ಪ್ರಗತಿವಾಹಿನಿ ಸುದ್ದಿ, ನಂದಗಡ – ಭಾರತ ದೇಶವು ಜಾತ್ಯಾತೀತ ರಾಷ್ಟ್ರವಾಗಿರುವುದರಿಂದ, ಇಲ್ಲಿ ಎಲ್ಲರೂ ಒಂದೇ ಎಂಬ ಭಾವನೆಯಿಂದ ಅನ್ಯೋನ್ಯವಾಗಿ ಬದುಕುತ್ತಿದ್ದಾರೆ. ಆದ್ದರಿಂದ ಪ್ರತಿಯೊಂದನ್ನೂ ಸರಕಾರದ ಕಾನೂನಿನ ನಿಬಂಧನೆಗಳನ್ವಯ ಆಚರಿಸಬೇಕೆಂದು ನಂದಗಡ ಪಿ.ಎಸ್.ಐ ಯು.ಎಸ್.ಅವಟಿ ಅವರು ಹಿಂದೂ ಮತ್ತು ಮುಸ್ಲಿಂ ಸಮಾಜದ ಮುಖಂಡರಿಗೆ ಕರೆ ನೀಡಿದರು.
ತಾಲೂಕಿನ ನಂದಗಡ ಗ್ರಾಮದಲ್ಲಿರುವ ಪೋಲಿಸ್ ಠಾಣೆಯಲ್ಲಿ ಅಯೋಧ್ಯಾ ರಾಮ ಮಂದಿರದ ಶಿಲಾನ್ಯಾಸದ ಕುರಿತು ನಡೆಸಿದ ಶಾಂತಿಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಂವಿಧಾನಿಕವಾಗಿ ಸುಪ್ರಿಂಕೊರ್ಟ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡಲು ಸರಕಾರಕ್ಕೆ ನಿರ್ದೇಶನ ನೀಡಿದೆ. ಅದಕ್ಕಾಗಿ ಬರುವ ಅಗಸ್ಟ್ ೫ರಂದು ಅಯೋಧ್ಯಾದಲ್ಲಿ ರಾಮಮಂದಿರದ ಶಿಲಾನ್ಯಾಸ ಕಾರ್ಯಕ್ರಮ ಜರುಗುತ್ತಿದೆ. ಅಲ್ಲಿ ನಡೆಯುವ ಕಾರ್ಯಕ್ರಮವನ್ನು ಸರಕಾರದವರು ತಮ್ಮ ಕಾನೂನಿನ ಚೌಕಟ್ಟಿನಲ್ಲಿ ನಡೆಸುತ್ತಿರುವುದರಿಂದ, ತಮ್ಮ ತಮ್ಮ ಗ್ರಾಮಗಳಲ್ಲಿ ಪಟಾಕ್ಷಿ ಹಚ್ಚಿ ಸಂಭ್ರಮಿಸುವ ಭರದಲ್ಲಿ ಅನ್ಯ ಕೋಮಿನವರಿಗೆ ತೊಂದರೆ ಕೊಡುವುದಾಗಲಿ ಹಾಗೂ ಅನಾವಶ್ಯಕ ಸಮಸ್ಯೆ ಮಾಡುವುದಾಗಲಿ ಯಾರೂ ಮಾಡದೇ ಹಾಗೇ ತಮ್ಮ ತಮ್ಮ ಗ್ರಾಮಗಳಲ್ಲಿ ಹಿರಿಯರು ಯುವಕರಿಗೆ ಬುದ್ಧಿ ಹೇಳಿ. ಇಲ್ಲವಾದರೆ ಕಾನೂನನ್ನು ಕೈಗೆತ್ತಿಕೊಂಡರೆ ಮುಂದೆ ಆಗುವ ಕಾನೂನು ಚಟುವಟಿಕೆಗೆ ಅವರೆ ಹೊಣೆಗಾರರು ಎಂದರು.
ಇದರ ಜೊತೆಗೆ ಕೊರೋನಾ ನಿಯಂತ್ರಣಕ್ಕಾಗಿ ಕೆಲವು ಕಡೆ ಲಾಕ್ ಡೌನ್, ಕ್ವಾರೆಂಟೆನ್ ಹಾಗೂ 144ಸೆಕ್ಷನ್ ಜಾರಿ ಇರುವುದರಿಂದ ಎಲ್ಲರೂ ತಮ್ಮ ಸುರಕ್ಷತೆಯನ್ನು ತಾವು ಮಾಡಿಕೊಳ್ಳಬೇಕೆಂದರು.
