*ಅವರು ನನಗೆ ಕಡೆಯದಾಗಿ ಬೈದಿದ್ದು….* *ಸುದೀರ್ಘ ಕಥೆ ಬಿಚ್ಚಿಟ್ಟ ಡಿ.ಕೆ.ಶಿವಕುಮಾರ*
*ಎಸ್.ಎಂ. ಕೃಷ್ಣ ಅವರ 92 ವರ್ಷಗಳ ಶಿಸ್ತು, ವರ್ಣರಂಜಿತ ಜೀವನ ನೋಡಿ ನಾವು ಕಲಿಯಬೇಕಾಗಿರುವುದು ಬೇಕಾದಷ್ಟಿದೆ: ಡಿಸಿಎಂ ಡಿ.ಕೆ. ಶಿವಕುಮಾರ್*
ಪ್ರಗತಿವಾಹಿನಿ ಸುದ್ದಿ, *ಬೆಂಗಳೂರು*
“ಎಸ್.ಎಂ ಕೃಷ್ಣ ಅವರ 92 ವರ್ಷಗಳ ಶಿಸ್ತು, ವರ್ಣರಂಜಿತ ಜೀವನ ನೋಡಿ ನಾವೆಲ್ಲರೂ ಕಲೆಯಬೇಕಾಗಿರುವುದು ಬೇಕಾದಷ್ಟಿದೆ. ಅವರ ಶರೀರ ನಮ್ಮ ಜತೆ ಇಲ್ಲದಿರಬಹುದು, ಆದರೆ ಅವರ ಮಾರ್ಗದರ್ಶನ ಹಾಗೂ ಸಾಧನೆ ಶಾಶ್ವತವಾಗಿ ನಮ್ಮ ಜತೆ ಉಳಿಯಲಿದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ಕೆಪಿಸಿಸಿ ಕಚೇರಿಯ ಭಾರತ ಜೋಡೋ ಸಭಾಂಗಣದಲ್ಲಿ ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ ಅವರ ಶ್ರದ್ಧಾಂಜಲಿ ಸಭೆ ಕಾರ್ಯಕ್ರಮದಲ್ಲಿ ಶಿವಕುಮಾರ್ ಅವರು ಮಂಗಳವಾರ ಮಾತನಾಡಿ, ಕೃಷ್ಣ ಅವರ ಜತೆಗೆ ತಮ್ಮ ರಾಜಕೀಯ ಒಡನಾಟಗಳನ್ನು ಮೆಲುಕು ಹಾಕಿದರು.
“ನನ್ನ ರಾಜಕಾರಣದ ಬದುಕಿನಲ್ಲಿ ಕೃಷ್ಣ ಅವರು ನನಗೆ ತಂದೆಯಂತೆ ಮಾರ್ಗದರ್ಶನ ನೀಡಿದ್ದಾರೆ. ನನ್ನನ್ನು ಪೋಷಿಸಿ ಇಲ್ಲಿವರೆಗೂ ತಂದು ನಿಲ್ಲಿಸಿದ್ದಾರೆ. ವೀರಪ್ಪ ಮೋಯ್ಲಿ ಅವರು ನನಗೆ ವಿದ್ಯಾರ್ಥಿ ನಾಯಕನಾಗಿದ್ದಾಗ ಟಿಕೆಟ್ ನೀಡಿದರು. ಬಂಗಾರಪ್ಪ ಅವರು ತಮ್ಮ ಮಂತ್ರಿಮಂಡಲದಲ್ಲಿ ನನ್ನನ್ನು ಮಂತ್ರಿ ಮಾಡಿದರು.
ರಾಜಕೀಯದ ಆರಂಭದ ದಿನಗಳಲ್ಲಿ ನಾನು ಎಸ್.ಎಂ ಕೃಷ್ಣ ಅವರ ಜತೆ ಇದ್ದವನಲ್ಲ. ಬಂಗಾರಪ್ಪನವರು ಪಕ್ಷ ಬಿಡುವ ಸಂದರ್ಭದಲ್ಲಿ ನಾವು ಏನು ಮಾಡಬೇಕು ಎಂದು ಕೇಳಿದಾಗ, ಅವರೇ ಎಸ್.ಎಂ ಕೃಷ್ಣ ಅವರ ಬಳಿ ಹೋಗು ಎಂದು ನನಗೆ ಹೇಳಿದರು. ಆಗ ಎಸ್.ಎಂ ಕೃಷ್ಣ ಅವರ ಜತೆ ನನ್ನ ರಾಜಕಾರಣ ಆರಂಭವಾಯಿತು. ನಾನು, ಸಿ.ಎಂ. ಲಿಂಗಪ್ಪ, ಜಯಚಂದ್ರ, ನಫೀಜ್, ಶಿವಮೂರ್ತಿ ಅವರು ತಿಂಗಳುಗಟ್ಟಲೆ ದೆಹಲಿಯಲ್ಲಿ ಬೀಡುಬಿಟ್ಟು ಕೃಷ್ಣ ಅವರನ್ನು ಪಕ್ಷದ ಅಧ್ಯಕ್ಷರನ್ನಾಗಿ ಮಾಡಲು ಏನು ಮಾಡಿದ್ದೇವೆ ಎಂದು ನಮಗೆ ಮಾತ್ರ ಗೊತ್ತು. ಅವರನ್ನು ಅಧ್ಯಕ್ಷರನ್ನಾಗಿ ಮಾಡಿದಾಗ ಅನೇಕರು ನಕ್ಕರು.
