*ಡಿಕೆಶಿ ಮತ್ತು ನನ್ನದು ಹಾಲು-ಜೇನಿನ ಸಂಬಂಧ: ಸಿದ್ದರಾಮಯ್ಯ ಕುತೂಹಲಕರ ವ್ಯಾಖ್ಯಾನ* *ಕೌಂಟರ್ ಕೊಟ್ಟ ಅಶೋಕ್, ಎಚ್ ಡಿಕೆ*

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು : ರಾಜ್ಯದಲ್ಲಿ ಅಧಿಕಾರ ಹಂಚಿಕೆಯ ಕುರಿತು ನಾನಾ ರೀತಿಯ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರ ನಡುವಿನ ಸಂಬಂಧದ ಕುರಿತು ಹೊಸ ವ್ಯಾಖ್ಯಾನ ನೀಡಿದ್ದಾರೆ.
ತನ್ಮೂಲಕ ರಾಜ್ಯ ರಾಜಕೀಯದಲ್ಲಿ ಹೊಸ ಕುತೂಹಲಕ್ಕೆ ಕಾರಣವಾಗಿದೆ. ವಿರೋಧ ಪಕ್ಷದ ನಾಯಕ ಆರ್.ಅಶೋಕ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಹೇಳಿಕೆಯೊಂದಕ್ಕೆ ಪ್ರತಿಕ್ರಿಯೆ ನೀಡಿರುವ ಸಿದ್ದರಾಮಯ್ಯ ಡಿ.ಕೆ.ಶಿ ಜೊತೆಗಿನ ಸಂಬಂಧದ ಕುರಿತು ಟ್ವೀಟ್ ಮಾಡಿದ್ದಾರೆ. ತಮ್ಮ ಮತ್ತು ಡಿಕೆಶಿ ಜೊತೆಗಿನ ಸಂಬಂಧ ಹಾಲು – ಜೋನಿನ ಸಂಬಂಧ ಎಂದಿದ್ದಾರೆ.
ಅವರ ಟ್ವೀಟ್ ಹೀಗಿದೆ:
“ಈ ಬಾರಿ ನಮ್ಮ ಪಕ್ಷ ಅಧಿಕಾರಕ್ಕೆ ಬಂದ ನಂತರ ನಿರುದ್ಯೋಗಿ ವಿರೋಧ ಪಕ್ಷದ ನಾಯಕರು ನನ್ನ ಮತ್ತು ಡಿ.ಕೆ.ಶಿವಕುಮಾರ್ ಅವರ ನಡುವಿನ ಸಂಬಂಧಕ್ಕೆ ಹುಳಿ ಹಿಂಡಲು ಪ್ರಯತ್ನಿಸುತ್ತಲೇ ಇದ್ದಾರೆ, ಇದರಿಂದ ಅವರೊಳಗೆ ತುಂಬಿಕೊಂಡಿರುವ ಹುಳಿ ಖಾಲಿಯಾಗಬಹುದೇ ಹೊರತು ನಮ್ಮ ಹಾಲು-ಜೇನಿನಂತಹ ಸಂಬಂಧದ ಮೇಲೆ ಯಾವ ಪರಿಣಾಮವೂ ಆಗುವುದಿಲ್ಲ ಎನ್ನುವುದು ಆರ್.ಅಶೋಕ್ ಮತ್ತು ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ತಿಳಿದಿರಲಿ”
ಈ ಸಂಬಂಧ ಮಾಧ್ಯಮ ಹೇಳಿಕೆಯೊಂದನ್ನು ಸಹ ಸಿದ್ದರಾಮಯ್ಯ ಬಿಡುಗಡೆ ಮಾಡಿದ್ದಾರೆ.
’’ತಾ ಕಳ್ಳ ಇತರರ ನಂಬ’’ ಎಂಬ ಗಾದೆಯಂತಿದೆ. ಇದೊಂದು ಅತೃಪ್ತ ಆತ್ಮಗಳ ಹತಾಶ ಹೇಳಿಕೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಮೇಲೆ ಕಣ್ಣಿಡಲು ಪೋನ್ ಕದ್ದಾಲಿಕೆ ನಡೆಯುತ್ತಿದೆ ಎಂಬ ವಿರೋಧ ಪಕ್ಷದ ನಾಯಕರಾದ ಆರ್.ಅಶೋಕ್ ಮತ್ತು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿಯವರ ಆರೋಪಕ್ಕೆ ಸಿಎಂ ಸಿದ್ದರಾಮಯ್ಯ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಈ ಬಾರಿ ನಮ್ಮ ಪಕ್ಷ ಅಧಿಕಾರಕ್ಕೆ ಬಂದ ನಂತರ ಈ ನಿರುದ್ಯೋಗಿ ವಿರೋಧ ಪಕ್ಷದ ನಾಯಕರು ನನ್ನ ಮತ್ತು ಡಿ.ಕೆ.ಶಿವಕುಮಾರ್ ಅವರ ನಡುವಿನ ಸಂಬಂಧಕ್ಕೆ ಹುಳಿ ಹಿಂಡಲು ಪ್ರಯತ್ನಿಸುತ್ತಲೇ ಇದ್ದಾರೆ, ಇದರಿಂದ ಅವರೊಳಗೆ ತುಂಬಿಕೊಂಡಿರುವ ಹುಳಿ ಖಾಲಿಯಾಗಬಹುದೇ ಹೊರತು ನಮ್ಮ ಹಾಲು-ಜೇನಿನಂತಹ ಸಂಬಂಧದ ಮೇಲೆ ಯಾವ ಪರಿಣಾಮವೂ ಆಗುವುದಿಲ್ಲ ಎನ್ನುವುದು ಇಬ್ಬರಿಗೂ ತಿಳಿದಿರಲಿ.
ಆರೋಪ ಮಾಡಿರುವ ಒಬ್ಬರು ರಾಜ್ಯದ ಮುಖ್ಯಮಂತ್ರಿಗಳಾಗಿದ್ದವರು, ಇನ್ನೊಬ್ಬರು ಉಪಮುಖ್ಯಮಂತ್ರಿ ಮತ್ತು ಗೃಹ ಸಚಿವರಾಗಿದ್ದವರು. ಅವರ ಕಾಲದಲ್ಲಿ ಕೂಡಾ ಗುಪ್ತಚರ ವಿಭಾಗ ಮುಖ್ಯಮಂತ್ರಿಯವರ ಬಳಿಯೇ ಇತ್ತು. ಅವರ ಹೇಳಿಕೆಗಳನ್ನು ಗಮನಿಸಿದರೆ ಇವರಿಬ್ಬರೂ ತಮ್ಮ ಅನುಭವದ ಬಲದಿಂದಲೇ ಈ ಆರೋಪ ಮಾಡುತ್ತಿರುವಂತೆ ಕಾಣಿಸುತ್ತಿದೆ.
