Kannada NewsLatestPolitics

ಡಾ.ಕೋರೆಯವರ ಕನಸಿನ ಕೂಸು “ಕೆಎಲ್ಇ ಕೃಷಿ ವಿಜ್ಞಾನ ಕೇಂದ್ರ”

ಡಾ.ಕೋರೆಯವರ ಕನಸಿನ ಕೂಸು “ಕೆಎಲ್ಇ ಕೃಷಿ ವಿಜ್ಞಾನ ಕೇಂದ್ರ”

 

 ಭಾರತ ಕೃಷಿಪ್ರಧಾನ ದೇಶ ಎಂಬುದು ಜಾಗತಿಕ ಸತ್ಯ. ಆದರೆ ಇಲ್ಲಿಯ ಕೃಷಿ ರೈತರ ಬದುಕಿನಲ್ಲಿ ಮಂದಹಾಸವನ್ನು ಮೂಡಿಸುವ ಬದಲಿಗೆ ನೋವು, ಸಂಕಟ, ಸಾಲದ ಶೂಲ, ಸಾವುಗಳನ್ನೇ ತಂದೊಡ್ಡಿದ್ದು ವಿಪರ್ಯಾಸ.

ಕೃಷಿ ಸಂಬಂಧಿ ಸಾಲಗಳು ಹೆಚ್ಚಾಗಿ ರೈತರ ಆತ್ಮಹತ್ಯೆಗಳ ಸರಣಿ ಇಂದಿನ ತಂತ್ರಜ್ಞಾನದ ಯುಗದಲ್ಲಿಯೂ ಮುಂದುವರೆದಿರುವುದು ದುರದೃಷ್ಟ. ರೈತನ ಬದುಕೇ ಒಂದು ಪ್ರಶ್ನೆಯಾಗಿ ಉಳಿದಿರುವುದಕ್ಕೆ ನಾವೆಲ್ಲರೂ ಹೊಣೆಗಾರರೆ. ರೈತ ಬದುಕಿದರೆ ದೇಶ ಬದುಕಲು ಸಾಧ್ಯ. ಹೀಗೆ ರೈತನಾಗಿ ರೈತರ ಬದುಕನ್ನು ಹತ್ತಿರದಿಂದ ಕಂಡ ಅಪರೂಪದ ಕೃಷಿಚಿಂತಕ ಡಾ.ಪ್ರಭಾಕರ ಕೋರೆಯವರು.

ಕೆ.ಎಲ್.ಇ.ಸಂಸ್ಥೆಯನ್ನು ಕೇವಲ ಶಿಕ್ಷಣ ಹಾಗೂ ಆರೋಗ್ಯದ ಒಂದು ಕ್ಷೇತ್ರಕ್ಕೆ ವಿಸ್ತರಿಸದೆ ಕೃಷಿಯೆಡೆಗೂ ಚಿಂತನೆಗೈಯುವ ಹಾಗೆ ಮಾಡಿದವರು ಡಾ.ಪ್ರಭಾಕರ ಕೋರೆಯವರು. ಸಾಂಪ್ರದಾಯಿಕ, ವೃತ್ತಿಪರ ಕೋರ್ಸುಗಳೊಂದಿಗೆ ಕೃಷಿ ಕೋರ್ಸುನ್ನು ಪ್ರಾರಂಭಿಸಿ ಕರ್ನಾಟಕದಲ್ಲಿ ಒಂದು ಸಂಚಲನವನ್ನೇ ಉಂಟುಮಾಡುವುದರೊಂದಿಗೆ ದೇಶದ ಗಮನವನ್ನು ಸೆಳೆಯುವಂತೆ ಮಾಡಿದ ಡಾ.ಕೋರೆಯವರು. ಅವರ ಕನಸಿನ ಕೂಸು “ಕೆ.ಎಲ್.ಇ. ಕೃಷಿ ವಿಜ್ಞಾನ ಕೇಂದ್ರ”.

ಕೃಷಿಗೆ ಸಂಬಂಧಿತ ರೈತರ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಸಾಮಾನ್ಯ ಕೃಷಿ ಶಾಲೆಯಿಂದ ಪ್ರಾರಂಭಗೊಂಡ ಈ ಕೇಂದ್ರ ಇಂದು ಬಹುವಿಧವಾಗಿ ವಿಸ್ತರಿಸಿದೆ.

