ಪ್ರಗತಿವಾಹಿನಿ ಸುದ್ದಿ, ನವದೆಹಲಿ – ಕೊರೋನಾ ಹಿನ್ನೆಲೆಯಲ್ಲಿ ಲಾಕ್ ಡೌನ್ ಆದ ನಂತರದಲ್ಲಿ ದೇಶದಲ್ಲಿ ವಲಸೆ ಕಾರ್ಮಿಕರನ್ನು ಅವರವರ ಊರುಗಳಿಗೆ ತಲುಪಿಸುವುದಕ್ಕಾಗಿಯೇ ಶ್ರಮಿಕ ರೈಲುಗಳನ್ನು ಓಡಿಸಲಾಗುತ್ತಿದೆ. ಈವರೆಗೆ ಸುಮಾರು 1800 ರೈಲುಗಳು ಸಂಚರಿಸಿದ್ದು, 22 ಲಕ್ಷಕ್ಕೂ ಹೆಚ್ಚು ಕಾರ್ಮಿಕರು ಸಂಚರಿಸಿದ್ದಾರೆ.
ವಿಶೇಷವೆಂದರೆ ಇಂತಹ ಶ್ರಮಿಕ ರೈಲಿನಲ್ಲೇ ಹಲವಾರು ಕಾರ್ಮಿಕರು ಮಕ್ಕಳಿಗೆ ಜನ್ಮ ನೀಡಿದ್ದಾರೆ. ರೈಲ್ವೆ ಇಲಾಖೆ ಮೂಲಗಳ ಪ್ರಕಾರ 30 ಮಕ್ಕಳು ಶ್ರಮಿಕ ರೈಲಿನಲ್ಲಿ ಜನಿಸಿದ್ದಾರೆ. ಇದರಲ್ಲಿ ಕೆಲವು ಅವಳಿ ಮಕ್ಕಳೂ ಸೇರಿದ್ದಾರೆ.
ರೈಲ್ವೆ ಇಲಾಖೆ ಗರ್ಭಿಣಿಯರಿಗೆ ಸುರಕ್ಷಿತವಾಗಿ ಮತ್ತು ಹೆಚ್ಚಿನ ಮುತುವರ್ಜಿಯಿಂದ ರೈಲಿನಲ್ಲಿ ಪ್ರಯಾಣಿಸುವಂತೆ ಮಾಡಿದೆ. ಹೆರಿಗೆಗೂ ಸೂಕ್ತ ವ್ಯವಸ್ಥೆ ಕಲ್ಪಿಸಿದೆ. ಹಾಗಾಗಿ ಎಲ್ಲ 30 ಮಕ್ಕಳೂ ಮತ್ತು ತಾಯಂದಿರೂ ಸುರಕ್ಷಿತವಾಗಿದ್ದಾರೆ ಎಂದು ತಿಳಿಸಿದೆ.
ದೇಶದ ವಿವಿಧ ಭಾಗಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದ ಅಸಂಘಟಿತ ವಲಸೆ ಕಾರ್ಮಿಕರು ಲಾಕ್ ಡೌನ್ ಆರಂಭವಾದ ನಂತರ ತಮ್ಮ ತಮ್ಮ ಊರುಗಳಿಗೆ ತೆರಳಲು ಮುಗಿಬಿದ್ದರು. ಇದಕ್ಕಾಗಿಯೇ ರೈಲ್ವೆ ಇಲಾಖೆ ವಿಶೇಷ ವ್ಯವಸ್ಥೆ ಕಲ್ಪಿಸಿತು. ಈಗ ಸಾಮಾನ್ಯ ರೈಲು ಸಂಚಾರಕ್ಕೂ ನಿಧಾನವಾಗಿ ಚಾಲನೆ ಸಿಗುತ್ತಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