ನಮ್ಮದು ಆಂತರಿಕ ಪ್ರಜಾಪ್ರಭುತ್ವ ಇರುವ ಪಕ್ಷ. ಕಾಂಗ್ರೆಸ್ ಪಕ್ಷ ಎನ್ನುವುದು ಪ್ರಧಾನಿ ಎದುರು ಬಾಯಿ ಬಿಡಲಾಗದೆ ಕೈಕಾಲು ನಡುಗುವಂತಹ ಸ್ಥಿತಿ ಇರುವ ಬಿಜೆಪಿಯೂ ಅಲ್ಲ, ಏಕ ಕುಟುಂಬದ ಅಧಿಪತ್ಯ ಇರುವ ಜೆಡಿಎಸ್ ಕೂಡಾ ಅಲ್ಲ. ನಮ್ಮ ಶಾಸಕರಲ್ಲಿ ಯಾರೂ ಕೂಡಾ ನನ್ನ ಇಲ್ಲವೇ ಡಿ.ಕೆ.ಶಿವಕುಮಾರ್ ಬೆಂಬಲಿಗರಲ್ಲ, ಎಲ್ಲರೂ ಕಾಂಗ್ರೆಸ್ ಪಕ್ಷದ ಬೆಂಬಲಿಗರು. ಪಕ್ಷದ ಶಿಸ್ತಿನ ಚೌಕಟ್ಟಿನೊಳಗೆ ವೈಯಕ್ತಿಕವಾಗಿ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ, ಜೊತೆಯಲ್ಲಿ ಊಟ-ತಿಂಡಿ ಮಾಡುವ ಎಲ್ಲ ಸ್ವಾತಂತ್ರ್ಯಗಳು ಅವರಿಗೆ ಇದೆ. ಆದರೆ ಯಾವ ಶಾಸಕರು ಏನನ್ನೇ ಹೇಳಿದರೂ ಅಂತಿಮವಾಗಿ ಅವರನ್ನೂ ಸೇರಿದಂತೆ ನಾನು ಮತ್ತು ಶಿವಕುಮಾರ್ ನಮ್ಮ ಪಕ್ಷದ ಹೈಕಮಾಂಡ್ ಆದೇಶಕ್ಕೆ ತಲೆಬಾಗುವವರು. ಇದನ್ನು ನಾವಿಬ್ಬರೂ ಒಂದಲ್ಲ ನೂರು ಬಾರಿ ಹೇಳಿದ್ದೇವೆ. ಇದೇ ಅಂತಿಮ ಸತ್ಯ.
ಈ ರೀತಿ ಸುಳ್ಳು ಸುದ್ದಿಗಳನ್ನು ಹರಡಿ ನಮ್ಮಿಬ್ಬರ ಸಂಬಂಧವನ್ನು ಕೆಡಿಸಿ ಡಿ.ಕೆ.ಶಿವಕುಮಾರ್ ಅವರನ್ನು ಒಲಿಸಿಕೊಳ್ಳುವ ದುರಾಲೋಚನೆ ಏನಾದರೂ ಬಿಜೆಪಿ ಮತ್ತು ಜೆಡಿಎಸ್ ನಾಯಕರಿಗೆ ಇದ್ದರೆ, ಅವರ ಹಗಲು ಕನಸುಗಳಿಗೆ ಶುಭ ಹಾರೈಸುತ್ತೇನೆ. ಶಿವಕುಮಾರ್ ಒಬ್ಬ ಕಟ್ಟಾ ಕಾಂಗ್ರೆಸಿಗ, ಸುಳ್ಳು ಕೇಸ್ ಗಳನ್ನು ಹಾಕಿ, ಜೈಲಿಗೆ ಕಳಿಸಿ ಅವರನ್ನು ಮಣಿಸುವ ಎಲ್ಲ ಪ್ರಯತ್ನಗಳನ್ನು ಬಿಜೆಪಿ ಮಾಡಿಯಾಗಿದೆ. ಇದಕ್ಕೆಲ್ಲ ಮಣಿಯದೆ ಅವರು ಪಕ್ಷಕ್ಕೆ ನಿಷ್ಠರಾಗಿ ಉಳಿದವರು ಎನ್ನುವುದು ಈ ಕುತಂತ್ರಿ ನಾಯಕರಿಗೆ ತಿಳಿದಿರಲಿ.
ಕರ್ನಾಟಕದ ಇತ್ತೀಚಿನ ರಾಜಕೀಯ ಇತಿಹಾಸದ ಪುಟಗಳ ಮೇಲೆ ಒಮ್ಮೆ ಕಣ್ಣಾಡಿಸಿದರೆ ಈ ಪೋನ್ ಕದ್ದಾಲಿಕೆ, ಗೂಢಚರ್ಯೆಗಳೆಲ್ಲ ಯಾವ ಪಕ್ಷದ ದುಷ್ಕೃತ್ಯಗಳು ಎನ್ನುವುದು ಅರಿವಾಗುತ್ತದೆ. ಈ ದುರ್ಬುದ್ದಿಯ ಕಾರಣದಿಂದಾಗಿಯೇ ರಾಜ್ಯ ರಾಜಕೀಯದಲ್ಲಿ ಆಪರೇಷನ್ ಕಮಲ, ರೆಸಾರ್ಟ್ ರಾಜಕಾರಣ, ವಚನಭಂಗದಂತಹ ಅನಿಷ್ಠಗಳು ಕಾಣಿಸಿಕೊಂಡಿರುವುದು. 2004ರಿಂದ 2013 ವರೆಗಿನ ಒಂಬತ್ತು ವರ್ಷಗಳ ಅವಧಿಯಲ್ಲಿ ರಾಜ್ಯ ಐದು ಮುಖ್ಯಮಂತ್ರಿಗಳನ್ನು, 2018ರಿಂದ 2023ರ 5 ವರ್ಷಗಳ ಅವಧಿಯಲ್ಲಿ ಮೂರು ಮುಖ್ಯಮಂತ್ರಿಗಳನ್ನು ರಾಜ್ಯ ಕಾಣುವಂತಾಗಲು ಇವರೊಳಗಿನ ಪರಸ್ಪರ ಅಪನಂಬಿಕೆ, ದ್ವೇಷ, ಅಸೂಯೆ, ಬೆನ್ನಿಗೆ ಚೂರಿ ಹಾಕುವ ಕುತಂತ್ರಗಳೇ ಕಾರಣ.
