Kannada NewsKarnataka NewsLatest

ಡಾ.ಪ್ರಭಾಕರ ಕೋರೆ: ರಾಜಕೀಯ ಸ್ಥಾನಮಾನದ ಕೊರ(ತೆ)ಗಿನ ಮಧ್ಯೆ `ಸಾರ್ಥಕ 74′

M.K.Hegde

ಎಂ.ಕೆ.ಹೆಗಡೆ

ಡಾ.ಪ್ರಭಾಕರ ಕೋರೆ ಅವರಿಗೆ  74 ವರ್ಷಗಳ ಸಾರ್ಥಕ ಬದುಕಿನ ಕ್ಷಣವಿದು.

ತನ್ನ ಜೀವಮಾನದಲ್ಲಿ ಸಾಧಿಸಬಹುದಾದದ್ದನ್ನೆಲ್ಲ ಸಾಧಿಸಿದ ಸಂಭ್ರಮದ ಸಮಯವಿದು.

ಸಮಾಜಕ್ಕೆ ಕೊಡಬಹುದಾದ ಕೊಡುಗೆಯನ್ನು ನೀಡಿದ ಸಮಾಧಾನದ ಬದುಕು ಅವರದ್ದು.

ಮುಂದಿನ ವರ್ಷ ಈ ಹೊತ್ತಿಗೆ ಜೀವನದ ಪ್ಲಾಟಿನಮ್ ಜುಬಿಲಿ ಆಚರಿಸಿಕೊಳ್ಳುತ್ತಿರಬಹುದು. ಅಲ್ಲಿಗೆ ಅವರು ಮುನ್ನಡೆಸುತ್ತಿರುವ ಕೆಎಲ್ಇ ಸಂಸ್ಥೆಗೆ 106 ವರ್ಷ ತುಂಬುತ್ತದೆ. ಪ್ರಸ್ತುತ 277 ಅಂಗ ಸಂಸ್ಥೆ ಇದ್ದಿದ್ದು, ಆ ಹೊತ್ತಿಗೆ 280ಕ್ಕೆ ಅಥವಾ ಸ್ವಲ್ಪ ಆಚೀಚೆ ಇರಬಹುದು. ಮನಸ್ಸು ಮಾಡಿದರೆ 300ಕ್ಕೂ ಒಯ್ಯಬಹುದು.

ಡಾ.ಪ್ರಭಾಕರ ಕೋರೆ ತಮ್ಮ ಬದುಕಿನಲ್ಲಿ ಹಲವು ಇತಿಹಾಸವನ್ನು ನಿರ್ಮಾಣ ಮಾಡಿದ್ದಾರೆ. ಹಲವು ಕಾರಣಗಳಿಗಾಗಿ ಅವರನ್ನು ಇತಿಹಾಸ ಮರೆಯಲು ಸಾಧ್ಯವೇ ಇಲ್ಲ. ಇಷ್ಟೊಂದು ಸುದೀರ್ಘ ಅವಧಿ ಒಂದು ಸಂಸ್ಥೆಯನ್ನು ಮುನ್ನಡೆಸುವ ಅವಕಾಶ ಪಡೆಯುತ್ತಾರೆಂದರೆ ಅದು ಯಶಸ್ವಿ ಮುನ್ನಡೆ ಎಂದೇ ಪರಿಗಣಿಸಬೇಕು. ಇಲ್ಲವಾದಲ್ಲಿ ಅವರೆಂದೋ ಆ ಸ್ಥಾನವನ್ನು ಕಳೆದುಕೊಳ್ಳುತ್ತಿದ್ದರು.

ತಮ್ಮ 36 -37ನೇ ವಯಸ್ಸಿನಲ್ಲಿ ಕೆಎಲ್ಇ ಎನ್ನುವ ಅಂದಿನ ಸಣ್ಣ, ಆದರೆ ಅಮೂಲ್ಯ ಸಂಸ್ಥೆಯ ಚುಕ್ಕಾಣಿ ಹಿಡಿದು, ಅಲ್ಲಿಂದ ಇಲ್ಲಿಯವರೆಗೆ ಒಂದು ಕ್ಷಣವೂ ನಿಲ್ಲಲು ಅವಕಾಶ ಕೊಡದೆ ಓಡಿಸಿದ ರೀತಿ ಅವರ ಬದುಕಿನ ಸಾರ್ಥಕತೆಯ ಕತೆಯನ್ನು ಹೇಳುತ್ತದೆ.

ಬೆಳಗಾವಿಯಿಂದ ಉತ್ತರ ಕರ್ನಾಟಕಕ್ಕೆ, ಉತ್ತರ ಕರ್ನಾಟಕದಿಂದ ಕರ್ನಾಟಕಕ್ಕೆ, ಕರ್ನಾಟಕದಿಂದ ಭಾರತ ದೇಶಕ್ಕೆ, ಭಾರತ ದೇಶದಿಂದ ವಿಶ್ವಮಟ್ಟಕ್ಕೆ ಸಂಸ್ಥೆಯನ್ನು ಎತ್ತರಿಸಿದ ಪರಿ ಅದು ಆ ವ್ಯಕ್ತಿಯ ಅಗಾಧ ಕತೃತ್ವ ಶಕ್ತಿ ಮತ್ತು ಅಪರಿಮಿತ ಶ್ರಮದ ಪ್ರತೀಕವಾಗಿ ಕಾಣಿಸುತ್ತದೆ.

