ಸಂತ್ರಸ್ತರಿಗೆ ಧೈರ್ಯ ಕಳೆದುಕೊಳ್ಳಬೇಡಿ ಎಂದ ಬಾಲಚಂದ್ರ ಜಾರಕಿಹೊಳಿ
ಪ್ರವಾಹ ಅಪ್ಪಳಿಸಿ ಒಂದೂವರೆ ತಿಂಗಳಾಗುತ್ತ ಬಂದಿದೆ. ಬಾಲಚಂದ್ರ ಜಾರಕಿಹೊಳಿ ಸ್ವತ: ನವದೆಹಲಿಗೆ ತೆರಳಿ ಕೇಂದ್ರ ನಾಯಕರನ್ನು ಭೇಟಿ ಮಾಡಿ ಪ್ರವಾಹ ಪರಿಹಾರಕ್ಕೆ ನೆರವು ನೀಡುವಂತೆ ಕೋರಿದ್ದರು. ಆದರೆ ಈವರೆಗೂ ಕೇಂದ್ರದಿಂದ ಹಣ ಬಿಡುಗಡೆಯಾಗಿಲ್ಲ. ಈ ಹಿನ್ನೆಲೆಯಲ್ಲಿ, ನಿಮ್ಮೊಂದಿಗೆ ನಾವಿದ್ದೇವೆ, ನಮ್ಮ ಸರ್ಕಾರಗಳಿವೆ. ಸಂತ್ರಸ್ತರು ಧೈರ್ಯ ಕಳೆದುಕೊಳ್ಳದಂತೆ ಅವರು ಪತ್ರಿಕಾ ಪ್ರಕಟಣೆ ನೀಡಿದ್ದಾರೆ.
ಪ್ರಗತಿವಾಹಿನಿ ಸುದ್ದಿ, ಗೋಕಾಕ : ಭಾರೀ ಮಳೆ ಹಾಗೂ ಪ್ರವಾಹದಿಂದಾಗಿ ಅರಭಾವಿ ಮತಕ್ಷೇತ್ರದ ನೆರೆಪೀಡಿತ ಗ್ರಾಮಗಳಲ್ಲಿ ಭಾರೀ ಪ್ರಮಾಣದಲ್ಲಿ ಹಾನಿಯಾಗಿದ್ದರಿಂದ ಇದನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ತಕ್ಷಣವೇ ವಿಶೇಷ ಅನುದಾನ ನೀಡುವಂತೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಬುಧವಾರ ಸಂಜೆ ಹೊರಡಿಸಿದ ಪತ್ರಿಕಾ ಪ್ರಕಟನೆಯಲ್ಲಿ ಈ ಹೇಳಿಕೆ ನೀಡಿರುವ ಅವರು, ಕಳೆದ ಅಗಸ್ಟ್ ತಿಂಗಳಲ್ಲಿ ನಿರಂತರವಾಗಿ ಸುರಿದ ಭಾರೀ ಮಳೆ ಹಾಗೂ ಪ್ರವಾಹದಿಂದಾಗಿ ಕ್ಷೇತ್ರದ ನೆರೆಪೀಡಿತ ಭಾಗದಲ್ಲಿ ಅಪಾರ ಹಾನಿಯಾಗಿದ್ದು, ಜಿಲ್ಲಾಧಿಕಾರಿಗಳ ವರದಿಯನ್ನಾಧರಿಸಿ ಅಗತ್ಯ ಕ್ರಮ ಕೈಗೊಂಡು ವಿಶೇಷ ಅನುದಾನ ಮಂಜೂರು ಮಾಡುವಂತೆ ಮುಖ್ಯಮಂತ್ರಿಗಳಲ್ಲಿ ಕೋರಿದ್ದಾಗಿ ಅವರು ಹೇಳಿದ್ದಾರೆ.