2018ರಲ್ಲಿ ಹೆಚ್.ಡಿ. ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದಾಗ ಆದಿಚುಂಚನಗಿರಿಯ ಪೂಜ್ಯ ನಿರ್ಮಲಾನಂದನಾಥ ಸ್ವಾಮಿಗಳ ಫೋನನ್ನೆ ಕದ್ದಾಲಿಸಿದ್ದಾರೆ ಎಂದು ಈಗಿನ ಅವರ ರಾಜಕೀಯ ಸಂಗಾತಿ ಬಿ.ವೈ ವಿಜಯೇಂದ್ರ ಅವರೇ ಆರೋಪ ಮಾಡಿದ್ದರು. ಇದರ ಬಗ್ಗೆ ತನಿಖೆ ಮಾಡಿದ್ದ ಸಿಬಿಐ, ಒಬ್ಬ ಸ್ವಾಮೀಜಿಗಳದ್ದಷ್ಟೇ ಅಲ್ಲ, ಬದಲಿಗೆ ಏಳು ಸ್ವಾಮೀಜಿಗಳ ಫೋನ್ ಗಳ ಕದ್ದಾಲಿಕೆ ಮಾಡಲಾಗಿದೆ ಎಂದು ತಿಳಿಸಿತ್ತು. ನಂಬಿಕೆಗೆ ತಾನು ಅರ್ಹ ಅಲ್ಲ ಎಂದು ಸಾಬೀತು ಮಾಡಿರುವ ಕುಮಾರಸ್ವಾಮಿವರನ್ನು ಬಿಜೆಪಿಯವರು ಸುಮ್ಮನೆ ಬಿಟ್ಟಾರೆಯೇ? ಅವರ ವಿರುದ್ಧವೂ ಗೂಢಚಾರರನ್ನು ಬಿಟ್ಟಿರಬಹುದು. ಇಂತಹ ದುರ್ಬುದ್ದಿಗಾಗಿಯೇ ರಾಜ್ಯದ ಜನತೆ ಈ ಎರಡೂ ಪಕ್ಷಗಳನ್ನು ತಿರಸ್ಕರಿಸಿರುವುದು ಎನ್ನುವುದು ನೆನಪಿರಲಿ.
ಅಧಿಕಾರವನ್ನು ದುರ್ಬಳಕೆ ಮಾಡಿ ಸರ್ಕಾರಿ ಯಂತ್ರಗಳ ಮೂಲಕವೇ ವಿರೋಧ ಪಕ್ಷದ ನಾಯಕರನ್ನು ಮಾತ್ರವಲ್ಲ, ಸ್ವಪಕ್ಷದಲ್ಲಿ ತಮ್ಮ ನಾಯಕತ್ವಕ್ಕೆ ಪೈಪೋಟಿ ನೀಡಬಲ್ಲ ನಾಯಕರನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವ ಪ್ರಯತ್ನವನ್ನು ಪ್ರಧಾನಿ ನರೇಂದ್ರ ಮೋದಿಯವರು ತಾವು ಅಧಿಕಾರಕ್ಕೆ ಬಂದ ದಿನದಿಂದಲೇ ಮಾಡುತ್ತಿದ್ದಾರೆ ಎನ್ನುವುದು ಜಗಜ್ಜಾಹೀರಾಗಿರುವ ಸತ್ಯ. ಹಾಡಹಗಲೇ ಪೊಲೀಸ್, ಸಿಬಿಐ, ಇಡಿ, ಐಟಿ ಇಲಾಖೆಗಳ ದುರ್ಬಳಕೆಯಾಗುತ್ತಿರುವ ಬಗ್ಗೆ ಇಡೀ ದೇಶದ ಜನ ಮಾತನಾಡಿಕೊಳ್ಳುತ್ತಿದ್ದಾರೆ.
ಇಂತಹವರು ತಮ್ಮ ರಾಜಕೀಯ ವಿರೋಧಿಗಳ ಫೋನ್ ಗಳನ್ನು ಕದ್ದು ಆಲಿಸದೆ ಬಿಡುತ್ತಾರೆಯೇ? ಆದರೆ ಇಂತಹ ಬೆದರಿಕೆಗಳಿಗೆ ನಾನಾಗಲಿ, ನನ್ನ ಪಕ್ಷದ ಯಾವ ನಾಯಕರಾಗಲಿ ಜಗ್ಗುವವರಲ್ಲ, ಬಗ್ಗುವವರೂ ಅಲ್ಲ ಎನ್ನುವುದನ್ನು ಸ್ಪಷ್ಟಪಡಿಸುತ್ತೇನೆ.
ಕುಮಾರಸ್ವಾಮಿಯವರಿಗೆ ಈ ಗೂಢಚರ್ಯೆಯ ಪಾಠವನ್ನು ಅವರ ಪೂಜ್ಯ ತಂದೆಯವರೇ ಹೇಳಿಕೊಟ್ಟಿರಬಹುದು. ತನ್ನನ್ನು ಪ್ರಧಾನಿ ಮಾಡಿದ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದ ಸೀತಾರಾಂ ಕೇಸರಿಯವರ ವಿರುದ್ಧವೇ ಗೂಡಚರ್ಯೆ ಮಾಡಿದ್ದ ಕಾರಣಕ್ಕೆ ಕಾಂಗ್ರೆಸ್ ಪಕ್ಷ ತನ್ನ ಬೆಂಬಲವನ್ನು ಹಿಂದೆಗೆದುಕೊಂಡಿರುವುದು ಇತಿಹಾಸದ ಪುಟಗಳಲ್ಲಿದೆ. ಈ ಅಪನಂಬಿಕೆ ಮತ್ತು ಸಣ್ಣತನಗಳಿಂದಾಗಿ ಕನ್ನಡಿಗರೊಬ್ಬರು ಇನ್ನಷ್ಟು ಕಾಲ ಪ್ರಧಾನಿಯಾಗುವ ಅವಕಾಶ ತಪ್ಪಿಹೋಯಿತು ಎನ್ನುವುದು ವಿಷಾದನೀಯ ವಾಸ್ತವ.
ಹೆಚ್.ಡಿ.ಕುಮಾರಸ್ವಾಮಿ ಮತ್ತು ಆರ್ ಅಶೋಕ್ ಅವರು ತಮ್ಮ ಅಮೂಲ್ಯ ಕ್ಷಣಗಳನ್ನು ಈ ರೀತಿ ಕುಟಿಲ ರಾಜಕೀಯದಲ್ಲಿ ವ್ಯರ್ಥಮಾಡುವ ಬದಲಿಗೆ ರಚನಾತ್ಮಕ ವಿರೋಧ ಪಕ್ಷದ ರೀತಿಯಲ್ಲಿ ಕೆಲಸ ಮಾಡಿ ರಾಜ್ಯಕ್ಕೆ ಒಳ್ಳೆಯದನ್ನು ಮಾಡಲಿ ಎಂದು ಹಾರೈಸುತ್ತೇನೆ. ರಾಜ್ಯದ ಪ್ರಜ್ಞಾವಂತ ಮತದಾರರು ಐದು ವರ್ಷಗಳ ಕಾಲ ಸರ್ಕಾರ ನಡೆಸಲು ನಮಗೆ ಜನಾದೇಶ ನೀಡಿದ್ದಾರೆ. ವಿರೋಧ ಪಕ್ಷಗಳ ಎಲ್ಲ ಕುತಂತ್ರ-ಕುಚೇಷ್ಠೆಗಳ ನಡುವೆಯೂ ಈ ಅವಧಿಯನ್ನು ಕಾಂಗ್ರೆಸ್ ಪಕ್ಷ ಪೂರ್ಣಗೊಳಿಸಲಿದೆ ಮತ್ತು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿಯೇ ಇರುತ್ತಾರೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಅಶೋಕ ಪ್ರತಿಕ್ರಿಯೆ
ಸಿದ್ದರಾಮಯ್ಯನವರ ಈ ಟ್ವೀಟ್ ಗೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಮತ್ತು ವಿರೋಧ ಪಕ್ಷದ ನಾಯಕ ಆರ್ ಅಶೋಕ ಮತ್ತೆ ಕೌಂಟರ್ ನೀಡಿದ್ದಾರೆ.