ಎಸ್.ಎಂ ಕೃಷ್ಣ ಅವರು ಸೋತಾಗ ರಾಜ್ಯಸಭೆಗೆ ಕಳುಹಿಸಲು ಏನೆಲ್ಲಾ ನಡೆಯಿತು, ಸಂಪುಟ ಹೇಗೆ ರಚನೆಯಾಯಿತು ಎಂದು ಹೇಳಲು ಸಮಯ ಬೇಕಾಗುತ್ತದೆ. ಅವರು ಮುಖ್ಯಮಂತ್ರಿಯಾದಾಗ ಮಂತ್ರಿಮಂಡಲದಲ್ಲಿ ಯಾರಿರಬೇಕು ಎಂದು ಹೆಸರುಗಳನ್ನು ನಾನು ಬರೆದೆ. ಮಲ್ಲಿಕಾರ್ಜುನ ಖರ್ಗೆ ಅವರು ಆರು ಜನರನ್ನು ಸೇರಿಸಿದ್ದೀಯಾ ಎಂದು ನನಗೆ ಬೈದರು. ಆಗ ಪರಮೇಶ್ವರ್ ಅವರು ಸಂಪುಟದಲ್ಲಿ ಇರಲಿಲ್ಲ. ಆಗ ವೇಣುಗೋಪಾಲ್ ಅವರ ಬಳಿ ಎರಡನೇ ಹಂತದ ನಾಯಕರನ್ನು ಬೆಳೆಸಬೇಕು ಎಂದು ಕೇಳಿದೆ. ಆಗ ಅವರು ರಂಗನಾಥ್, ಖರ್ಗೆ ಅವರು ಇದ್ದಾರೆ. ಇನ್ನೊಬ್ಬರನ್ನು ಹೇಗೆ ಸೇರಿಸಲು ಸಾಧ್ಯ ಎಂದು ಕೇಳಿದರು. ನನಗೆ ಅವಕಾಶ ನೀಡಬೇಕು ಎಂದು ಮಂತ್ರಿಮಂಡಲಕ್ಕೆ ಸೇರಿಸಲಾಯಿತು. ನಂತರ ಅನೇಕ ವಿದ್ಯಮಾನಗಳು ನಡೆಯಿತು.
ಎಸ್.ಎಂ ಕೃಷ್ಣ ಅವರು ನನಗೆ ರಾಜಕೀಯವಾಗಿ ಎಷ್ಟು ಶಕ್ತಿ ನೀಡಿದ್ದರು, ರಾಜಕೀಯವಾಗಿ ಹೇಗೆ ಬೆಳೆಸಿದರು. ಅವರು ನನ್ನ ಸಲಹೆ ಸ್ವೀಕರಿಸದೇ ಇದ್ದದ್ದು ಎಂದರೆ ಆರು ತಿಂಗಳು ಮುಂಚಿತವಾಗಿ ಚುನಾವಣೆಗೆ ಹೋದಾಗ ನಾನು ಬೇಡ ಎಂದು ಹೇಳಿದ್ದೆ. ಅದನ್ನು ಕೇಳದೆ ಅವರು ಚುನಾವಣೆಗೆ ಹೋದರು. ಅವರು ರಾಜಕೀಯ ವಿಚಾರದಲ್ಲಿ ನನ್ನ ಮಾತು ಕೇಳುತ್ತಿದ್ದರು. ಆದರೆ ಆಡಳಿತ ವಿಚಾರದಲ್ಲಿ ನಾನು ಹಸ್ತಕ್ಷೇಪ ಮಾಡಿರಲಿಲ್ಲ. ಈಗ ನಿಮ್ಮ ಸಮಯ ಸರಿಯಿಲ್ಲ, ಚುನಾವಣೆಗೆ ಹೋಗಬೇಡಿ ಎಂದು ಹೇಳಿದ್ದೆ. ಅವರು ನನಗೆ ಮನವೊಲಿಸಲು ಮುಂದಾದರು. ನಾನು ಒಪ್ಪದೇ ನನ್ನ ವಿಚಾರ ಹೇಳಿದೆ. ಮರುದಿನ ಸಚಿವ ಸಂಪುಟ ಸಭೆ ಇದ್ದಾಗ ಹೊಟೇಲ್ ವೊಂದಕ್ಕೆ ಬಿ.