ಪ್ರಗತಿವಾಹಿನಿ ಸುದ್ದಿ: ಕಳೆದ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಿಂದ ಗೆದಿದ್ದ ಕಾಂಗ್ರೆಸ್ ನ ಏಕೈಕ ಸಂಸದ ಡಿಕೆ ಸುರೇಶ್ ಈ ಬಾರಿ ಸೋತಿದ್ದಾರೆ.
ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ ಅವರ ಸಹೋದರ, ಬೆಂಗಳೂರು ಗ್ರಾಮಾಂತರ ಲೋಕ ಸಭಾ ಕ್ಷೇತ್ರಲ್ಲಿ ಹಾಲಿ ಸಂಸದ ಡಿಕೆ ಸುರೇಶ್ ಬಿಜೆಪಿ ಅಭ್ಯರ್ಥಿ ಡಾ. ಮಂಜುನಾಥ್ ವಿರುದ್ಧ ಸೋತಿದ್ದಾರೆ
ಬೆಂಗಳೂರು ಗ್ರಾಮಾಂತರದಲ್ಲಿ 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಅಶ್ವತ್ ನಾರಾಯಣ ವಿರುದ್ಧ 2,06,870 ಮತಗಳ ಅಂತರದಿಂದ ಡಿಕೆ ಸುರೇಶ್ ಗೆಲುವು ಸಾಧಿಸಿದ್ದರು. ಆದರೆ ಈ ಬಾರಿ ಡಿ.ಕೆ.ಸುರೇಶ್ 2,17,282 ಅಂತರದಿಂದ ಡಾ. ಸಿಎನ್ ಮಂಜುನಾಥ್ ವಿರುದ್ಧ ಸೋಲು ಅನುಭವಿಸಿದ್ದಾರೆ.
ಸೋಲಿನ ಬಳಿಕ ಮಾತನಾಡಿದ ಡಿಕೆ ಸುರೇಶ್, ಮತದಾರ ಪ್ರಭುಗಳು ಕೊಟ್ಟಿರುವ ತಿರ್ಮಾನವನ್ನು ಸ್ವಾಗತಿಸುತ್ತೇನೆ. ಗೆಲುವು ಸಾಧಿಸಿದ ಡಾ. ಮಂಜುನಾಥ್ ಅವರಿಗೆ ಅಭಿನಂದನೆ ಹೇಳುತ್ತೇನೆ. ಹೊಸಬರು ಚೆನ್ನಾಗಿ ಕೆಲಸ ಮಾಡಲಿ. ಕ್ಷೇತ್ರಕ್ಕೆ ಒಳ್ಳೆಯದಾಗಲಿ. ಕಾರ್ಯಕರ್ತರ ಜೊತೆ ನಾನು ಜೊತೆಯಾಗಿರುತ್ತೇನೆ. ಸೋಲು ಗೆಲುವನ್ನು ಸಮಾನವಾಗಿ ಸ್ವಿಕರಿಸಬೇಕು. ನಾನು ಸೋಲನ್ನು ಸ್ವೀಕರಿಸಿದ್ದೇನೆ. ಗೆಲ್ಲುವ ವಿಶ್ವಾಸ ಇತ್ತು. ಆದರೆ, ಜನ ಬೇರೆ ತಿರ್ಮಾನ ಕೊಟ್ಟಿದ್ದಾರೆ ಎಂದರು.
ಜೆಡಿಎಸ್ ಮತ್ತು ಬಿಜೆಪಿ ಮೈತ್ರಿಯಿಂದಾಗಿ ಸೋಲಾಯಿತೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ರಾಜಕೀಯದಲ್ಲಿ ತಂತ್ರ ಕುತಂತ್ರ ಕೆಲಸ ಮಾಡುತ್ತದೆ. ಅದನ್ನೇ ಮಾಡಿದ್ದಾರೆ. ನಾನು ಕಾರ್ಯಕರ್ತರ ಜೊತೆ ಇದ್ದವನು. ಈಗಲೂ ಅವರ ಜತೆ ಇರುತ್ತೇನೆ. ನನ್ನ ಹೋರಾಟ ಮುಂದುವರಿಯಲಿದೆ. ಆದಾಗ್ಯೂ ದೇಶದಲ್ಲಿ ಇಂಡಿಯಾ ಒಕ್ಕೂಟಕ್ಕೆ ಒಳ್ಳೆಯ ಸಂಖ್ಯೆ ಬಂದಿದೆ ಎಂದು ಅವರು ಹೇಳಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