*ಫೋನ್ ಕದ್ದಾಲಿಕೆ; ಸಿಎಂ ಸಿದ್ದರಾಮಯ್ಯ ಸುಳ್ಳಿಗೆ ತಿರುಗೇಟು ಕೊಟ್ಟ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ*
*ಕದ್ದಾಲಿಕೆ ಮಾಡಿದ್ದರೆ ಸಿದ್ದವನದ ಕಬ್ಬೆಕ್ಕಿನ ಕರಾಮತ್ತು ಪತ್ತೆ ಹಚ್ಚುತ್ತಿದ್ದೆ!*
*ಕುರ್ಚಿ ಕಾಳಗದ ಮುಂದುವರಿದ ಭಾಗವೇ ಫೋನ್ ಕದ್ದಾಲಿಕೆ*
*ಕಾಂಗ್ರೆಸ್ ನಲ್ಲಿನ ಆಂತರಿಕ ಪ್ರಜಾಪ್ರಭುತ್ವದ ವ್ಯಾಸ, ತ್ರಿಜ್ಯದ ಬಗ್ಗೆ ಅಳತೆ ಮಾಡುವ ತೆವಲು ನನಗಿಲ್ಲ*
*ಪ್ರಜಾಪ್ರಭುತ್ವ ಎಂದರೆ ಶಾಸಕರು ಬೀದಿಯಲ್ಲಿ ಮುಖ್ಯಮಂತ್ರಿಯನ್ನು ಬೈಯ್ಯುವುದಲ್ಲ*
*ನನ್ನ ಜತೆ ನೇರ ಸಂಘರ್ಷಕ್ಕೆ ಬಂದಾಗಲೆಲ್ಲ ನೀವು ದೇವೇಗೌಡರನ್ನು ಎಳೆದು ತರುತ್ತೀರಿ?*
ಫೋನ್ ಕದ್ದಾಲಿಕೆ ಬಗ್ಗೆ ತಮ್ಮ ಹೇಳಿಕೆಯನ್ನು ಗ್ರಹಿಸದೆ ತಮ್ಮ ಮೇಲೆ ವಿನಾಕಾರಣ ಆರೋಪ ಮಾಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು ನೇರವಾಗಿ ಸಿಎಂ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ನಾನು ಎರಡು ಸಲವೂ ಅಧಿಕಾರ ಕಳೆದುಕೊಂಡವನು. ಇತಿಹಾಸ ಎಂದಿಗೂ ಮೌನವಾಗಿರುವುದಿಲ್ಲ ಎಂಬುದು ನಿಮಗೂ ಗೊತ್ತಿರಲಿ. ನೀವೂ ಚರಿತ್ರೆಯಿಂದ ಪಾರಾಗಲು ಆಗದು ಸಿದ್ದರಾಮಯ್ಯನವರೇ? ನಾನು ಪೋನ್ ಕದ್ದಾಲಿಕೆ ಮಾಡಿದ್ದಿದ್ದರೆ ಹೇಗಾದರೂ ಸರಿ, ಅಧಿಕಾರ ಉಳಿಸಿಕೊಳ್ಳುತ್ತಿದ್ದೆ. ಹಾಗೆ ಮಾಡಿದ್ದಿದ್ದರೆ ಸಿದ್ದವನದಲ್ಲಿ ಕೂತು ಯಾವ ಕಬ್ಬೆಕ್ಕು ಕರಾಮತ್ತು ನಡೆಸಿತು ಎನ್ನುವುದನ್ನು ಪತ್ತೆ ಹಚ್ಚುತ್ತಿದ್ದೆ. ಅದು ನನಗೆ ಬೇಕಿರಲಿಲ್ಲ, ಕಳೆದುಕೊಂಡಿದ್ದರ ಬಗ್ಗೆಯೂ ನನಗೆ ಚಿಂತೆ ಇಲ್ಲ. ಆದರೆ, ಆ ಪಾಪಪ್ರಜ್ಞೆ ನಿಮ್ಮನ್ನು ಕಾಡುತ್ತಿದೆ, ಸದಾ ನೆರಳಿನಂತೆ! ಕದ್ದಾಲಿಕೆ ನನ್ನ ಗುಣವಲ್ಲ, ಅದೇನಿದ್ದರೂ ಕಾಂಗ್ರೆಸ್ ಪಕ್ಷದ್ದೇ ಆವಿಷ್ಕಾರ! ಅದೇ ನಿಮಗೆ ಬಂದಿರುವ ಸಂಸ್ಕಾರ!! ಎಂದು ಕೇಂದ್ರ ಸಚಿವರು ಮುಖ್ಯಮಂತ್ರಿ ಮೇಲೆ ಹರಿಹಾಯ್ದಿದ್ದಾರೆ.
ಈ ನಡುವೆ ನೀವು ಬಹಳ ಪುರುಸೊತ್ತಾಗಿದ್ದೀರಿ ಎಂದು ಭಾವಿಸಿದ್ದೇನೆ. ಕೆಲಸ ಮಾಡುವುದು ಬಿಟ್ಟು ಕೌಂಟರ್ ಕೊಡುವುದರಲ್ಲಿ ಹೆಚ್ಚು ಬ್ಯುಸಿಯಾಗಿದ್ದೀರಿ! ಕುಂಬಳಕಾಯಿ ಕಳ್ಳ ಎಂದರೆ ನಾನೇ.. ನಾನೇ.. ಹೆಗಲು ಮುಟ್ಟಿ ನೋಡಿಕೊಂಡರೆ ನಾನೇನು ಮಾಡಲಿ? ಫೋನ್ ಕದ್ದಾಲಿಕೆ ಬಗ್ಗೆ ಮಾಧ್ಯಮಗಳೇ ಮಾತನಾಡುತ್ತಿವೆ. ಆ ಬಗ್ಗೆ ನಾನು ಪ್ರತಿಕ್ರಿಯಿಸಿದ್ದೇನೆ, ಅಷ್ಟೇ. ಮುಖ್ಯಮಂತ್ರಿಗಳೇ, ನಿಮ್ಮ ಪುಂಖಾನುಪುಂಖ ಪುರಾಣ ನೋಡಿದರೆ ನಿಮಗೆ ಆಡಳಿತಕ್ಕಿಂತ ಮತ್ತೊಬ್ಬರನ್ನು ಆಡಿಕೊಳ್ಳುವುದರಲ್ಲೇ ಹೆಚ್ಚು ಮುತುವರ್ಜಿ, ಆಸಕ್ತಿ ಇದ್ದಂತಿದೆ ಎಂದು ಟಾಂಗ್ ನೀಡಿದ್ದಾರೆ.