ಎಲ್ ಶಂಕರ್ ಹಾಗೂ ವೆಂಕಟಪ್ಪ ಅವರನ್ನು ಕರೆಸಿದರು. ಆಗ ನನ್ನ ಸಲಹೆ ಬಗ್ಗೆ ಅವರಿಗೆ ಹೇಳಿದರು. ಇವರಿಬ್ಬರೂ ಡಿ.ಕೆ. ಶಿವಕುಮಾರ್ ಹೇಳುತ್ತಿರುವುದು ಸರಿಯಾಗಿದೆ ಎಂದರು. ಆಗ ವಿಲಾಸ್ ರಾವ್ ದೇಶಮುಖ್ ಅವರು ಉಸ್ತುವಾರಿಗಳಾಗಿದ್ದರು. ನಂತರ ಚುನಾವಣೆಗೆ ಹೋದೆವು, ಸೋತೆವು. ನಂತರ ತೇಜಸ್ವಿನಿ ಅವರನ್ನು ಸಂಸದೆಯನ್ನಾಗಿ ಮಾಡಿದೆವು. ಆಗ ಕೃಷ್ಣ ಅವರು ನಿಮ್ಮ ಪತ್ನಿ ಅಥವಾ ತಮ್ಮನನ್ನು ಸಂಸದರನ್ನಾಗಿ ಮಾಡಿ ಎಂದರು. ನಾನು ಮಾಡಲಿಲ್ಲ.
ಕೃಷ್ಣ ಅವರ ಕಾಲದಲ್ಲಿ ಸಮಾಜದ ಎಲ್ಲಾ ವರ್ಗದ ಜನರಿಗೆ ಕಾರ್ಯಕ್ರಮ ಕೊಟ್ಟರು. ಅವರು ಕೊಟ್ಟ ಐಟಿ ನೀತಿ ಇಂದು ಬೆಂಗಳೂರು ಐಟಿ ರಾಜಧಾನಿಯಾಗಿ ಮಾಡಿದೆ. ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಜವಾಬ್ದಾರಿ ನನಗೆ ನೀಡಿದ್ದರು. ಆಗ ನಾನು ವಿಮಾನ ನಿಲ್ದಾಣಕ್ಕೆ ಜನರಿಂದ ಜಮೀನು ಸ್ವಾಧೀನ ಮಾಡಲು 6 ಲಕ್ಷ ಪರಿಹಾರ ನಿಗದಿ ಮಾಡಿದ್ದೆ. ಅದಕ್ಕೂ ಕೃಷ್ಣಾ ಅವರು ಒಪ್ಪಿದರು.
ಇನ್ನು ಸಚಿವ ಸಂಪುಟದಲ್ಲಿ ಮೆಟ್ರೋ ವಿಚಾರವಾಗಿ ಪ್ರಸ್ತಾಪವಾದಾಗ ನನಗೂ ಕೃಷ್ಣ ಅವರಿಗೂ ದೊಡ್ಡ ಜಗಳವಾಯಿತು. ಜೆ.ಹೆಚ್ ಪಟೇಲರ ಕಾಲದಲ್ಲಿ ಮೋನೋ ರೈಲಿಗೆ ಒಪ್ಪಂದವಾಗಿತ್ತು. ನಾನು ನಗರಾಭಿವೃದ್ಧಿ ಸಚಿವನಾಗಿದ್ದಾಗ ಇದ್ದ ಅನುಭವದ ಆಧಾರದ ಮೇಲೆ ಮೋನೋ ರೈಲು ಸಾಧ್ಯವಿಲ್ಲ. ಮೆಟ್ರೋ ರೈಲು ಬೇಕು ಎಂದು ಹೇಳಿದೆ. ನನ್ನ ಮೇಲೆ ಸಿಟ್ಟು ಮಾಡಿಕೊಂಡು ಏನು ಮಾಡಬೇಕು ಎಂದರು. ನಂತರ ಸಮಿತಿ ರಚನೆ ಮಾಡಿ ಮೆಟ್ರೋ ರೈಲಿನ ಬಗ್ಗೆ ಅಧ್ಯಯನ ಮಾಡಲು ವಿದೇಶಕ್ಕೆ ಕಳುಹಿಸಿದರು. ನಂತರ ನಾವು ನೀಡಿದ ವರದಿಯಂತೆ ಮೆಟ್ರೋ ನಮಗೆ ಹೆಚ್ಚು ಆಪ್ತವಾಗಿದೆ ಎಂದು ತಿಳಿಸಿದರು.
