ಪ್ರಗತಿವಾಹಿನಿ ಸುದ್ದಿ, ಖಾನಾಪುರ: ಕರ್ನಾಟಕ ವಿಧಾನ ಸಭೆ ಚುನಾವಣೆ ಇನ್ನೇನು ಘೋಷಣೆಯಾಗಲಿದೆ. ಇಡೀ ರಾಜ್ಯದಲ್ಲಿ ಚುನಾವಣೆ ವಾತಾವರಣ ನಿರ್ಮಾಣವಾಗಿದೆ. ಅಘೋಷಿತ ನೀತಿ ಸಂಹಿತೆ ಜಾರಿಯಾಗಿದೆ. ರಾಜಕೀಯ ಪಕ್ಷಗಳು ಕಳೆದ 3 ತಿಂಗಳನಿಂದಲೆ ಚುನಾವಣೆ ಮೂಡ್ ಗೆ ಜಾರಿವೆ.
ಪ್ರಮುಖ ಮೂರೂ ಪಕ್ಷಗಳು ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ತೊಡಗಿವೆ. ಪಕ್ಷಾಂತರ ಪರ್ವವೂ ಜೋರಾಗಿದೆ. ಚುನಾವಣೆ ಘೋಷಣೆಯಾಗುತ್ತಿದ್ದಂತೆ ಇನ್ನಷ್ಟು ಘಟಾನುಘಟಿಗಳು ಪಕ್ಷ ಬದಲಾವಣೆ ಮಾಡುವ ಮುನ್ಸೂಚನೆ ಈಗಾಗಲೆ ಕಾಣಿಸಿದೆ. ಪಕ್ಷಾಂತರಿಗಳಿಗಾಗಿ ಮೂರೂ ಪಕ್ಷಗಳು ಕೆಲವು ಸೀಟ್ ಗಳನ್ನು ಖಾಲಿ ಇಟ್ಟುಕೊಂಡು ಕಾಯುತ್ತಿರುತ್ತವೆ.
ಬೆಳಗಾವಿ ಜಿಲ್ಲೆಯಲ್ಲಿ ಈ ಬಾರಿ 18ರಲ್ಲಿ 6-7 ಕ್ಷೇತ್ರಗಳು ಹೆಚ್ಚು ಗಮನ ಸೆಳೆಯುತ್ತಿವೆ. ಅವುಗಳಲ್ಲಿ ಹಿರಿಯ ಐಪಿಎಸ್ ಅಧಿಕಾರಿ ಹೇಮಂತ ನಿಂಬಾಳಕರ್ ಅವರ ಪತ್ನಿ, ಕಾಂಗ್ರೆಸ್ ಹಾಲಿ ಶಾಸಕಿ ಡಾ.ಅಂಜಲಿ ನಿಂಬಾಳಕರ್ ಸ್ಪರ್ಧಿಸುತ್ತಿರುವ ಖಾನಾಪುರ ಕ್ಷೇತ್ರವೂ ಒಂದು. ಖಾನಾಪುರ ಕ್ಷೇತ್ರದಲ್ಲಿ ಜೆಡಿಎಸ್ ಈಗಾಗಲೆ ನಾಸಿರ್ ಬಾಗವಾನ್ ಅವರನ್ನು ಅಭ್ಯರ್ಥಿ ಎಂದು ಘೋಷಿಸಿದೆ. ಕಾಂಗ್ರೆಸ್ ಅಂಜಲಿ ನಿಂಬಾಳಕರ್ ಅವರನ್ನು ಅಭ್ಯರ್ಥಿಯನ್ನಾಗಿ ಪರಿಗಣಿಸಿದೆ. ಅಧಿಕೃತ ಘೋಷಣೆ ಅಷ್ಟೆ ಬಾಕಿ ಇದೆ. ಇರ್ಫಾನ್ ತಾಳಿಕೋಟೆ ಟಿಕೆಟ್ ಗೆ ಅರ್ಜಿ ಸಲ್ಲಿಸಿದ್ದರೂ ಅದೇನು ಲೆಕ್ಕಕ್ಕಿಲ್ಲ.