ಕೃಷಿಕರಲ್ಲಿ ಅಜ್ಞಾನ, ಹವಾಮಾನ ವೈಪರೀತ್ಯಗಳು, ಸುಧಾರಿತ ತಂತ್ರಜ್ಞಾನಗಳ ಕೊರತೆ, ಮಳೆ ಆಧಾರಿತ ಕೃಷಿ ಪದ್ಧತಿ, ಕೃಷಿ ಲಾಭವಾಗದೆ ರೈತರು ಮತ್ತು ರೈತಮಕ್ಕಳು ಪಟ್ಟಣಗಳಿಗೆ ವಲಸೆ ಹೋಗುತ್ತಿರುವ ಸಂದರ್ಭದಲ್ಲಿ ಈ ಕೇಂದ್ರದ ಮೂಲಕ ಆಧುನಿಕ ಕೃಷಿ ತಂತ್ರಜ್ಞಾನಗಳ ಅಳವಡಿಕೆಯಿಂದ ಕೃಷಿ ಲಾಭದಾಯಕವೆಂದು ಡಾ. ಕೋರೆಯವರು ಪ್ರತಿಪಾದಿಸಿದವರು. ಈ ದಿಸೆಯಲ್ಲಿ ರೈತರಿಗೆ ಹೊಸ ತಂತ್ರಜ್ಞಾನಗಳನ್ನು ತಲುಪಿಸಿ ತ್ವರಿತಗತಿಯಲ್ಲಿ ಅದರ ಲಾಭವನ್ನು ಪಡೆಯಬೇಕೆನ್ನುವ ಮಹದಾಶೆಯಿಂದ ಕೃಷಿ ವಿಜ್ಞಾನ ಕೇಂದ್ರಕ್ಕೆ 2011 ರಲ್ಲಿ ಬೈಲಹೊಂಗಲ ತಾಲೂಕಿನ ಮತ್ತಿಕೊಪ್ಪ ಗ್ರಾಮದಲ್ಲಿ ಚಾಲನೆ ನೀಡಿದರು.

100 ಎಕರೆ ಜಮೀನಿನಲ್ಲಿ ವಿಸ್ತರಣೆ

ಪ್ರಸ್ತುತ ಕೇಂದ್ರ ಸರ್ಕಾರದ, ಭಾರತೀಯ ಕೃಷಿ ಅನುಸಂಧಾನ ಪರಿಷತ್, ನವದೆಹಲಿ ಇದರ ಅಡಿಯಲ್ಲಿ ಕೃಷಿ ವಿಜ್ಞಾನ ಕೇಂದ್ರವು ಕಾರ್ಯನಿರ್ವಹಿಸುತ್ತಿದ್ದು 100 ಎಕರೆ ಜಮೀನಿನಲ್ಲಿ ಸಕಲ ಮೂಲಭೂತ ಸೌಲಭ್ಯವನ್ನು ಹೊಂದಿರುವ ಕಟ್ಟಡವನ್ನು ನಿರ್ಮಿಸಲಾಗಿದೆ.

ಕೃಷಿಯ ಕುರಿತು ವಿವಿಧ ಬೆಳೆಗಳ ಪ್ರಾತ್ಯಕ್ಷಿತೆ, ಮಣ್ಣಿನ ಗುಣಧರ್ಮಗಳ ಪರೀಕ್ಷೆ, ಹವಾಮಾನಕ್ಕನುಗುಣವಾದ ಬೆಳೆ ನಿರ್ವಹಣೆ, ವಿವಿಧ ಕೃಷಿಉತ್ಪನ್ನಗಳ ತಳಿಗಳ ಸಂಶೋಧನೆ, ಸಾವಯವ ಆಧಾರಿತ ಕೃಷಿ, ಜಾನುವಾರುಗಳ ಕುರಿತು ಪೂರ್ಣಮಾಹಿತಿ, ಬೆಳೆ ನಿರ್ವಹಣೆ-ಮಾರಾಟ, ಪ್ರಯೋಗ, ಮುಂಚೂಣಿ ತಳಿ, ತಂತ್ರಜ್ಞಾನ ಪ್ರಾತ್ಯಕ್ಷಿಕೆ, ರೈತ-ರೈತ ಮಹಿಳೆಯರಿಗೆ ಹಾಗೂ ಯುವಕರಿಗೆ ಹೊಸ ತಂತ್ರಜ್ಞಾನಗಳ ಬಗ್ಗೆ ಅರಿವು ಮೂಡಿಸುವುದು ಹಾಗೂ ತರಬೇತಿ ನೀಡುವುದು.

