Kannada NewsKarnataka NewsLatest

ಬೆಳಗಾವಿ ಅಭಿವೃದ್ಧಿ ಕುರಿತು ಸಿಎಂ ಗಮನ ಸೆಳೆದ ಡಾ. ಸೋನಾಲಿ ಸರ್ನೋಬತ್

ಪ್ರಗತಿವಾಹಿನಿ ಸುದ್ದಿ, ಹುಬ್ಬಳ್ಳಿ: ಉತ್ತರ ಕರ್ನಾಟಕ ಅಭಿವೃದ್ಧಿಗಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ಇಲ್ಲಿನ ಡೆನ್ನಿಸನ್ ಹೋಟೆಲ್ ಸಭಾಂಗಣದಲ್ಲಿ ನಡೆದ ವಿಶೇಷ ಸಭೆಯಲ್ಲಿ ಬಿಜೆಪಿ ನಾಯಕಿ ಡಾ.ಸೋನಾಲಿ ಸರ್ನೋಬತ್ ಅವರು ಬೆಳಗಾವಿ ಅಭಿವೃದ್ಧಿಗೆ ಸಂಬಂಧಿಸಿದ ಕೆಲ ಪ್ರಮುಖ ಅಂಶಗಳ ಬಗ್ಗೆ ಸಿಎಂ ಗಮನ ಸೆಳೆದರು.

ಈ ಕುರಿತು ಮುಖ್ಯಮಂತ್ರಿಗೆ ಸಲಹಾ ವರದಿಯೊಂದನ್ನು ಸಲ್ಲಿಸಿದ ಅವರು, ಬೆಳಗಾವಿಯಿಂದ ರದ್ದಾದ ವಿಮಾನಗಳ ಸಂಚಾರ ಪುನಾರಂಭ, ಮತ್ತು ಬೆಳಗಾವಿಗೆ ತರಬಹುದಾದ ಇತರ ಪ್ರಮುಖ ಅಭಿವೃದ್ಧಿ ಯೋಜನೆಗಳು ಮತ್ತು ಕೈಗಾರಿಕೋದ್ಯಮಗಳ ಬಗ್ಗೆ ವಿವರಿಸಿದರು.

ರಸ್ತೆಗಳು:

ರಿಂಗ್ ರಸ್ತೆಗಾಗಿ ಭೂಮಿ ನೀಡಿದವರಿಗೆ ಯೋಜನೆ ಅನುಷ್ಠಾನಕ್ಕೆ ಮುನ್ನ ಪರಿಹಾರ, ಮಚ್ಛೆಯಲ್ಲಿ ಬೈಪಾಸ್ ನಿರ್ಮಾಣ, ಏರ್ ಪೋರ್ಟ್ ರಸ್ತೆ ಡಬ್ಲಿಂಗ್ ಕಾಮಗಾರಿ ವೇಗವರ್ಧನೆ, ಬೆಳಗಾವಿ- ಗೋವಾ ಮಧ್ಯೆ ಎಕ್ಸ್ ಪ್ರೆಸ್ ಹೈವೇ ನಿರ್ಮಾಣಕ್ಕೆ ಡಾ. ಸೋನಾಲಿ ಒತ್ತಾಯಿಸಿದರು.

ಕೈಗಾರಿಕೆ:

100 ಎಕರೆಯಲ್ಲಿ ಹೈಡ್ರಾಲಿಕ್ ಎಸ್ಇಝಡ್ ಘೋಷಣೆ, 500 ಎಕರೆಯಲ್ಲಿ ಫೌಂಡ್ರಿ ಪಾರ್ಕ್ ನಿರ್ಮಾಣ, 6 ಘೋಷಿತ ಆಹಾರೋದ್ಯಾನ ಯೋಜನೆಗಳ ಪೈಕಿ ಬೆಳಗಾವಿಯೂ ಒಂದಾಗಿದ್ದು ಕೃಷಿ ಆಧರಿತ ಉತ್ಪಾದನೆಗಳ ಪ್ಯಾಕೇಜಿಂಗ್ ಹಾಗೂ ರಫ್ತು ಯೋಜನೆ ಕಾರ್ಯಗತಗೊಳಿಸುವುದು, ವೈಮಾನಿಕ ಹಾಗೂ ವಾಹನಗಳಿಗೆ ಸಂಬಂಧಿಸಿದ ಹೊಸ ಬೃಹತ್ ಕೈಗಾರಿಕೆಗಳ ಸ್ಥಾಪನೆ, ಶೀಘ್ರವೇ ಬೆಳಗಾವಿ ತಾಂತ್ರಿಕ ಕೇಂದ್ರ ಸ್ಥಾಪನೆ, ಹಲವಾರು ಸಕ್ಕರೆ ಕಾರ್ಖಾನೆಗಳನ್ನು ಹೊಂದಿದ ಬೆಳಗಾವಿಯಲ್ಲಿ ಮಂಗಳೂರಿನ ಕ್ಯಾಂಪ್ಕೋ ಮಾದರಿಯಲ್ಲಿ ಎಥೆನಾಲ್ ದಾಸ್ತಾನು ಘಟಕಗಳ ನಿರ್ಮಾಣ, ಬೆಳಗಾವಿಯಲ್ಲಿ ಹೂಡಿಕೆದಾರರ ಸಮಾವೇಶಗಳಿಗೆ ಅನುಕೂಲವಾಗುವ ಮಾರಾಟ ಮತ್ತು ಪ್ರದರ್ಶನ ಕೇಂದ್ರ ಸ್ಥಾಪನೆ ಕುರಿತು ಅವರು ಮುಖ್ಯಮಂತ್ರಿಯವರಿಗೆ ಮನವರಿಕೆ ಮಾಡಿದರು.