೫ ರಿಂದ ೬ ಸಾವಿರ ಮನೆಗಳಿಗೆ ಹಾನಿಯಾಗಿದ್ದು ಇದರಿಂದ ಸಂತ್ರಸ್ಥ ಕುಟುಂಬಗಳು ನಿರಾಶ್ರಿತರಾಗಿದ್ದಾರೆ. ಸಂತ್ರಸ್ಥ ಕುಟುಂಬಗಳಿಗೆ ತಕ್ಷಣ ಮನೆಗಳನ್ನು ನಿರ್ಮಿಸಿಕೊಡುವಂತೆ ಮುಖ್ಯಮಂತ್ರಿಗಳಲ್ಲಿ ಕೋರಲಾಗಿದೆ. ಪ್ರವಾಹದಿಂದ ಹಾನಿಗೀಡಾದ ಪಂಚಾಯತ ರಾಜ್ ಹಾಗೂ ಲೋಕೋಪಯೋಗಿ ಇಲಾಖೆಯ ರಸ್ತೆಗಳು, ಸೇತುವೆಗಳು, ಸರ್ಕಾರಿ ಕಟ್ಟಡಗಳ ಸುಧಾರಣೆಗೆ ವಿಶೇಷ ಅನುದಾನ ಬಿಡುಗಡೆ ಮಾಡುವಂತೆಯೂ ಸಿಎಂ ಅವರಲ್ಲಿ ಕೋರಿದ್ದಾರೆ.
ಅರಭಾವಿ ಕ್ಷೇತ್ರದಲ್ಲಿ ಶಾಲಾ ಕೊಠಡಿಗಳು, ಅಂಗನವಾಡಿ ಕಟ್ಟಡಗಳು ನೆರೆ ಪ್ರವಾಹದಿಂದ ಹಾನಿಯಾಗಿವೆ. ಬ್ಯಾರೇಜ್, ಏತ ನೀರಾವರಿ ಯೋಜನೆಗಳು, ಕೆರೆಗಳು ಹಾನಿಗೀಡಾಗಿವೆ.
ಇವುಗಳನ್ನು ಸುಧಾರಣೆ ಮಾಡುವಂತೆ ಮುಖ್ಯಮಂತ್ರಿಗಳಲ್ಲಿ ಕೋರಿರುವುದಾಗಿ ಅವರು ಹೇಳಿದ್ದಾರೆ.
ನೆರೆಪೀಡಿತ ಗ್ರಾಮಗಳ ಸಂತ್ರಸ್ಥ ಕುಟುಂಬಗಳಿಗೆ ಸರ್ಕಾರದಿಂದ ಇನ್ನೂ ಹೆಚ್ಚಿನ ಪರಿಹಾರ ದೊರೆಯಲಿದೆ. ಕೇಂದ್ರ ಸರ್ಕಾರದಿಂದಲೂ ನೆರೆ ಸಂತ್ರಸ್ಥರ ಕುಟುಂಬಗಳಿಗೆ ಪರಿಹಾರ ನೀಡುವಂತೆ ಈಗಾಗಲೇ ತಾವು ಕೇಂದ್ರ ಸಚಿವರನ್ನು ಭೇಟಿ ಮಾಡಿ ವಿಶೇಷ ಪ್ಯಾಕೇಜ್ ನೀಡುವಂತೆ ಮನವಿ ಮಾಡಿಕೊಂಡಿರುವುದಾಗಿ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಹೇಳಿದ್ದಾರೆ.
ಬೆಳೆ ಹಾನಿಗೆ ಹೆಚ್ಚಿನ ಪರಿಹಾರ ನೀಡಿ :
ಪ್ರವಾಹ ಹಾಗೂ ಮಳೆಯಿಂದಾಗಿ ಕ್ಷೇತ್ರದ ರೈತರ ಸುಮಾರು ೩೦ ಸಾವಿರಕ್ಕೂ ಅಧಿಕ ಹೆಕ್ಟರ್ ಪ್ರದೇಶದಲ್ಲಿರುವ ಕಬ್ಬು, ಗೋವಿನಜೋಳ, ಹತ್ತಿ, ಸೊಯಾಬಿನ್, ಅರಿಸಿನ, ಬಾಳೆ, ತರಕಾರಿ ಬೆಳೆಗಳು ಅಪಾರವಾಗಿ ಹಾನಿಯಾಗಿವೆ. ಪ್ರತಿ ಹೆಕ್ಟರ್‌ಗೆ ಈಗಿರುವ ಪರಿಹಾರವನ್ನು ಹೆಚ್ಚಿಸುವಂತೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.