*ಕುರ್ಚಿ ಕಾಳಗದ ಮುಂದುವರಿದ ಭಾಗವೇ ಫೋನ್ ಕದ್ದಾಲಿಕೆ:*
ಪ್ರತಿಪಕ್ಷಗಳು ತಮ್ಮ ಕೆಲಸ ತಾವು ಮಾಡುತ್ತಿವೆ. ಜನರು ದಯೆ ತೋರಿ ನಿಮಗೆ 140 ಸೀಟು ಕೊಟ್ಟರೆ ಆಡಳಿತ ನಡೆಸುವುದು ಬಿಟ್ಟು ಹಾದಿಬೀದಿಯಲ್ಲಿ ಕಚ್ಚಾಡುತ್ತಿದ್ದೀರಿ. ನಿಮ್ಮ ಪಕ್ಷದಲ್ಲಿನ ಕುರ್ಚಿ ಕಾಳಗದ ಮುಂದುವರಿದ ಭಾಗವೇ ಫೋನ್ ಕದ್ದಾಲಿಕೆ ಎನ್ನುವ ಅನುಮಾನ ಪ್ರತಿಪಕ್ಷಗಳದ್ದು ಮತ್ತು ಮಾಧ್ಯಮಗಳದ್ದು. ಪ್ರಶ್ನಿಸುವ ಜಾಗದಲ್ಲಿ ಪ್ರತಿಪಕ್ಷಗಳಿವೆ, ಉತ್ತರಿಸಿ. ವಿಷಯಾಂತರ ಬಿಟ್ಟು ಸತ್ಯ ಹೇಳಿ. ಸತ್ಯ ನಿಮ್ಮನೆ ದೇವ್ರು ಅಲ್ಲವೇ? ಸತ್ಯಮೇವ ಜಯತೇ ನಿಮ್ಮ ಸಿದ್ದಸ್ಲೋಗನ್! ಕಥೆ ಕಟ್ಟಿ ಕಾಲಹರಣ ಮಾಡುತ್ತಿರೇಕೆ? ಎಂದು ಕುಮಾರಸ್ವಾಮಿ ಅವರು ತೀಕ್ಷ್ಣವಾಗಿ ಪ್ರಶ್ನಿಸಿದ್ದಾರೆ.
ನಾನು ಎರಡು ಸಣ್ಣ ಅವಧಿಗೆ ಮುಖ್ಯಮಂತ್ರಿ ಆಗಿದ್ದೆ. ಸ್ವತಂತ್ರ ಸರಕಾರವೂ ನನ್ನದಲ್ಲ. ಕದ್ದಾಲಿಸುವ ಕರ್ಮ ನನಗೇಕೆ? ನಿಮ್ಮಂತೆ ಸಿದ್ದವನದಲ್ಲಿ ಕೂತು ಮನೆಹಾಳು ಮಾಡೋದಕ್ಕೆ ಶಾಸಕರಿಗೆ ಬ್ರೈನ್ ವಾಶ್ ಮಾಡುವ ಹೀನ ಜಾಯಮಾನ ನನ್ನದಲ್ಲ. ನಿಮ್ಮ ಮೊದಲ ಐದು ವರ್ಷದ ಸರಕಾರವೂ.. ಈಗಿನ ನಿಮ್ಮ ಗುಪ್ತಚರವೂ ರಾಜಕಾರಣವನ್ನು ನಾನು ಕಂಡಿರುವುದೇ ಅಲ್ಲವೇ? ಎಂದು ಅವರು ಕುಟುಕಿದ್ದಾರೆ.
*ಕಾಂಗ್ರೆಸ್ ನಲ್ಲಿನ ಆಂತರಿಕ ಪ್ರಜಾಪ್ರಭುತ್ವದ ವ್ಯಾಸ, ತ್ರಿಜ್ಯದ ಬಗ್ಗೆ ಅಳತೆ ಮಾಡುವ ತೆವಲು ನನಗಿಲ್ಲ:*
ನಿಮ್ಮ ಪಕ್ಷದಲ್ಲಿರುವ ಆಂತರಿಕ ಪ್ರಜಾಪ್ರಭುತ್ವದ ವ್ಯಾಸ, ತ್ರಿಜ್ಯದ ಬಗ್ಗೆ ಅಳತೆ ಮಾಡುವ ತೆವಲು ನನಗಿಲ್ಲ. ಕಾಂಗ್ರೆಸ್ ಪಕ್ಷಕ್ಕೆ ನೂರು ವರ್ಷ ತುಂಬಿದರೂ ಇನ್ನೂ ನಮ್ಮ ಪಕ್ಷದಲ್ಲಿ ಆಂತರಿಕ ಪ್ರಜಾಪ್ರಭುತ್ವ ಇದೆ.. ಇದೆ.. ಇದೆ.. ಎಂದು ಹೇಳಿಕೊಳ್ಳುವ ಕರ್ಮ ನಿಮ್ಮದು? ರಾಷ್ಟ್ರದ ಮೇಲೆ ತುರ್ತು ಪರಿಸ್ಥಿತಿ ಹೇರಿ ಪ್ರಜಾಪ್ರಭುತ್ವದ ಕುತ್ತಿಗೆಗೆ ಕುಣಿಕೆ ಬಿಗಿದ ಸರ್ವಾಧಿಕಾರಿ ಕಾಂಗ್ರೆಸ್ ನಲ್ಲಿ ಪ್ರಜಾಪ್ರಭುತ್ವದ ಬೇರುಗಳೇ ಇಳಿದಿಲ್ಲ. ರಾಜಕೀಯ ಲಾಭಕ್ಕೆ ಮಹಾತ್ಮ ಗಾಂಧಿ, ರಾಜಕೀಯ ಸ್ವಾರ್ಥಕ್ಕೆ ಪ್ರಜಾಪ್ರಭುತ್ವ, ರಾಜಕೀಯ ಫಸಲಿಗೆ ಸಾಮಾಜಿಕ ನ್ಯಾಯ.. ಇದೇ ನಿಮ್ಮ ರಾಜನೀತಿ. ಹೀಗಾಗಿಯೇ ಭಾರತವು ಕಾಂಗ್ರೆಸ್ ಮುಕ್ತ ಭಾರತ ಆಗುತ್ತಿದೆ ಎಂದು ಸಚಿವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
*ಪ್ರಜಾಪ್ರಭುತ್ವ ಎಂದರೆ ಶಾಸಕರು ಬೀದಿಯಲ್ಲಿ ಮುಖ್ಯಮಂತ್ರಿಯನ್ನು ಬೈಯ್ಯುವುದಲ್ಲ:*