ಕೇಂದ್ರ ಸರ್ಕಾರದಲ್ಲಿ ಅನಂತಕುಮಾರ್ ಹಾಗೂ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಬಾಂಧವ್ಯ ಅತ್ಯುತ್ತಮವಾಗಿತ್ತು. ಅವರ ಜತೆ ಪ್ರಧಾನಿ ಅವರನ್ನು ಭೇಟಿ ಮಾಡಿ ಮೆಟ್ರೋ ರೈಲು ಜಾರಿಗೆ ತರಲಾಯಿತು. ಹೀಗೆ ಅವರು ಅನೇಕ ಸಾಕ್ಷಿ ಗುಡ್ಡೆ ಬಿಟ್ಟು ಹೋಗಿದ್ದಾರೆ. ಭಾರತ ಜೋಡೋ ಸಭಾಂಗಣದಲ್ಲಿ ಅವರಿಗೆ ಶ್ರದ್ದಾಂಜಲಿ ಸಭೆ ಮಾಡಲು ತರಾತುರಿಯಲ್ಲಿ ತೀರ್ಮಾನ ಮಾಡಲು ಕಾರಣವಿದೆ.
ಈ ಕಟ್ಟಡದ ಜಾಗ ನಮ್ಮದಾಗಿರಲಿಲ್ಲ. ಇದು ಪ್ರವಾಸೋದ್ಯಮ ಇಲಾಖೆಗೆ ಮಂಜೂರಾಗಿತ್ತು. ಕೆಂಚೇಗೌಡ ಅವರು ಕಾಂಗ್ರೆಸ್ ಕಚೇರಿ ಹಿಂಭಾಗದಲ್ಲಿರುವ ಜಾಗ ಪ್ರವಾಸೋದ್ಯಮ ಇಲಾಖೆಗೆ ನೀಡಲಾಗಿದೆ. ಅದನ್ನು ಕಾಂಗ್ರೆಸ್ ಪಕ್ಷಕ್ಕೆ ಕೊಡಿಸಿ ಎಂದು ಕೇಳಿದರು. ಆಗ ನಾನು ಕೂಡ ಈ ಜಾಗವನ್ನು ಪಕ್ಷಕ್ಕೆ ನೀಡುವಂತೆ ಕೇಳಿದೆ. ಆಗ ರೋಷನ್ ಬೇಗ್ ಅವರಿಗೆ ಹೇಳಿ ಈ ವಿಚಾರವನ್ನು ಸಚಿವ ಸಂಪುಟಕ್ಕೆ ತೆಗೆದುಕೊಂಡು ಬಂದು ಒಂದೇ ಬಾರಿಗೆ ಜಾಗ ಮಂಜೂರು ಮಾಡಿದರು. ಅವರು ಜಾಗ ನೀಡಿದ ಕಾರಣ ನಾವು ಇಂದು ಇಲ್ಲಿ ಭಾರತ ಜೋಡೋ ಭವನ ಕಟ್ಟಿದ್ದೇವೆ.
ಅವರು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಕಾಂಗ್ರೆಸ್ ಅಧ್ಯಕ್ಷರನ್ನು ತಮ್ಮ ಮನೆಗೆ ಕರೆಯುತ್ತಿರಲಿಲ್ಲ. ಕಾಂಗ್ರೆಸ್ ಅಧ್ಯಕ್ಷರ ಮನೆಗೆ ತಾವೇ ಹೋಗುತ್ತಿದ್ದರು. ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಜನಾರ್ಧನ ಪೂಜಾರಿ ಅವರು ಒಂದು ದಿನವೂ ಎಸ್.ಎಂ ಕೃಷ್ಣ ಅವರ ಮನೆಗೆ ಹೋಗಿರಲಿಲ್ಲ. ಎಐಸಿಸಿ ಅಧ್ಯಕ್ಷರನ್ನು ಭೇಟಿ ಮಾಡಲು ಕೃಷ್ಣ ಅವರು ಕಾಂಗ್ರೆಸ್ ಪಕ್ಷದ ಕಚೇರಿಗೆ ಬರುತ್ತಿದ್ದರು. ಎಐಸಿಸಿ ಪ್ರಧಾನ ಕಾರ್ಯದರ್ಶಿ ಬಂದರೆ ಅವರನ್ನು ಸ್ವಾಗತಿಸಲು ವಿಮಾನ ನಿಲ್ದಾಣಕ್ಕೆ ಹೋಗುತ್ತಿದ್ದರು. ಅಷ್ಟರ ಮಟ್ಟಿಗೆ ಅವರು ಕಾಂಗ್ರೆಸ್ ಪಕ್ಷಕ್ಕೆ ಗೌರವ ನೀಡುತ್ತಿದ್ದರು.
