ಪ್ರಗತಿವಾಹಿನಿ ಸುದ್ದಿ, ಚಿಕ್ಕೋಡಿ – ಚಿಕ್ಕೋಡಿಯ ಕೆ ಎಲ್ ಇ ಡಾ. ಪ್ರಭಾಕರ ಕೋರೆ ಆಸ್ಪತ್ರೆಯಲ್ಲಿ ಸುಸಜ್ಜಿತ ಅತ್ಯಾಧುನಿಕ ಸೌಕರ್ಯವುಳ್ಳ ಕೊವಿಡ್ ವಾರ್ಡನ್ನು ಶ್ರೀ ಸಂಪಾದನಾ ಮಹಾಸ್ವಾಮಿಗಳು ಚರಮೂರ್ತಿ ಉದ್ಘಾಟಿಸಿದರು.
ಮಂಗಳವಾರ ಕೊವಿಡ್ ವಾರ್ಡ ಉದ್ಘಾಟಿಸಿ ಮಾತನಾಡುತ್ತಾ ಡಾ. ಪ್ರಭಾಕರ ಕೋರೆ ಅವರ ಮುತುವರ್ಜಿ ಹಾಗೂ ಸಾಮಾಜಿಕ ಕಾಳಜಿಯಿಂದ ನಿರ್ಮಿಸಿರುವದರಿಂದ ಕೊವಿಡ್ ಸೊಂಕಿತರಿಗೆ ಅನೂಕೂಲವಾಗಲಿದೆ ಹಾಗೂ ನಾವು ರೋಗಿಯ ವಿರುದ್ದವಲ್ಲ, ರೋಗದ ವಿರುದ್ದ ಹೋರಾಡಬೇಕು ಎಂದು ಹೇಳಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೆ ಎಲ್ ಇ ಸಂಸ್ಥೆಯ ನಿರ್ದೇಶಕ ಬಿ ಆರ್ ಪಾಟೀಲ್ – ನಮ್ಮ ಸಂಸ್ಥೆ ಸಮಾಜಮುಖಿಯಾಗಿ ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದೆ. ಡಾ. ಪ್ರಭಾಕರ ಕೋರೆಯವರ ಮಾರ್ಗದರ್ಶನದಲ್ಲಿ ಚಿಕ್ಕೋಡಿ ಭಾಗದ ಜನತೆಗೆ ಉಪಯೋಗವಾಗುವಂತೆ ಇಂದು ಆಸ್ಪತ್ರೆಯಲ್ಲಿ ಕೋವಿಡ ಘಟಕವನ್ನು ಆರಂಭಿಸಿದ್ದೇವೆ. ಆಸ್ಪತ್ರೆಯಲ್ಲಿ ಕೊವಿಡ್ ಸೋಂಕಿತರಿಗೆ ಪ್ರತ್ಯೇಕ ಚಿಕಿತ್ಸೆಯ ವ್ಯವಸ್ಥೆ ಮಾಡಲಾಗಿದ್ದು, ಆಸ್ಪತ್ರೆಯಲ್ಲಿನ ೬೦ ಹಾಸಿಗೆಗಳ ಪೈಕಿ ೧೫ ಹಾಸಿಗೆಗಳನ್ನು ಕೊವಿಡ್ ಚಿಕಿತ್ಸೆಗೆ ಮೀಸಲಿಡಲಾಗಿದೆ ಎಂದು ತಿಳಿಸಿದರು.
ಕೆ ಎಲ್ ಇ ಇಂಜಿನಿಯರಿಂಗ್ ಕಾಲೇಜಿನ ಪ್ರಾಚಾರ್ಯ ಡಾ. ಪ್ರಸಾದ ರಾಂಪುರೆ ಮಾತನಾಡಿ – ಕೊವಿಡ್ ವಾರ್ಡನಲ್ಲಿ ಸೋಂಕಿತರಿಗೆ ಉಸಿರಾಟದ ತೊಂದರೆ ಆಗದ ಹಾಗೆ ಹೈ ಪ್ಲೋ ಆಕ್ಸಿಜನ, ವೆಂಟಿಲೇಟರ್ ಜೊತೆಗೆ ಉನ್ನತ ಮಟ್ಟದ ಚಿಕಿತ್ಸೆ ಮತ್ತು ಪೌಷ್ಠಿಕ ಆಹಾರದ ವ್ಯವಸ್ಥೆಯನ್ನು ಮಾಡಿರುವುದು ಶ್ಲಾಘನೀಯ ಎಂದರು.
ಆಸ್ಪತ್ರೆಯ ಮುಖ್ಯ ವೈದ್ಯಕೀಯ ಅಧಿಕಾರಿ ಡಾ. ಧೀರಜ ಶೀವರಾಮ ಪೋಳ್ ಮಾತನಾಡಿ – ಕೊವಿಡ್ ಸೋಂಕಿತರು ಗಾಬರಿ ಪಡುವ ಅವಶ್ಯಕತೆ ಇಲ್ಲ. ಪ್ರಾಥಮಿಕ ಹಂತದಲ್ಲಿ ಚಿಕಿತ್ಸೆ ಪಡೆದುಕೊಂಡಲ್ಲಿ ಗುಣಮುಖರಾಗಲೂ ಸಾಧ್ಯ. ನಮ್ಮಲ್ಲಿ ಸೋಂಕಿತರಿಗೆ ಕಾಳಜಿಪುರ್ವಕವಾಗಿ, ಭೇದಭಾವವಿಲ್ಲದೇ ರೋಗಿ ಗುಣಮುಖರಾಗುವಂತಹ ವ್ಯವಸ್ಥೆಯನ್ನು ಮಾಡಲಾಗಿದೆ. ಅಪಘಾತ ಸೇರಿದಂತೆ ಕೊವಿಡ್ ಇಲ್ಲದ ರೋಗಿಗಳಿಗೆ ಪ್ರತ್ಯೇಕ ಚಿಕಿತ್ಸೆ ವ್ಯವಸ್ಥೆ ಹಾಗೂ ಸುರಕ್ಷತಾ ಕ್ರಮಗಳನ್ನು ಅನುಸರಿಸಲಾಗಿದೆ ಎಂದು ಹೇಳಿದರು.
ಮಾಜಿ ಜಿಲ್ಲಾ ಪಂಚಾಯತ ಸದಸ್ಯರಾದ ಮಹೇಶ ಭಾತೆ, ಪುರಸಭೆ ಸದಸ್ಯರಾದ ಸಂಜಯ ಕವಟಗಿಮಠ, ಆಸ್ಪತ್ರೆಯ ಆಡಳಿತಾಧಿಕಾರಿ ಪ್ರಶಾಂತ ಪೂಜಾರಿ, ವೈದ್ಯರುಗಳಾದ ಡಾ. ಶಂಕರ ತೋರಸೆ, ಡಾ. ಪರಮಾನಂದ ಹೊಸಪೇಟಿ ಡಾ. ಪ್ರಭಾವತಿ ಮುಗಳಕೋಡ, ಡಾ.ಸೌಮ್ಯಾ ಹಾಗೂ ಇತರೆ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಸಾರ್ವಜನಿಕ ಸಂಪರ್ಕಾಧಿಕಾರಿ ಮಹಾಂತೇಶ ಗುಡ್ನವರ ಕಾರ್ಯಕ್ರಮ ನಿರೂಪಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