*ಮುಡಾ ವಿಚಾರದಲ್ಲಿ ಬಿ.ವೈ. ವಿಜಯೇಂದ್ರ ನಡೆಸುತ್ತಿರುವ ಹೋರಾಟದಲ್ಲಿ ಡಿಕೆಶಿ ಕೈವಾಡ: ಯತ್ನಾಳ್ ಹೊಸ ಬಾಂಬ್*
ಪ್ರಗತಿವಾಹಿನಿ ಸುದ್ದಿ: ಮುಡಾ ಹೋರಾಟವು ಸಿದ್ದರಾಮಯ್ಯ ಅವರನ್ನು ಇಳಿಸಿ, ಡಿ.ಕೆ ಶಿವಕುಮಾರ್ ಅವರನ್ನು ಸಿಎಂ ಮಾಡಲು ಬಿ.ವೈ ವಿಜಯೇಂದ್ರ ಮಾಡುತ್ತಿರುವ ಹೋರಾಟ ಎಂದು ಯತ್ನಾಳ್ ಹೊಸ ಬಾಂಬ್ ಸಿಡಿಸಿದ್ದಾರೆ.
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಹಳ್ಯಾಳ ಗ್ರಾಮದಲ್ಲಿ ಶಾಸಕ ಬಸನಗೌಡಾ ಪಾಟೀಲ ಯತ್ನಾಳ್ ಮಾದ್ಯಮಗಳ ಜೊತೆ ಮಾತನಾಡಿ, ಮುಡಾ ವಿಚಾರವಾಗಿ ಬಿ.ವೈ ವಿಜಯೇಂದ್ರ ನಡೆಸುತ್ತಿರುವ ಹೋರಾಟದಲ್ಲಿ ಡಿ.ಕೆ ಶಿವಕುಮಾರ್ ಕೈವಾಡವಿದೆ. ಮುಡಾ ಹೋರಾಟವು ಸಿದ್ದರಾಮಯ್ಯ ಅವರನ್ನು ಇಳಿಸಿ, ಡಿ.ಕೆ ಶಿವಕುಮಾರ್ ಅವರನ್ನು ಸಿಎಂ ಮಾಡಲು ಬಿ.ವೈ ವಿಜಯೇಂದ್ರ ಮಾಡುತ್ತಿರುವ ಹೋರಾಟ ಅನ್ನೋದು ಬಹಿರಂಗ ಪಡಿಸಬೇಕು. ಡಿಸಿಎಂ ಡಿ.ಕೆ ಶಿವಕುಮಾರ್ ಆದೇಶದಂತೆ ವಿಜಯೇಂದ್ರ ಪಾದಯಾತ್ರೆ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಇಳಿಸಲು ಪಾದಯಾತ್ರೆ ಮಾಡ್ತಿದ್ದಾರೆ. ಈ ಪಾದಯಾತ್ರೆಯಲ್ಲಿ ಹೊಂದಾಣಿಕೆ ರಾಜಕಾರಣ ಇದೆ. ಡಿ.ಕೆ. ಶಿವಕುಮಾರ್ ಅವರ ಉಪಕಾರ ತೀರಿಸಲಿಕ್ಕೆ ಇವತ್ತು ವಿಜಯೇಂದ್ರ ಪಾದಯಾತ್ರೆ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ವಾಲ್ಮೀಕಿ ನಿಗಮದ ವಿಚಾರದ ಕುರಿತು ಪಾದಯಾತ್ರೆ ಮಾಡುತ್ತಿರುವ ಸಂಬಂಧ ಮಾತನಾಡಿರುವ ಯತ್ನಾಳ್, ನಾವು ಮತ್ತು ರಮೇಶ್ ಜಾರಕಿಹೊಳಿ ಕೇಂದ್ರದಿಂದ ಒಪ್ಪಿಗೆ ಪಡೆದು ಪ್ರತಿಭಟನೆ ಮಾಡುತ್ತಿದ್ದೇವೆ. ಆದರೆ ಎಲ್ಲಿಂದ ಪ್ರತಿಭಟನೆ ಮಾಡಬೇಕೆಂದು ನಿರ್ಣಯವಾಗಿಲ್ಲ. ಬಿಜೆಪಿಯಲ್ಲಿ ಎರಡು ಬಣ ಇಲ್ಲ. ಮಹರ್ಷಿ ವಾಲ್ಮೀಕಿ ನಿಗಮದಲ್ಲಾದದ್ದೂ ದೊಡ್ಡ ಹಗರಣ. ಒಂದು ಸಮುದಾಯದಕ್ಕೆ ಹೋಗಬೇಕಾದ ಹಣ ಪೂರ್ತಿ ನುಂಗಿ ಹಾಕಿದ್ದಾರೆ. ಇನ್ನೊಂದು ಕಡೆ ಮುಡಾದಲ್ಲಿ ಒಬ್ಬ ದಲಿತನ ಜಮೀನು ಪೂರ್ತಿ ನುಂಗಿ ಹಾಕಿದ್ದಾರೆ. ಕಾಂಗ್ರೆಸ್ ಭ್ರಷ್ಟಾಚಾರ ವಿರುದ್ದ ಯಾವುದೇ ಒಳ ಒಪ್ಪಂದ ಇಲ್ಲದೇ ನಾವು ಹೋರಾಟ ಮಾಡುತ್ತಿದ್ದೇವೆ. ನಾವು ಮಾಡುವ ಹೋರಾಟ ಭ್ರಷ್ಟರ ವಿರುದ್ದ ಎಂದರು.
ಇನ್ನು ಇದೇ ವೇಳೆ ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳ ವಿರುದ್ದ ಯತ್ನಾಳ್ ಕೆಂಡಕಾರಿದ್ದಾರೆ. ಕರ್ನಾಟಕ ಸರ್ಕಾರ ದಿವಾಳಿಯಾಗಿದೆ. ಹೆಣ್ಣು ಮಕ್ಕಳಿಗೆ ಎರಡು ಸಾವಿರ ಹಣ ಮೂರು ತಿಂಗಳಿಂದ ಬಿಡುಗಡೆಯಾಗಿಲ್ಲ. ಮತ್ತೊಂದೆಡೆ ಮಾಜಿ ಹಾಗೂ ಹಾಲಿ ಸಿಎಂ ಮಕ್ಕಳು ಮಾತ್ರ ಬೆಳೆಯುತ್ತಿದ್ದಾರೆ ಎಂದು ಮಾಜಿ ಎಂಪಿ ಪ್ರತಾಪ್ ಸಿಂಹ ಆರೋಪ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿದ ಯತ್ನಾಳ್, ಮಾಜಿ ಹಾಗೂ ಹಾಲಿ ಸಿಎಂ ಮಕ್ಕಳು ಬೆಳೆಯುತ್ತಿರುವುದು ನಿಜಾ ಎಂದು ವಾಗ್ದಾಳಿ ನಡೆಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