ಕೂಡೇಸ್ ಸಂಸ್ಥೆಯವರು, ಮಲ್ಯ ಅವರು, ಆದಿಕೇಶವಲು ಅವರು ಕೃಷ್ಣ ಅವರಿಗೆ ರಾಜಕೀಯವಾಗಿ ಬಹಳಷ್ಟು ಸಹಾಯ ಮಾಡಿದ್ದರು. ಎಂ.ಸಿ ನಾಣಯ್ಯ ಅವರು ವಿಧಾನ ಪರಿಷತ್ ನಲ್ಲಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಆಗ ಅವರು ಪಾನೀಯ ನಿಗಮ ಸ್ಥಾಪಿಸಿ, ನಮ್ಮ ರಾಜ್ಯಕ್ಕೆ ಆರ್ಥಿಕ ಸ್ವಾವಲಂಬನೆ ನೀಡಿದರು. ಆಗ ನಮ್ಮ ರಾಜ್ಯದ ಬಜೆಟ್ ಗಾತ್ರ ಕೇವಲ 26 ಸಾವಿರ ಕೋಟಿ ಮಾತ್ರ ಇತ್ತು. ಇಂದು ಅದು 3.50 ಲಕ್ಷ ಕೋಟಿಗೂ ಹೆಚ್ಚಾಗಿದೆ. ಅವರ ಕಾಲದಲ್ಲಿ ಇದ್ದ 26 ಸಾವಿರ ಕೋಟಿಯಲ್ಲಿ ಎಲ್ಲಾ ವರ್ಗದ ಜನರನ್ನು ತಲುಪುವ ಕಾರ್ಯಕ್ರಮ ಕೊಟ್ಟರು.
ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಜೆ.ಹೆಚ್ ಪಟೇಲರ ಕಾಲದಲ್ಲಿ ಪ್ರತಿ ಪಂಚಾಯ್ತಿಗೆ 1 ಲಕ್ಷ ಅನುದಾನ ನಿಗದಿಯಾಗಿತ್ತು. ಇದನ್ನು ಕೃಷ್ಣ ಅವರು 5 ಲಕ್ಷಕ್ಕೆ ಏರಿಸಿದರು. ಆಮೂಲಕ ರಾಜ್ಯದ ಅಭಿವೃದ್ಧಿಗೆ ಅಡಿಪಾಯ ಹಾಕಿದರು. ಆಧುನಿಕ ಕರ್ನಾಟಕದ ಶಿಲ್ಪಿ. ಬೆಂಗಳೂರನ್ನು ಜಾಗತಿಕ ಮಟ್ಟಕ್ಕೆ ತೆಗೆದುಕೊಂಡು ಹೋದ ನಾಯಕ.
ಅವರ ಪ್ರತಿ ಮಾತಿಗೂ ತೂಕ ಇರುತ್ತಿತ್ತು. ಯಾರಿಗೂ ನೋವು ಮಾಡದಂತೆ ಮಾತನಾಡುತ್ತಿದ್ದರು. ನಾನು ಆಗ ಸರಿಯಾದ ಬಟ್ಟೆ ಹಾಕುತ್ತಿರಲಿಲ್ಲ. ಆಗ ನನ್ನ ನೋಡಿ ಆರ್.ಟಿ ನಾರಾಯಣ ಅವರನ್ನು ಕರೆಸಿ ಇವನಿಗೆ ಬಟ್ಟೆ ಹೊಲಿಸಿ ಎಂದರು. ಬಾಂಬೆಯಿಂದ ಟೈಲರ್ ಕರೆಸಿ 10 ಜತೆ ಬಟ್ಟೆ ಹೊಲಿಸಿಕೊಟ್ಟು ಯಾವ ರೀತಿ ಉಡುಗೆ ತೊಡಬೇಕು ಎಂದು ಕಲಿಸಿದರು. ಅವರು ನನ್ನ ಮೇಲೆ ಅನೇಕ ಬಾರಿ ಸಿಟ್ಟು ಮಾಡಿಕೊಂಡಿದ್ದಾರೆ. ಅವರು ನನಗೆ ಕಡೆಯದಾಗಿ ಬೈದಿದ್ದು ನಾನು ಜೈಲಿಂದ ವಾಪಸ್ಸಾದ ನಂತರ.
