ಸಂಕಷ್ಟದಲ್ಲಿ ಡಿ.ಕೆ.ಶಿವಕುಮಾರ
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು-
ಜಾರಿ ನಿರ್ದೇಶನಾಲಯ ನೀಡಿದ್ದ ಸಮನ್ಸ್ ರದ್ದುಪಡಿಸಲು ಕೋರಿ ಮಾಜಿ ಸಚಿವ ಡಿ.ಕೆ.ಶಿವಕುಮಾರ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾ ಮಾಡಿದೆ. ಇದರಿಂದಾಗಿ ಡಿ.ಕೆ.ಶಿವಕುಮಾರ ಬಂಧನ ಭೀತಿ ಎದುರಿಸುತ್ತಿದ್ದಾರೆ.
2017ರಲ್ಲಿ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದಾಗ ಡಿ.ಕೆ.ಶಿವಕುಮಾರ ಅವರಿಗೆ ಸಂಬಂಧಿಸಿದ ನವದೆಹಲಿಯ ಫ್ಲ್ಯಾಟ್ ನಲ್ಲಿ 8.59 ಲಕ್ಷ ರೂ. ಸಿಕ್ಕಿತ್ತು. ಆದರೆ ಈ ಹಣ ತಮಗೆ ಸಂಬಂಧಿಸಿದ್ದಲ್ಲ ಎಂದು ಡಿ.ಕೆ.ಶಿವಕುಮಾರ ಹೇಳಿದ್ದರು. ಹಣ ಶಿವಕುಮಾರ ಅವರಿಗೇ ಸೇರಿದ್ದು ಎಂದು ಆದಾಯ ತೆರಿಗೆ ಇಲಾಖೆ ಹೇಳಿತ್ತು.
ಪ್ರಕರಣದ ತನಿಖೆ ಜಾರಿ ನಿರ್ದೇಶನಾಲಯಕ್ಕೆ ವರ್ಗಾವಣೆಯಾಗಿತ್ತು. ವಿಚಾರಣೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ ಶಿವಕುಮಾರ ಅವರಿಗೆ ಸಮನ್ಸ್ ಜಾರಿ ಮಾಡಿತ್ತು. ಇದನ್ನು ಪ್ರಶ್ನಿಸಿ ಶಿವಕುಮಾರ ಹೈಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಹೈಕೋರ್ಟ್ ಗುರುವಾರ ಶಿವಕುಮಾರ ಅರ್ಜಿಯನ್ನು ವಜಾ ಮಾಡಿದೆ. ಈ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯ ಅವರನ್ನು ಬಂಧಿಸಬಹುದು ಎಂದು ಹೇಳಲಾಗುತ್ತಿದೆ.
ಆದರೆ ಶಿವಕುಮಾರ ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರಿಂ ಕೋರ್ಟ್ ಮೆಟ್ಟಿಲೇರಲು ಅವಕಾಶವಿದೆ. ಆದರೆ ಅಷ್ಟರೊಳಗೆ ಜಾರಿ ನಿರ್ದೇಶನಾಲಯ ನೋಟೀಸ್ ಜಾರಿ ಮಾಡಿ ವಿಚಾರಣೆಗೆ ಕರೆಸಿ, ಬಂಧಿಸಲೂಬಹುದು.
ಈ ಮಧ್ಯೆ ಶಿವಕುಮಾರ, ನಾನು ಯಾವುದೇ ತಪ್ಪು ಮಾಡಿಲ್ಲ, ದೇವರಿದ್ದಾನೆ ಎಂದು ಪ್ರತಿಕ್ರಿಯಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