ಪ್ರಜಾಪ್ರಭುತ್ವ ಎಂದರೆ ಜನರಿಂದ, ಜನರಿಗಾಗಿ, ಜನರಿಗೋಸ್ಕರ ನಡೆಯುವ ಆಡಳಿತ ವ್ಯವಸ್ಥೆ ಎಂದು ನಂಬಿದ್ದೇನೆ. ಪ್ರಜಾಪ್ರಭುತ್ವ ಎಂದರೆ ಶಾಸಕರು ಗುಂಪುಗಾರಿಕೆ ನಡೆಸುವುದಲ್ಲ. ಶಾಸಕರು ಮುಖ್ಯಮಂತ್ರಿಯನ್ನು ಬೀದಿಯಲ್ಲಿ ಬೈಯುವುದಲ್ಲ, ಅದೇ ಶಾಸಕರು ಡಿಸಿಎಂಗೆ ಹಾದಿ ಬೀದಿಯಲ್ಲಿ ಅವಾಜ್ ಹಾಕುವುದಲ್ಲ. ಒಮ್ಮೆ ಸಿಎಂ ಆಗಿ ಪ್ರಮಾಣ ಸ್ವೀಕರಿಸಿದ ಮೇಲೆ ಐದೂ ವರ್ಷ ನಾನೇ ಸಿಎಂ.. ನಾನೇ ಸಿಎಂ.. ಎಂದು ಅಲುವತ್ತುಕೊಳ್ಳುವುದಲ್ಲ. ಸಾಕ್ಷಾತ್ ವಿಧಾನಸಭೆಯಲ್ಲಿಯೇ ‘ಕುರ್ಚಿ ಬೇಕಿದ್ದರೆ ಒದ್ದು ಕಿತ್ತುಕೊಳ್ಳಬೇಕು’ ಎಂದು ದರ್ಪ ತೋರುವುದಲ್ಲ. ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಮಾಧ್ಯಮವನ್ನು ಜಾಹೀರಾತು ಹೆಸರಿನಲ್ಲಿ ಬೆದರಿಸುವುದು, ಬ್ಲ್ಯಾಕ್ ಮೇಲ್ ಮಾಡುವುದಲ್ಲ.. ಅಧಿಕಾರದ ಲಾಲಸೆಗೆ ಸಮಾಜವನ್ನು ಜಾತಿವಾರು, ಧರ್ಮವಾರು ಒಡೆದು ಆಳುವುದಲ್ಲ, ಆಶ್ರಯ ಕೊಟ್ಟು ರಾಜಕೀಯ ಬದುಕು ಕಟ್ಟಿಕೊಟ್ಟ ಪಕ್ಷಗಳಿಗೇ ಹಳ್ಳ ತೊಡುವುದಲ್ಲ.. ಎಂದು ಮುಖ್ಯಮಂತ್ರಿಗೆ ತಿರುಗೇಟು ನೀಡಿದ್ದಾರೆ ಕೇಂದ್ರ ಸಚಿವರು.
ಇದಲ್ಲ ಪ್ರಜಾಪ್ರಭುತ್ವ, ಇದಲ್ಲ ಆಂತರಿಕ ಪ್ರಜಾಪ್ರಭುತ್ವ.. ನಿಮಗೆ ಅರ್ಥವಾಯಿತಾ ಸಿದ್ದರಾಮಯ್ಯನವರೇ? ನಿಮ್ಮಿಬ್ಬರ (ನೀವೂ ನಿಮ್ಮ ಡಿಸಿಎಂ) ಕುಚುಕು ಕುಚುಕುಗೆ ನಮಗೇನು ಸಂಕಟವಿಲ್ಲ. ಆದರೆ ನಿಮ್ಮೊಳಗೆ ಹುದುಗಿದ್ದ ಅಸಹನೆಯ ಜ್ವಾಲಾಮುಖಿ ಅದೆಷ್ಟೋ ಬಾರಿ ವೇದಿಕೆಗಳ ಮೇಲೆಯೇ ಸ್ಫೋಟಿಸಿದೆ. ರಾಜ್ಯದ ಜನರು ನೋಡಿ ಕೃತಾರ್ಥರಾಗಿದ್ದಾರೆ. ಎದುರಿಗೆ ನಗುವುದು, ಬೆನ್ನ ಹಿಂದೆ ಚೂರಿ ಹಾಕುವಷ್ಟು ನಿಮ್ಮಬ್ಬರ ಕುಚುಕು ಬಗ್ಗೆ ಜನತೆಗೆ ಗೊತ್ತಿಲ್ಲದ್ದು ಏನೂ ಇಲ್ಲವೇನೋ? ನಿಮ್ಮ ಸ್ನೇಹ ಚಿರಾಯುವಾಗಲಿ ಹಾಗೂ ನಿಮ್ಮ ಸ್ನೇಹಿತನಿಗಾಗಿ ನಿಮ್ಮ ವಚನ ಉಳಿಸಿಕೊಳ್ಳಿ ಮಿಸ್ಟರ್ ಅಗ್ರಿಮೆಂಟ್ ರಾಮಯ್ಯ.. ಎಂದು ಸಿದ್ದರಾಮಯ್ಯ ಅವರ ಕಾಲೆಳೆದಿದ್ದಾರೆ ಕೇಂದ್ರ ಸಚಿವರು.
ನಿಮಗೆ ಅಂಟಿರುವ ಕಳಂಕಕ್ಕೆ ನರೇಂದ್ರ ಮೋದಿ ಅವರನ್ನು ಏಕೆ ಎಳೆದು ತರುತ್ತೀರಿ? ನಿಮ್ಮ ತಟ್ಟೆಯನ್ನೊಮ್ಮೆ ನೋಡಿಕೊಳ್ಳಿ. ರಾಜ್ಯದಲ್ಲಿ ನೀನೇನು ಮಾಡುತ್ತಿದ್ದೀರಿ ಎನ್ನುವುದು ಎಲ್ಲರೂ ಬಲ್ಲರು. ಸಿದ್ದರಾಮಯ್ಯ ಇನ್ವೆಸ್ಟಿಗೇಷನ್ ಟೀಮ್ (SIT) ಏನೇನು ಮಾಡುತ್ತಿದೆ ಎಂಬುದು ನನಗೂ ಗೊತ್ತಿದೆ. ಅಧಿಕಾರ ದುರ್ಬಳಕೆ, ಪ್ರತಿಪಕ್ಷಗಳ ವಿರುದ್ಧ ಸೇಡು ಸಾಧನೆ ನಿಮ್ಮ ನೈಜಗುಣ. ಅಷ್ಟು ಅವಗುಣಗಳನ್ನು ಮೈಮೇಲೆ ಹೇರಿಕೊಂಡು ಇನ್ನೊಬ್ಬರನ್ನು ನಿಂದಿಸುವುದೇಕೆ? ಇಂದು ಅವರು ಕೇಳಿದ್ದಾರೆ.