ದಿನೇಶ್ ಗುಂಡೂರಾವ್ ಅವರು ಅಧ್ಯಕ್ಷ ಸ್ಥಾನಕ್ಕೆ ಹಾಗೂ ಸಿದ್ದರಾಮಯ್ಯ ಅವರು ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟಾಗ ನನ್ನನ್ನು ವಿರೋಧ ಪಕ್ಷದ ನಾಯಕನಾಗಿ ಮಾಡಬೇಕು ಎಂಬ ಆಸೆ ಅವರಿಗಿತ್ತು. ಆದರೆ ನಾನು ಜೈಲಲ್ಲಿದ್ದಾಗ ಸೋನಿಯಾ ಗಾಂಧಿ ಅವರು ಬಂದು ನನಗೆ ಕೆಲವು ಭರವಸೆ ನೀಡಿದ್ದರು. ಈಗ ಅದನ್ನು ಹೇಳಲು ಸಾಧ್ಯವಿಲ್ಲ. ನಂತರ ಅವರು ಹೇಳಿರುವುದನ್ನು ನಾನು ಈಗ ಚರ್ಚೆ ಮಾಡುವುದಿಲ್ಲ. ವಿರೋಧ ಪಕ್ಷದ ನಾಯಕನಾಗಿ ಕಾರು, ಮನೆಗಾಗಿ ನಾನು ರಾಜಕಾರಣ ಮಾಡುವುದಿಲ್ಲ ಎಂದು ನಾನು ಮಾಧ್ಯಮಗಳ ಮುಂದೆ ಹೇಳಿದ್ದೆ. ಅದನ್ನು ಮಾಧ್ಯಮಗಳಲ್ಲಿ ನೋಡಿದ ಕೃಷ್ಣಾ ಅವರು ನಿನಗೆ ವಿರೋಧ ಪಕ್ಷದ ನಾಯಕ ಸ್ಥಾನದ ಬೆಲೆ ಗೊತ್ತಿದೆಯೇ. ಅದು ಸಂವಿಧಾನಿಕ ಹುದ್ದೆ. ಎಂತಹವರೆಲ್ಲಾ ಆ ಸ್ಥಾನದಲ್ಲಿ ಕೂತಿದ್ದಾರೆ. ಈ ತಪ್ಪನ್ನು ಸರಿಪಡಿಸು ಎಂದು ಬೈದಿದ್ದರು. ನಂತರ ನಾನು ನನ್ನ ಮಾತನ್ನು ತಿದ್ದುಕೊಂಡೆ. ಪಕ್ಷದ ಅಧ್ಯಕ್ಷನಾಗಿ ಇದೇ ಜಾಗದಲ್ಲಿ ಅಧಿಕಾರ ಸ್ವೀಕಾರ ಮಾಡಿದೆ.
ಕೃಷ್ಣ ಅವರು ವಿರೋಧ ಪಕ್ಷದ ನಾಯಕರಿಗೆ ಮೃದುವಾದ ಮಾತಿನಲ್ಲೇ ಚುಚ್ಚುತ್ತಿದ್ದರು. ಶಾಲಿನಲ್ಲಿ ಹೊಡೆಯುವ ರೀತಿ ತಿರುಗೇಟು ನೀಡುತ್ತಿದ್ದರು.
ಬಸವನಗುಡಿ ಕ್ಷೇತ್ರದಲ್ಲಿ ಒಕ್ಕಲಿಗರಾದ ಕೆ.ಎಂ ನಾಗರಾಜ್ ಹಾಗೂ ರಾಜಾಜಿನಗರದಲ್ಲಿ ಮಾಜಿ ಮೇಯರ್ ಅಲ್ಲಂ ನಾಗರಾಜ್ ಅವರಿಗೆ ಟಿಕೆಟ್ ನೀಡಬೇಕು ಎಂದು ತೀರ್ಮಾನ ಮಾಡಲಾಗಿತ್ತು. ನಾನು ಈ ರೀತಿ ರಾಜಕೀಯ ಆಗುವುದಿಲ್ಲ. ಕೆ.ಎಂ ನಾಗರಾಜ್ ಅವರ ಆರೋಗ್ಯ ಸರಿಯಿಲ್ಲ. ಅಲ್ಲಿನ ಪರಿಶಿಷ್ಟ ಜಾತಿ ವರ್ಗದ ಕಾರ್ಪೊರೇಟರ್ ಚಂದ್ರಶೇಖರ್ ಅವರಿಗೆ, ರಾಜಾಜಿನಗರದಲ್ಲಿ ಹಿಂದುಳಿದ ವರ್ಗದವರಾದ ನರೇಂದ್ರ ಬಾಬು ಅವರಿಗೆ ಟಿಕೆಟ್ ನೀಡಿದರೆ ಗೆಲ್ಲುತ್ತಾರೆ ಎಂದು ಹೇಳಿದೆ. ಅವರು ತಕ್ಷಣವೇ ಒಪ್ಪಿದರು. ಎರಡೂ ಕ್ಷೇತ್ರದಲ್ಲಿ ಒಕ್ಕಲಿಗರಿಗೆ ಟಿಕೆಟ್ ನೀಡಬೇಕಾಗಿತ್ತು. ಆದರೆ ಪರಿಶಿಷ್ಟರು ಹಾಗೂ ಹಿಂದುಳಿದ ವರ್ಗದವರಿಗೆ ಟಿಕೆಟ್ ಕೊಟ್ಟರು. ಅವರು ಎಂದಿಗೂ ಜಾತಿ ಮೇಲೆ ರಾಜಕಾರಣ ಮಾಡಿದವರಲ್ಲ ಎಂಬುದಕ್ಕೆ ಇದೇ ಸಾಕ್ಷಿ.