ಅಲ್ಲದೆ ಕೃಷಿ, ತೋಟಗಾರಿಕೆ ಹಾಗೂ ಕೃಷಿಗೆ ಸಂಬಂಧಿಸಿದ ಇತರ ಇಲಾಖೆ ಅಧಿಕಾರಿಗಳಿಗೆ ಕೃಷಿರಂಗದಲ್ಲಾದ ಹೊಸ ಬೆಳವಣಿಗೆ ಬಗ್ಗೆ ನಿರಂತರ ಮಾಹಿತಿ ತರಬೇತಿ ನೀಡುತ್ತಿರುವುದು ಕೃಷಿ ಕೇಂದ್ರದ ಪ್ರಮುಖ ಚಟುವಟಿಕೆಗಳಾಗಿವೆ. ಎಲ್ಲಕ್ಕಿಂತ ಮುಖ್ಯವಾಗಿ ಗುಣಮಟ್ಟದ ಬೀಜ ಹಾಗೂ ಸಸಿಗಳ ಉತ್ಪಾದನೆ ಹಾಗೂ ರೈತರ ಬೇಡಿಕೆಗಳಿಗೆ ಅನುಗುಣವಾಗಿ ಅವುಗಳನ್ನು ಪೂರೈಸುವ ಕಾರ್ಯವನ್ನು ಮಾಡುತ್ತಿದೆ.

ಹೀಗೆ ಕೃಷಿ ಆಧಾರಿತ ಸಂಶೋಧನೆಯನ್ನೇ ಪ್ರಧಾನವಾಗಿಟ್ಟುಕೊಂಡು ಈ ಕೃಷಿ ವಿಜ್ಞಾನ ಕೇಂದ್ರ ಸೇವೆಯನ್ನು ನೀಡುತ್ತಿದ್ದು ಬೆಳಗಾವಿ ಜಿಲ್ಲೆಯ ಖಾನಾಪೂರ, ಬೆಳಗಾವಿ, ಬೈಲಹೊಂಗಲ, ಸವದತ್ತಿ ಹಾಗೂ ರಾಮದುರ್ಗ ತಾಲೂಕಗಳು ಕೇಂದ್ರದ ಕಾರ್ಯವ್ಯಾಪ್ತಿಗೆ ಬರುತ್ತಿವೆ. ಈ ಪ್ರದೇಶದಲ್ಲಿ ಕಳೆದ ಮೂರು ವರ್ಷಗಳಲ್ಲಿ ಅನೇಕ ಕೃಷಿ ತಂತ್ರಜ್ಞಾನಗಳನ್ನು ಪರಿಚಯಿಸಿದೆ.

ಕೃಷಿಕರ ಮಕ್ಕಳಿಗೆ ಗುಣಮಟ್ಟದ ತರಬೇತಿಯನ್ನು ನೀಡುವ ಮೂಲಕ ರೈತರ-ರೈತ ಮಹಿಳೆಯರ ಹಾಗೂ ಕೃಷಿ ವಿದ್ಯಾರ್ಥಿಗಳಿಗೆ ಕೃಷಿ ಕುರಿತು ಜಾಗೃತಿಯನ್ನುಂಟು ಮಾಡುವ ಮೂಲಕ ಅವರಲ್ಲಿ ಆಧುನಿಕ ಕೃಷಿಪದ್ಧತಿಯನ್ನು ಮೂಡಿಸುವಲ್ಲಿ ಮಹತ್ವದ ಪಾತ್ರವಹಿಸುತ್ತಿದೆ.

ದೇಶದ ಗಮನ ಸೆಳೆಯುವ ಕೃಷಿ ವಿಜ್ಞಾನ ಕೇಂದ್ರ

ಬೆಳಗಾವಿ ಜಿಲ್ಲೆಯು ಸಕ್ಕರೆ ಉತ್ಪಾದನೆಯಲ್ಲಿ ಉತ್ತರ ಕರ್ನಾಟಕದಲ್ಲಿ ಅಗ್ರಗಣ್ಯ ಸ್ಥಾನ ಪಡೆದಿರುವುದು ಸತ್ಯ. ಕಬ್ಬಿನ ಅಧಿಕ ಉತ್ಪಾದನೆ ಮತ್ತು ಸಂಸ್ಕರಣೆ ಬಗ್ಗೆ ರೈತರ ಸಮಸ್ಯೆಗಳಿಗೆ ಸ್ಪಂದಿಸಿದೆ. ಇದರ ಫಲವೆಂಬಂತೆ ಅತ್ಯಾಧುನಿಕ ತಾಂತ್ರಿಕತೆಗಳನ್ನೊಂಡ ಎರಡು ಸಕ್ಕರೆ ಕಾರ್ಖಾನೆಗಳು ರಾಯಬಾಗ ಮತ್ತು ಚಿಕ್ಕೋಡಿ ತಾಲೂಕುಗಳಲ್ಲಿ ಸ್ಥಾಪನೆಗೊಂಡಿವೆ.

