ಸಿದ್ದರಾಮಯ್ಯಗೆ ಡಬಲ್ ಧಮಾಕಾ; ಸುಗಮವಾಗಿ ನಡೆಯುವುದೇ ಅಧಿವೇಶನ ?

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಒಳಜಗಳ, ಬೀದಿಜಗಳ, ಮೂಲ ಕಾಂಗ್ರೆಸ್, ವಲಸೆ ಕಾಂಗ್ರೆಸ್ ಎಲ್ಲ ಗದ್ದಲದ ನಡುವೆಯೂ ಸಿದ್ದರಾಮಯ್ಯ ಅವರಿಗೇ ಕಾಂಗ್ರೆಸ್ ಅಗ್ರ ನಾಯಕನ ಪಟ್ಟ ಕಟ್ಟಿದೆ. ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸ್ಥಾನದ ಜೊತೆಗೆ ವಿರೋಧ ಪಕ್ಷದ ನಾಯಕ ಸ್ಥಾನವನ್ನೂ ಸಿದ್ದರಾಮಯ್ಯ ಅವರಿಗೇ ನೀಡಲಾಗಿದೆ.

ಇದರಿಂದಾಗಿ, ವಿಧಾನಮಂಡಳದ ಅಧಿವೇಶನ ಆರಂಭವಾಗುವ ಮುನ್ನಾದಿನ ಕಾಂಗ್ರೆಸ್ ವಿಪಕ್ಷ ನಾಯಕನನ್ನು ಘೋಷಿಸಿದ್ದು, ಹಲವು ದಿನಗಳಿಂದ ಇದ್ದ ಕುತೂಹಲಕ್ಕೆ ತೆರೆ ಬಿದ್ದಂತಾಗಿದೆ. ವಿಪಕ್ಷ ನಾಯಕಸ್ಥಾನದ ರೇಸ್ ನಲ್ಲಿದ್ದ ನಾಯಕರಿಗೆಲ್ಲ ಮುಖಭಂಗವಾದಂತಾಗಿದೆ.

ಸಿದ್ದರಾಮಯ್ಯ ಅವರಿಗೆ ಈ ಎರಡೂ ಸ್ಥಾನದ ಜೊತೆಗೆ ಉಪಚುನಾವಣೆ ಗೆಲ್ಲುವ ಟಾಸ್ಕ್ ಕೂಡ ನೀಡಲಾಗಿದೆ. ಅಂದರೆ ಕಾಂಗ್ರೆಸ್ ನಲ್ಲೀಗ ಸಾಮೂಹಿಕ ನಾಯಕತ್ವವೂ ಇಲ್ಲ, ಎರಡೆರಡು ದೋಣಿಗಳೂ ಇಲ್ಲ. ಸಿದ್ದರಾಮಯ್ಯ ಏಕೈಕ ನಾಯಕನಾಗಿ ಮಿಂಚಲಿದ್ದಾರೆ. ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್ ಕೂಡ ಮಂಕಾಗಿದ್ದಾರೆ.

ಕಾಂಗ್ರೆಸ್ -ಜೆಡಿಎಸ್ ಸಮ್ಮಿಶ್ರ ಸರಕಾರ ಅಧಿಕಾರ ಕಳೆದುಕೊಂಡ ನಂತರ ಸಿದ್ದರಾಮಯ್ಯ ವಿರುದ್ಧ ಹಿರಿಯ ಕಾಂಗ್ರೆಸ್ ನಾಯಕರು ತಿರುಗಿಬಿದ್ದಿದ್ದರು. ಕೇಂದ್ರ ಮಾಜಿ ಸಚಿವ ಮುನಿಯಪ್ಪ ಅವರಂತೂ ಬಹಿರಂಗವಾಗಿಯೇ ಆಕ್ರೋಶ ಹೊರಹಾಕಿದ್ದರು. ಡಾ.ಜಿ.ಪರಮೇಶ್ವರ, ಎಚ್.ಕೆ.ಪಾಟೀಲ ಮೊದಲಾದವರು ಸಹ ಈಗ ಮೌನವಾಗಿ ಸಿದ್ದರಾಮಯ್ಯ ನಾಯಕತ್ವದಲ್ಲಿ ಮುಂದುವರಿಯಬೇಕಿದೆ. ಅವರ ಯಾವ ಅಹವಾಲಿಗೂ ಪಕ್ಷದ ವರಿಷ್ಠರು ಸೊಪ್ಪು ಹಾಕಲಿಲ್ಲ.