ಅವರು ಕೊನೆಯದಾಗಿ ಪಕ್ಷ ಬಿಟ್ಟು ಹೋಗುವಾಗ ದೆಹಲಿಯಿಂದ ಕರೆ ಮಾಡಿ ಹೇಳಿದರು. ನಾನು ಅಹ್ಮದ್ ಪಟೇಲ್ ಹಾಗೂ ಗುಲಾಂ ನಬಿ ಅಜಾದ್ ಅವರಿಗೆ ಕರೆಯನ್ನು ಸಂಪರ್ಕ ಮಾಡಿದೆ. ಅವರು ವೈಯಕ್ತಿಕ ಕಾರಣದಿಂದ ಆ ತೀರ್ಮಾನಕ್ಕೆ ಬಂದಿದ್ದರು. ಆಗ ನಾನು ಅವರಿಗೆ ಒಂದು ಮಾತು ಹೇಳಿದೆ. ನೀವು ಸಾಯುವ ಮುನ್ನ ಕಾಂಗ್ರೆಸಿಗನಾಗಿ ಸಾಯಬೇಕು ಎಂದು ಮನವಿ ಮಾಡಿದ್ದೆ. ಅವರು ಆಸ್ಪತ್ರೆಯಲ್ಲಿದ್ದಾಗ ಈ ವಿಚಾರ ಚರ್ಚೆಗೆ ಬಂತು. ಮನೆಯಲ್ಲಿ ಕೆಲವು ಸಮಸ್ಯೆ ಇದ್ದ ಕಾರಣ ನಾವು ಅವರಿಗೆ ತೊಂದರೆ ಮಾಡಲು ಹೋಗಲಿಲ್ಲ. ನನ್ನ ನೇತೃತ್ವದಲ್ಲಿ ಚುನಾವಣೆಗೆ ಹೋಗುವ ಮುನ್ನ ದಿನೇಶ್ ಗೂಳಿಗೌಡರು ಹಾಗೂ ಇತರರು ಹೋಗಿ ಎಸ್.ಎಂ. ಕೃಷ್ಣ ಅವರಿಂದ ಸಕ್ರಿಯ ರಾಜಕೀಯದಿಂದ ನಿವೃತ್ತಿಯಾಗುತ್ತಿರುವುದಾಗಿ ಘೋಷಣೆ ಮಾಡಿಸಿದರು.
ಕಳೆದ ನಾಲ್ಕೈದು ತಿಂಗಳು ಅವರು ಅನಾರೋಗ್ಯದಿಂದ ನರಳಿದರು. ಮಧ್ಯ ಚೇತರಿಕೆ ಕಂಡರೂ ಕಳೆದ ಒಂದು ತಿಂಗಳಿಂದ ಆರೋಗ್ಯ ಕ್ಷೀಣಿಸಿ, ಇಂದು ನಮ್ಮನ್ನು ಅಗಲಿದ್ದಾರೆ.