ಶಿಕ್ಷಣ:

ಬೆಳಗಾವಿಯಲ್ಲಿ ಕೇಂದ್ರ ಸರಕಾರದ ಸಂಶೋಧನಾ ಸಂಸ್ಥೆ ಐಐಎಂ, ಐಐಟಿಯಂಥ ಇತರ ರಾಷ್ಟ್ರೀಯ ಸಂಸ್ಥೆಗಳ ಸ್ಥಾಪನೆ, ಮೈಸೂರಿನಲ್ಲಿರುವ ವಿಟಿಯು ಇ-ಸ್ಟುಡಿಯೊ ಸೇರಿದಂತೆ ಕೆಲ ಪ್ರಮುಖ ಘಟಕಗಳನ್ನು ಬೆಳಗಾವಿಯಲ್ಲೇ ಮರುಸ್ಥಾಪಿಸುವುದು, ವಿಟಿಯು, ಐಐಟಿ ಮಟ್ಟದ ಹೊಸ ವಿಶ್ವವಿದ್ಯಾಲಯಗಳ ಸ್ಥಾಪನೆ, ಕೆಎಲ್ಇ ಕ್ಯಾಂಪಸ್ ನಲ್ಲಿ ದೀರ್ಘಕಾಲದಿಂದ ಬಾಕಿ ಉಳಿದ RGHUS ಪ್ರಾದೇಶಿಕ ಕೇಂದ್ರ ಸ್ಥಾಪನೆ ಬಗ್ಗೆ ಡಾ. ಸೋನಾಲಿ ಅವರು ಮುಖ್ಯಮಂತ್ರಿಗಳ ಗಮನಕ್ಕೆ ತಂದರು.

ಆವಿಷ್ಕಾರ, ಪ್ರಗತಿ ಹಾಗೂ ಬದಲಾವಣೆ ವಿಷಯಾಧಾರಿತವಾಗಿ ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿಗೆ ಸಂಬಂಧಿಸಿದಂತೆ ಈ ವಿಶೇಷ ಸಭೆ ಆಯೋಜಿಸಲಾಗಿತ್ತು. ಸಭೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಉತ್ತರ ಕರ್ನಾಟಕ ಅಭಿವೃದ್ಧಿಗೆ ಸಂಬಂಧಿಸಿದಂತೆ ಇತ್ತೀಚಿನ ವರ್ಷಗಳಲ್ಲಿನ ತಮ್ಮ ಆಲೋಚನೆಗಳು, ಯೋಜನೆ, ಅನುಷ್ಠಾನ ಮತ್ತು ಸರ್ಕಾರದ ಸಾಧನೆಗಳ ಬಗ್ಗೆ ಮಾಹಿತಿ ಹಂಚಿಕೊಂಡರು.

ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಬಸವರಾಜ ಹೊರಟ್ಟಿ, ಅರವಿಂದ ಬೆಲ್ಲದ್ ಸೇರಿದಂತೆ ಉತ್ತರ ಕರ್ನಾಟಕದ ಪ್ರಮುಖರು, ಚಿಂತಕರು, ಸಮಾಜ ಸೇವಕರು ಸಭೆಯಲ್ಲಿ ಭಾಗವಹಿಸಿದ್ದರು.

https://pragati.taskdun.com/r-dhruvanarayanadeathcongress/
https://pragati.taskdun.com/magadid-k-shivakumarprajadhwani/
https://pragati.taskdun.com/nh-548-b-highway-sanctionanna-saheba-jollebelagavi/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button