ಪ್ರಗತಿವಾಹಿನಿ ಸುದ್ದಿ, ಖಾನಾಪುರ: ಜಿಂಕೆಯೊಂದು ಆಹಾರ ಅರಸುತ್ತ ಅರಣ್ಯದಿಂದ ಬೇರ್ಪಟ್ಟು ತಾಲ್ಲೂಕಿನ ಹಲಸಿವಾಡಿ ಗ್ರಾಮದ ಜನವಸತಿ ಪ್ರದೇಶಕ್ಕೆ ಆಗಮಿಸಿ ಗ್ರಾಮದ ಬೀದಿನಾಯಿಗಳ ದಾಳಿಯಿಂದ ಗಾಯಗೊಂಡ ಘಟನೆ ಶನಿವಾರ ವರದಿಯಾಗಿದೆ.
ಹಲಸಿವಾಡಿ ಗ್ರಾಮಸ್ಥರು ಜಿಂಕೆಯನ್ನು ನಾಯಿಗಳಿಂದ ರಕ್ಷಿಸಿ ಜೀವದಾನ ನೀಡಿದ್ದು, ಜಿಂಕೆಗೆ ಚಿಕಿತ್ಸೆ ಕೊಡಿಸಿದ ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಅದನ್ನು ಉಪಚರಿಸಿದ್ದಾರೆ. ಬಳಿಕ ಸುರಕ್ಷಿತವಾಗಿ ಕರೆದೊಯ್ದು ಮರಳಿ ಅರಣ್ಯ ಪ್ರದೇಶಕ್ಕೆ ಬಿಡುವ ಮೂಲಕ ಮಾನವೀಯತೆ
ಮೆರೆದಿದ್ದಾರೆ.
ಮಾಧ್ಯಮ ಪ್ರತಿನಿಧಿಗಳಿಗೆ ಈ ವಿಷಯವನ್ನು ಸ್ಪಷ್ಟಪಡಿಸಿದ ನಾಗರಗಾಳಿ ಎ.ಸಿ.ಎಫ್ ಸಿ.ಜಿ
ಮಿರ್ಜಿ, “ಅರಣ್ಯದಿಂದ ಬೇರ್ಪಟ್ಟ ಜಿಂಕೆ ಶನಿವಾರ ಮುಂಜಾನೆ ಹಲಸಿವಾಡಿ ಗ್ರಾಮಕ್ಕೆ
ಬಂದಾಗ ಅದನ್ನು ಗಮನಿಸಿದ ಬೀದಿನಾಯಿಗಳು ಬೆನ್ನಟ್ಟಿ ಗಾಯಗೊಳಿಸಿದ್ದವು. ನಾಯಿಗಳ
ದಾಳಿಯಿಂದ ಹೆದರಿದ ಜಿಂಕೆಯನ್ನು ಗಮನಿಸಿದ ಹಲಸಿವಾಡಿ ಗ್ರಾಮಸ್ಥ ಅರ್ಜುನ ದೇಸಾಯಿ
ನಾಯಿಗಳಿಂದ ಜಿಂಕೆಯನ್ನು ರಕ್ಷಿಸಿದ್ದಾರೆ. ಗಾಯಗೊಂಡಿದ್ದ ಜಿಂಕೆಗೆ ಪ್ರಥಮ ಚಿಕಿತ್ಸೆ
ನೀಡಿ ಬಳಿಕ ಈ ವಿಷಯವನ್ನು ಅರಣ್ಯ ಇಲಾಖೆಗೆ ಮುಟ್ಟಿಸಿದ್ದಾರೆ.
ಸುದ್ದಿ ತಿಳಿದ ಕೂಡಲೇ ಗ್ರಾಮಕ್ಕೆ ತೆರಳಿದ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಗಾಯಗೊಂಡು ನರಳುತ್ತಿದ್ದ ಜಿಂಕೆಯನ್ನು ಪಶು ಚಿಕಿತ್ಸಾಲಯಕ್ಕೆ ಕರೆತಂದು ಉಪಚರಿಸಿದ್ದಾರೆ. ಜಿಂಕೆಗೆ ಚಿಕಿತ್ಸೆ ನೀಡಿದ ಪಶು ವೈದ್ಯರು ಜಿಂಕೆಯ ಗಾಯವಾದ ಭಾಗಗಳಿಗೆ ಔಷಧಿ ಲೇಪಿಸಿದ್ದಾರೆ. ಚಿಕಿತ್ಸೆಯ ಬಳಿಕ ಜಿಂಕೆಯನ್ನು ನಾಗರಗಾಳಿಯ ಅರಣ್ಯ ಇಲಾಖೆಯ ಕಚೇರಿಗೆ ತಂದು ಔಷಧಿ ಮತ್ತು ಆಹಾರ ನೀಡಲಾಗಿದೆ. ಸಂಜೆಯವರೆಗೆ ಅರಣ್ಯ ಇಲಾಖೆ ಕೊಠಡಿಯೊಂದರಲ್ಲಿ ವಿಶ್ರಾಂತಿ ಪಡೆದ ಜಿಂಕೆಯ ದೇಹದಲ್ಲಿ ಸಂಜೆಯ ವೇಳೆಗೆ ಚೇತರಿಕೆ ಕಂಡುಬಂದ ಹಿನ್ನೆಲೆಯಲ್ಲಿ ಅದನ್ನು ಮರಳಿ ಅರಣ್ಯಕ್ಕೆ ಬಿಡಲಾಗಿದೆ” ಎಂದು ತಿಳಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