ಸಿದ್ದರಾಮಯ್ಯ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವಾಗ ಕೃಷ್ಣ ಅವರ ಪಾತ್ರವೂ ಇದೆ. ಈಗ ಅದನ್ನು ಹೇಳಿದರೆ ಕೆಲವರು ಒಪ್ಪುತ್ತಾರೋ ಇಲ್ಲವೋ ಗೊತ್ತಿಲ್ಲ. ಇಂದು ನಾವೆಲ್ಲರೂ ಅವರಿಗೆ ಅಂತಿಮ ನಮನ ಸಲ್ಲಿಸುತ್ತಿದ್ದೇವೆ. ನಾಳೆ ಅವರ ಅಂತ್ಯಕ್ರಿಯೆ ನಡೆಯುತ್ತಿದೆ. ಅವರು ಕೊನೆ ಆಸೆಯನ್ನು ನನ್ನ ಮಗಳ ಬಳಿ ಹೇಳಿಕೊಂಡಿದ್ದರು. ತಮ್ಮ ಹೂಟ್ಟೂರಿನಲ್ಲಿ ಒಂದು ಶಾಲೆ ಕಟ್ಟಬೇಕು ಎಂದು ಹೇಳಿದ್ದಾರೆ. ಮನೆಯವರ ಬಳಿ ಚರ್ಚೆ ಮಾಡಿ, ನಾನು ಹಾಗೂ ಚಲುವರಾಯಸ್ವಾಮಿ ಅವರು ಹೋಗಿ ಆ ಜಾಗದಲ್ಲಿ ಸರಿಯಾದ ಸಿದ್ಧತೆ ಮಾಡಿ ಬಂದಿದ್ದೇವೆ. ಮುಖ್ಯಮಂತ್ರಿಗಳು ನಾಳೆ ರಜೆ ಘೋಷಿಸಿದ್ದು, ಎಲ್ಲಾ ಶಾಸಕರು ವಿಶೇಷ ವಿಮಾನದಲ್ಲಿ ನಾಳೆ ಅಂತ್ಯಕ್ರಿಯೆಗೆ ಆಗಮಿಸುತ್ತಿದ್ದಾರೆ.
ಎಸ್.ಎಂ ಕೃಷ್ಣ ಅವರ ಶರೀರ ಮಾತ್ರ ನಮ್ಮ ಜತೆ ಇಲ್ಲ. ಅವರ ಮಾರ್ಗದರ್ಶನ ಹಾಗೂ ಅವರು ಬಿಟ್ಟು ಹೋಗಿರುವ ಸಾಕ್ಷಿ ಗುಡ್ಡೆ ಶಾಶ್ವತವಾಗಿ ನಮ್ಮ ಜತೆ ಉಳಿಯಲಿದೆ. ಮನುಷ್ಯನ ಹುಟ್ಟು ಆಕಸ್ಮಿಕ, ಸಾವು ಅನಿವಾರ್ಯ, ಜನನ ಉಚಿತ, ಮರಣ ಖಚಿತ. ಈ ಹುಟ್ಟು ಸಾವಿನ ಮಧ್ಯ ನಾವು ಏನು ಮಾಡುತ್ತೇವೆ ಎಂಬುದು ಮುಖ್ಯ. ಅದೇ ರೀತಿ ಕೃಷ್ಣ ಅವರು ವಿಕಾಸ ಸೌಧ, ಉದ್ಯೋಗ ಸೌಧ, ಎಲೆಕ್ಟ್ರಾನಿಕ್ ಸಿಟಿ ಕಟ್ಟಿದ್ದಾರೆ.
ಎಲ್ಲಾ ಪಕ್ಷದವರನ್ನು ಸೇರಿಸಿ ಕೃಷ್ಣ ಅವರ ಕುರಿತು ಚರ್ಚೆ ಮಾಡಲು ಕಾರ್ಯಕ್ರಮ ರೂಪಿಸಲಾಗುವುದು. ಆಗ ಅವರ ಬಗ್ಗೆ ಇನ್ನು ಹೆಚ್ಚಿನ ವಿಚಾರ ಹಂಚಿಕೊಳ್ಳುತ್ತೇನೆ. ನಮ್ಮ ಮಾಜಿ ಶಾಸಕರಾದ ಜಯಣ್ಣ ಅವರು ಕೂಡ ವಿಧಿವಶರಾಗಿದ್ದಾರೆ. ಅದು ಕೂಡ ನಮ್ಮ ಪಕ್ಷಕ್ಕೆ ನಷ್ಟವಾಗಿದೆ. ಇಂದು ನಾವು ಅವರ ಆತ್ಮಕ್ಕೆ ಶಾಂತಿ ಕೋರೋಣ. ಮುಖ್ಯಮಂತ್ರಿಗಳು ಈ ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದರು. ಅವರು ಕೃಷ್ಣ ಅವರ ಪಾರ್ಥಿವ ಶರೀರ ದರ್ಶನ ಪಡೆದು ನಂತರ ಮಾಜಿ ಶಾಸಕರ ಪಾರ್ಥಿವ ಶರೀರ ದರ್ಶನಕ್ಕೆ ತೆರಳಬೇಕಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