ಇತ್ತೀಚಿನ ದಿನಗಳಲ್ಲಿ ರೈತರು ಅನುಭವಿಸುತ್ತಿರುವ ನೀರಾವರಿ ಸಮಸ್ಯೆಗಳನ್ನು ಕೂಲಂಕಷವಾಗಿ ಗಮನಿಸಿ ಪ್ರಪ್ರಥಮವಾಗಿ ಕಬ್ಬು ಬೆಳೆಯಲು ಅತ್ಯಾಧುನಿಕ ಸಬ್ ಸರ್ಫೆಸ್ ತಾಂತ್ರಿಕತೆಯ ಮೂಲಕ ರೈತರ ಕಬ್ಬು ಬೆಳೆಯುವ ಸ್ವಂತ ಕ್ಷೇತ್ರದಲ್ಲಿ ಪ್ರಯೋಗಿಸಿ ನೀರಿನ ಉಳಿತಾಯ ಮತ್ತು ಸಮರ್ಪಕ ಬಳಕೆಯ ಬಗ್ಗೆ ತೋರಿಸಿಕೊಟ್ಟಿರುವುದನ್ನು ಗಮನಿಸಬಹುದು.

ಕೇವಲ ಆರ್ಥಿಕ ಬೆಳೆಗಳಾದ ಕಬ್ಬು ಮತ್ತು ದ್ರಾಕ್ಷಿಗಳಲ್ಲದೇ, ವಿವಿಧ ಆಹಾರ ಧಾನ್ಯ ಮತ್ತು ತೋಟಗಾರಿಕೆ ಬೆಳೆಗಳಾದ ಮಾವು, ಚಿಕ್ಕು ಮತ್ತು ತೆಂಗು ಮುಂತಾದ ತೋಟಗಾರಿಕೆ ಬೆಳೆಗಳನ್ನು ಇದರೊಂದಿಗೆ ಅಂತರ ಬೆಳೆಗಳನ್ನು ಕೈಗೊಂಡು ಅಧಿಕ ಉತ್ಪಾದನೆ ಮಾಡುವಲ್ಲಿ ರೈತರಿಗೆ ತರಬೇತಿಯನ್ನು ನೀಡುತ್ತಿದೆ.

ಇದೆಲ್ಲವೂ ಬೆಳಗಾವಿಯ ನೆಲೆಯಲ್ಲಿ ಸಾಧ್ಯವಾದದ್ದು ಡಾ.ಪ್ರಭಾಕರ ಕೋರೆಯವರ ಹಾಗೂ ಕೆ.ಎಲ್.ಇ. ಆಡಳಿತ ಮಂಡಳಿ ಇಚ್ಛಾಶಕ್ತಿಯಿಂದ. ಅವರು ಪ್ರಯತ್ನಿಸದೇ ಹೋಗಿದ್ದರೆ ಇಂದು ದೇಶದ ಗಮನವನ್ನು ಸೆಳೆಯುವ ಕೃಷಿ ವಿಜ್ಞಾನ ಕೇಂದ್ರ ಬೆಳಗಾವಿಯಲ್ಲಿ ಇರುತ್ತಿರಲಿಲ್ಲ.

ಅಂತೆಯೇ ದಿನಾಂಕ 6.2.2015ರಂದು ಕೆ.ಎಲ್.ಇ.ಶತಮಾನೋತ್ಸವದ ಚಾಲನೆಯ ಸಂದರ್ಭದಲ್ಲಿ ಮಾಜಿ ಕೇಂದ್ರ ಕೃಷಿ ಸಚಿವರಾದ  ಶರದ್‌ರಾವ್‌ಜೀ ಪವಾರ ಅವರಿಂದ ಕೃಷಿ ವಿಜ್ಞಾನ ಕೇಂದ್ರ ಉದ್ಘಾಟನೆಗೊಂಡಿತು. ಅವರ ಪ್ರಯತ್ನದ ಫಲವಾಗಿ ಈ ಕೃಷಿ ವಿಜ್ಞಾನ ಕೇಂದ್ರ ಪ್ರಾರಂಭಗೊಂಡಿತು. ಕೃಷಿ ವಿಜ್ಞಾನ ಕೇಂದ್ರದ ಸಾಧನೆಯನ್ನು ಕಂಡು ಮುಕ್ತಕಂಠದಿಂದ ಪ್ರಶಂಸಿಸಿದರು.