ಶೈಕ್ಷಣಿಕ ಉದ್ದೇಶಕ್ಕಾಗಿ ಕಟ್ಟಲ್ಪಟ್ಟ ಕೆಎಲ್ಇ ಸಂಸ್ಥೆಯನ್ನು ಮತ್ತೊಂದು ಅವಶ್ಯಕತೆಯಾದ ಆರೋಗ್ಯ ಕ್ಷೇತ್ರಕ್ಕೂ ವಿಸ್ತರಿಸಿ, ಕ್ರೀಡೆಯನ್ನೂ ಜೊತೆ ಜೊತೆಯಾಗಿಯೇ ಕೊಂಡೊಯ್ಯುವ ಮೂಲಕ, ಈ ಸಮಾಜಕ್ಕೆ ಯಾವುದು ಅನಿವಾರ್ಯವಿತ್ತೋ…. ಯಾವುದು ಪ್ರತಿ ಮನುಷ್ಯನನ್ನೂ ತಲುಪುತ್ತದೆಯೋ… ಯಾವುದು ಪ್ರತಿ ಮುನುಷ್ಯನನ್ನೂ ತಲುಪಲೇಬೇಕೋ… ಅದಿಲ್ಲದಿದ್ದರೆ ಬದುಕೇ ಇಲ್ಲವೋ… ಅಂತಹುದಕ್ಕೆ ಸಂಸ್ಥೆಯನ್ನು ಮುಡಿಪಾಗಿಟ್ಟು ಕಟ್ಟುತ್ತ ಹೋದ ರೀತಿ ಡಾ.ಪ್ರಭಾಕರ ಕೋರೆ ಅವರಿಗೆ 74ನೇ ವಸಂತದಲ್ಲಿ ಸಮಾಧಾನಪಡುವಂತೆ, ಸಂಭ್ರಮಿಸುವಂತೆ ಮಾಡಿದೆ.

ಡಾ.ಪ್ರಭಾಕರ ಕೋರೆ ಸಮಾಜಕ್ಕೆ ಏನು ಕೊಡಬಹುದೋ… ಏನು ಕೊಡಬೇಕೋ ಅದಲ್ಲವನ್ನೂ ಕೊಟ್ಟಿದ್ದಾರೆ. ಸಮಯ, ಸಮಾಧಾನ (ತಾಳ್ಮೆ), ಶಕ್ತಿ (ಸಾಮರ್ಥ್ಯ), ನಾಯಕತ್ವ, ದೂರದೃಷ್ಟಿತ್ವ ಎಲ್ಲವನ್ನೂ ಅವರು ಧಾರೆ ಎರೆದಿದ್ದಾರೆ. ಕೆಎಲ್ಇ ಸಂಸ್ಥೆಯನ್ನು ಎತ್ತರಕ್ಕೆ ಬೆಳೆಸುತ್ತ ಸಮಾಜದ ದೃಷ್ಟಿಯಲ್ಲಿ ಅವರೂ ಅಷ್ಟೇ ಎತ್ತರಕ್ಕೆ ಏರಿದ್ದಾರೆ.

ಆದರೆ, ಈ ಸಮಾಜ ಅವರಿಗೆ ರಾಜಕೀಯವಾಗಿ ಕೊಡಬೇಕಾದ ಸ್ಥಾನಮಾನ ಕೊಡುವುದರಲ್ಲಿ ಹಿಂದೆ ಬಿದ್ದಿದೆ ಎನಿಸುತ್ತದೆ. ರಾಜ್ಯಸಭೆಯ ಸದಸ್ಯರಾಗುವ ಹಂತಕ್ಕೇ ಅವರನ್ನು ನಿಲ್ಲಿಸಿಬಿಟ್ಟಿದೆ. ರಾಜ್ಯ, ಕೇಂದ್ರದ ಮಂತ್ರಿಯಾಗಿ, ರಾಷ್ಟ್ರಮಟ್ಟದ ಜವಾಬ್ದಾರಿ ಹೊತ್ತು ಮುನ್ನಡೆಸಬಹುದಾದ ಸಾಮರ್ಥ್ಯ ಅವರಲ್ಲಿತ್ತು. ಆದರೆ ಆ ಅವಕಾಶ ಬರಲಿಲ್ಲ. ಅದೊಂದು ಕೊರತೆ ಕೊರಗಾಗಿ ಉಳಿದುಕೊಂಡಿದೆ. ಮುಂದಿನ ದಿನಗಳಲ್ಲಾದರೂ ಅಂತಹ ಅವಕಾಶ ಬರಲಿ. ರಾಷ್ಟ್ರದ ಅತ್ಯುನ್ನತ ಹುದ್ದೆಯೂ ಅವರ ಪಾಲಿಗೆ ಒದಗಿಬರಲಿ ಎಂದು ಈ ಅಮೃತ ಗಳಿಗೆಯಲ್ಲಿ ಆಶಿಸೋಣ.

https://pragati.taskdun.com/karnataka-news/dr-prabhakar-corey-receives-the-kengal-hanumanthayya-culture-endowment-award/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button