ಎಲ್ಲಸಂಭ್ರಮ, ಸಡಗರಗಳಿಂದಾಗಿ ದೀಪಾವಳಿ ಎಂದಕೂಡಲೇ ಮೈ- ಮನಸ್ಸು ಅರಳಿ, ನಾಸಿಕಗಳ ಗ್ರಂಥಿಗಳು ಕೆರಳಿ “ಬರಲಿ, ಬರಲಿ ದೀಪದ ಹಬ್ಬ ದೀಪಾವಳಿ” ಎಂದು ಇಂದಿಗೂ ಬೇಡಿಕೊಳ್ಳುವಂತಾಗುತ್ತದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