ಮುಖ್ಯಮಂತ್ರಿಗಳಿಂದ ಸಕಾರಾತ್ಮಕ ಸ್ಪಂದನೆ :
ಅರಭಾವಿ ಕ್ಷೇತ್ರದ ನೆರೆಪೀಡಿತ ಗ್ರಾಮಗಳಲ್ಲಿ ಅಗತ್ಯವಿರುವ ಕಾಮಗಾರಿಗಳನ್ನು ಆರಂಭಿಸುವಂತೆ ಮುಖ್ಯಮಂತ್ರಿಗಳಿಗೆ ಈ ಹಿಂದೆಯೇ ಪತ್ರ ಬರೆದಿದ್ದೇನೆ. ಅದಕ್ಕೆ ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಅಗತ್ಯವಿರುವ ಅನುದಾನವನ್ನು ಬಿಡುಗಡೆ ಮಾಡುವ ಭರವಸೆ ನೀಡಿದ್ದಾರೆಂದು ಅವರು ಹೇಳಿದ್ದಾರೆ.
ಟೀಂ ರಚನೆ
ಸಂತ್ರಸ್ಥರ ಕಷ್ಟ-ಕಾರ್ಪಣ್ಯಗಳನ್ನು ಅರಿಯಲು ಈಗಾಗಲೇ ಟೀಂ ಎನ್‌ಎಸ್‌ಎಫ್ ರಚಿಸಲಾಗಿದೆ. ಒಟ್ಟು ೪ ತಂಡಗಳು ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡಲು ಸೂಚಿಸಿದ್ದೇನೆ.
ಅಡಿಬಟ್ಟಿ, ಚಿಗಡೊಳ್ಳಿ, ಮೆಳವಂಕಿ, ಕಲಾರಕೊಪ್ಪ, ಹಡಗಿನಾಳ, ಉದಗಟ್ಟಿ, ತಳಕಟ್ನಾಳ ಗ್ರಾಮಗಳಿಗೆ ಆಪ್ತ ಸಹಾಯಕ ನಾಗಪ್ಪ ಶೇಖರಗೋಳ, ಡಾ.ರಾಜೇಂದ್ರ ಸಣ್ಣಕ್ಕಿ, ತಿಗಡಿ, ಸುಣಧೋಳಿ, ಭೈರನಟ್ಟಿ, ಹುಣಶ್ಯಾಳ ಪಿವಾಯ್, ಬೀಸನಕೊಪ್ಪ, ಢವಳೇಶ್ವರ, ಅರಳಿಮಟ್ಟಿ, ಅವರಾದಿ ಗ್ರಾಮಗಳಿಗೆ ನಿಂಗಪ್ಪ ಕುರಬೇಟ, ಜಿಪಂ ಸದಸ್ಯ ಗೋವಿಂದ ಕೊಪ್ಪದ, ಲೋಳಸೂರ, ಬಸಳಿಗುಂದಿ, ನಲ್ಲಾನಟ್ಟಿ, ಬಳೋಬಾಳ, ಬೀರನಗಡ್ಡಿ ಗ್ರಾಮಗಳಿಗೆ ಸಿ.ಪಿ. ಯಕ್ಷಂಬಿ, ಮುತ್ತೆಪ್ಪ ಕುಳ್ಳೂರ, ಹುಣಶ್ಯಾಳ ಪಿಜಿ, ವಡೇರಹಟ್ಟಿ, ಫುಲಗಡ್ಡಿ, ಮಸಗುಪ್ಪಿ, ಬಡಲಕ್ಕನವರ ತೋಟ, ಧರ್ಮಟ್ಟಿ, ಪಟಗುಂದಿ, ಕಮಲದಿನ್ನಿ, ರಂಗಾಪೂರ, ಮುನ್ಯಾಳ ಗ್ರಾಮಗಳಿಗೆ ದಾಸಪ್ಪ ನಾಯಿಕ, ಹನಮಂತ ತೇರದಾಳ ಅವರ ನೇತೃತ್ವದ ತಂಡಗಳನ್ನು ರಚಿಸಲಾಗಿದೆ.
