ಡೆಂಗೀ ತಡೆಗಟ್ಟುವಿಕೆ ಮನೆಯಿಂದಲೇ ಪ್ರಾರಂಭ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ರಾಷ್ಟ್ರೀಯ ಕೀಟಜನ್ಯ ರೋಗಗಳ ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ ಮೇ 16 ರಂದು ರಾಷ್ಟ್ರೀಯ ಡೆಂಗಿ ದಿನ ಆಚರಿಸಲಾಗುತ್ತಿದ್ದು, ಡೆಂಗ್ಯೂ ಜ್ವರದ ಕುರಿತು ನಿರ್ಲಕ್ಷ್ಯ ತೋರದೇ ಎಚ್ಚರಿಕೆ ವಹಿಸಿದರೆ ನಿಯಂತ್ರಣ ಸಾಧ್ಯವಾಗಲಿದೆ ಎಂದು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
“ಡೆಂಗೀ ತಡೆಗಟ್ಟುವಿಕೆ ಮನೆಯಿಂದಲೇ ಪ್ರಾರಂಭ” ಎಂಬ ಧೈಯವಾಕ್ಯವನ್ನು ಎಲ್ಲರೂ ಪಾಲಿಸಬೇಕು ಎಂದು ತಿಳಿಸಿದ್ದಾರೆ.
ಡೆಂಗೀ, ಚಿಕನ್‌ಗುನ್ಯಾ ಜ್ವರವು ವೈರಸ್‌ನಿಂದ ಉಂಟಾಗುತ್ತದೆ ಹಾಗೂ ಹಗಲು ಹೊತ್ತಿನಲ್ಲಿ ಕಚ್ಚುವ ಈಡಿಸ್ ಸೊಳ್ಳೆಗಳಿಂದ ಡೆಂಗೀ,ಚಿಕನ್‌ಗುನ್ಯಾ ಒಬ್ಬರಿಂದ ಮತ್ತೊಬ್ಬರಿಗೆ ಹರಡುವುದರಿಂದ ಎಚ್ಚರಿಕೆ ವಹಿಸಬೇಕು.
ಈ ಜ್ವರಗಳನ್ನು ರಕ್ತ ಪರೀಕ್ಷೆಯಿಂದ ಮಾತ್ರ ಪತ್ತೆ ಹಚ್ಚಲಾಗುತ್ತದೆ. ಈಡೀಸ್ ಸೊಳ್ಳೆಗಳು ಮನೆಯಲ್ಲಿನ ಸ್ವಚ್ಛ ನೀರಿನ ಸಂಗ್ರಹಗಳಲ್ಲಿ ಉತ್ಪತ್ತಿಯಾಗುತ್ತವೆ ಆದ್ದರಿಂದ ನಿಮ್ಮ ಮನೆಯಲ್ಲಿನ ತೊಟ್ಟಿ, ಬ್ಯಾರಲ್, ಡ್ರಮ್‌ಗಳಲ್ಲಿನ ನೀರನ್ನು ವಾರಕ್ಕೊಮ್ಮೆ ಖಾಲಿ ಮಾಡಿ ಸ್ವಚ್ಚಗೊಳಿಸಿ ಪುನಃ ನೀರು ತುಂಬಿಸಬೇಕು ಮತ್ತು ಎಲ್ಲಾ ನೀರಿನ ಶೇಖರಣೆಗಳನ್ನು ಮುಚ್ಚಿಡಬೇಕು.
ಮನೆ ಸುತ್ತ – ಮುತ್ತ ನೀರು ನಿಲ್ಲದಂತೆ ಎಚ್ಚರ ವಹಿಸಿ, ಘನ ತ್ಯಾಜ್ಯಗಳನ್ನು ವಿಲೇವಾರಿ ಮಾಡಿ ಪರಿಸರವನ್ನು ಸ್ವಚ್ಚವಾಗಿಡಬೇಕು.
ಹಗಲು ಹೊತ್ತಿನಲ್ಲಿ ವಿಶ್ರಾಂತಿ ಪಡೆಯುವವರು, ವಿಶೇಷವಾಗಿ ವೃದ್ಧರು, ಗರ್ಭಿಣಿಯರು ಹಾಗೂ ಮಕ್ಕಳು ಸೊಳ್ಳೆ ಪರದೆಯನ್ನು ಬಳಸಬೇಕು.
ಡೆಂಗೀ,ಚಿಕುಂಗುನ್ಯ ರೋಗಿಗಳೂ ಸಹ ತಪ್ಪದೇ ಸೊಳ್ಳೆಯ ಪರದೆಯನ್ನು ಉಪಯೋಗಿಸಬೇಕು ಹಾಗೂ ಸೊಳ್ಳೆಗಳು ಕಚ್ಚದಂತೆ ಮೈ ತುಂಬಾ ಬಟ್ಟೆ ಧರಿಸಿ, ಸೊಳ್ಳೆ ಪರದೆ, ಸೊಳ್ಳೆ ಬತ್ತಿ, ಮುಲಾಮು, ದ್ರಾವಣ ಇವುಗಳನ್ನು ಉಪಯೋಗಿಸಬೇಕು ಎಂದು ತಿಳಿಸಿದ್ದಾರೆ.
ಇದ್ದಕ್ಕಿದ್ದಂತೆ ತೀವ್ರ ಜ್ವರ, ವಿಪರೀತ ತಲೆನೋವು, ಕಣ್ಣಿನ ಹಿಂಭಾಗದಲ್ಲಿ ನೋವು, ಮಾಂಸಖಂಡ ಮತ್ತು ಕೀಲುಗಳಲ್ಲಿ ವಿಪರೀತ ನೋವು, ವಾಕರಿಕೆ, ವಾಂತಿ ಈ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣವೇ ವೈದ್ಯರನ್ನು ಸಂಪರ್ಕಿಸಬೇಕು.
ಚಿಕಿತ್ಸೆಯು ಎಲ್ಲಾ ಆಸ್ಪತ್ರೆಗಳಲ್ಲೂ ಉಚಿತವಾಗಿ ಲಭ್ಯವಿರುತ್ತದೆ. ಈಡಿಸ್ ಲಾರ್ವಾ ಸಮೀಕ್ಷೆಗಾಗಿ ನಿಮ್ಮ ಮನೆಗೆ ಭೇಟಿ ನೀಡುವ ಆರೋಗ್ಯ ಸಿಬ್ಬಂದಿ ಹಾಗೂ ಆಶಾ ಸ್ವಯಂ ಸೇವಕರಿಗೆ ಸಹಕಾರ ನೀಡಿ, ಸಲಹೆಗಳನ್ನು ಪಾಲಿಸಿ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