ನನ್ನ ಜತೆ ನೇರ ಸಂಘರ್ಷಕ್ಕೆ ಬಂದಾಗಲೆಲ್ಲ ನೀವು ದೇವೇಗೌಡರನ್ನು ಎಳೆದು ತರುತ್ತೀರಿ. ದೇವೇಗೌಡರು ನಿಮ್ಮ ರಾಜಕೀಯ ಗುರು, ನಿಮ್ಮನ್ನು ಗುರುತಿಸಿ ಬೆಳೆಸಿದವರು. ಅದಕ್ಕಾಗಿ ಎಷ್ಟೋ ನಾಯಕರ ವಿರೋಧ ಕಟ್ಟಿಕೊಂಡರು. ಅದೂ ನಿಮಗೂ ಗೊತ್ತಿದೆ. ಆದರೆ, ಸಮಯಕ್ಕೆ ಕಾಯುತ್ತಿದ್ದ ನೀವು ಗುರುವಿಗೆ ಗುನ್ನ ಇಟ್ಟಿರಿ. ಅಷ್ಟರ ಮಟ್ಟಿಗೆ ನಿಮ್ಮ ಕಪಟತನ, ಕುಟಿಲತೆಯನ್ನು ಸ್ವಯಂ ಸ್ಮರಣೆ ಮಾಡುತ್ತಿದ್ದೀರಿ, ಸಂತೋಷ ಎಂದು ಸಚಿವರು ಲೇವಡಿ ಮಾಡಿದ್ದಾರೆ.
ದೆಹಲಿಯಲ್ಲಿ ದೇವೇಗೌಡರು ಅಧಿಕಾರ ಕಳೆದುಕೊಂಡಾಗ ನೀವು ಯಾವ ಪಕ್ಷದಲ್ಲಿದ್ದಿರಿ ಎನ್ನುವುದನ್ನು ಅರೆಕ್ಷಣ ನೆನಪು ಮಾಡಿಕೊಳ್ಳಿ. ನಿಮಗೂ ಆತ್ಮಸಾಕ್ಷಿ ಎನ್ನುವುದು ಇರಬೇಕಲ್ಲಾ? ಆಗ ನಿಮ್ಮ ನಾಲಿಗೆಯಿಂದ ಉದುರಿದ್ದ ಸರಣಿ ನುಡಿಮುತ್ತುಗಳನ್ನು ಒಮ್ಮೆ ಪುನಾಸ್ಮರಣೆ ಮಾಡಿಕೊಳ್ಳಿ? ಅವತ್ತು ಅದೇ ಸೀತಾರಾಂ ಕೇಸರಿ ಬಗ್ಗೆ ತಾವು ಏನೇನು ಹೇಳಿದಿರಿ? ಆ ನಂತರದ ಕಾಲದಲ್ಲಿ ಶ್ರೀಮತಿ ಸೋನಿಯಾ ಗಾಂಧಿ ಅವರನ್ನು ಅದೆಷ್ಟು ವಾಚಾಮಗೋಚರ ನಿಂದಿಸಿದ್ದಿರಿ ಎಂಬುದನ್ನು ಜ್ಞಾಪಕ ಮಾಡಿಕೊಳ್ಳಿ ಎಂದು ಕುಮಾರಸ್ವಾಮಿ ಹಳೆಯ ಸಂದರ್ಭಗಳನ್ನು ಕೆದಕಿದ್ದಾರೆ.
ಸಿದ್ದರಾಮಯ್ಯನವರೇ.., ದೇವೇಗೌಡರು ಅಧಿಕಾರವನ್ನು ವಿರೋಚಿತವಾಗಿ ತ್ಯಜಿಸಿದರು. ರಾಜೀನಾಮೆ ಘೋಷಿಸಿದ ಮರುಕ್ಷಣದಲ್ಲೇ ಸಂಸತ್ತಿನಲ್ಲಿಯೇ ವಾಜಪೇಯಿ ಅವರು ಮುಕ್ತ ಬೆಂಬಲ ಕೊಡುತ್ತೇವೆ ಎಂದರೂ ಆ ಅಧಿಕಾರ ಬೇಡವೆಂದು ವಿನಯದಿಂದ ಧಿಕ್ಕರಿಸಿದರು. ಅವರ ಗರಡಿಯಲ್ಲಿ ಪಳಗಿ, ಈಗಲೂ ಬೆಳಗುತ್ತಿರುವ ನೀವೂ ಅಂಥ ಕೆಚ್ಚನ್ನು, ವಿರೋಚಿತ ತ್ಯಾಗವನ್ನು ಒಮ್ಮೆ ಪ್ರದರ್ಶಿಸಿ. ನಿಮ್ಮ ಕುಚುಕು ಗೆಳೆಯನ ಮೇಲೆ ಪ್ರೀತಿ ತೋರಿಸಿ.. ಅದಕ್ಕೆ ನಿಮಗೆ ಗುಂಡಿಗೆ ಸಾಲುತ್ತಿಲ್ಲವೇ? ಸಿದ್ದರಾಮಯ್ಯನವರೇ, ಸೋತರೆ ಸೋಲಬೇಕು ಬಾಹುಬಲಿಯಂತೆ! ನಾನು ಸೋತಿದ್ದೇನೆ, ಓಡಿ ಹೋಗಿಲ್ಲ. ನಾನು ರಣಹೇಡಿಯಂತೆ ಪಲಾಯನ ಮಾಡುವುದಿಲ್ಲ, ನೆನಪಿರಲಿ ಎಂದು ಹೇಳಿದ್ದಾರೆ.
ಗುಪ್ತಚರ ಇಲಾಖೆಯ ದುರ್ಬಳಕೆ ಆಗುತ್ತಿದೆ ಎನ್ನುವುದು ನನ್ನ ವೈಯಕ್ತಿಕ ಆರೋಪವಲ್ಲ. ಈ ವರದಿಯನ್ನು ಪ್ರತಿಷ್ಠಿತ ಮಾಧ್ಯಮ ಸಂಸ್ಥೆಯೊಂದು ತನ್ನ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯ ಆಧಾರದ ಮೇಲೆ ಪ್ರಕಟಿಸಿದೆ. ತಮಗೆ ಈ ವರದಿಯ ಬಗ್ಗೆ ಆಕ್ಷೇಪವಿದ್ದರೆ, ವರದಿ ಪ್ರಕಟಿಸಿದ ಸಂಸ್ಥೆಯ ವಿರುದ್ಧ ಕ್ರಮ ಕೈಗೊಳ್ಳಬೇಕೇ ಹೊರತು, ಆ ವರದಿಗೆ ಪ್ರತಿಕ್ರಿಯಿಸಿದ ವಿರೋಧ ಪಕ್ಷದ ವಿರುದ್ಧವಲ್ಲ.
