ಇಂದಿನಿಂದ ದೇಶೀಯ ವಿಮಾನ ಹಾರಾಟ ಆರಂಭ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕೊರೊನಾ ಲಾಕ್ ಡೌನ್ ನಿಂದಾಗಿ ಸುಮಾರು ಎರಡುತಿಂಗಳಿಂದ ಬಂದ್ ಆಗಿದ್ದ ದೇಶೀಯ ವಿಮಾನ ಯಾನ ಸೇವೆ ಇಂದಿನಿಂದ ಪುನರಾರಂಭವಾಗಲಿದೆ. ಈ ಕುರಿತು ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಟ್ವೀಟ್ ಮಾಡಿದ್ದು, ಈಗಾಗಲೇ ಎಲ್ಲಾ ಖಾಸಗಿ ವಿಮಾನಯಾನ ಸಂಸ್ಥೆಗಳಿಗೂ ಸಂದೇಶ ನೀಡಿದ್ದಾರೆ.

ಇಂದಿನಿಂದ ಜೂನ್ 30ರವರೆಗೂ ವಿಮಾನಗಳ ಹಾರಾಟಕ್ಕೆ ಮೊದಲ ಹಂತದ ಅನುಮತಿ ನೀಡಲಾಗಿದೆ. ಈ ಹಿನ್ನಲೆಯಲ್ಲಿ ಬೆಂಗಳೂರಿಗೆ ಪ್ರತಿನಿತ್ಯ 215 ವಿಮಾನಗಳು ನಿರ್ಗಮನ ಮತ್ತು ಆಗಮನವಾಗಲಿವೆ. ಪ್ರತಿ 10 ನಿಮಿಷಕ್ಕೆ ಒಂದರಂತೆ ವಿಮಾನಗಳು ಟೆಕ್ ಆಫ್ ಆಗಲಿದೆ. ನಾಗರಿಕ ವಿಮಾನಯಾನ ಸಚಿವಾಲಯದ ನಿರ್ದೇಶನಕ್ಕೆ ಅನುಗುಣವಾಗಿ ವಿಮಾನಗಳ ವೇಳಾಪಟ್ಟಿ ಪ್ರಕಟಿಸಲಾಗಿದೆ.

ವಿಮಾನಯಾನ ಮಾಡುವ ಪ್ರಯಾಣಿಕರಿಗಾಗಿ ಹೊಸ ಮಾರ್ಗಸೂಚಿ ನೀಡಲಾಗಿದ್ದು, ಪಾಲಿಸಬೇಕಾದ ನಿಯಮ ಇಂತಿದೆ:
* ವಿಮಾನಗಳ ಮೂಲಕ ರಾಜ್ಯಕ್ಕೆ ಬರೋರಿಗೆ ಕಡ್ಡಾಯ ಕ್ವಾರಂಟೈನ್
* ಮಹಾರಾಷ್ಟ್ರ, ಗುಜರಾತ್, ತಮಿಳುನಾಡು, ಮಧ್ಯಪ್ರದೇಶ, ದೆಹಲಿ, ರಾಜಸ್ಥಾನ ರಾಜ್ಯಗಳಿಂದ ಬರೋರಿಗೆ 7 ದಿನ ಕಡ್ಡಾಯ ಸಾಂಸ್ಥಿಕ ಕ್ವಾರಂಟೈನ್ ಮತ್ತು 7 ದಿನ ಕಡ್ಡಾಯ ಹೋಂ ಕ್ವಾರಂಟೈನ್
* ಉಳಿದ ರಾಜ್ಯಗಳಿಂದ ಬರೋರಿಗೆ 14 ದಿನ ಕಡ್ಡಾಯ ಹೋಂ ಕ್ವಾರಂಟೈನ್
* ಸ್ವತ: ಪ್ರಯಾಣಿಕರೇ ಹೊಟೇಲ್ ವೆಚ್ಚ ಭರಿಸಬೇಕು
* ಬ್ಯುಸಿನೆಸ್ ಉದ್ದೇಶಕ್ಕೆ ಬರೋರು ಕೊರೊನಾ ನೆಗೆಟಿವ್ ರಿಪೋರ್ಟ್ ಸಲ್ಲಿಸಿದರೆ ಮಾತ್ರ ಪ್ರವೇಶ
* ಪ್ರಯಾಣಕ್ಕೂ ಎರಡು ದಿನಗಳ ಮುಂಚೆ ರಿಪೋರ್ಟ್ ಸಲ್ಲಿಸಬೇಕು
* ರಾಜ್ಯದೊಳಗೆ ಯಾರೇ ಬಂದರೂ ಸೇವಾಸಿಂಧು ಮೂಲಕ ಪಡೆದಿರುವ ಇ-ಪಾಸ್ ಸಲ್ಲಿಸತಕ್ಕದ್ದು

ಇಷ್ಟೇ ಅಲ್ಲದೇ ಗುಜರಾತ್, ಮಧ್ಯಪ್ರದೇಶ, ಮಹಾರಾಷ್ಟ್ರ, ತಮಿಳುನಾಡು, ದೆಹಲಿ ಮತ್ತು ರಾಜಸ್ಥಾನಗಳಿಂದ ಬರೋ ಗರ್ಭಿಣಿಯರು, 10 ವರ್ಷ ಕೆಳಗಿನ ಮಕ್ಕಳು, 80 ವರ್ಷ ಮೇಲ್ಪಟ್ಟ ವೃದ್ಧರು, ಗಂಭೀರ ಕಾಯಿಲೆಯವರಿಗೆ 14 ದಿನಗಳ ಕಾಲ ಹೋಂ ಕ್ವಾರಂಟೈನ್ ಇರಲಿದೆ. ಈ ವರ್ಗದ ಜನರಿಗೆ ಸಾಂಸ್ಥಿಕ ಕ್ವಾರಂಟೈನ್ ಇರೋದಿಲ್ಲ. ಆದರೆ ಈ ವರ್ಗದ ಜನ ಹೋಂ ಕ್ವಾರಂಟೈನ್ ನಲ್ಲಿ ತಮ್ಮೊಂದಿಗೆ ಸರಕಾರ ನಿಗದಿ ಪಡಿಸಿದ ಸಹಾಯಕರೊಬ್ಬರನ್ನು ಜೊತೆಗಿಟ್ಟುಕೊಳ್ಳಬೇಕು. ಈ ಆರು ರಾಜ್ಯಗಳು ಬಿಟ್ಟು ಉಳಿದ ರಾಜ್ಯಗಳಿಂದ ಬರೋ ಎಲ್ಲರಿಗೂ 14 ದಿನ ಹೋಂ ಕ್ವಾರಂಟೈನ್ ಎಂದು ನಿಯಮ ಮಾಡಲಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button