Karnataka NewsLatest

ಗೋಲ್ಡನ್ ಟೈಂ ಬಂತೆನ್ನುವಾಗಲೇ ರಮೇಶ್ ಜಾರಕಿಹೊಳಿಗೆ ಡಬಲ್ ಸಂಕಷ್ಟ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿರಮೇಶ ಜಾರಕಿಹೊಳಿ ಸುಮಾರು 2 ವರ್ಷಗಳ ಕಾಲ ರಾಜ್ಯ ರಾಜಕಾರಣದಲ್ಲಿ ಘಟಾನುಘಟಿಗಳನ್ನೆಲ್ಲ ತುದಿಗಾಲಲ್ಲಿ ನಿಲ್ಲುವಂತೆ ಮಾಡಿದ ನಾಯಕ.

ಒಂದು ಸರಕಾರವನ್ನು ಬೀಳಿಸಿ, ಮತ್ತೊಂದು ಸರಕಾರವನ್ನು ಅಸ್ಥಿತ್ವಕ್ಕೆ ತಂದ ರಮೇಶ್, ಈ ಮಧ್ಯದ ಅವಧಿಯಲ್ಲಿ  ಮಾಡಿದ ಕೆಲಸ, ಪಟ್ಟ ಪಾಡು ಅಷ್ಟಿಷ್ಟಲ್ಲ. ಕಾಂಗ್ರೆಸ್, ಜೆಡಿಎಸ್ ಪಕ್ಷದ ನಿಷ್ಠಾವಂತರು, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ನಿಷ್ಠರನ್ನೂ ಬಿಡದೆ ತಂಡ ಕಟ್ಟಿಕೊಂಡು ಬಿಜೆಪಿಗೆ ಜಿಗಿದರು.

ರಾಜಕಾರಣದಲ್ಲಿ ಏನೆಲ್ಲ ಆಟಬಹುದು, ತಮ್ಮ  ಸಾಮರ್ಥ್ಯ ಏನು ಎನ್ನುವುದನ್ನು ತೋರಿಸಿದರು. ಹೇಳಿದ್ದನ್ನು ಸಾಧಿಸಿ ತೋರಿಸುವವರು, ಹಿಡಿದ ಹಠ ಸಾಧಿಸುವವರು ಎಂದೆಲ್ಲ ಅವರ ಅಭಿಮಾನಿಗಳಿಂದ ಬಿರುದು ಪಡೆದರು.

ಒಂದು ಸರಕಾರವನ್ನು ಬೀಳಿಸಿ, ಇನ್ನೊಂದು ಸರಕಾರವನ್ನು ಕಟ್ಟಿ ನಿಲ್ಲಿಸಿದ ರಮೇಶ ಜಾರಕಿಹೊಳಿ ಬಿಜೆಪಿ ಸರಕಾರದಲ್ಲಿ, ಭಾರತೀಯ ಜನತಾಪಾರ್ಟಿಯಲ್ಲಿ ಅಲ್ಪಾವಧಿಯಲ್ಲೇ ಮುನ್ನೆಲೆಗೆ ಬಂದು ನಿಂತರು. ಬಿಜೆಪಿಯ ಹಲವಾರು ನಿಷ್ಟಾವಂತ, ಮೂಲ ನಾಯಕರೂ ಅಲ್ಲಾಡುವಂತೆ ಮಾಡಿದರು. ಇನ್ನೇನು ಉಪಮುಖ್ಯಮಂತ್ರಿಯಾಗಿಬಿಡುತ್ತಾರೆ, ಮುಂದೊಂದು ದಿನ ಮುಖ್ಯಮಂತ್ರಿಯೂ ಆಗಬಹುದು ಎನ್ನುವ ಮಟ್ಟದಲ್ಲಿ ಅವರ ಅಭಿಮಾನಿಗಳು ಹಿರಿಹಿರಿ ಹಿಗ್ಗಿಹೋಗಿದ್ದರು.

ಇಂತಹ ಗೋಲ್ಡನ್ ಟೈಂ ನಲ್ಲಿದ್ದ ರಮೇಶ ಜಾರಕಿಹೊಳಿಗೆ ಈಗ ಎರಡೆರಡು ಸಂಕಷ್ಟ ಬಂದು ನಿಂತಿದೆ. ಯುವತಿಯೋರ್ವಳ ಸಹವಾಸ ಅವರನ್ನು ಒಂದು ಕಡೆ ಇನ್ನಿಲ್ಲದಂತೆ ಕಾಡಿಸಿದರೆ, ಮತ್ತೊಂದು ಕಡೆ ಬೆಳಗಾವಿ ಉಪಚುನಾವಣೆ ಅತ್ತ ದರಿ, ಇತ್ತ ಪುಲಿ ಎನ್ನುವಂತೆ ಮಾಡಿದೆ.