“ಕೃಷಿಯನ್ನು ಒಂದು ಉದ್ಯಮವನ್ನಾಗಿ ಪರಿಗಣಿಸಿ, ಅದಕ್ಕೆ ಸಕಲ ಸೌಲಭ್ಯವನ್ನು ಕಲ್ಪಿಸಲು ಸರಕಾರ ಬದ್ಧವಾಗಿರಬೇಕು. ಈ ಹಿಂದೆ ಶೇ. 80ರಷ್ಟು ಇದ್ದ ಕೃಷಿಕರು ಈಗ ಕೇವಲ ಶೆ. 68 ರಷ್ಟು ಇದ್ದಾರೆ. ರೈತನ ಮಕ್ಕಳು ಕೃಷಿಯಲ್ಲಿ ತೊಡಗಲು ಹಿಂಜರಿಯುತ್ತಿದ್ದಾರೆ. ಅದನ್ನು ತಪ್ಪಿಸಲು ಶೀಘ್ರದಲ್ಲಿ ಪರಿಹಾರ ಕರ‍್ಯಗಳನ್ನು ಕೈಗೊಳ್ಳಬೇಕಾಗಿದೆ.

ಈಗಾಗಲೇ ದೇಶದ 600ಕ್ಕೂ ಅಧಿಕ ಜಿಲ್ಲೆಗಳಲ್ಲಿ ಕೃಷಿ ವಿಜ್ಞಾನ ಕೇಂದ್ರಗಳನ್ನು ತೆರೆದು ರೈತನ ಸ್ವಾವಲಂಬಿಗೆ ನಾಂದಿ ಹಾಡಲಾಗಿದೆ. ಇದನ್ನು ಇನ್ನೂ ಪರಿಣಾಮಕಾರಿಯಾಗಿ ಮಾಡಲು ಸಂಸ್ಥೆಗಳು ಮುಂದೆ ಬರಬೇಕೆಂದು ಸಲಹೆ ನೀಡಿದರು. ತಂತ್ರಜ್ಞಾನದ ಸದುಪಯೋಗವನ್ನು ಪಡೆಯುವಲ್ಲಿ ರೈತ ಹಿಂದೆ ಬಿದ್ದಿದ್ದಾನೆ. ಆದ್ದರಿಂದ ಕೃಷಿ ವಿಜ್ಞಾನ ಕೇಂದ್ರಗಳು ಅದನ್ನು ತಲುಪಿಸಿ ಕೃಷಿಯನ್ನು ಆಧುನೀಕರಣಗೊಳಿಸಬೇಕು.

ಕೆಎಲ್‌ಇ ಸಂಸ್ಥೆ ಕೃಷಿಗೆ ಅತ್ಯಧಿಕ ಆದ್ಯತೆಯನ್ನು ನೀಡುತ್ತಿದ್ದು, ರೈತನ ಮೊಗದಲ್ಲಿ ಮಂದಹಾಸವನ್ನು ಬೀರುವ ಕeರ‍್ಯಮಾಡಿದೆ” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಡಾ.ಕೋರೆಯವರು ಈ ಕೇಂದ್ರ ದೇಶದ ಸರ್ವೋತ್ಕೃಷ್ಟ ಕೇಂದ್ರವನ್ನಾಗಿ ರೂಪಿಸಲಾಗುವುದೆಂದು ವಾಗ್ದಾನಮಾಡಿದರು.

ಅಸಾಧ್ಯವಾದುದನ್ನು ಸಾಧ್ಯವಾಗಿಸುವುದೇ ಡಾ.ಕೋರೆಯವರ ನಡೆ. ಅವರ ಈ ‘ಕೃಷಿನಡೆ’ ರೈತರಿಗೆ ಕಲ್ಪವೃಕ್ಷವಾಗಲೆಂಬುವುದೇ ಎಲ್ಲರ ಆಶಯ. ಕೃಷಿವಿಜ್ಞಾನ ಕೇಂದ್ರ ತನ್ನ ಮೌಲಿಕ ಹಾಗೂ ರಚನಾತ್ಮಕ ಚಟುವಟಿಕೆಯಿಂದ ಮತ್ತಷ್ಟು ವಿಸ್ತರಿಸಲಿ- ಎಂದು ಹಾರೈಸುತ್ತ ಅವರ 72ನೇ ಜನ್ಮದಿನದಂದು ಹಾರ್ದಿಕ ಶುಭಾಶಯ. ////

  • – ಬಿ.ಆರ್.ಪಾಟೀಲ
    ನಿರ್ದೇಶಕರು, ಕೆಎಲ್‌ಇ ಸಂಸ್ಥೆ, ಬೆಳಗಾವಿ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button