ವರದಿಯಲ್ಲಿರುವ ಗಂಭೀರ ಅಂಶಗಳಿಗೆ ನೇರವಾಗಿ ಉತ್ತರಿಸುವ ಬದಲು, ತಾವು ಕ್ಷುಲ್ಲಕ, ಅಸಂಬದ್ಧ ರಾಜಕೀಯ ವಾಗ್ದಾಳಿ ನಡೆಸಲು ಮುಂದಾಗಿದ್ದೀರಿ. ನಿಮ್ಮ ಈ ಪ್ರತಿಕ್ರಿಯೆಯೇ ಹಲವು ಅನುಮಾನಗಳಿಗೆ ಎಡೆಮಾಡಿಕೊಡುತ್ತಿದೆ. ಒಂದು ವೇಳೆ ವರದಿ ಸುಳ್ಳಾಗಿದ್ದರೆ, ಅದನ್ನು ಸ್ಪಷ್ಟವಾಗಿ ನಿರಾಕರಿಸಿ ಪತ್ರಿಕೆಯಿಂದ ಸ್ಪಷ್ಟೀಕರಣ ಕೇಳಿ. ಅದನ್ನು ಬಿಟ್ಟು, ವಿಷಯಕ್ಕೆ ಸಂಬಂಧವೇ ಇಲ್ಲದಂತೆ ವಿರೋಧ ಪಕ್ಷದ ಮೇಲೆ ಹರಿಹಾಯುವುದು ಸಂಶಯವನ್ನು ಇನ್ನಷ್ಟು ಹೆಚ್ಚಿಸುತ್ತದೆ.
ಶಾಸಕರ ಚಟುವಟಿಕೆಗಳ ಬಗ್ಗೆ ನಿರಂತರ ಮಾಹಿತಿ ನೀಡುವಂತೆ ರಾಜ್ಯ ಗುಪ್ತಚರ ಇಲಾಖೆಗೆ ಸೂಚಿಸಲಾಗಿದೆ ಎಂದು ಆ ವರದಿಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಈ ಪದಗಳು ನಮ್ಮ ಸೃಷ್ಟಿಯಲ್ಲ, ಇವು ಸಾರ್ವಜನಿಕ ವಲಯದಲ್ಲಿರುವ ಮಾಧ್ಯಮ ವರದಿಯ ಭಾಗವಾಗಿದೆ.
ಇಂತಹ ಗಂಭೀರ ವಿಷಯಗಳು ಮುನ್ನೆಲೆಗೆ ಬಂದಾಗ, ವಿರೋಧ ಪಕ್ಷದ ನಾಯಕನಾಗಿ ಅದರ ಬಗ್ಗೆ ಸ್ಪಷ್ಟತೆ ಕೇಳುವುದು ನನ್ನ ಸಾಂವಿಧಾನಿಕ ಜವಾಬ್ದಾರಿಯಾಗಿದೆ. ಜನರ ಮುಂದೆ ಸತ್ಯಾಂಶಗಳನ್ನು ಇಡುವ ಬದಲು, ತಾವು ಯಾವುದೋ ಹಳೆಯ ಇತಿಹಾಸವನ್ನು ಕೆದಕಿ, ಸಂಬಂಧವಿಲ್ಲದ ರಾಷ್ಟ್ರೀಯ ನಾಯಕರನ್ನು ಎಳೆದು ತರುವ ಮೂಲಕ ವಿಷಯಾಂತರ ಮಾಡಲು ಯತ್ನಿಸುತ್ತಿರುವುದು ತಾವು ವರದಿಯಿಂದ ಗಲಿಬಿಲಿಗೊಂಡಿರುವುದನ್ನ ಸ್ಪಷ್ಟವಾಗಿ ತೋರಿಸುತ್ತದೆ.
ನನ್ನ ಪ್ರಶ್ನೆ ಅತ್ಯಂತ ನೇರ ಮತ್ತು ಸರಳವಾಗಿದೆ. ರಾಜ್ಯ ಗುಪ್ತಚರ ಇಲಾಖೆಯನ್ನು ಕೇವಲ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಬಳಸಲಾಗುತ್ತಿದೆಯೇ ಅಥವಾ ಕಾಂಗ್ರೆಸ್ ಪಕ್ಷದ ಆಂತರಿಕ ಬಣ ರಾಜಕೀಯವನ್ನು ನಿಭಾಯಿಸಲು ಬಳಸಿಕೊಳ್ಳಲಾಗುತ್ತಿದೆಯೇ? ಕರ್ನಾಟಕದ ಜನತೆಗೆ ಇದಕ್ಕೆ ನೇರ ಮತ್ತು ಪ್ರಾಮಾಣಿಕ ಉತ್ತರ ಬೇಕಿದೆ.
ಕರ್ನಾಟಕವು ಇಂದು ಡ್ರಗ್ಸ್ ಜಾಲ, ಕೋಮುದಳ್ಳುರಿಗಳು, ನಿರುದ್ಯೋಗದ ವಿರುದ್ಧ ಯುವಕರ ಹೋರಾಟ, ಸಾರಿಗೆ ನೌಕರರ ಮುಷ್ಕರ, ಆರೋಗ್ಯ ಇಲಾಖೆ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರ ಮುಷ್ಕರ ಸೇರಿದಂತೆ ಅನೇಕ ಕಾನೂನು ಸುವ್ಯವಸ್ಥೆಯ ಸವಾಲುಗಳನ್ನು ಎದುರಿಸುತ್ತಿರುವಾಗ, ಸರ್ಕಾರದ ಮುಖ್ಯಸ್ಥರಾದ ತಮ್ಮ ಆದ್ಯತೆ ಆಡಳಿತದ ಮೇಲಿರಬೇಕೇ ಹೊರತು ಆಂತರಿಕ ಕಚ್ಚಾಟ, ರಾಜಕೀಯ ಮೇಲಾಟದ ಮೇಲಲ್ಲ.
ಮಧ್ಯಮ ವರದಿಯ ಆಧಾರದ ಮೇಲೆ ಉತ್ತರದಾಯಿತ್ವವನ್ನು ಕೇಳುವುದು ಹತಾಶೆಯಲ್ಲ. ಅದು ಪ್ರಜಾಪ್ರಭುತ್ವದಲ್ಲಿ ಜವಾಬ್ದಾರಿಯುತ ವಿರೋಧ ಪಕ್ಷದ ಕರ್ತವ್ಯ.
ನನ್ನ ಪ್ರಶ್ನೆಗಳು ತಮ್ಮನ್ನು ಮುಜುಗರಕ್ಕೀಡು ಮಾಡಿದರೆ, ಅದಕ್ಕೆ ನಾನು ಜವಾಬ್ದಾರನಲ್ಲ.
ಕರ್ನಾಟಕದ ಜನತೆಗೆ ಬೇಕಿರುವುದು ಪಾರದರ್ಶಕತೆಯೇ ಹೊರತು ರಾಜಕೀಯ ನಾಟಕವಲ್ಲ.



