ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಭಾರತ ಮತ್ತು ಚೀನಾ ಗಡಿಯಲ್ಲಿ ಉಂಟಾಗಿರುವ ಉದ್ವಿಗ್ನ ಪರಿಸ್ಥಿತಿ ಬಗ್ಗೆ ಪ್ರಧಾನಿ ಮೋದಿಯವರಿಗೆ ಪತ್ರ ಬರೆದಿರುವ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ತೀವ್ರ ಕಳವಳ ವ್ಯಕ್ತಪಡಿಸಿದ್ಧಾರೆ.
ಪೂರ್ವ ಲಡಾಕ್ನ ಗಾಲ್ವಾನ್ ಕಣಿವೆ ಪ್ರದೇಶದಲ್ಲಿ ಸಂಭವಿಸಿದ ಭಾರತ-ಚೀನಾ ಸೈನಿಕರ ನಡುವಿನ ಹಿಂಸಾತ್ಮಕ ಸಂಘರ್ಷದ ಬಗ್ಗೆ ಆಂತಕ ವ್ಯಕ್ತಪಡಿಸಿದ್ದಾರೆ. ಈ ಪತ್ರದಲ್ಲಿ ಹುತಾತ್ಮ ಯೋಧರ ಬಲಿದಾನಕ್ಕೆ ನ್ಯಾಯ ಒದಗಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಪತ್ರದಲ್ಲಿ ಸರ್ವಪಕ್ಷ ಸಭೆಯಲ್ಲಿ ಪ್ರಧಾನಿ ಮೋದಿ ಆಡಿದ ಮಾತಿನ ಬಗ್ಗೆಯೂ ಉಲ್ಲೇಖಿಸಿದ್ದಾರೆ. ಈ ಸಂಬಂಧ ಮೋದಿಯವರು ಯಾವುದೇ ಹೇಳಿಕೆ ನೀಡುವ ಮತ್ತು ನಿರ್ಧಾರ ತೆಗೆದುಕೊಳ್ಳುವ ಮುನ್ನ ಜಾಗೃತರಾಗಿರಬೇಕು. ಭಾರತದ ಮೇಲೆ ಚೀನಾ ನಡೆಸಿದ ಹಿಂಸಾತ್ಮಕ ದಾಳಿ ಅತ್ಯಂತ ಖೇದಕರ. ಗಡಿಯಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳುವುದು ಕೇಂದ್ರದ ಜವಾಬ್ದಾರಿ. ಯೋಧರ ಬಲಿದಾನಕ್ಕೆ ನ್ಯಾಯ ಒದಗಿಸಬೇಕು. ಜನರ ನಂಬಿಕೆಯನ್ನು ಹಾಳು ಮಾಡುವುದು ಐತಿಹಾಸಿಕ ದ್ರೋಹವಾಗಿದೆ ಎಂದು ಹೇಳಿದ್ದಾರೆ.
2020ರ ಏಪ್ರಿಲ್‍ನಿಂದ ಇಲ್ಲಿಯವರೆಗೆ ಅನೇಕ ಬಾರಿ ದಾಳಿ ಮಾಡುವ ಮೂಲಕ ಚೀನಾ ನಿರ್ಭಯವಾಗಿ ಮತ್ತು ಕಾನೂನುಬಾಹಿರವಾಗಿ ಭಾರತದ ಭೂಪ್ರದೇಶಗಳಾದ ಗಾಲ್ವಾನ್ ಕಣಿವೆ ಮತ್ತು ಪಾಂಗೊಂಗ್ ತ್ಸೋ ಸರೋವರವನ್ನು ಅತಿಕ್ರಮಣ ಮಾಡುತ್ತಿದೆ. ಚೀನಾ ಬೆದರಿಕೆಗಳಿ ನಾವು ಹೆದರುವ ಅಗತ್ಯವೇ ಇಲ್ಲ. ದೇಶದ ಪ್ರಾದೇಶಿಕ ಸಮಗ್ರತೆಯೊಂದಿಗೆ ರಾಜಿ ಮಾಡಿಕೊಳ್ಳಲು ಅನುಮತಿಸುವುದಿಲ್ಲ. ರಾಜತಾಂತ್ರಿಕತೆ ಅಥವಾ ನಿರ್ಣಾಯಕ ನಾಯಕತ್ವಕ್ಕೆ ತಪ್ಪು ಮಾಹಿತಿಯು ಪರ್ಯಾಯವಲ್ಲ ಎಂದು ನಾವು ಸರ್ಕಾರಕ್ಕೆ ನೆನಪಿಸುತ್ತೇವೆ. ಸುಳ್ಳು ಹೇಳಿಕೆಗಳ ಮೂಲಕ ಸತ್ಯವನ್ನು ನಿಗ್ರಹಿಸುವುದು ಸರಿಯಲ್ಲ. ಹುತಾತ್ಮ ಕರ್ನಲ್ ಬಿ. ಸಂತೋಷ್ ಬಾಬು ಮತ್ತು ಸೈನಿಕರ ತ್ಯಾಗವನ್ನು ಅರಿತು ದೇಶದ ಪ್ರಾದೇಶಿಕ ಸಮಗ್ರತೆಯನ್ನು ದೃಢವಾಗಿ ಸಮರ್ಥಿಸಿಕೊಂಡ ನ್ಯಾಯವನ್ನು ಖಚಿತಪಡಿಸಿಕೊಳ್ಳಬೇಕು ಎಂದು ಹೇಳಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