ಈ ಟೀಂ ಎನ್‌ಎಸ್‌ಎಫ್ ಜೊತೆಗೆ ಪಿಡಿಓ, ಗ್ರಾಮ ಲೆಕ್ಕಾಧಿಕಾರಿ, ಇಂಜನೀಯರ್ ಹಾಗೂ ಗ್ರಾಮ ಸಹಾಯಕರು ಇರಲಿದ್ದು, ಹಾನಿಗೀಡಾದ ಸಮೀಕ್ಷೆ ಕಾರ್ಯವನ್ನು ಮಾಡುತ್ತಿದ್ದಾರೆಂದು ಅವರು ಹೇಳಿದ್ದಾರೆ.
ಧೈರ್ಯ ಕಳೆದುಕೊಳ್ಳಬೇಡಿ :
ನಿಮ್ಮೊಂದಿಗೆ ನಾವಿದ್ದೇವೆ, ನಮ್ಮ ಸರ್ಕಾರಗಳಿವೆ. ರಾಜ್ಯದಲ್ಲಿ ಮತ್ತು ಕೇಂದ್ರದಲ್ಲಿ ನಮ್ಮದೇ ಸರ್ಕಾರಗಳಿವೆ. ಹೀಗಾಗಿ ಯಾವುದೇ ಕಾರಣಕ್ಕೂ ಧೈರ್ಯ ಕಳೆದುಕೊಳ್ಳಬೇಡಿ ಎಂದು ಬಾಲಚಂದ್ರ ಜಾರಕಿಹೊಳಿ ಸಂತ್ರಸ್ಥ ಕುಟುಂಬಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಈಗಾಗಲೇ ಸರ್ಕಾರದ ವತಿಯಿಂದ ತಾತ್ಕಾಲಿಕ ಪರಿಹಾರ ರೂಪದಲ್ಲಿ ೧೦ ಸಾವಿರ ರೂ.ಗಳನ್ನು ನೀಡಲಾಗುತ್ತಿದೆ. ಸಂತ್ರಸ್ಥರಿಗೆ ಹೊಸ ಮನೆಗಳ ನಿರ್ಮಾಣಕ್ಕೆ ೫ ಲಕ್ಷ ರೂ.ಗಳನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಘೋಷಿಸಿದ್ದಾರೆ. ಭಾಗಶಃ ಬಿದ್ದ ಮನೆಗಳ ದುರಸ್ತಿಗೆ ಒಂದು ಲಕ್ಷ ರೂ.ಗಳ ಪರಿಹಾರವನ್ನು ಪ್ರಕಟಿಸಿದ್ದಾರೆ. ಯಾವುದೇ ಕಾರಣಕ್ಕೂ ಸಂತ್ರಸ್ಥರು ನೆರೆ ಪೀಡಿತದಿಂದ ನೊಂದುಕೊಳ್ಳಬೇಡಿ. ಸರ್ಕಾರದಿಂದ ಸಿಗುವ ಎಲ್ಲ ಸೌಲಭ್ಯಗಳನ್ನು ದೊರಕಿಸಿಕೊಡುವುದಾಗಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಭರವಸೆ ನೀಡಿದ್ದಾರೆ.
ನೆರೆ ಪರಿಹಾರ ಕೊಡಿ -ಕೇಂದ್ರಕ್ಕೆ ಮೊರೆಹೋದ ಬಾಲಚಂದ್ರ ಜಾರಕಿಹೊಳಿ
ಬೆಳಗಾವಿಯಲ್ಲಿ ಸೆ. 24ರಂದು ರಾಜ್ಯ ಕಾಂಗ್ರೆಸ್ ಪ್ರತಿಭಟನೆ, ಯಾವ ಕಾರಣಕ್ಕೆ?
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