ರಮೇಶ ಜಾರಕಿಹೊಳಿ ಇಷ್ಟು ವೇಗವಾಗಿ ಬೆಳೆದು ನಿಂತಿದ್ದು, ಹಲವರ ವಿರೋಧ ಕಟ್ಟಿಕೊಂಡಿದ್ದೇ ಈ ಎಲ್ಲ ಸಂಕಷ್ಟಗಳಿಗೆ ಕಾರಣ ಎನ್ನುವವರಿದ್ದಾರೆ. ಸರಕಾರ ಬೀಳಿಸುವ ಪ್ರಕ್ರಿಯೆಯಲ್ಲಿ, ಸರಕಾರ ಕಟ್ಟುವ ಪ್ರಕ್ರಿಯೆಯಲ್ಲಿ ಮತ್ತು ಮಂತ್ರಿಗಿರಿ ಪಡೆದ ನಂತರ ಕೂಡ ರಮೇಶ ಜಾರಕಿಹೊಳಿ ಮುತ್ಸದ್ದಿಯಂತೆ ನಡೆದುಕೊಳ್ಳಲಿಲ್ಲ. ಹಲವರಿಗೆ ಅತ್ಯಂತ ಹೀನಾಯವಾಗಿ ಮಾತನಾಡುತ್ತಿದ್ದರು. ಅನೇಕರ ಸ್ವಾಭಿಮಾನವನ್ನು ಕೆಣಕಿದರು. ಯಾವುದು ಸರಿ, ಯಾವುದು ತಪ್ಪು, ಯಾರು ಹಿತವರು, ಯಾರು ಬೆನ್ನಿಗೆ ಚೂರಿ ಇರಿಯುವವರು ಎನ್ನುವುದನ್ನು ಅರ್ಥ ಮಾಡಿಕೊಳ್ಳದೆ ಆಡತೊಡಗಿದರು.  ತಮ್ಮ ಹಿತಶತ್ರುಗಳನ್ನೇ ಅರ್ಥ ಮಾಡಿಕೊಳ್ಳದೆ ತಮ್ಮ ತಲೆಯ ಮೇಲೆ ಕಲ್ಲು ಹಾಕಿಕೊಂಡರು. ಇದೇ ಈಗ ಅವರನ್ನು ಸಂಕಷ್ಟಕ್ಕೆ ತಂದುನಿಲ್ಲಿಸಿದೆಯೇನೋ ಅನಿಸುತ್ತಿದೆ.

ಈಗ ರಮೇಶ ಜಾರಕಿಹೊಳಿ ಸಿಡಿ ಸಂಕಷ್ಟದಿಂದ ಹೊರಬರಬೇಕಿದೆ. ಬಂದ ನಂತರವಾದರೂ ತಮ್ಮ ಸುತ್ತಲಿದ್ದವರನ್ನು ಸೋಸುವ ಕೆಲಸ ಮಾಡಬೇಕಿದೆ. ಬಹುಪರಾಕ್ ಎನ್ನುವವರನ್ನು, ದಾರಿ ತಪ್ಪಿಸುವವರನ್ನು ಮುಲಾಜಿಲ್ಲದೆ ಹೊರಗೆ ಹಾಕಬೇಕು. ದೂರದೃಷ್ಟಿಯ ರಾಜಕಾರಣ ಮಾಡಬೇಕು.

ಬೆಳಗಾವಿ ಚುನಾವಣೆ

ಸಧ್ಯ ರಮೇಶ ಜಾರಕಿಹೊಳಿಗೆ ಎದುರಾಗಿರುವ ಮತ್ತೊಂದು ಸಂಕಷ್ಟ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆ. ಸುರೇಶ ಅಂಗಡಿ ಕುಟುಂಬಕ್ಕೇ ಟಿಕೆಟ್ ನೀಡಬೇಕು. 2 ಲಕ್ಷಕ್ಕೂ ಹೆಚ್ಚು ಅಂತರದಿಂದ ಗೆಲ್ಲಿಸಿ ತರಬೇಕು ಎಂದು ರಮೇಶ ಜಾರಕಿಹೊಳಿ ಹೇಳುತ್ತಿದ್ದರು. ಅದರಂತೆ ಸುರೇಶ ಅಂಗಡಿ ಪತ್ನಿ ಮಂಗಲಾ ಅಂಗಡಿ ಕಣಕ್ಕಿಳಿದಿದ್ದಾರೆ. ಆದರೆ ರಮೇಶ ಜಾರಕಿಹೊಳಿ ಚುನಾವಣೆಯಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳುವುದು ಕಷ್ಟವಾಗಿದೆ.

