*ಡಾ. ಪ್ರಭಾಕರ ಕೋರೆ ಅವರಿಗೆ ಸತ್ಕಾರ*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಗ್ರಾಮೀಣ ಭಾಗದಲ್ಲಿ ನಶಿಸಿ ಹೋಗುತ್ತಿರುವ ಕ್ರೀಡೆಗಳನ್ನು ಪ್ರೋತ್ಸಾಹಿಸಲು ಮತ್ತು ಅವುಗಳ ಪುನಃಶ್ಚೇತನಕ್ಕಾಗಿ ಸಾಮಾಜಿಕ ಸಂಸ್ಥೆಗಳ ಜೊತೆಗೆ ಸಹಕಾರಿ ಸಂಸ್ಥೆಗಳು ಕೂಡ ಹೆಚ್ಚಿನ ಆದ್ಯತೆ ನೀಡಿದರೆ ಗ್ರಾಮೀಣ ಭಾಗದ ಕ್ರೀಡಾಪಟುಗಳಿಗೆ ಹಾಗೂ ಕುಸ್ತಿ ಪಟುಗಳಿಗೆ ಪ್ರೋತ್ಸಾಹಿಸಲು ಸಹಕಾರಿಯಾಗುತ್ತದೆ ಎಂದು ಡಾ ಪ್ರಭಾಕರ ಕೋರೆ ಅವರು ಹೇಳಿದರು.
ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದಲ್ಲಿ ಅವರ 77ನೆಯ ಹುಟ್ಟುಹಬ್ಬ ನಿಮಿತ್ತವಾಗಿ ಡಾ ಪ್ರಭಾಕರ್ ಕೋರೆ ಹುಟ್ಟು ಹಬ್ಬ ಆಚರಣೆ ಸಮಿತಿ, ಶಿವಶಕ್ತಿ ಶುಗರ್ ಚಿದಾನಂದ ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆ ಹಾರ್ಮ್ಸ್ ಡಿಸಲರಿ ಪ್ರೈವೇಟ್ ಲಿಮಿಟೆಡ್ , ಕೆ ಎಲ್ ಇ ಸಂಸ್ಥೆಯ ಅಂಗಸಂಸ್ಥೆಗಳು ಹಾಗೂ ಕುಸ್ತಿ ಕಮಿಟಿಯ ಸಂಯುಕ್ತ ಆಶ್ರಯದಲ್ಲಿ ಅಂತರಾಷ್ಟ್ರೀಯ ಕುಸ್ತಿ ಪಂದ್ಯಾವಳಿಯನ್ನು ಆಯೋಜಿಸಲಾಗಿತ್ತು.
ಈ ಕುಸ್ತಿ ಪಂದ್ಯದಲ್ಲಿ ಪಂಜಾಬನ ಭೂಪೇಂದ್ರ ಅಜನಾಳ ಅವರನ್ನು ಈರಾನ್ದ ಮಿರ್ಜಾ ಅವರು ಮಣಿಸಿ ಡಾ ಪ್ರಭಾಕರ ಕೋರೆ ಕೇಸರಿ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದರು. ಬಹಳ ಅದ್ಧೂರಿಯಾಗಿ ಜರುಗಿದ್ದ ಈ ಕುಸ್ತಿ ಪಂದ್ಯಾವಳಿಯು ಮಧ್ಯಾಹ್ನ 3.00 ಗಂಟೆಯಿಂದ ತಡರಾತ್ರಿವರೆಗೂ ಜರುಗುವ ಮೂಲಕ ರಾಷ್ಟ್ರೀಯ ಅಂತರಾಷ್ಟ್ರೀಯ ಗಮನವನ್ನು ಸೆಳೆದಿತ್ತು. ಸುಮಾರು 30 ಸಾವಿರಕ್ಕೂ ಹೆಚ್ಚು ಪ್ರೇಕ್ಷಕರು ಆಗಮಿಸಿ ಕುಸ್ತಿಯ ರಸಾನಂದವನ್ನು ಸವಿದಿದ್ದರು. ರಾಷ್ಟ್ರದ ಮೂಲೆ ಮೂಲೆಗಳಿಂದ ಖ್ಯಾತ ಕುಸ್ತಿ ಪಟುಗಳು ತಮ್ಮ ವರಸೆಯನ್ನು ತೋರಿಸಿ ವೈಭವವನ್ನು ಹೆಚ್ಚಿಸಿದ್ದರು.
ಡಾ ಕೋರೆ ಅವರ ಹುಟ್ಟುಹಬ್ಬ ಅಂಕಲಿಯಲ್ಲಿ ಪ್ರಥಮ ಬಾರಿಗೆ ಅಂತರಾಷ್ಟ್ರೀಯ ಕುಸ್ತಿಯನ್ನು ಆಯೋಜಿಸಿ ಯಶಸ್ಸನ್ನು ಕಂಡಿತು. ಆ ಸಂಭ್ರಮಾಚರಣೆಯ ನಿಮಿತ್ತ, ಸಂಘಟಕರು ಕೆಎಲ್ಇ ಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ಡಾ.ಪ್ರಭಾಕರ ಕೋರೆ ಅವರಿಗೆ ಬೆಳ್ಳಿ ಗದೆಯನ್ನು ನೀಡುವುದರ ಮೂಲಕ ಹುಟ್ಟುಹಬ್ಬದ ಶುಭ ಕೋರಿ ಅಭಿನಂದಿಸಿದರು.
ಕೆಎಲ್ಇ ಸಂಸ್ಥೆಯ ನಿರ್ದೇಶಕ ಹಾಗೂ ಡಾ ಪ್ರಭಾಕರ ಕೋರೆ ಹುಟ್ಟುಹಬ್ಬ ಸಮಿತಿಯ ಅಧ್ಯಕ್ಷರಾದ ಬಿ.ಆರ್. ಪಾಟೀಲ, ಚಿದಾನಂದ ಬಸಪ್ರಭು ಕೋರೆ ಸಹಕಾರಿ ಸಕ್ಕರೆ ಕಾರಖಾನೆಯ ಕಾರ್ಯಾಧ್ಯಕ್ಷರಾದ ಮಲ್ಲಿಕಾರ್ಜುನ ಕೋರೆ, ನಿರ್ದೇಶಕರಾದ ಅಣ್ಣಾಸಾಹೇಬ ಪಾಟೀಲ, ಭರತೇಶ ಬನವನೆ ಹಾಗೂ ಕುಸ್ತಿ ಪಂದ್ಯಾವಳಿಯ ಸಂಘಟಕರಾದ ಸಂಜಯ ಕುಡಚೆ, ಪೈಲ್ವಾನ್ರಾದ ರತನಕುಮಾರ ಮಠಪತಿ, ಸಚಿನ ಪೂಜಾರಿ, ಅಪ್ಪಾಸಾಹೇಬ ಅಂಬಿ, ತಾತ್ಯಾಸಾಹೇಬ ಅಂಬಿ, ಅಜಿತ ದಿಗ್ಗೇವಾಡಿ, ಮಹಾವೀರ ಜಕನೂರ್ ಡಾ. ಪ್ರಭಾಕರ್ ಕೋರೆ ಸೊಸೈಟಿಯ ವ್ಯವಸ್ಥಾಪಕ ನಿರ್ದೇಶಕರಾದ ದೇವೇಂದ್ರ ಕರೋಶಿ ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