ಕೊರೋನಾ ನಿಯಂತ್ರಣದಲ್ಲಿ ಪೋಲಿಸ್ ಇಲಾಖೆಯೊಂದಿಗೆ ಸಹಕಾರ ಅತ್ಯಗತ್ಯವಾಗಿದೆ. ಖಾನಾಪುರ ತಾಲೂಕಿನ ಬಹುತೇಕ ಜನತೆ ಎಲ್ಲ ಇಲಾಖೆಗಳೊಂದಿಗೆ ಅತ್ಯದ್ಭುತವಾಗಿ ಸಹಕರಿಸಿದ್ದಾರೆ. ಇದು ಶ್ಲಾಘನೀಯ ಕಾರ್ಯ ಎಂದರು.
ಕೊರೋನಾ ಮಹಾಮಾರಿಯನ್ನು ಎಲ್ಲರೂ ಸೇರಿ ಒಟ್ಟಾಗಿ ಹಿಮ್ಮೆಟ್ಟಿಸೋಣ, ಯುವಕರು ವಿವಿಧೆಡೆ ಅನಗತ್ಯ ತಿರುಗಾಡುವುದನ್ನು ನಿಲ್ಲಿಸಬೇಕು. ಸಕಾ೯ರದ ನಿಬಂಧನೆಗಳನ್ನು ಎಲ್ಲರೂ ಗೌರವಿಸಿ, ಕೊರೋನಾ ನಿಯಂತ್ರಣಕ್ಕೆ ಅಗತ್ಯ ಮುಂಜಾಗೃತ ಕ್ರಮಗಳ ಜೊತೆಗೆ, ಧಾಮಿ೯ಕ ಶ್ರದ್ಧೆಯಿಂದ, ಗೌರವ ಪೂರ್ವಕವಾಗಿ ರಾಮ ಮಂದಿರದ ಶಿಲಾನ್ಯಾಸದ ಕಾರ್ಯಕ್ರಮವನ್ನು ಹಾಗೂ ಎಲ್ಲವನ್ನು ಶಾಂತಿಯಿಂದ ಸೌಹಾಧ೯ಯುತವಾಗಿ ಆಚರಿಸಿ ಎಂದು ಕರೆ ನೀಡಿದರು.
ಈ ಸಂಧರ್ಭದಲ್ಲಿ ವಕೀಲ ಸಿ.ಬಿ.ಅಂಬೋಜಿ, ರಿಯಾಜ ಅಹ್ಮದ ಪಟೇಲ, ವಿಜಯ ಕಾಮತ, ರಾಜು ರಪಾಟಿ, ಬಸವರಾಜ ಸಾಣಿಕೊಪ್ಪ, ಪಪ್ಪು ತಾಶೇವಾಲೆ, ಸುಭಾನಿ ಯಳ್ಳೂರ, ನಿಂಗಪ್ಪಾ ಹೋಸುರ, ನಂದಗಡ, ಲಿಂಗನಮಠ, ಕಕ್ಕೇರಿ, ರಾಮಾಪೂರ, ಭೂರಣಕಿ, ಮಂಗೆನಕೊಪ್ಪ, ಸುರಾಪೂರ, ಗುಂಡೋಳ್ಳಿ, ಚುಂಚವಾಡ, ಸುರಪುರಕೇರವಾಡ, ಹಿರೆಕರದಡ್ಡಿ, ಘಸ್ಟೋಳ್ಳಿ, ಪೂರ, ಬೀಡಿ, ಗಂದಿಗವಾಡ, ಇಟಗಿ ಹಾಗೂ ಇತರೆ ಗ್ರಾಮಗಳ ಹಿಂದೂ ಮತ್ತು ಮುಸ್ಲಿಂ ಸಮುದಾಯದ ಮುಖಂಡರುಗಳು ಹಾಜರಿದ್ದರು.
(ವರದಿ:ಈಶ್ವರ ಜಿ.ಸಂಪಗಾವಿ)
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