ಇದರ ಜೊತೆಗೆ ಕಾಂಗ್ರೆಸ್ ನಿಂದ ಸ್ವಂತ ತಮ್ಮ ಸತೀಶ್ ಜಾರಕಿಹೊಳಿ ಕಣಕ್ಕಿಳಿದಿದ್ದಾರೆ. ತಮ್ಮನನ್ನು ಗೆಲ್ಲಿಸುವುದೋ, ಬಿಜೆಪಿಯನ್ನು ಗೆಲ್ಲಿಸುವುದೋ ಎನ್ನುವ ಸವಾಲು ಅವರ ಮುಂದಿದೆ. ಕುಟುಂಬ ಮೊದಲೋ, ಪಕ್ಷ ಮೊದಲೋ ಎನ್ನುವ ಸಂಕಷ್ಟ ಅವರಿಗೆದುರಾಗಿದೆ.  ಸತೀಶ್ ಜಾರಕಿಹೊಳಿ ಸೋತರೆ ಕುಟುಂಬಕ್ಕೆ ಅವಮಾನ, ಮಂಗಲಾ ಅಂಗಡಿ ಸೋತರೆ ವಯಕ್ತಿಕವಾಗಿ ರಮೇಶ ಜಾರಕಿಹೊಳಿ ಬಿಜೆಪಿಯಲ್ಲಿ ಪ್ರಾಬಲ್ಯ ಕಳೆದುಕೊಳ್ಳಲಿದ್ದಾರೆ.

ಸಿಡಿ ಸಂಕಷ್ಟದ ಮಧ್ಯೆಯೇ ಈ ಸವಾಲನ್ನೂ ಹೇಗೆ ಎದುರಿಸುತ್ತಾರೆ ಕಾದು ನೋಡಬೇಕಿದೆ. ರಾಜಕಾರಣದಲ್ಲಿ ಚಾಣಾಕ್ಷ ನಡೆ ಇಡುತ್ತಿರುವ ಸಹೋದರ ಬಾಲಚಂದ್ರ ಜಾರಕಿಹೊಳಿ ಎಲ್ಲ ಸಂಕಷ್ಟಗಳಲ್ಲಿ ರಮೇಶ್ ಬೆನ್ನಿಗೆ ನಿಂತಿದ್ದಾರೆ. ಕುಟುಂಬ, ಪಕ್ಷ ಮತ್ತು ಸಹೋದರನನ್ನು ಹೇಗೆ ನಿಭಾಯಿಸುತ್ತಾರೆ ಕಾದು ನೋಡಬೇಕಿದೆ.

 

ಸಂಬಂಧಿಸಿದ ಸುದ್ದಿಗಳನ್ನು ಓದಲು  ಕ್ಲಿಕ್ ಮಾಡಿ –

ಸರಕಾರ ತೆಗೆದು ಸರಕಾರ ಮಾಡೋ ಶಕ್ತಿ ಇದೆ, ಇದ್ಯಾವ ಲೆಕ್ಕ? – ರಮೇಶ ಜಾರಕಿಹೊಳಿ

ಬೆಳಗಾವಿ ಉಪಚುನಾವಣೆ: ರಮೇಶ ಜಾರಕಿಹೊಳಿ ಕನಸು ನನಸಾಗಲಿದೆಯೇ?

24 ಗಂಟೆಯಲ್ಲಿ ಕಾಂಗ್ರೆಸ್ ನ 5 ಶಾಸಕರನ್ನು ಬಿಜೆಪಿಗೆ ತರುತ್ತೇನೆ: ರಮೇಶ್ ಜಾರಕಿಹೊಳಿ ಹೊಸ ಬಾಂಬ್

ಇಂದಿಗೂ ಸಿದ್ದರಾಮಯ್ಯ ದಿನಕ್ಕೆರಡು ಬಾರಿ ಮಾತನಾಡುತ್ತಾರೆ, ಅವರೇ ನಮ್ಮ ನಾಯಕ – ರಮೇಶ ಜಾರಕಿಹೊಳಿ

 ರಮೇಶ ಜಾರಕಿಹೊಳಿ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ -ಹೆಬ್ಬಾಳಕರ್ ಚಿಂತನೆ

ಸ್ವಯಂಕೃತ ಅಪರಾಧಕ್ಕೆ ಬಲಿಯಾದ ರಮೇಶ್ ಜಾರಕಿಹೊಳಿ

 

ನಿಖರ, ನಿರಂತರ ಮತ್ತು ನಿಷ್ಪಕ್ಷಪಾತ ಸುದ್ದಿಗಳಿಗಾಗಿ ಪ್ರಗತಿವಾಹಿನಿ. ನೀವೂ ಓದಿ, ನಿಮ್ಮ ಪರಿಚಯಸ್ಥರಿಗೂ ಕಳಿಸಿ. 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button