ಸರಕಾರಿ ಯೋಜನೆಗಳ ಮಾಹಿತಿ ಇಲ್ಲದೇ ಈ ರೀತಿ ಮಾತನಾಡಬೇಡಿ : ಶಾಸಕ ಅಭಯ ಪಾಟೀಲ್ ಗೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ತಿರುಗೇಟು
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಅಂಗನವಾಡಿ ಕಾರ್ಯಕರ್ತೆಯರಿಗೆ ನೀಡಲಾಗುತ್ತಿರುವ ಮೊಬೈಲ್ ಕೇಂದ್ರ ಸರಕಾರದ್ದು ಎನ್ನುವ ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ಅವರ ಹೇಳಿಕೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಆಕ್ಷೇಪಿಸಿದ್ದಾರೆ.
ಅಂಗನವಾಡಿ ಕಾರ್ಯಕರ್ತೆಯರಿಗೆ ಮೊಬೈಲ್ ಹಂಚಿಕೆ ಕಾರ್ಯಕ್ರಮದಲ್ಲಿ ಶಾಸಕ ಅಭಯ ಪಾಟೀಲ ನೀಡಿದ ಹೇಳಿಕೆಗೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಪ್ರತಿಕ್ರಿಯೆ ನೀಡಿದ್ದಾರೆ. ಅಂಗನವಾಡಿ ಕಾರ್ಯಕರ್ತೆಯರಿಗೆ ಹಂಚುತ್ತಿರುವ ಮೊಬೈಲ್ ಕೇಂದ್ರದ ನಮ್ಮ ಸರಕಾರದ್ದು ಎಂದು ಅಭಯ ಪಾಟೀಲ ಹೇಳಿದ್ದರು.
ತಮ್ಮ ಕೆಲಸಗಳಿಗೆ ಉತ್ತಮವಾದ ಮೊಬೈಲ್ ಅಗತ್ಯ ಎಂದು ಅಂಗನವಾಡಿ ಕಾರ್ಯಕರ್ತೆಯರು ಕಳೆದ ಅನೇಕ ವರ್ಷಗಳಿಂದ ಹೋರಾಟ, ಪ್ರತಿಭಟನೆ ಮಾಡುತ್ತ ಬಂದಿದ್ದಾರೆ. ಅದಕ್ಕೆ ಹಿಂದಿನ ಬಿಜೆಪಿ ಸರಕಾರ ಸ್ಪಂದಿಸಿರಲಿಲ್ಲ. ನಾನು ಮುಖ್ಯಮಂತ್ರಿಗಳಿಗೆ, ಕೇಂದ್ರ ಸರಕಾರಕ್ಕೆ ಮನವರಿಕೆ ಮಾಡಿ, ವಿಶೇಷ ಪ್ರಯತ್ನದಿಂದ ಮೊಬೈಲ್ ಕೊಡಲಾಗುತ್ತಿದೆ. ಕೇಂದ್ರ ಸರಕಾರ ಪೋಷಣ್ ಅಭಿಯಾನದ ಅಡಿಯಲ್ಲಿ ಅನುದಾನ ನೀಡಿದೆಯೇ ವಿನಃ ಇದೇನೂ ವಿಶೇಷ ಅನುದಾನವಲ್ಲ. ಇಷ್ಟು ವರ್ಷ ಶಾಸಕರಾಗಿರುವವರು ಯೋಜನೆಗಳ ಕುರಿತು ಮಾಹಿತಿ ಹೊಂದಿರಬೇಕಾಗುತ್ತದೆ. ಯಾವುದೇ ಮಹಿತಿ ಇಲ್ಲದೆ ಈ ರೀತಿ ಮಾತನಾಡುವುದು ಸಮಂಜಸವಲ್ಲ ಎಂದು ಹೆಬ್ಬಾಳಕರ್ ತಿರುಗೇಟು ನೀಡಿದ್ದಾರೆ.
ಇಂತಹ ಯೋಜನೆಗಳು ಯಾವತ್ತೂ ಕೇಂದ್ರ ಮತ್ತು ರಾಜ್ಯ ಸರಕಾರದ 60:40ರ ಅನುಪಾತದಲ್ಲಿರುತ್ತವೆ. ಹಾಗೆಯೇ ರಾಜ್ಯ ಸರಕಾರದ ತೆರಿಗೆಯಲ್ಲೂ ಕೇಂದ್ರ ಸರಕಾರಕ್ಕೆ ಪಾಲು ಹೋಗುತ್ತದೆ ಎಂದು ಲಕ್ಷ್ಮೀ ಹೆಬ್ಬಾಳಕರ್ ತಿಳಿಸಿದ್ದಾರೆ.