ಬಿಜೆಪಿಯಿಂದ 7 ಜನರು ಆಕಾಂಕ್ಷಿಗಳಾಗಿದ್ದಾರೆ. ಶಿಕ್ಷಣ ಹಾಗೂ ಸಹಕಾರಿ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ವಿಠ್ಠಲ ಹಲಗೆಕರ್, ಮಾಜಿ ಶಾಸಕ ಅರವಿಂದ ಪಾಟೀಲ, ನಿಯತಿ ಫೌಂಡೇಶನ್ ಚೇರಮನ್ ಡಾ.ಸೋನಾಲಿ ಸರ್ನೋಬತ್ ಪ್ರಮುಖರು. ಪ್ರಮೋದ ಕೋಚೇರಿ, ಧನಶ್ರೀ ದೇಸಾಯಿ ಸಹ ಪಟ್ಟಿಯಲ್ಲಿದ್ದಾರೆ. 7 ಆಕಾಂಕ್ಷಿಗಳನ್ನೂ ನಿಲ್ಲಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಣೆ ಮಾಡಿಸಿದ್ದಾರೆ. ಯಾರೇ ಅಭ್ಯರ್ಥಿಯಾದರೂ ಒಗ್ಗಟ್ಟಿನಿಂದ ಕೆಲಸ ಮಾಡುವುದಾಗಿ ಎಲ್ಲರೂ ಪ್ರತಿಜ್ಞೆ ಮಾಡಿದ್ದಾರೆ.
ಆದರೆ ಸಧ್ಯಕ್ಕೆ, ಸೋನಾಲಿ ಸರ್ನೋಬತ್, ವಿಠ್ಠಲ ಹಲಗೆಕರ್ ಮತ್ತು ಅರವಿಂದ ಪಾಟೀಲ ಹೊರತುಪಡಿಸಿ ಉಳಿದವರು ಹೆಚ್ಚು ಕ್ರಿಯಾಶೀಲರಾಗಿ ಕಾಣಿಸುತ್ತಿಲ್ಲ. ಟಿಕೆಟ್ ಘೋಷಣೆಯಾದ ನಂತರ ಈ ಆಣೆ- ಪ್ರತಿಜ್ಞೆಗೆ ಯಾವ ಬೆಲೆಯೂ ಇರುವುದಿಲ್ಲ ಎನ್ನುವ ಸೂಚನೆ ಈಗಾಗಲೆ ಕಾಣಿಸಿದೆ. ಯಾರಿಗೇ ಟಿಕೆಟ್ ಕೊಟ್ಟರೂ ಇನ್ನೂ ಇಬ್ಬರು ಪಕ್ಷೇತರರಾಗಿ ಕಣಕ್ಕಿಳಿಯುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಅರವಿಂದ ಪಾಟೀಲ ಮಹಾರಾಷ್ಟ್ರ ಏಕಾಕರಣ ಸಮಿತಿಗೆ ಮರಳಿದರೂ ಆಶ್ಚರ್ಯವಿಲ್ಲ.
ಡಾ.ಸೋನಾಲಿ ಸರ್ನೋಬತ್ ಬಿಜೆಪಿಯ ಪ್ರಬಲ ಆಕಾಂಕ್ಷಿ. ಅವರು ಕಳೆದ ಕೆಲವು ವರ್ಷಗಳಿನಿಂದ ಕ್ಷೇತ್ರದಲ್ಲಿ ಓಡಾಡುತ್ತ ಕೆಲಸ ಮಾಡುತ್ತಿದ್ದಾರೆ. ಕೆಲವು ಕುಗ್ರಾಮಗಳಿಗೆ ಮನೆ ಬಾಗಿಲಿಗೆ ಪಡಿತರ ಬರುವಂತೆ ಮಾಡಿದ್ದಾರೆ. ವಿದ್ಯುತ್ ಸಮಸ್ಯೆ ಪರಿಹರಿಸಿದ್ದಾರೆ. ಪ್ರತಿ ಊರಲ್ಲಿ ಅರಿಷಿಣ- ಕುಂಕುಮ ಕಾರ್ಯಕ್ರಮ ಮಾಡಿದ್ದಾರೆ. ಮಂದಿರಗಳಿಗೆ, ವಿವಿಧ ಸ್ಪರ್ಧಾ ಚಟುವಟಿಕೆಗಳಿಗೆ ಲಕ್ಷಾಂತರ ರೂ. ದೇಣಿಗೆ ನೀಡಿದ್ದಾರೆ. ಹಲವರಿಗೆ ಪಡಿತರ ಕಾರ್ಡ್ ಮಾಡಿಸಿಕೊಟ್ಟಿದ್ದಾರೆ., ಖಾನಾಪುರದಲ್ಲಿ ಅಹವಾಲು ಆಲಿಕೆ ಕಚೇರಿ ತೆರೆದು ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದಾರೆ. ಹಾಗಾಗಿ ಪ್ರತಿ ಊರಿಗೆ, ಪ್ರತಿ ಮನೆಗೆ ಪರಿಚಿತರಾಗಿದ್ದಾರೆ. ಕನ್ನಡ- ಮರಾಠಿ ಎರಡೂ ಭಾಷಿಕರನ್ನು ಅವರು ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸ ಮಾಡುತ್ತಿದ್ದಾರೆ.