ಗುರುವಾರವೇ ಅಧಿವೇಶನ

ಗುರುವಾರದಿಂದಲೇ ರಾಜ್ಯದಲ್ಲಿ ವಿಧಾನಮಂಡಳದ ಅಧಿವೇಶನ ಆರಂಭವಾಗಲಿದೆ. ಕೇವಲ 3 ದಿನ ಅಧಿವೇಶನ ನಡೆಯಲಿದ್ದು, ಪ್ರತಿ ಪಕ್ಷಗಳು ಬಿಜೆಪಿ ವಿರುದ್ಧ ಹರಿಹಾಯಲಿದ್ದು, ಕಲಾಪ ಸುಗಮವಾಗಿ ನಡೆಯುವ ಸಾಧ್ಯತೆ ಕಡಿಮೆ.

ಪ್ರವಾಹ ಸಂತ್ರಸ್ತರಿಗೆ ಪರಿಹಾರ ನೀಡುವಲ್ಲಿನ ಬಿಜೆಪಿ ಸರಕಾರದ ವೈಫಲ್ಯ ಮತ್ತು ವಿಧಾನ ಮಂಡಳದ ಅಧಿವೇಶನದಿಂದ ಖಾಸಗಿ ಟಿವಿ ಚಾನೆಲ್ ಮತ್ತು ಫೋಟೋಗ್ರಾಫರ್ ಗಳನ್ನು ಹೊರಗಿಟ್ಟಿರುವುದು ಪ್ರಮುಖವಾಗಿ ಚರ್ಚೆ ಮತ್ತು ಗದ್ದಲಕ್ಕೆ ಕಾರಣವಾಗುವ ಸಾಧ್ಯತೆ ಇದೆ.

ಇದೇ ಮೊದಲ ಬಾರಿಗೆ ವಿಧಾನಸಭೆ ಅಧಿವೇಶನವನ್ನು ಸೆರೆಹಿಡಿಯಲು ಟಿವಿ ಚಾನೆಲ್ ಗಳಿಗೆ ಅವಕಾಶ ನಿರಾಕರಿಸಲಾಗಿದೆ. ಸರಕಾರವೇ ರೆಕಾರ್ಡ್ ಮಾಡಿ ಚಾನೆಲ್ ಗಳಿಗೆ ನೀಡಲಿದೆ. ಜೊತೆಗೆ ಮುದ್ರಣ ಮಾಧ್ಯಮಗಳ ಫೋಟೋಗ್ರಾಫರ್ ಗಳು ಸಹ ಕಲಾಪಕ್ಕೆ ಹಾಜರಾಗುವುದನ್ನು ನಿಷೇಧಿಸಲಾಗಿದೆ. ವಾರ್ತಾ ಇಲಾಖೆಯೇ ಫೋಟೋಗಳನ್ನು ಸರಬರಾಜು ಮಾಡಲಿದೆ.

ಇದು ವಿಧಾನಮಂಡಳದಲ್ಲಿ ವಿಪಕ್ಷಗಳ ಗದ್ದಲಕ್ಕೆ ಕಾರಣವಾಗುವ ಸಾಧ್ಯತೆ ಇದೆ. ಹಾಗಾಗಿ 3 ದಿನಗಳಕಲಾಪ ಕೇವಲ ಕಾಟಾಚಾರಕ್ಕೆನ್ನುವಂತೆ ನಡೆಯುವ ಸಾಧ್ಯತೆಯೇ ಹೆಚ್ಚು.

ವಿಶ್ವೇಶ್ವರ ಹೆಗಡೆ ಕಾಗೇರಿ ವಿಧಾನ ಸಭಾ ಅಧ್ಯಕ್ಷರಾಗಿ ನೇಮಕವಾಗಿದ್ದು, ಕಲಾಪವನ್ನು ಹೇಗೆ ನಿಯಂತ್ರಿಸಲಿದ್ದಾರೆ ಎನ್ನುವ ಕುತೂಹಲ ಎಲ್ಲರಲ್ಲಿದೆ.

8 ನಿಗಮ ಮಂಡಳಿಗಳಿಗೆ ನೇಮಕ -ಅಶೋಕ ಪೂಜಾರಿಗೆ ಗಡಿ ಪ್ರಾಧಿಕಾರ, ರಾಜು ಕಾಗೆಗೆ ಕಾಡಾ

ನನ್ನ ಕಷ್ಟ ನನಗಿರಲಿ; ಅಭಿವೃದ್ಧಿ ನಿಮಗಿರಲಿ -11 ಕೋಟಿ ರೂ ಕಾಮಗಾರಿಗಳಿಗೆ ಚಾಲನೆ

ನಾಳೆಯೇ ಅಧಿವೇಶನ; ಇನ್ನೂ ಆಗಿಲ್ಲ ವಿಪಕ್ಷ ನಾಯಕನ ಆಯ್ಕೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button