ರಾಜ್ಯ ಮತ್ತು ಕೇಂದ್ರದಲ್ಲಿ ಯಾವುದೇ ಪಕ್ಷದ ಸರಕಾರಗಳು ಅಧಿಕಾರದಲ್ಲಿರಲಿ, ಇಂತಹ ಯೋಜನೆಗಳಿಗೆ ಅವುಗಳು ತಮ್ಮದೇ ಆದ ಪಾಲನ್ನು ಭರಿಸುವುದು ಒಕ್ಕೂಟ ವ್ಯವಸ್ಥೆಯಲ್ಲಿ ನಡೆದು ಬಂದಿರುವ ಪದ್ಧತಿ. ಕೇಂದ್ರದ ಅನೇಕ ಯೋಜನೆಗಳಿಗೆ ರಾಜ್ಯ ಸರಕಾರ ತನ್ನ ಪಾಲನ್ನು ನೀಡುತ್ತದೆ. ಆದರೆ ಯೋಜನೆ ಯಾವ ಸರಕಾರದ ಮೂಲಕ ಜಾರಿಗೊಳ್ಳುತ್ತದೆ ಎನ್ನುವುದರ ಮೇಲೆ ಆ ಯೋಜನೆ ಯಾರದ್ದು ಎಂದು ಗುರುತಿಸಲ್ಪಡುತ್ತದೆ ಎಂದು ಲಕ್ಷ್ಮೀ ಹೆಬ್ಬಾಳಕರ್ ಸ್ಪಷ್ಟಪಡಿಸಿದ್ದಾರೆ.
ರೈಲ್ವೆ ಯೋಜನೆಗಳು, ರಾಷ್ಟ್ರೀಯ ಹೆದ್ದಾರಿ ಯೋಜನೆಗಳನ್ನು ಕೇಂದ್ರ ಸರಕಾರದ ಯೋಜನೆಗಳೆಂದು ಹೇಳಲಾಗುತ್ತದೆ. ಹಾಗಂತ ಪೂರ್ಣ ಹಣವನ್ನು ಕೇಂದ್ರವೇ ಭರಿಸುವುದಿಲ್ಲ. ರಾಜ್ಯ ಸರಕಾರ ತನ್ನ ಪಾಲಿನ ಹಣವನ್ನೂ ನೀಡುತ್ತದೆ. ಹಾಗೆಯೇ ರಾಜ್ಯ ಸರಕಾರದ ಅನೇಕ ಯೋಜನೆಗಳಿಗೆ ಕೇಂದ್ರ ಸರಕಾರ ನರವು ನೀಡುತ್ತದೆ. ಹಾಗಂತ ಇದು ಕೇಂದ್ರ ಸರಕಾರದ ಯೋಜನೆ ಎನ್ನಲಾಗದು. ಇಂತಹ ಸಾಮಾನ್ಯ ಜ್ಞಾನ ಜನಪ್ರತಿನಿಧಿಗಳಿಗಿರಬೇಕಾಗುತ್ತದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ತಿಳಿಸಿದ್ದಾರೆ.
ಜಿಎಸ್ ಟಿ ಸೇರಿದಂತೆ ಕೇಂದ್ರ ಸರಕಾರ ರಾಜ್ಯದಿಂದ ತೆರಿಗೆ ಹಣವನ್ನು ಪಡೆಯುತ್ತದೆ. ಆ ಹಣದಲ್ಲಿ ಒಂದಿಷ್ಟು ಭಾಗವನ್ನು ಇಂತಹ ಯೋಜನೆಗಳ ಮೂಲಕ ಮರಳಿ ಕೊಡುತ್ತದೆ. ಯಾವುದೇ ಪಕ್ಷ ಅಧಿಕಾರದಲ್ಲಿದ್ದರೂ ಇದು ನಡೆದುಕೊಂಡು ಬಂದಿರುವ ವ್ಯವಸ್ಥೆ. ಇಂತದ್ದರಲ್ಲಿ ರಾಜಕೀಯ ಮಾಡುವುದು ಯಾರಿಗೂ ಶೋಭೆ ತರುವಂತದ್ದಲ್ಲ ಎಂದು ಅವರು ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