ಅಲ್ಲದೆ, ಖಾನಾಪುರ ತಾಲೂಕಿನ ಸಮಸ್ಯೆಗಳ ಪಟ್ಟಿಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕರ್ನಾಟಕದ ಎಲ್ಲ ಸಚಿವರಿಗಷ್ಟೆ ಅಲ್ಲದೆ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಬಳಿಯೂ ಕೊಂಡೊಯ್ದಿದ್ದಾರೆ. ಹಾಗಾಗಿ ಸೋನಾಲಿ ಸರ್ನೋಬತ್ ಅವರ ಕಾರ್ಯಚಟುವಟಿಕೆಗಳು ಅಮಿತ್ ಶಾ ಅವರ ಗಮನಕ್ಕೆ ಬಂದಿದೆ.
ಈ ಎಲ್ಲ ಹಿನ್ನೆಲೆಯಲ್ಲಿ, ಮತ್ತು ಮಹಿಳೆಯ ವಿರುದ್ಧ ಮಹಿಳೆಯನ್ನೇ ಕಣಕ್ಕಿಳಿಸಬೇಕು, ವೈದ್ಯರ ವಿರುದ್ಧ ವೈದ್ಯೆಯನ್ನೇ ಕಣಕ್ಕಿಳಿಸಬೇಕೆನ್ನುವ ಯೋಜನೆಯನ್ನು ಅಮಿತ್ ಶಾ ರೂಪಿಸಿದರೂ ಆಶ್ಚರ್ಯವಿಲ್ಲ. ಅವರ ಆಂತರಿಕ ಸರ್ವೆ ವರದಿ ಯಾವ ರೀತಿ ಇದೆ ಎನ್ನುವುದರ ಮೇಲೆ ಎಲ್ಲವೂ ಅವಲಂಬಿತವಾಗುತ್ತದೆ.
ಸೋನಾಲಿ ಸರ್ನೋಬತ್ ಅವರ ಈಗಿನ ಸ್ಪೀಡ್ ಗಮನಿಸಿದರೆ ಪಕ್ಷ ಟಿಕೆಟ್ ಕೊಡದಿದ್ದರೂ ಸ್ವತಂತ್ರವಾಗಿಯಾದರೂ ಕಣಕ್ಕಳಿಯಲೇಬೇಕು ಎನ್ನುವ ನಿರ್ಧಾರ ತಳೆದಿದ್ದಾರೋ ಎನ್ನುವ ಅನುಮಾನ ಬರುವಂತಿದೆ. ಹಾಗೊಮ್ಮೆ ಆದಲ್ಲಿ ಡಾಕ್ಟರ್ ವರ್ಸಸ್ ಡಾಕ್ಟರ್ ಪೈಪೋಟಿ ಖಚಿತ. ಅಂಜಲಿ ನಿಂಬಾಳಕರ್ ಕೂಡ ಮೊದಲ ಬಾರಿಗೆ ಕಾಂಗ್ರೆಸ್ ಟಿಕೆಟ್ ತಪ್ಪಿದ್ದರಿಂದ ಸ್ವತಂತ್ರವಾಗಿ ಸ್ಪರ್ಧಿಸಿ ಪರಾಭಗೊಂಡಿದ್ದರು. ನಂತರ ಪುನಃ ಪಕ್ಷಕ್ಕೆ ಮರಳಿ, 2018ರಲ್ಲಿ ಕಾಂಗ್ರೆಸ್ ನಿಂದಲೇ ಸ್ಪರ್ಧಿಸಿ ಆಯ್ಕೆಯಾಗಿದ್ದರು. ಸೋನಾಲಿ ಸರ್ನೋಬತ್ ಕೂಡ ಅದೇ ಮಾರ್ಗ ಹಿಡಿದರೆ ಆಶ್ಚರ್ಯವಿಲ್ಲ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